ಕೆಲವು ದಿನಗಳ ಹಿಂದೆ ಹಬ್ಬಕ್ಕೆಂದು ಗೆಳೆಯರೊಬ್ಬರ ಮನೆಗೆ ಹೋಗಿದ್ದೆ. ಮನೆಯಲ್ಲಿ ಓಡಾಡಿಕೊಂಡಿದ್ದ ಅವರ ಮಗನನ್ನು ಕರೆದು, ‘ನಿನ್ನ ಎಸ್ಎಸ್‌ಎಲ್‌ಸಿ ಫಲಿತಾಂಶ ಏನಾಯಿತು?’ ಎಂದು ಕೇಳಿದೆ. ಆತ ಪ್ರತಿಕ್ರಿಯಿಸುವ ಮುಂಚೆಯೇ ಅವನ ತಂದೆ, ‘ಅಯ್ಯೋ, ಇವನಿಂದಾಗಿ ನಾನು ಊರಲ್ಲಿ ತಲೆ ಎತ್ತಿ ಓಡಾಡ ದಂತಾಗಿದೆ. ಫೇಲಾಗಿ ನನ್ನ ಮರ್ಯಾದೆ ಕಳೆದುಬಿಟ್ಟ’ ಎಂದರು. ಈ ಮಾತಿನಿಂದ ಆ ಹುಡುಗನ ಮನಸ್ಸಿನ ಮೇಲೆ ಆಗಬಹುದಾದ ಪರಿಣಾಮವನ್ನು ನೆನೆದು ದಿಗಿಲಾಯಿತು.
ಅಂಕಗಳಿಗೆ ಗ್ರೇಡ್ ಕೊಡುವುದನ್ನು, ಫೇಲ್ ಎಂಬುದರ ಬದಲಿಗೆ ನಾಟ್ ಕಂಪ್ಲೀಟೆಡ್ ಎಂದು ನಮೂದಿಸುವ ಪದ್ಧತಿಯನ್ನು ಜಾರಿಗೆ ತಂದಿದ್ದರೂ ಒಂದೇ ವರ್ಷ ಮೂರು ಬಾರಿ ಪರೀಕ್ಷೆ ಬರೆಯಬಹು ದಾದ ಅವಕಾಶವನ್ನು ಕಲ್ಪಿಸಲಾಗಿದ್ದರೂ ಜನಮಾನಸದಲ್ಲಿ ಫಲಿತಾಂಶದ ಬಗೆಗಿರುವ ನಕಾರಾತ್ಮಕ ಧೋರಣೆ ಕಡಿಮೆಯಾಗಿಲ್ಲ ಎಂಬುದಕ್ಕೆ ಇವರ ಮಾತೇ ನಿದರ್ಶನ.
ಫೇಲಾಗುವುದು ಅವಮಾನ, ಅದರಿಂದ ಅವರ ಭವಿಷ್ಯಕ್ಕೆ ಕುಂದುಂಟಾದಂತೆಯೇ ಸರಿ ಎಂಬಂತಹ ವಾತಾವರಣ ಸಮಾಜದಲ್ಲಿ ಸೃಷ್ಟಿಯಾಗಿರುವುದೇ ಪೋಷಕರ ಈ ಬಗೆಯ ಮನಃಸ್ಥಿತಿಗೆ ಕಾರಣವಿರಬಹುದು. ಯಾವುದೇ ಶೈಕ್ಷಣಿಕ ವಿದ್ಯಾರ್ಹತೆ ಗಳಿಸದೆ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಪಡೆದಿರುವ ಹಲವು ಸಿನಿಮಾ ನಟರು, ಕಲಾವಿದರು, ರಾಜಕಾರಣಿಗಳು, ಉದ್ಯಮಿಗಳು, ಕ್ರೀಡಾಪಟುಗಳ ಬಗ್ಗೆ ಹೆಮ್ಮೆಯಿಂದ ಮಾತನಾಡುವವರೂ ತಮ್ಮ ಮನೆಯ ಮಗ ಅಥವಾ ಮಗಳು ಶೈಕ್ಷಣಿಕವಾಗಿ ಹಿಂದುಳಿದಿದ್ದರೆ ಆಕಾಶವೇ ಕಳಚಿ ತಮ್ಮ ಮೇಲೆ ಬಿದ್ದಂತೆ ತೊಳಲಾಡುತ್ತಾರೆ.
ತೊದಲುವಿಕೆಯ ಕಾರಣದಿಂದ ಬಾಲ್ಯದಲ್ಲಿ ತಾತ್ಸಾರಕ್ಕೆ ಒಳಗಾದರೂ ವಿಶ್ವಮೆಚ್ಚಿದ ವಿಜ್ಞಾನಿಯಾದ ಐನ್‌ಸ್ಟೀನ್, ಶಾಲೆಗೆ ಸರಿಯಾಗಿ ಹೋಗದೆಯೂ ಸಾಧಕರಾದ ರವೀಂದ್ರನಾಥ ಟ್ಯಾಗೋರ್, ನಮ್ಮ ನಾಡಿನ ಪರಿಸರವಾದಿ ಸಾಲುಮರದ ತಿಮ್ಮಕ್ಕ,
ಅನಕ್ಷರಸ್ಥರಾದರೂ ಶಾಲೆ ಕಟ್ಟಲು ಶ್ರಮಿಸಿದ ಹರೇಕಳ ಹಾಜಬ್ಬ ಅಂತಹವರ ಸಾಲು ಸಾಲು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಆದರೂ ಫೇಲಾಗುವ ಮಕ್ಕಳು ತಾತ್ಸಾರಕ್ಕೆ ಒಳಗಾಗುತ್ತಲೇ ಇದ್ದಾರೆ.
ಒಂದೆರಡು ವರ್ಷಗಳ ಹಿಂದೆ, 8ನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡಿದ ಅಭ್ಯರ್ಥಿ ಯೊಬ್ಬರನ್ನು ಪತ್ರಕರ್ತರು ‘ನಿಮಗೆ ಈ ಪರೀಕ್ಷೆ ಪಾಸು ಮಾಡಲೇಬೇಕು ಎಂದು ಏಕೆ ಅನ್ನಿಸಿತು?’ ಎಂದು ಕೇಳಿದಾಗ, ‘ನಾನು ಪಿಯುಸಿಯಲ್ಲಿ ಫೇಲಾಗಿ ಒಂದು ವರ್ಷ ಊರಲ್ಲಿದ್ದೆ. ಆಗ ನನಗಾದ ಅವಮಾನ, ಮತ್ತೆ ಮೇಲೇಳುವ ಸ್ಫೂರ್ತಿಯನ್ನು ನೀಡಿತು’ ಎಂದು ಹೇಳಿದ್ದರು.
‘ನಮ್ಮ ಈವರೆಗಿನ ಕಲಿಸುವಿಕೆಯಲ್ಲಿದ್ದ ಅತಿದೊಡ್ಡ ತಪ್ಪೆಂದರೆ, ಎಲ್ಲ ವಿದ್ಯಾರ್ಥಿಗಳೂ ಒಂದೇ ಎಂದು ಭಾವಿಸುವುದು, ಎಲ್ಲ ವಿಷಯಗಳನ್ನೂ ಒಂದೇ ಬಗೆಯಲ್ಲಿ ಅವರೆಲ್ಲರಿಗೂ ಕಲಿಸುವುದನ್ನು ಸಮರ್ಥಿಸಿ ಕೊಳ್ಳುವುದು’ ಎಂಬ ಶಿಕ್ಷಣ ಮನೋವಿಜ್ಞಾನಿ ಹವರ್ಡ್ ಗಾರ್ಡ್‌ನರ್ ಅವರ ಹೇಳಿಕೆ ಗಮನಾರ್ಹವಾಗಿದೆ.
ಬೇರೆ ಬೇರೆ ಕ್ಷೇತ್ರಗಳಲ್ಲಿ ಮಕ್ಕಳಿಗಿರುವ ಆಸಕ್ತಿ ಮತ್ತು ಸಾಮರ್ಥ್ಯಕ್ಕಿಂತ, ಅವರ ಉತ್ತಮ ವ್ಯಕ್ತಿತ್ವಕ್ಕಿಂತ ಅವರು ಪಡೆದ ಫಲಿತಾಂಶವೇ ಮುಖ್ಯವಾಗುತ್ತಿದೆ. ಇದರಿಂದ ಎಷ್ಟೋ ಮಕ್ಕಳು ಕೀಳರಿಮೆಯಿಂದ, ಖಿನ್ನತೆಯಿಂದ ಬಳಲುವಂತಾಗಿದೆ. ಇಂತಹ ಮಕ್ಕಳಿಗೆ ಬದುಕಿನ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ತಮ್ಮ ಸಾಮರ್ಥ್ಯವನ್ನು ಕಂಡುಕೊಂಡು ಮುನ್ನಡೆಯಲು ಬೇಕಾದ ಸೂಕ್ತ ಮಾರ್ಗದರ್ಶನ ನೀಡಿ, ಉತ್ತಮ ಮಾನವ ಸಂಪನ್ಮೂಲವಾಗಿ ರೂಪಿಸುವ ಅಗತ್ಯವಿದೆ.
ಹಳಿಗಳ ಮೇಲೆ ರೈಲು ಸರಾಗವಾಗಿ ಚಲಿಸಲು ಎಂಜಿನ್ ಮತ್ತು ಇಂಧನ ಇದ್ದರಷ್ಟೇ ಸಾಲದು. ಲೋಕೊ ಪೈಲಟ್‌ನಿಂದ ಹಿಡಿದು ಸಂಚಾರ ಫಲಕ ತೋರಿಸು ವವರವರೆಗೆ ಎಷ್ಟೋ ಕಾಣದ ಕೈಗಳ ಶ್ರಮವೂ ಅತ್ಯಗತ್ಯವಾಗಿರುತ್ತದೆ. ಹಾಗೆಯೇ ಸಮಾಜ ಎಂಬ ಬಂಡಿ ಹಳಿ ತಪ್ಪದಂತೆ ಸಾಗಲು ವಿದ್ಯಾರ್ಹತೆ ಮತ್ತು ಉತ್ತಮ ಉದ್ಯೋಗ ಪಡೆದವರಷ್ಟೇ ಇದ್ದರೆ ಸಾಲದು ಎಂಬ ಅರಿವು ನಮ್ಮೆಲ್ಲರಲ್ಲೂ ಮೂಡಬೇಕಿದೆ.
‘ಕಿಸೆಯಲಿ ಹಣವಿದೆ, ತಿರುಗಲು ಕಾರಿದೆ| ತಿಂಡಿ ತಿನಿಸುಗಳ ಸಾಲು| ಪೆನ್ನಿದೆ ಗನ್ನಿದೆ ಶಿಸ್ತಿನ ಸ್ಕೂಲಿದೆ| ಎಲ್ಲಿದೆ ಪ್ರೀತಿಯ ನೆರಳು?’ ಎಂಬ ಕವಿ ಮಾತು, ಗಿಡಮರಗಳು, ಜಲಮೂಲಗಳು ಕಣ್ಮರೆಯಾಗುತ್ತಿರುವಂತೆ ಮಾನವೀಯ ಮೌಲ್ಯಗಳೂ ನಶಿಸುತ್ತಿವೆ ಎಂಬುದನ್ನು ಸೂಚಿಸುತ್ತದೆ. ಇಂತಹ ಹೊತ್ತಿನಲ್ಲಿ ಸಮಾಜವನ್ನು ಪ್ರೀತಿಯ ಸೆಲೆಯಾಗಿಸಬೇಕಿರುವುದು ನಮ್ಮೆಲ್ಲರ ಹೊಣೆಗಾರಿಕೆಯೂ ಹೌದು.
ಟಿ.ಪಿ. ಕೈಲಾಸಂ ಅವರ ‘ಟೊಳ್ಳುಗಟ್ಟಿ’ ನಾಟಕದಲ್ಲಿ ಪುಟ್ಟು ಎಂಬ ಬಾಲಕನ ಪಾತ್ರವೊಂದಿದೆ. ಅವನು ಓದಿನಲ್ಲಿ ಮುಂದಿರುತ್ತಾನೆ. ಆದರೆ ಆರೋಗ್ಯ ಸರಿಯಿಲ್ಲದ ತಾಯಿಯ ನರಳಾಟ ಕಂಡು ‘ನನಗೆ ಓದಲು ಆಗ್ತಾ ಇಲ್ಲ’ ಎಂದು ಗೊಣಗುತ್ತಾನೆ. ಓದಿನಲ್ಲಿ ಹಿಂದಿದ್ದ ಅವನ ತಮ್ಮ ಮಾಧು, ‘ನಿನಗೆ ಓದೇ ಹೆಚ್ಚಾ? ನಾವು ಈ ಭೂಮಿಯಲ್ಲಿ ವಾಸಿಸೋಕೆ ದೇವರಿಗೆ ಕೊಡಬೇಕಾದ ಬಾಡಿಗೆ ಏನೆಂದರೆ, ನಮ್ಮ ಸುತ್ತಮುತ್ತಲೂ ವಾಸಿಸುವ ಜನರಿಗೆ ಉಪಯೋಗವಾಗುವಂತೆ ಇರುವುದು’ ಎಂದು ಹೇಳುತ್ತಾನೆ.
ಮಾಧುವಿನಂತಹ ಹೃದಯವಂತ ಮಕ್ಕಳ ಸಂಖ್ಯೆ ಹೆಚ್ಚಾಗಬೇಕೆಂದರೆ ಅವರನ್ನು ಅಂಕ ಗಳಿಸುವ ಯಂತ್ರಗಳನ್ನಾಗಿಸದೆ, ಸಮಾಜಮುಖಿಗಳನ್ನಾಗಿಸುವತ್ತ ಚಿಂತಿಸಬೇಕಿದೆ. ಅದರಲ್ಲಿಯೂ ಅನುತ್ತೀರ್ಣರಾದ ಮಕ್ಕಳನ್ನು ಹೀಯಾಳಿಸಿ, ತಾತ್ಸಾರ ಮಾಡದೆ ವಾತ್ಸಲ್ಯ ದಿಂದ ಕಂಡು, ಸಮಾಜದ ಆಸ್ತಿಯಾಗುವಂತೆ ಅವರನ್ನು ರೂಪಿಸುವತ್ತ ಕಾರ್ಯಪ್ರವೃತ್ತರಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.