ADVERTISEMENT

ಸಂಗತ | ಪ್ರವಾಸ ಆಗದಿರಲಿ ಪ್ರಯಾಸ

ಎ.ಎಸ್.ನಾರಾಯಣರಾವ್
Published 29 ಮೇ 2025, 23:30 IST
Last Updated 29 ಮೇ 2025, 23:30 IST
   

ಇತ್ತೀಚಿನ ವರ್ಷಗಳಲ್ಲಿ ಪ್ರವಾಸಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ ವೃದ್ಧಿಸಿದೆ ಎಂದು ಈಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ವಿದೇಶಕ್ಕೆ ಹಾರುವವರ ಪ್ರಮಾಣವೂ ಏರುತ್ತಿದೆ. ಒಂದೆರಡು ದಶಕಗಳ ಹಿಂದೆ ಹೊರದೇಶಗಳಲ್ಲಿ ಭಾರತೀಯ ಪ್ರವಾಸಿಗರು ಅಷ್ಟಾಗಿ ಕಾಣಸಿಗುತ್ತಿರಲಿಲ್ಲ. ಏಷ್ಯಾದ ಕಡೆಯಿಂದ ಬರುವ ಪ್ರವಾಸಿಗರಲ್ಲಿ ಚೀನಾದವರೇ ಹೆಚ್ಚು ಎನ್ನುವ ಸ್ಥಿತಿ ಇತ್ತು. ಆದರೆ ಈಗ ಹಾಗಿಲ್ಲ. ಎಲ್ಲ ಕಡೆಯಲ್ಲೂ ಭಾರತೀಯರನ್ನು ನೋಡಬಹುದು.

ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ, ಕೈಗೆಟುಕುವ ವಿಮಾನ ಪ್ರಯಾಣ ದರ, ಅಂಗೈಯಲ್ಲೇ ಮಾಹಿತಿ ಭಂಡಾರ, ಹೊಸದನ್ನು ನೋಡಬೇಕು– ಸುತ್ತಬೇಕು ಎಂಬ ಬಯಕೆ... ಹೀಗೆ ನಾನಾ ಕಾರಣಗಳಿಂದಾಗಿ ವಿಶ್ವದಾದ್ಯಂತ ಪ್ರವಾಸೋದ್ಯಮ ಬೆಳೆಯುತ್ತಿದೆ. ಎಷ್ಟೋ ದೇಶಗಳಿಗೆ ಪ್ರವಾಸೋದ್ಯಮವೇ ಪ್ರಮುಖ ಆದಾಯ ಮೂಲ. ಅಲ್ಲದೆ ಅದು ಬಹಳಷ್ಟು ಉದ್ಯೋಗ ಅವಕಾಶಗಳನ್ನೂ ಸೃಷ್ಟಿಸುತ್ತಿದೆ.

ದೇಶದ ಒಳಗೆ ಸುತ್ತಾಡುವುದಕ್ಕೂ ವಿದೇಶ ಪ್ರಯಾಣ ಕೈಗೊಳ್ಳುವುದಕ್ಕೂ ಒಂದಷ್ಟು ವ್ಯತ್ಯಾಸ
ಗಳಿವೆ. ಸ್ವಲ್ಪ ಸಿದ್ಧತೆಯೂ ಬೇಕಾಗುತ್ತದೆ. ಆದರೆ, ಕೊಂಚ ಮುಂದಾಲೋಚನೆ, ಸರಿಯಾದ ಯೋಜನೆ, ಪೂರ್ವ ತಯಾರಿ ಇದ್ದರೆ ವಿದೇಶ ಪ್ರಯಾಣ ಕೂಡ ದೇಶಿ ಪ್ರಯಾಣದಷ್ಟೇ ಸಲೀಸು, ಸುಲಭ. ಎಷ್ಟೋ ಸಲ ವಿದೇಶ ಪ್ರವಾಸಕ್ಕೆ ಆಗುವ ಖರ್ಚು ದೇಶದೊಳಗಿನ ಪ್ರವಾಸದ ಖರ್ಚಿಗಿಂತ ಕಡಿಮೆ ಎಂದರೆ ಅದೇನು ಉತ್ಪ್ರೇಕ್ಷೆ ಎಂದು ಭಾವಿಸಬೇಕಾಗಿಲ್ಲ. ಆದರೆ ಅದು ನೀವು ಅನುಸರಿಸುವ ಮಾರ್ಗ ಯಾವುದು ಎನ್ನುವುದನ್ನು ಅವಲಂಬಿಸಿರುತ್ತದೆ. ‘ನಮಗೆ ಯಾವುದೇ ರಗಳೆ ಬೇಡ, ದುಡ್ಡು ಕೊಡ್ತೇವೆ, ಸುತ್ತಾಡಿಸಿದರೆ ಸಾಕು’ ಎನ್ನುವವರಿಗಾಗಿಯೇ ಬೇಕಾದಷ್ಟು ಪ್ರವಾಸಿ ಸಂಸ್ಥೆಗಳು ಅಂದರೆ ಟೂರ್ ಆ್ಯಂಡ್ ಟ್ರಾವೆಲ್ ಏಜೆನ್ಸಿಗಳಿವೆ. ‘ಖರ್ಚು ಕಡಿಮೆ ಆಗಬೇಕು, ಹೆಚ್ಚು ಜಾಗ ಸುತ್ತಬೇಕು’ ಎನ್ನುವವರು ಮೊದಲೇ ಒಂದಿಷ್ಟು ಸಿದ್ಧತೆ ಮಾಡಿಕೊಳ್ಳುವುದು ಅಗತ್ಯ, ಅನಿವಾರ್ಯ.

ADVERTISEMENT

ಸುತ್ತಾಟಕ್ಕಾಗಿ ವಿದೇಶಕ್ಕೆ ಹೋಗಬೇಕು ಎನ್ನುವ ಆಸೆ ಇದ್ದರೆ ಮೊದಲು ಬೇಕಾಗಿರುವುದು ಪಾಸ್‌ಪೋರ್ಟ್. ಭಾರತೀಯರಿಗೆ ನೇಪಾಳ ಮತ್ತು ಭೂತಾನ ಬಿಟ್ಟು ಬೇರೆಲ್ಲ ದೇಶಗಳಿಗೆ ಹೋಗಲು ಪಾಸ್‌ಪೋರ್ಟ್ ಇರಲೇಬೇಕು. ಈಗಂತೂ ಪಾಸ್‌ಪೋರ್ಟ್ ಪಡೆಯಲು ಹೆಚ್ಚು ಕಷ್ಟಪಡುವ ಅಗತ್ಯವೇ ಇಲ್ಲ. ಅರ್ಜಿ ಸಲ್ಲಿಸಿದರೆ ಕೆಲವೇ ದಿನಗಳ ಒಳಗೆ ಮನೆ ಬಾಗಿಲಿಗೇ ಪಾಸ್‌ಪೋರ್ಟ್ ಬರುತ್ತದೆ.

ನಂತರದ್ದು, ಎಲ್ಲಿ ಹೋಗಬೇಕು ಎನ್ನುವುದು. ಆ ದೇಶಕ್ಕೆ ವೀಸಾ (ಆ ದೇಶಕ್ಕೆ ಹೋಗುವ ಪರವಾನಗಿ) ಬೇಕೇ ಬೇಡವೇ ಎನ್ನುವುದನ್ನು ತಿಳಿದುಕೊಳ್ಳಬೇಕು. ಸದ್ಯಕ್ಕಿರುವ ಮಾಹಿತಿ ಪ್ರಕಾರ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ 16 ದೇಶಗಳಲ್ಲಿ ವೀಸಾ ಬೇಕಿಲ್ಲ. 25 ದೇಶಗಳು ಇ– ವೀಸಾ (ಆನ್‌ಲೈನ್‌ ನಲ್ಲಿಯೇ ಅರ್ಜಿ, ಶುಲ್ಕ ಸಲ್ಲಿಸಿ ಪಡೆಯುವ ಎಲೆಕ್ಟ್ರಾನಿಕ್ ವೀಸಾ) ನೀಡುತ್ತಿವೆ. 26 ದೇಶಗಳು ತಮ್ಮ ವಿಮಾನ ನಿಲ್ದಾಣ ಅಥವಾ ಗಡಿಯಲ್ಲಿ ವೀಸಾ (ವೀಸಾ ಆನ್ ಅರೈವಲ್) ನೀಡುವ ವ್ಯವಸ್ಥೆ ಮಾಡಿವೆ.

ಮೊದಲೇ ಹೇಳಿದಂತೆ, ಕಡಿಮೆ ಖರ್ಚಿನಲ್ಲಿ ಸುತ್ತಾಡಬೇಕು ಎನ್ನುವವರು ತಾವೇ ವೀಸಾ ವ್ಯವಸ್ಥೆ ಮಾಡಿಕೊಳ್ಳಬಹುದು. ಅಂತರ್ಜಾಲದಲ್ಲಿ ಇದರ ಎಲ್ಲ ಮಾಹಿತಿಗಳೂ ಲಭ್ಯ. ಆದರೆ ಒಂದು ವಿಷಯ ನೆನಪಿಡಿ. ವಂಚಕರ ಹಾವಳಿ ಜಾಸ್ತಿ. ಅದಕ್ಕಾಗಿ ಆಯಾ ಸರ್ಕಾರಗಳ ಅಧಿಕೃತ ಜಾಲತಾಣ ಅಥವಾ ಅಧಿಕೃತ ಏಜೆಂಟರ ಮೂಲಕವೇ ವೀಸಾ ಅರ್ಜಿ ಸಲ್ಲಿಸಿ.

ನಂತರದ್ದು ತಂಗಲು ಹೋಟೆಲ್ ವ್ಯವಸ್ಥೆ. ಅದಕ್ಕಾಗಿ ಅನೇಕ ವಿಶ್ವಾಸಾರ್ಹ ಏಜೆನ್ಸಿಗಳಿವೆ. ದರ, ಸೌಕರ್ಯ, ಹಣ ಪಾವತಿಯಂತಹ ಎಲ್ಲ ಮಾಹಿತಿಗಳನ್ನೂ ಅವು ಒದಗಿಸುತ್ತವೆ. ಅವುಗಳ ಮೂಲಕ ಕೊಠಡಿ ಕಾಯ್ದಿರಿಸಬಹುದು. ನೀವು ಹೋಗುವ ನಗರದ ಪ್ರಮುಖ ಪ್ರದೇಶಗಳು, ಬಸ್ ಮತ್ತಿತರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹತ್ತಿರವಾದ ಸ್ಥಳಗಳಲ್ಲೇ ಹೋಟೆಲ್ ಹುಡುಕುವುದು ಒಳ್ಳೆಯದು, ಸುರಕ್ಷಿತ ಕೂಡ. ಈಗಂತೂ ಉಚಿತ ವೈಫೈ ಇಲ್ಲದ ವಿಮಾನ ನಿಲ್ದಾಣಗಳು, ಹೋಟೆಲ್‌ಗಳೇ ಇಲ್ಲ ಎನ್ನಬಹುದು. ಹಾಗಾಗಿ, ಭಾರತದಲ್ಲಿನ ಕುಟುಂಬದವರ ಜತೆಗೆ ನಿರಂತರ ಸಂಪರ್ಕಕ್ಕೆ ಸಮಸ್ಯೆ ಆಗದು. ಇನ್ನೂ ಬೇಕು ಎನ್ನುವುದಾದರೆ, ನಿಮ್ಮ ಸಿಮ್‌ಕಾರ್ಡಿಗೆ ಇಲ್ಲೇ ಅಂತರ ರಾಷ್ಟ್ರೀಯ ಸಂಪರ್ಕ ಕಲ್ಪಿಸಿಕೊಳ್ಳಬಹುದು ಅಥವಾ ನೀವು ಹೋಗುವ ಸ್ಥಳದಲ್ಲಿ ಸಿಗುವ ಪ್ರವಾಸಿ ಸಿಮ್ ಬಳಸಬಹುದು.

ಹೋಗುವ ಸ್ಥಳ ನಿರ್ಧಾರ ಆದ ಮೇಲೆ ಅಲ್ಲಿ ಏನೇನನ್ನು ನೋಡಬಹುದು, ಹೇಗೆ ಹೋಗಬಹುದು ಎಂಬೆಲ್ಲ ವಿವರ ಸಂಗ್ರಹಿಸಿಕೊಳ್ಳಬೇಕು. ಸ್ಥಳೀಯ ಸಾರಿಗೆ ಬಳಸಿದರೆ ಖರ್ಚು ಕಡಿಮೆ. ಅಲ್ಲದೆ ಅಲ್ಲಿನ ಜನಜೀವನದ ದರ್ಶನವೂ ಆಗುತ್ತದೆ. ಬಹಳಷ್ಟು ಕಡೆ ಭಾರತೀಯ ಊಟೋಪಚಾರದ ರೆಸ್ಟೊರೆಂಟ್‌ಗಳು ಈಗ ಲಭ್ಯ. ಇವೆಲ್ಲ ಮಾಹಿತಿಗಳು ಅಂತರ್ಜಾಲದಲ್ಲಿ ಹುಡುಕಿದರೆ ಸಿಗುತ್ತವೆ. ಆದರೆ ಅವನ್ನು ಹೇಗೆ ಜಾಲಾಡಬೇಕು, ಹೇಗೆ ದೃಢಪಡಿಸಿಕೊಳ್ಳಬೇಕು ಎನ್ನುವ ವಿವೇಚನೆ ಬೇಕು. ಇಷ್ಟೆಲ್ಲ ಸಿದ್ಧತೆ ಮಾಡಿಕೊಂಡರೆ ಪ್ರಯಾಸ ಇಲ್ಲದೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.