ADVERTISEMENT

ಸಂಗತ: ಶಿಲೆಗೆ ಮಾರುಹೋಗುವಾಕೆ: ಯಾರೀಕೆ?

ಮನುಷ್ಯರಂತೆಯೇ ಪ್ರೀತಿಯ ಸಂಗಾತಿಯನ್ನು ಆರಿಸಿಕೊಂಡು, ಜವಾಬ್ದಾರಿಯಿಂದ ಕುಟುಂಬವನ್ನು ಬೆಳೆಸುವ ಪೆಂಗ್ವಿನ್‌ಗಳು ಅಳಿವಿನಂಚಿಗೆ ಸರಿಯುತ್ತಿವೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 23:46 IST
Last Updated 19 ಜನವರಿ 2025, 23:46 IST
<div class="paragraphs"><p>ಸಂಗತ</p></div>

ಸಂಗತ

   

ಪೆಂಗ್ವಿನ್ ಎಂಬ ಪದ ಕಿವಿಗೆ ಬಿದ್ದಾಕ್ಷಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರ ಮುಖದಲ್ಲಿ ಮಂದಹಾಸ ಮೂಡುತ್ತದೆ. ಹಕ್ಕಿಯಾದರೂ ಹಾರಲು
ಬರುವುದಿಲ್ಲ, ಗಂಡುಹಕ್ಕಿಯು ಹೆಣ್ಣುಹಕ್ಕಿ ಇಟ್ಟ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುತ್ತದೆ, ಜೀವನಪೂರ್ತಿ ಒಂದೇ ಸಂಗಾತಿಯೊಂದಿಗೆ ಇರುತ್ತದೆ ಎಂಬುದು ಅಚ್ಚರಿ ಹುಟ್ಟಿಸಿದರೆ, ಈಗಾಗಲೇ ಈ ಹಕ್ಕಿಗಳ 40 ಪ್ರಭೇದಗಳು ಶಾಶ್ವತವಾಗಿ ಅಳಿದು ಬರೀ 17 ಉಳಿದುಕೊಂಡಿವೆ ಎನ್ನುವ ವಿಚಾರ ಕಣ್ಣನ್ನು
ತೇವಗೊಳಿಸುತ್ತದೆ.

ಬಿಳಿ, ಕಪ್ಪು ಬಣ್ಣದ ಆಕರ್ಷಕ ದೇಹದೊಂದಿಗೆ ಹಿಮಹಾಸುಗಳ ಮೇಲೆ ಪುಟಪುಟನೆ ಹೆಜ್ಜೆ ಇಡುತ್ತ, ಮೈನಸ್ 50 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದ
ವಾತಾವರಣದಲ್ಲಿ ಜೀವಿಸುವ ಪೆಂಗ್ವಿನ್‌ಗಳು ವಾಯುಗುಣ ಬದಲಾವಣೆಯ ವೈಪರೀತ್ಯಗಳಿಗೆ ತುತ್ತಾಗಿ ಅಳಿವಿನಂಚಿಗೆ ಸರಿಯುತ್ತಿವೆ. ಥೇಟ್ ಮನುಷ್ಯರಂತೆಯೇ ಪ್ರೀತಿಯ ಸಂಗಾತಿಯನ್ನು ಆರಿಸಿಕೊಂಡು, ಸಮಾನ ಜವಾಬ್ದಾರಿಯಿಂದ ಕುಟುಂಬವನ್ನು ಬೆಳೆಸುವ ಪೆಂಗ್ವಿನ್‌ಗಳು ಜೀವಿಲೋಕದ ಅಚ್ಚರಿಯೇ ಸರಿ. ದಕ್ಷಿಣ ಅಮೆರಿಕದ ತುದಿ, ದಕ್ಷಿಣ ಧ್ರುವ ಪ್ರದೇಶದ ದ್ವೀಪಗಳು, ಚಿಲಿ, ಪೆರು ಮತ್ತು ಅಂಟಾರ್ಕ್ಟಿಕಾದ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆವಾಸ ಹೊಂದಿರುವ ಪೆಂಗ್ವಿನ್‌ಗಳು ಆಹಾರ ಹುಡುಕಿಕೊಂಡು ದಿನಕ್ಕೆ 60 ಕಿಲೊಮೀಟರ್ ದೂರದವರೆಗೂ ಈಜಬಲ್ಲವು.

ADVERTISEMENT

ಹೆಣ್ಣು ಸಂಗಾತಿಯನ್ನು ಒಲಿಸಿಕೊಳ್ಳಲು ಗಂಡು ಪೆಂಗ್ವಿನ್ ಪಡುವ ಶ್ರಮ ನಾಗರಿಕ ಸಮಾಜದ ಯಾವ ಪ್ರೇಮ ನಿವೇದನೆಗೂ ಕಡಿಮೆ ಇಲ್ಲ. ಸಮುದ್ರ ತೀರದ ಬಂಡೆಕಲ್ಲುಗಳ ಕೊರಕಲುಗಳಲ್ಲಿ ಇಳಿದು, ಸಂದಿಗೊಂದಿಗಳಲ್ಲಿ ತಡಕಾಡಿ, ಸಮುದ್ರದಲೆಗಳ ಹೊಡೆತಕ್ಕೆ ಸಿಲುಕಿ, ಸುಂದರವಾಗಿ ಹಾಗೂ ನುಣುಪಾಗಿ ರೂಪು
ಗೊಂಡಿರುವ ವರ್ಣಮಯ ಶಿಲೆಯೊಂದನ್ನು ನಾಜೂಕಾಗಿ ಆರಿಸಿಕೊಂಡು ತಂದು, ತಾನೇ ನಿರ್ಮಿಸಿದ ಗೂಡಿನೊಳಕ್ಕೆ ಇಡುತ್ತದೆ. ಇದನ್ನೇ ಗಮನಿಸುತ್ತಿ ರುವ ಹೆಣ್ಣುಹಕ್ಕಿಯೊಂದು ಗೂಡಿನ ಬಳಿ ಸಾರಿ, ಶಿಲೆಯ ಅಂದವನ್ನು ಪರೀಕ್ಷಿಸಿ, ತನಗೆ ಹಿಡಿಸಿದರೆ ಗಂಡುಹಕ್ಕಿಯ ಪ್ರೀತಿಗೆ ಹಸಿರು ನಿಶಾನೆ ತೋರಿಸುತ್ತದೆ. ಸಂಗಾತಿಯೊಂದಿಗೆ ಜೀವನಪೂರ್ತಿ ಕಳೆಯುವ ಗಂಡುಹಕ್ಕಿಯು ಏಕಪತ್ನೀವ್ರತಸ್ಥನಂತೆ ಬದುಕುತ್ತದೆ. ಹೆಣ್ಣು ಪೆಂಗ್ವಿನ್ ಒಂದಕ್ಕಿಂತ ಹೆಚ್ಚು ಸಂಗಾತಿಗಳನ್ನು ಹೊಂದಿರುವ ಸಾಧ್ಯತೆಗಳಿವೆ ಎನ್ನುತ್ತಾರೆ ತಜ್ಞರು.

ಪೆಂಗ್ವಿನ್‌ಗಳಲ್ಲಿ ಎಂಪರರ್, ಹಂಬೋಲ್ಟ್, ರಾಕ್ ಹಾಪರ್, ಮಾಕರೋನಿ, ಚಿನ್‌ಸ್ಟ್ರಾಪ್, ಅಡೆಲಿ, ಗೆಂಟೂ, ಕ್ರಸ್ಟೆಡ್ ಎಂಬ ಹಲವು ಬಗೆ ಇವೆ. ಟೆಂಪರರ್ ಪೆಂಗ್ವಿನ್‌ಗಳು ಅಂಟಾರ್ಕ್ಟಿಕಾದ ಹಿಮದಲ್ಲಿ ವಂಶಾಭಿವೃದ್ಧಿ ಮಾಡುತ್ತವೆ. ಹಂಬೋಲ್ಟ್ ಪೆಂಗ್ವಿನ್‌ಗಳು ಇತರ ಪೆಂಗ್ವಿನ್ ಮತ್ತು ಸೀಗಲ್‌ಗಳು ವಿಸರ್ಜಿಸಿದ ಸಗಣಿಯ ರಾಶಿಯ ಕೆಳಗೆ ಬಿಲ ಕೊರೆದು ಅಲ್ಲಿ ಮಿಲನ ಕ್ರಿಯೆಯಲ್ಲಿ ತೊಡಗುತ್ತವೆ. ನ್ಯೂಜಿಲೆಂಡ್‌ನ ಮಳೆಕಾಡುಗಳಲ್ಲಿ ವಾಸಿಸುವ ಪಿರ್ಟ್‌ಲ್ಯಾಂಡ್ ಪ್ರಭೇದದ ಪೆಂಗ್ವಿನ್‌ಗಳು ಶಿಲೆಗಳ ಸಂದಿಗಳಲ್ಲಿ ಕಡ್ಡಿ ಮತ್ತು ಹುಲ್ಲಿನಿಂದ ನಿರ್ಮಿಸಿಕೊಂಡ ಗೂಡುಗಳಲ್ಲಿ ವಂಶಾಭಿವೃದ್ಧಿ ಮಾಡಿಕೊಳ್ಳುತ್ತವೆ. ಮಾಕರೋನಿ ಪೆಂಗ್ವಿನ್‌ಗಳು ಸಮತಲವಾದ ಬಂಡೆಯ ಮೇಲೆ ಮೊಟ್ಟೆಗಳನ್ನು ಇರಿಸಿ, ಕಾವಲು ಕಾಯ್ದು ಸಂಸಾರ ಬೆಳೆಸುತ್ತವೆ.

ಮೊಟ್ಟೆ ಇಟ್ಟ ತಕ್ಷಣ ಮರಿ ಮಾಡುವ ಹೊಣೆಯನ್ನು ಗಂಡುಹಕ್ಕಿಗೆ ಒಪ್ಪಿಸುವ ಹೆಣ್ಣು ಪೆಂಗ್ವಿನ್, ಎರಡು ತಿಂಗಳು ಆಹಾರ ಹುಡುಕಿಕೊಂಡು ಹೊರಡುತ್ತದೆ. ಗಂಡು ಪೆಂಗ್ವಿನ್‌ಗಳು ಮೊಟ್ಟೆಗಳನ್ನು ತಮ್ಮ ಪಾದದ ಮೇಲಿರಿಸಿಕೊಂಡು, ರೆಕ್ಕೆಯ ತುಪ್ಪಳದಿಂದ ಮುಚ್ಚಿಕೊಂಡು, ಸುಮಾರು 9 ವಾರಗಳ ಕಾಲ ಕಾವು ಕೊಡುತ್ತವೆ. ಅಷ್ಟು ದಿನ ಗಂಡುಹಕ್ಕಿಯು ನಿಂತ ಜಾಗದಿಂದ ಕದಲುವುದಿಲ್ಲ. ಆಹಾರ ಸೇವಿಸುವುದಿಲ್ಲ. ಮರಿಗಳಾದ ತಕ್ಷಣ ತನ್ನ ಗಂಟಲಿನ ಪೋಷಕಾಂಶಯುಕ್ತ ದ್ರವವನ್ನು ಮರಿಗಳಿಗೆ ತಿನ್ನಿಸಿ ಶಕ್ತಿ ತುಂಬುತ್ತದೆ. ಬೇಕಾಗುವಷ್ಟು ಆಹಾರ ಸಂಪಾದಿಸಿಕೊಂಡು ಗೂಡಿಗೆ ಮರಳುವ ಹೆಣ್ಣುಹಕ್ಕಿಯು ಗಂಡುಹಕ್ಕಿ ಯನ್ನು ಸೇವೆಯಿಂದ ಬಿಡುಗಡೆ ಮಾಡಿ ಮುಂದಿನ ಪೋಷಣೆಯ ಜವಾಬ್ದಾರಿ ಹೊರುತ್ತದೆ. ಗಂಡು ಆಹಾರ ಹುಡುಕಿಕೊಂಡು ಹೊರಡುತ್ತದೆ.

ಪೆಂಗ್ವಿನ್‌ಗಳು ವಂಶಾಭಿವೃದ್ಧಿ ಮಾಡಿಕೊಳ್ಳಲು ಬಳಸುವ ಇತರ ಹಕ್ಕಿಗಳ ಸಗಣಿಯು ಉತ್ತಮ ಗೊಬ್ಬರವಾಗಿರುವುದರಿಂದ ಮನುಷ್ಯ ಅದನ್ನು ದೋಚು
ತ್ತಿದ್ದಾನೆ. ಗೂಡು ಕಟ್ಟಲು ಬೇಕಾದ ಪದಾರ್ಥವು ಮನುಷ್ಯರ ಪಾಲಾಗುವುದರಿಂದ ಪೆಂಗ್ವಿನ್‌ಗಳಿಗೆ ಗೂಡು ಕಟ್ಟಲು ಸರಿಯಾದ ಜಾಗ ಸಿಗದೆ ಅವುಗಳ ಸಂಖ್ಯೆ ವೃದ್ಧಿಯಾಗುತ್ತಿಲ್ಲ. ಬರೀ ಎರಡು ಲಕ್ಷದಷ್ಟಿರುವ ಕ್ರಸ್ಟೆಡ್ ಪೆಂಗ್ವಿನ್‌ಗಳು ಐಯುಸಿಎನ್‌ (ದಿ ಇಂಟರ್‌ನ್ಯಾಷನಲ್ ಯೂನಿಯನ್ ಫಾರ್‌ ಕನ್ಸರ್ವೇಶನ್ ಆಫ್‌ ನೇಚರ್‌) ಕೆಂಪು ಪಟ್ಟಿ ಸೇರಿವೆ. ಹಳದಿ ಕಣ್ಣಿನ ಪೆಂಗ್ವಿನ್‌ಗಳು ಬರೀ ನ್ಯೂಜಿಲೆಂಡ್ ಪ್ರದೇಶಕ್ಕೆ ಸೀಮಿತವಾಗಿದ್ದು, ಅಳಿವಿನಂಚಿಗೆ ಸರಿದಿವೆ.

ವಿಶ್ವದಲ್ಲಿ ಈಗ ಮೂರು ಕೋಟಿ ಪೆಂಗ್ವಿನ್‌ಗಳು ಇವೆ. ನೋಡಲು ಗಂಡು ಮತ್ತು ಹೆಣ್ಣು ಪೆಂಗ್ವಿನ್‌ಗಳಲ್ಲಿ ವ್ಯತ್ಯಾಸ ಗೋಚರಿಸುವುದಿಲ್ಲ. ಪೆಂಗ್ವಿನ್‌ಗಳು 20ರಿಂದ 40 ವರ್ಷಗಳವರೆಗೂ ಬದುಕಬಲ್ಲವು. ಸಣ್ಣ ಮೀನುಗಳೇ ಪೆಂಗ್ವಿನ್‌ಗಳ ಮುಖ್ಯ ಆಹಾರ.

ಅತಿಯಾದ ಮೀನು ಶಿಕಾರಿ, ಬೃಹತ್ ಹಡಗುಗಳಲ್ಲಿ ತೈಲ ಸೋರಿಕೆ, ಸಾಗರ ಸೇರುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ, ನದಿಗಳು ಹೊತ್ತು ತರುವ ಮಾಲಿನ್ಯವು ಪೆಂಗ್ವಿನ್‌ಗಳ ಸದೃಢ ನೆಲೆಯನ್ನು ಛಿದ್ರಗೊಳಿಸುತ್ತಿವೆ. ವಾತಾವರಣದ ಉಷ್ಣಾಂಶದಲ್ಲಿ ಎರಡು ಡಿಗ್ರಿ ಸೆಂಟಿಗ್ರೇಡ್ ಏರಿಕೆಯಾದರೂ ಪೆಂಗ್ವಿನ್‌ಗಳು ದೊಡ್ಡ ಸಮಸ್ಯೆ ಎದುರಿಸುತ್ತವೆ. ಮಾಲಿನ್ಯ ಕಡಿತಗೊಳಿಸಿ ಪೆಂಗ್ವಿನ್‌ಗಳನ್ನು ಉಳಿಸಿಕೊಳ್ಳಬೇಕಾದ ಅಗತ್ಯವನ್ನು ಪೆಂಗ್ವಿನ್‌ ಜಾಗೃತಿ ದಿನದ (ಜ. 20) ಈ ಸಂದರ್ಭದಲ್ಲಾದರೂ ನಾವು ಅರಿಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.