ADVERTISEMENT

ಸಂಗತ: ಸಾವು ಮತ್ತು ಸಾಪೇಕ್ಷ ನೆಲೆ

‘ಅನ್ಯ’ರನ್ನು ಸೃಷ್ಟಿಸುತ್ತಾ ಹೋಗುವ ಪ್ರತಿಯೊಬ್ಬ ವ್ಯಕ್ತಿಯೂ ಮತ್ತೊಬ್ಬರಿಗೆ ‘ಅನ್ಯ’ನಾಗುತ್ತಾ ಹೋಗುತ್ತಾನಲ್ಲವೇ?

ನಾ ದಿವಾಕರ
Published 1 ಜುಲೈ 2022, 19:34 IST
Last Updated 1 ಜುಲೈ 2022, 19:34 IST
ಸಂಗತ
ಸಂಗತ   

ರಾಜಸ್ಥಾನದ ಉದಯಪುರದಲ್ಲಿ ನಡೆದಿರುವ ಒಂದು ಅಮಾನುಷ ಹತ್ಯೆ ಸಮಸ್ತ ಭಾರತೀಯರನ್ನೂ ಧಿಗ್ಗನೆದ್ದು ಕುಳಿತುಕೊಳ್ಳುವಂತೆ ಮಾಡಿದೆ. ಹಗಲಲ್ಲೇ ನಡೆದಿರುವ ಈ ಭೀಕರ ಹತ್ಯೆಯ ಹಿಂದೆ ಕ್ರೂರ ಮನಃಸ್ಥಿತಿ ಇರುವಂತೆಯೇ ಮೂರು–ನಾಲ್ಕು ದಶಕಗಳಿಂದ ವ್ಯವಸ್ಥಿತವಾಗಿ ಬೇರೂರುತ್ತಿರುವ ದ್ವೇಷಾಸೂಯೆಗಳ ವಾತಾವರಣದ ಪ್ರಭಾವವೂ ಇದೆ.

ಸಮಸ್ಯೆ ಇರುವುದು ನಮ್ಮ ಸಾಮಾಜಿಕ-ಸಾಂಸ್ಕೃತಿಕ ತಿಳಿವಳಿಕೆಯಲ್ಲಿ. ಸಾವು ನಮ್ಮನ್ನು ಏಕೆ ವಿಚಲಿತಗೊಳಿ
ಸುವುದಿಲ್ಲ ಎಂಬ ಪ್ರಶ್ನೆ ಎದುರಾದಕೂಡಲೇ, ಸರಣಿ ಸಾವುಗಳು ನಮ್ಮ ಕಣ್ಣೆದುರು ಬರುತ್ತವೆ. ಹೌದು, ನಾವು ವಿಚಲಿತರಾಗುತ್ತೇವೆ. ವಿರೋಧಿಸುತ್ತೇವೆ. ಸಾಂತ್ವನದ ಮುಲಾಮು ಹಚ್ಚುತ್ತೇವೆ. ಖಂಡಿಸುತ್ತೇವೆ. ಬದಲಾದ ಭಾರತದಲ್ಲಿ ಹತ್ಯೆ ಮತ್ತು ಅದರ ಫಲ ಹಾಗೂ ಸಾವು ಸಾಪೇಕ್ಷತೆಯನ್ನು ಪಡೆದುಕೊಂಡಿರುವದನ್ನು ನಾವು ಗಮನಿಸುವುದೇ ಇಲ್ಲ. ‘ಅವರ’ ಸಾವಿಗೆ ‘ನಾವು’ ಏಕೆ ಮರುಗಬೇಕು ಎಂಬ ಜಿಜ್ಞಾಸೆಯಲ್ಲೇ ಕಳೆಯುವ ಒಂದು ಬೃಹತ್‌ ಪೀಳಿಗೆಯನ್ನೇ ಈ ದೇಶದ ರಾಜಕೀಯ ವ್ಯವಸ್ಥೆ ಸೃಷ್ಟಿಸಿಬಿಟ್ಟಿದೆ. ಈ ವಾಸ್ತವವನ್ನು ಅಲ್ಲಗಳೆದರೆ ಅದು ಆತ್ಮವಂಚನೆಯಾಗುತ್ತದೆ.

ಆದರೂ ಭಾರತದ ಮನಸುಗಳು ಸ್ಪಂದಿಸುತ್ತವೆ. ಸಾಮಾಜಿಕ ನೆಲೆಯಲ್ಲಿ ಇಂದಿಗೂ ಉಸಿರಾಡುತ್ತಿರುವ ಸಂವೇದನೆಯ ತಂತುಗಳು ಈ ಸ್ಪಂದನೆಗೆ ನೆರವಾಗುತ್ತವೆ. ಮನುಜ ಸಮಾಜ ತನ್ನನ್ನು ತಾನೇ ಛಿದ್ರೀಕರಿಸಿಕೊಂಡು ಗೋಡೆಗಳನ್ನು ಕಟ್ಟಿಕೊಂಡಿದೆ. ಗೋಡೆಯಮತ್ತೊಂದು ಬದಿಯಲ್ಲಿನ ಹಿಂಸೆಯನ್ನು ಆನಂದಿಸುವ ಮನಸುಗಳಿರುವಂತೆಯೇ ಸಂಭ್ರಮಿಸುವ ಮನಸುಗಳೂ ನಮ್ಮ ನಡುವೆ ಇವೆ. ಈ ಮನೋವೃತ್ತಿಯನ್ನುಪೋಷಿಸುವಂತಹ ಸಾಂಸ್ಥಿಕ- ಸಾಂಘಿಕ ವೇದಿಕೆಗಳು ಗೋಡೆಯ ಎರಡೂ ಬದಿಯಲ್ಲಿ ಭದ್ರವಾಗಿ ನೆಲೆ ಯೂರಿವೆ. ಈ ವೇದಿಕೆಗಳೇ ಮನುಜ ಸಹಜ ಸಂವೇದನೆಯ ತಂತುಗಳನ್ನು ಯಾವುದೋ ಒಂದುಕಾರಣಕ್ಕಾಗಿ ತುಂಡರಿಸುತ್ತಲೇ ಇರುತ್ತವೆ. ಒಬ್ಬವ್ಯಕ್ತಿಯನ್ನು ಹತ್ಯೆ ಮಾಡಲು ಬಳಸುವ ಆಯುಧಕ್ಕಿಂತಲೂ ತೀಕ್ಷ್ಣವಾದ ಮತ್ತು ಅಪಾಯಕಾರಿಯಾದ ಆಯುಧಗಳನ್ನು ಈ ವೇದಿಕೆಗಳು ಪೂರೈಸುತ್ತವೆ. ಇವುಗಳನ್ನು ನಾವು ಜಾತಿ, ಮತ, ಧರ್ಮ, ಸಮುದಾಯ ಹೀಗೆ ವಿಂಗಡಿಸಿ ನಿಷ್ಕರ್ಷೆ ಮಾಡುತ್ತಾ ಹೋಗುತ್ತೇವೆ.

ADVERTISEMENT

ಉದಯಪುರದ ಕೃತ್ಯ ಏಕೆ ಸಂಭವಿಸಿದೆ? ಒಬ್ಬ ವ್ಯಕ್ತಿ ಹತ್ಯೆ ಮಾಡುವುದನ್ನು ಮತ್ತೊಬ್ಬ ವ್ಯಕ್ತಿ ಕ್ಯಾಮೆರಾದಲ್ಲಿ ಸೆರೆಹಿಡಿಯುವಷ್ಟು ಅಸೂಕ್ಷ್ಮತೆ ಹೇಗೆ ನಮ್ಮಲ್ಲಿ ಸೃಷ್ಟಿಯಾಗಿದೆ? ಈ ಪ್ರಶ್ನೆಗಳನ್ನು ಹಾಕಿಕೊಳ್ಳುವಾಗ ಸಹಜವಾಗಿಯೇ ನಮ್ಮ ಮನಸು ಹಲವಾರು ಘಟನೆಗಳತ್ತ ಹೊರಳಿಬಿಡುತ್ತದೆ. ಹೌದಲ್ಲವೇ? ಇತ್ತೀಚೆಗಷ್ಟೆ ಇದಕ್ಕಿಂತಲೂ ಬರ್ಬರ ಹತ್ಯೆ ನಡೆದಿತ್ತು, ಆಗ
ಯಾರೂ ಸದ್ದು ಮಾಡಲಿಲ್ಲವೇಕೆ ಎಂಬ ಪ್ರಶ್ನೆ ಧುತ್ತೆಂದು ಪ್ರತ್ಯಕ್ಷವಾಗುತ್ತದೆ. ಈ ಪ್ರಶ್ನೆಗೆ ಉತ್ತರ ಶೋಧಿಸುವಾಗ ಸಾಂಸ್ಕೃತಿಕವಾಗಿ ಈಗಾಗಲೇ ಧ್ರುವೀಕರಣಗೊಂಡ ಮನಸು ಹಂತಕನ ಮತ್ತು ಹತ್ಯೆಗೀಡಾದವನ ಅಸ್ಮಿತೆ
ಗಳನ್ನು ಶೋಧಿಸಲಾರಂಭಿಸುತ್ತದೆ. ಹತ್ಯೆಗೀಡಾದ ವ್ಯಕ್ತಿಯ ಅಸ್ಮಿತೆಗೆ ವಾರಸುದಾರರಿರುವಂತೆಯೇ ಹಂತಕನ ಅಸ್ಮಿತೆಗೂ ಇರುತ್ತಾರೆ. ಈ ಅಸ್ಮಿತೆಯ ಜಟಾಪಟಿಯಲ್ಲಿ ನಮ್ಮ ಮನುಜ ಸಹಜ ಸ್ಪಂದನೆಯೂ ಸಾಪೇಕ್ಷವಾಗಿಬಿಡುತ್ತದೆ. ಒಬ್ಬ ವ್ಯಕ್ತಿಯದ್ದಾಗಲೀ ಒಂದು ಇಡೀ ಸಮುದಾಯದ್ದಾಗಲೀ ‘ಸಾವು’ ಎಷ್ಟೋ ಸನ್ನಿವೇಶಗಳಲ್ಲಿ ಸ್ವೀಕೃತವೂ ಆಗಿಬಿಡುತ್ತದೆ. ಗುಜರಾತ್‌ ನರಮೇಧ ಸಂದರ್ಭದಲ್ಲಿ ಇದನ್ನು ನೋಡಿದ್ದೇವೆ. ಕಂಬಾಲಪಲ್ಲಿ ಕೃತ್ಯದಲ್ಲಿ ನೋಡಿದ್ದೇವೆ.

ಈ ಮನಃಸ್ಥಿತಿಯ ಸೃಷ್ಟಿಕರ್ತರು ಯಾರು? ಈ ವಿಕೃತಿಯ ಪೋಷಕರು ಯಾರು? ಸಾವು ಮನುಷ್ಯರನ್ನು ಒಂದಾಗಿಸುವ ಒಂದು ನೈಸರ್ಗಿಕ ವಿದ್ಯಮಾನ ಎಂದು ಭಾವಿಸಿದಾಗ ಸ್ಪಂದನೆ ಮತ್ತು ಪ್ರತಿಸ್ಪಂದನೆ ಎರಡೂ ಸ್ವಾಭಾವಿಕವಾಗಿ ಉಳಿಯುತ್ತವೆ. ಆದರೆ ನಾವು ಪೋಷಿಸಿಕೊಂಡು ಬಂದಿರುವ ಒಂದು ರಾಜಕೀಯ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆಯು ಸಾವನ್ನು ವಿಘಟನೆಯ ಅಸ್ತ್ರವನ್ನಾಗಿ ಪರಿವರ್ತಿಸಿದೆ. ಹಾಗಾಗಿ ಸಾವು ಸಾಪೇಕ್ಷವಾಗಿಬಿಡುತ್ತದೆ. ಸ್ಪಂದನೆ ಸಹ ಸಾಪೇಕ್ಷ ನೆಲೆಯಲ್ಲೇ ನಿಷ್ಕರ್ಷೆಗೊಳಗಾಗುತ್ತದೆ. ಇಲ್ಲಿ ಹತ್ಯೆಗೊಳಗಾದ ಸಾವಿರಾರು ಕಾಶ್ಮೀರಿ ಪಂಡಿತರ ಜೀವಗಳು ಮತ್ತೊಂದು ಸಾವಿಗೆ ಮುಖಾಮುಖಿಯಾ
ಗಬೇಕಾದ ದಾಳಗಳಾಗಿಬಿಡುತ್ತವೆಯೇ ವಿನಾ ಸಹಜ ಸಂವೇದನೆಯ ತಂತುಗಳನ್ನು ಸೃಷ್ಟಿಸುವುದಿಲ್ಲ. ಗೋದ್ರಾ ರೈಲಿನಲ್ಲಿ ದಹಿಸಿಹೋದ ಯಾತ್ರಿಕರಿಗೂ, ನಂತರದ ದಂಗೆಗಳಲ್ಲಿ ಹತರಾದವರಿಗೂ ಇರುವ ವ್ಯತ್ಯಾಸವಾದರೂ ಏನು? ಎಲ್ಲರೂ ಅಮಾಯಕರೇ. ಯಾರದೋ ದ್ವೇಷಕ್ಕೆ ಬಲಿಯಾದ ಅಮಾಯಕ ಜೀವಗಳು. ದಾದ್ರಿಯಲ್ಲಾಗಲೀ, ಉದಯಪುರ
ದಲ್ಲಾಗಲೀ, ಪೆದ್ದನಹಳ್ಳಿಯಲ್ಲಾಗಲೀ ಹತ್ಯೆಗೀಡಾದ ಜೀವಗಳ ನಡುವೆ ಅಂತರವಾದರೂ ಏನಿದೆ?

‘ಅನ್ಯ’ರನ್ನು ಸೃಷ್ಟಿಸುತ್ತಾ ಹೋಗುವ ಪ್ರತಿಯೊಬ್ಬ ವ್ಯಕ್ತಿಯೂ ಮತ್ತೊಬ್ಬರಿಗೆ ‘ಅನ್ಯ’ನಾಗುತ್ತಾ ಹೋಗುತ್ತಾನಲ್ಲವೇ? ಶ್ರೇಷ್ಠತೆಯ ವ್ಯಸನದೊಂದಿಗೆ ಬೇರೂರುವ ಮತದ್ವೇಷ ಮತ್ತು ಮಡುಗಟ್ಟಿದ ಆಕ್ರೋಶ ಒಮ್ಮೆಗೇ ಹೊರಹೊಮ್ಮಿದಾಗ ಮನಸು ಹಂತಕ ಸ್ಥಿತಿ ತಲುಪುತ್ತದೆ. ತನ್ನ ನೆರಳನ್ನೂ ನಂಬಲಾರದ ಮನಃಸ್ಥಿತಿಗೆ ಮನುಷ್ಯ ತಲುಪುತ್ತಾನೆ. ಆಗ ಅನಪೇಕ್ಷಿತವಾದ ಸಾವು ಸಹ ಸಾಪೇಕ್ಷವಾಗಿಬಿಡುತ್ತದೆ. ಆಗ ನಮಗೆ ಕನ್ಹಯ್ಯ ಲಾಲ್‌ ಅವರಲ್ಲಿ ಒಬ್ಬ ಹಿಂದೂ, ಅಕ್ಲಾಖ್‌ನಲ್ಲಿ ಒಬ್ಬ ಮುಸ್ಲಿಂ, ಪೆದ್ದನಹಳ್ಳಿಯಲ್ಲಿ
ಒಬ್ಬ ದಲಿತ ಮಾತ್ರ ಕಾಣುತ್ತಾನೆ. ಹತ್ಯೆಗೀಡಾದವನ ಅಸ್ಮಿತೆಯಂತೆಯೇ ಹಂತಕನ ಅಸ್ಮಿತೆಯೂ ನಮ್ಮ ಸ್ಪಂದನೆಯ ಆಕರವಾಗಿಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.