ಆಧುನಿಕವಾಗಿ ಬಹಳ ಮುಂದುವರಿದಿರುವ ಇಂದಿನ ಸಮಾಜವನ್ನು ಜನಪ್ರಿಯತೆಯ ವ್ಯಸನ ಬಾಧಿಸುತ್ತಿರು ವಂತಿದೆ. ಜನಪ್ರಿಯತೆಯ ಈ ವ್ಯಸನ ಶ್ರೀಸಾಮಾನ್ಯರನ್ನೂ ಜಾಡ್ಯದ ರೂಪದಲ್ಲಿ ಕಾಡುತ್ತಿದೆ. ದುಡಿದು ಬದುಕುವ ಶ್ರಮಿಕ ವರ್ಗದ ಸಂಖ್ಯೆ ಕಡಿಮೆಯಾಗುತ್ತಿದೆ. ತ್ವರಿತವಾಗಿ ಎಲ್ಲವನ್ನೂ ಪಡೆಯುವ ಧಾವಂತ ಮನುಷ್ಯನನ್ನು ವಿಚಲಿತಗೊಳಿಸುತ್ತಿದೆ. ಪ್ರಜ್ಞಾವಂತರಾಗಿ, ವಿವೇಕಿಗಳಾಗಿ ಬಾಳಬೇಕಿದ್ದ ಮಕ್ಕಳು ಲಾಲಸೆ, ವ್ಯಸನ, ಅತಿ ಆಸೆಯ ಉನ್ಮಾದಗಳಿಗೆ ಒಳಗಾಗಿದ್ದಾರೆ. ಈ ದುಃಸ್ಥಿತಿಗೆ ಅನೇಕ ಕಾರಣಗಳು ಇವೆಯಾದರೂ, ಬಹಳ ಮುಖ್ಯವಾದ ಪ್ರಶ್ನೆ– ‘ಜೀವನ ಇಷ್ಟು ಸುಲಭವಾದದ್ದು ಹೇಗೆ?’ ಎನ್ನುವುದು.
ಒಂದೆರಡು ದಶಕಗಳ ಹಿಂದಷ್ಟೇ ಇದ್ದ ಕಷ್ಟಗಳು, ಸಾಮಾಜಿಕ ಸಮಸ್ಯೆಗಳು ಈಗಿಲ್ಲ. ಈಗ ಎಲ್ಲವೂ ಸುಲಭವೇ. ಅಂದಿನ ಆರ್ಥಿಕ, ಆಹಾರ, ಸಾಮಾಜಿಕ ಸಮಸ್ಯೆಗಳು ಹಿಂದೆ ಸರಿದು ಈಗ ಎಲ್ಲವೂ ಕೈಗೆಟಕುವ ಸ್ಥಿತಿ ನಿರ್ಮಾಣವಾಗಿದೆ. ಹಣ, ಆಹಾರ, ಸಂವಹನ ಎಲ್ಲವೂ ಹೇಗೋ ನಮಗೆ ದಕ್ಕುತ್ತಿವೆ. ಹೊರ ದೇಶದ ಅವಕಾಶಗಳು, ಸ್ವದೇಶದ ವ್ಯವಹಾರ, ಮನೆಯಲ್ಲೇ ಕುಳಿತು ಹೆಚ್ಚು ಹಣ ಗಳಿಸುವ ಮಾರ್ಗಗಳು ಆಧುನಿಕ ಕಾಲದ ಜನರ ಬದುಕನ್ನು ವರ್ಣಮಯವಾಗಿಸಿವೆ.
ಅಂದಿನ ಬಡತನದ ಸಂಕೋಚ, ಸ್ವಾಭಿಮಾನ, ಸರಳ ಜೀವನದೃಷ್ಟಿ, ಸೌಜನ್ಯ, ಸೌಹಾರ್ದ, ಸಮಷ್ಟಿಯ ಬಗ್ಗೆ ಇದ್ದ ಜನಪದ ಪ್ರಜ್ಞೆ ಇಂದು ಹೆಚ್ಚಿನಂಶ ಮರೆಯಾಗಿವೆ. ಹಣ, ಅವಕಾಶ ಹಾಗೂ ಸವಲತ್ತುಗಳು, ಜೀವನ ಪಯಣವನ್ನು ಹಳಿ ತಪ್ಪಿದ ರೈಲಿನಂತೆ ಓಡಿಸುವ ಯುವಜನರ ಉಮೇದಿಗೆ ಕಾರಣವಾಗಿವೆ.
ಬಹುಬೇಗ ಜನಪ್ರಿಯತೆಯ ಎತ್ತರಕ್ಕೆ ಏರುವ, ವಿಜೃಂಭಿಸುವ ನಶೆ ದಶಕಗಳಿಂದ ನಮ್ಮ ಸಂಸ್ಕೃತಿಯನ್ನು ಕಾಡುತ್ತಿದೆ. ಹಿಂದೆ, ಕೀಳು ಸಿನಿಮಾ ಜನಪ್ರಿಯತೆ ಅಂದಿನ ಯುವಜನತೆಯನ್ನು ಪ್ರಭಾವಿಸಿತು. ಅದರ ಪರಿಣಾಮ, ಅಂದಿನ ದುಡಿಮೆಯನ್ನೇ ನೆಚ್ಚಿದ ಅನೇಕ ಕಾರ್ಮಿಕರು ಸಿನಿಮಾ ಕನಸುಗಳಲ್ಲಿ ತಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದಿದೆ. ನೆಚ್ಚಿನ ನಟರ ಹುಟ್ಟುಹಬ್ಬ, ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿ ವೈಯಕ್ತಿಕ ಹಿತವನ್ನು ನಿರ್ಲಕ್ಷಿಸಿದವರು ತಾವು ಏನೂ ಆಗದೆ ಉಳಿದರು. ಜನಪ್ರಿಯ ನಟರು ತೀರಿಕೊಂಡಾಗ ನೂಕು ನುಗ್ಗಲಿನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡವರೂ ಇದ್ದಾರೆ.
ಈಗ ಸಿನಿಮಾದ ಜನಪ್ರಿಯತೆ ಕಳೆಗುಂದಿದೆ. ಅದರ ಜಾಗವನ್ನು ಕ್ರಿಕೆಟ್ ಆಕ್ರಮಿಸಿಕೊಂಡಿದೆ. ಕ್ರಿಕೆಟ್ ಆಟ ಸಹಜ, ಸುಂದರವಾಗಿದ್ದ ದಿನಗಳೂ ಇದ್ದವು. ಪಂದ್ಯಗಳು ಜೀವನೋತ್ಸಾಹ ಹೆಚ್ಚಿಸುತ್ತಿದ್ದವು. ಬಲಾಢ್ಯರು ಸೋಲುವ, ಅಶಕ್ತ ತಂಡ ಗೆಲುವಿನತ್ತ ಸಾಗುವ ಬೆಳವಣಿಗೆಗೆ ಅಂದಿನ ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ತುಡಿಯುತ್ತಿದ್ದುದು ನಮ್ಮ ಅಂದಿನ ಯುವ ಆರೋಗ್ಯ ಮನಸ್ಸಿನ ಸಕಾರಾತ್ಮಕ ನಡೆಗೆ ಸಾಕ್ಷಿಯಾಗಿತ್ತು. ಆದರೆ, ಈಗ?
ಉತ್ತಮ ಸಮಾಜ ನಿರ್ಮಾಣಕ್ಕಾಗಿ ಯುವಜನ ಸರಿಯಾದ ದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳ ಬೇಕಾದುದು ಸಾಮಾಜಿಕ ವ್ಯವಸ್ಥೆಯ ಕರ್ತವ್ಯವಾಗಿದೆ. ಆದರೆ, ಬದಲಾದ ಸಂದರ್ಭದಲ್ಲಿ ಸಾಮಾಜಿಕ ಕೇಂದ್ರಗಳೆಲ್ಲ ನೈತಿಕ ಮೌಲ್ಯಗಳಿಂದ ದೂರವಾಗುತ್ತಿವೆ. ಯಾವುದೇ ಬಗೆಯ ದುರಂತ ಘಟಿಸಿದರೂ ಪರಸ್ಪರ ದೂಷಿಸುವುದು ಹಾಗೂ ಪರಿಹಾರದ ಹಣ ಕೊಟ್ಟು ಜನರ ಕಹಿ ನೆನಪನ್ನು ಮರೆಸುವ ರಾಜಕೀಯ ತಂತ್ರಗಳು ಹೆಚ್ಚಾಗಿವೆ. ಈ ಬೆಳವಣಿಗೆ, ಮಧ್ಯಮ ವರ್ಗದ ಜನರ ಬಾಳನ್ನು ಅಪಾಯದ ಅಂಚಿಗೆ ತಂದು ನಿಲ್ಲಿಸಿದೆ.
ನಾವೀಗ ಅತೀವ ತಾಳ್ಮೆಯಿಂದ ನಮ್ಮನ್ನು ನಾವು ನಿಕಷಕ್ಕೊಡ್ಡಿಕೊಂಡು, ನಮ್ಮ ಆತ್ಮಸಾಕ್ಷಿಯನ್ನು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಒಂದು ಜೂಜಿನ ಆಟಕ್ಕೆ ದೇಶದ ಕೋಟ್ಯಂತರ ಜನ ಮುಗಿಬೀಳುವುದು, ಅದರ ಉನ್ಮಾದಕ್ಕೆ ಜನರು ಬಲಿಯಾಗುವುದು ಏನನ್ನು ಸೂಚಿಸುತ್ತಿದೆ ಎನ್ನುವ ಪ್ರಶ್ನೆ ನಮ್ಮನ್ನು ಕಾಡಬೇಕಾಗಿದೆ.
ಆಟದ ಗೆಲುವಿನಲ್ಲಿ ಒಂದಷ್ಟು ಜನರು ಸಾವಿಗೀಡಾಗುವ ದುರಂತ ಒಂದು ಸಂಕೇತವಷ್ಟೇ. ಈ ದೈಹಿಕ ಸಾವುಗಳ ಇನ್ನೊಂದು ತುದಿಯಲ್ಲಿ ಲಕ್ಷ ಲಕ್ಷ ಜನ ಮಾನಸಿಕವಾಗಿ ತಮ್ಮನ್ನು ತಾವು ಕೊಂದುಕೊಳ್ಳುವ ದುರಂತವನ್ನು ಗಮನಿಸಬೇಕಾಗಿದೆ. ಈ ದೈಹಿಕ ಹಾಗೂ ಮಾನಸಿಕ ಅಂತ್ಯದ ದುರಂತಗಳು, ಜನಪ್ರಿಯತೆಯ ಆಫೀಮಿನ ವ್ಯಸನದ ಬಗ್ಗೆ ನಮ್ಮನ್ನು ಎಚ್ಚರಗೊಳಿಸಬೇಕಾಗಿದೆ, ಅರಿವು ಮೂಡಿಸಬೇಕಾಗಿದೆ.
ಸರ್ಕಾರ, ರಾಜಕಾರಣಿ ಹಾಗೂ ಸೆಲೆಬ್ರಿಟಿಗಳಿಗೆ ಜನರು ಸರಕಿನ ರೂಪದಲ್ಲಿ ಬೇಕು. ಚಪ್ಪಾಳೆಗಳ ಮೇಲೆ ಅವರು ತಮ್ಮ ಅಸ್ತಿತ್ವ ಕಂಡುಕೊಳ್ಳುತ್ತಾರೆ. ಇನ್ನು ವಿದ್ಯುನ್ಮಾನ ಮಾಧ್ಯಮಗಳಿಗೆ ಟಿಆರ್‌ಪಿ ಚಿಂತೆ. ಆದರೆ, ಇವೆಲ್ಲಕ್ಕಿಂತಲೂ ತಮ್ಮ ‘ಬದುಕು’ ಅಮೂಲ್ಯವಾದುದು ಎನ್ನುವುದನ್ನು ಜನಸಾಮಾನ್ಯರು ಅರಿಯಬೇಕು. ಆ ಬದುಕನ್ನು ನಾವೇ ಹೋರಾಟದಿಂದ ದಕ್ಕಿಸಿಕೊಳ್ಳಬೇಕೇ ಹೊರತು, ಬೇರೆ ಯಾರೂ ನಮ್ಮ ಜೀವನವನ್ನು ಕಟ್ಟಿಕೊಡುವುದಿಲ್ಲ.
ಜೀವನದ ಪಯಣವನ್ನು ಯಾವ ದಾರಿಯಲ್ಲಿ ನಡೆಸಬೇಕು, ಹೇಗೆ ಸಾರ್ಥಕ್ಯ ಪಡೆಯಬೇಕು ಎನ್ನುವ ಬಗ್ಗೆ ಯೋಚಿಸಲು ಇದು ಸಕಾಲ. ಪ್ರಸ್ತುತ, ನಡೆ–ನುಡಿಯಿಂದ ನಮ್ಮನ್ನು ತಿದ್ದಬಲ್ಲವರು ತೀರಾ ವಿರಳ. ಹಾಗೆ
ತಿದ್ದಬಹುದಾಗಿದ್ದವರು ಬಿಟ್ಟುಹೋಗಿರುವ ಸತ್ಯದ ಮೆಲುದನಿಗಳಷ್ಟೇ ಈಗ ಉಳಿದಿವೆ. ಆ ಪಿಸುದನಿಗಳು ನಮ್ಮ ಹೃದಯ ಸಂವಾದಕ್ಕೆ ಕಾರಣವಾಗಬೇಕು. ಆ ಸಂವಾದದಲ್ಲೇ ಸಾಗಬೇಕಾದ ದಾರಿ ನಿಚ್ಚಳವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.