ಉತ್ತರಪ್ರದೇಶದ್ದು ಎನ್ನಲಾದ ವಿಡಿಯೊ ತುಣುಕೊಂದು ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಒಂದು ಧರ್ಮದ ವ್ಯಕ್ತಿಯೊಬ್ಬನ ಮನೆಗೆ ಬೆಂಕಿ ಬಿದ್ದು ಮೂವರು ಸಜೀವ ದಹನವಾಗಿದ್ದರು. ಇಂಥ ಪ್ರಕರಣಗಳು ಇನ್ನಷ್ಟು ಸಂಭವಿಸಬೇಕು ಎನ್ನುವ ಭಾವವನ್ನು ಮತ್ತೊಂದು ಧರ್ಮಕ್ಕೆ ಸೇರಿದ ಅದಾರೋ ಪುಣ್ಯಾತ್ಮರು ಗೀಚಿ, ‘ಈ ಅಭಿಪ್ರಾಯ ಸರಿ ಎನ್ನುವವರು ಇದನ್ನು ಹಂಚಿಕೊಳ್ಳಿ’ ಎಂದು ಹೇಳಿದ್ದರು.
ಮಾನವನ ಬದುಕಿನಲ್ಲಿ ಅವಘಡಗಳು, ದುರ್ಘಟನೆಗಳು ಸಂಭವಿಸುವುದು ನಿರೀಕ್ಷಿತವಲ್ಲ,
ಆದರೂ ಅಸಹಜವಲ್ಲ. ಯಾರ ಬದುಕಿನಲ್ಲಿ ಯಾವಾಗ ಏನು ಬರಬಹುದೋ ಹೇಳಲಾಗದು. ಆದರೆ ಒಬ್ಬ ಮನುಷ್ಯ ಬೇರೆಯವರಿಗೆ ಕಷ್ಟ ಬಂದಾಗ ಅವರ ಜಾತಿ ಅಥವಾ ಧರ್ಮವನ್ನು ಪರಿಗಣಿಸಿ ಅದನ್ನು ಸ್ವಾಗತಿಸುವ ಕಟು ಹೃದಯಿಯಾಗುವುದು ಮಾತ್ರ ಮಾನವಧರ್ಮಕ್ಕೆ ಅಪಚಾರ ತರುವ ವಿಚಾರ.
ರಸ್ತೆ ಅಪಘಾತಗಳು ಸಂಭವಿಸಿದಾಗ ಮನುಷ್ಯ ಧರ್ಮ ಪಾಲಿಸುತ್ತಾ ಗಾಯಾಳುಗಳನ್ನು ಚಿಕಿತ್ಸೆಗೆ ಕರೆದೊಯ್ಯುವ ಹೃದಯವಂತಿಕೆಯ ಸಂದರ್ಭಗಳು ಇರುತ್ತವೆ. ಆಗಲೂ ಗಾಯಗೊಂಡವರ ಬಳಿ ಇರುವ ನಗ, ನಾಣ್ಯಗಳನ್ನು ದೋಚಿದ ಬಳಿಕ ಆಸ್ಪತ್ರೆಗೆ ಸಾಗಿಸುತ್ತಾರೆ ಎಂಬ ವ್ಯಂಗ್ಯ ಭಾವವನ್ನು ಕೆಲವರು ಪ್ರಕಟಿಸುವುದುಂಟು.
ಧರ್ಮ, ಶಾಸ್ತ್ರ, ಜಾತಿ ಎಲ್ಲವನ್ನೂ ಮೀರಿ ಸಂಕಷ್ಟ ಕಾಲದಲ್ಲಿ ನೆರವಾಗುವ ಮನೋಧರ್ಮವನ್ನು ಮೆಚ್ಚುವ ಬಸವಣ್ಣನವರು ‘ದಯೆಯಿಲ್ಲದ ಧರ್ಮ ಯಾವುದಯ್ಯಾ?’ ಎಂದು ಪ್ರಶ್ನಿಸಿದರು. ಧರ್ಮ ಎಂಬುದು ದಯೆಯ ತಿರುಳಿನಿಂದ ಕೂಡಿದೆ ಎಂದು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹೇಳುತ್ತಿದ್ದರು. ಬೇರೆಯವರ ಕಷ್ಟದಲ್ಲಿ ನೆರವಾಗುವ ವ್ಯಕ್ತಿಯ ಜಾತಿ, ಧರ್ಮ ಅವಹೇಳನೆಗೆ ಪಾತ್ರವಾಗುವ ಬದಲು, ಬೆಂಕಿ ಬಿದ್ದಾಗ ಮನೆಗೆ ನೀರು ಹೊತ್ತು ತರುವ ಹೃದಯವಂತಿಕೆ ಮೇರು ಶಿಖರವಾಗಿ ಕಾಣಬೇಕು. ಅಂತಹ ಸಮಯದಲ್ಲೂ ಕ್ಷುಲ್ಲಕವಾಗಿ ಮಾತನಾಡುವುದು ಮಾನವೀಯತೆಗೆ ಬಗೆಯುವ ದ್ರೋಹವಾದೀತು.
ನಾವು ನಮ್ಮ ಧರ್ಮದ ಬಗೆಗೆ ಓದಿಕೊಳ್ಳುವುದು ವಿಶೇಷವಲ್ಲ, ಬೇರೆಯವರ ಧರ್ಮದ ಬಗೆಗೂ ತಿಳಿದುಕೊಳ್ಳಬೇಕು ಎನ್ನುವುದು ಬಲ್ಲವರ ಮಾತು. ಜಾತಿ ಮತ್ತು ಧರ್ಮವನ್ನು ಸಂಕುಚಿತ ನೆಲೆಯಲ್ಲಿ ಪರಿಭಾವಿಸಿದರೆ ಅದು ಎಂದಿಗೂ ಮಾನವೀಯ ಗುಣಗಳ ಉದ್ದೀಪನೆಗೆ ನೆರವಾಗುವುದಿಲ್ಲ. ಪ್ರಕೃತಿಯ ಸೃಷ್ಟಿಯು ನಾಶವಾಗುವ ಸಂದರ್ಭ ಎದುರಾದ ಕಾಲದಲ್ಲಿ ಭೇದ ಮಾಡದೆ ಸಹಾಯಕ್ಕೆ ಮುಂದಾಗುವ ಹೃದಯವಂತಿಕೆ ಯಾವ ಧರ್ಮದಲ್ಲೂ ನಿಷೇಧವಲ್ಲ.
ಔರಂಗಜೇಬನು ದೊಡ್ಡ ಯುದ್ಧವನ್ನು ಮಾಡಿ ಮುಗಿಸಿದ. ಸಹಸ್ರಾರು ಜನರ ಶವಗಳು ನೆಲದಲ್ಲಿ ಬಿದ್ದಿದ್ದಾಗ ಅವನಿಗೆ ದಾಹವುಂಟಾಯಿತು. ಕುಡಿಯಲು ನೀರು ಸಿಗಲಿಲ್ಲ. ನೀರು ಹುಡುಕಿಕೊಂಡು ಹೋದಾಗ ಸನ್ಯಾಸಿಯೊಬ್ಬ ಕುಳಿತಿದ್ದುದು ಕಾಣಿಸಿತು. ಅವನ ಬಳಿ ಹೋಗಿ ನೀರು ಕೇಳಿದ. ಔರಂಗಜೇಬನಿಗೆ ಸನ್ಯಾಸಿ ನೀರು ಕೊಟ್ಟು ದಾಹ ತಣಿಸಿದ. ಆಗ ಜೊತೆಗಿದ್ದ ಶಿಷ್ಯ, ‘ನೀವು ಅವನಿಗೆ ನೀರು ಕೊಟ್ಟಿರಾ? ಅವನು ಧರ್ಮವಿರೋಧಿ, ಕೊಲೆಪಾತಕ’ ಎಂದ. ಸನ್ಯಾಸಿ ಮುಗುಳ್ನಕ್ಕ. ‘ನನಗದು ಗೊತ್ತಿತ್ತು. ಆದರೆ ಇಂಥ ಸಮಯದಲ್ಲಿ ನಾನು ಅವನಿಗೆ ನೀರು ನೀಡದೆ ಸಾಯಲು ಕಾರಣನಾಗಿದ್ದರೆ, ಅವನಿಗಿಂತ ದೊಡ್ಡ ಪಾತಕಿಯಾಗುತ್ತಿದ್ದೆ. ಉರಿಯುವ ಬೆಂಕಿಗೆ, ಸುರಿಯುವ ಮಳೆಗೆ ಜಾತಿ ಭೇದವಿಲ್ಲ. ಪುಣ್ಯಶೀಲ ಅಥವಾ ಪಾತಕಿ ಎನ್ನುವ ತಾರತಮ್ಯವಿಲ್ಲ. ಕಷ್ಟ ಬಂದಾಗ ನಾನು ಅವನಿಗೆ ನೆರವು ನಿರಾಕರಿಸುವುದು ಮಾನವಧರ್ಮಕ್ಕೆ ಎಸಗುವ ಅಪಚಾರ’ ಎಂದ.
ನಾವು ಇಂತಹ ಎಷ್ಟೋ ಕತೆಗಳನ್ನು ಓದಿದ್ದೇವೆ. ಸಮಾನತೆ ಸಾರಿದ ನಾರಾಯಣ ಗುರುಗಳು, ವಿವೇಕಾನಂದರಂತಹ ಅನೇಕರ ತತ್ವೋಪದೇಶಗಳನ್ನು ಅರಿತುಕೊಂಡಿದ್ದೇವೆ. ಆದರೂ ಇತ್ತೀಚೆಗೆ ಪರ
ಧರ್ಮದ ಬಗೆಗೆ ಒಂದು ವಿಧದ ಅಸಹಿಷ್ಣುತೆ ನಮ್ಮನ್ನು ಬಾಧಿಸುತ್ತಿದೆ. ಧರ್ಮದ ನಿಯಮಗಳನ್ನು ಬೇರೆಯವರ ಮೇಲೆ ಬಲವಂತವಾಗಿ ಹೇರುವ ಬದಲು ಧರ್ಮದ ನ್ಯೂನತೆಗಳ ನಿವಾರಣೆಗೆ ಗಮನ ಹರಿಸುವ ಅಗತ್ಯವಿದೆ.
ಹೀಗಾಗಿ ಮತಾಂತರಗಳು, ಪ್ರೇಮ ಪ್ರಸಂಗಗಳು ಇವ್ಯಾವುವೂ ಒಂದು ಜಾತಿ ಅಥವಾ ಧರ್ಮದ ಬಗೆಗೆ ಸಾರಾಸಗಟಾಗಿ ಅಂತಿಮ ತೀರ್ಮಾನಕ್ಕೆ ಬರುವುದಕ್ಕೆ ಕಾರಣವಾಗಬಾರದು. ಕಷ್ಟ ಬಂದಾಗ ಅಲ್ಲಿ ಬಳಲುತ್ತಿರುವ ಜೀವಗಳು ಕಾಣಿಸಬೇಕೇ ವಿನಾ ವ್ಯಕ್ತಿಗತವಾದ ಜಾತಿ, ಧರ್ಮದ ಹೆಸರಿನಲ್ಲಿ ಅದು ಸಹಜ ಎಂದು ನಿರ್ಧರಿಸುವ ವಿಕೃತ ಮನಸ್ಸು ನಮ್ಮದಾಗಬಾರದು. ‘ಮನುಷ್ಯ ಜಾತಿ ತಾನೊಂದೆ ವಲಂ’ ಎನ್ನುವುದು ವೇದಿಕೆಗಷ್ಟೇ ಮೀಸಲಾಗಬಾರದು. ಕಷ್ಟದ ಸಂದರ್ಭದಲ್ಲಿ ಬೇರೆಯವರಿಗೆ ನಾವು ನೀಡುವ ನೆರವು ಅವರ ವ್ಯಕ್ತಿಗತ ದುರ್ಗುಣಗಳ ಬದಲಾವಣೆಗೂ ಕಾರಣವಾಗಬಹುದು. ಸಾಯುತ್ತಿರುವ ವ್ಯಕ್ತಿಗೆ ನೆರವಿನ ಹಸ್ತ ಚಾಚಲು ನಮ್ಮಿಂದ ಆಗದೇ ಇರಬಹುದು. ಆದರೆ ಆತನ ಯಾತನೆಯನ್ನು ಕಂಡು ಖುಷಿ
ಪಡುವ ಕಲ್ಲುಹೃದಯಿಗಳು ಮಾತ್ರ ನಾವಾಗಬಾರದು.
ಜಗತ್ತಿನ ಕೆಲವು ರಾಷ್ಟ್ರಗಳು ಹಿಂಸೆಯ ಕಡೆಗೆ ವಾಲುತ್ತಿವೆ, ಮಾನವೀಯತೆ ಅಧಃಪತನಗೊಳ್ಳುತ್ತಿದೆ, ಯುದ್ಧಗಳು ಜಗತ್ತನ್ನು ತಲ್ಲಣಗೊಳಿಸುತ್ತಿವೆ. ಇಂತಹ ಸಂದಿಗ್ಧ ಕಾಲದಲ್ಲಿ, ಸುಂದರವಾದ ಪ್ರಪಂಚದ ಸುಖಮಯ ಕನಸು ಹೊತ್ತ ಅವೆಷ್ಟೋ ಜೀವಗಳಿವೆ. ಪ್ರಪಂಚ ಉಳಿಯಬೇಕಿದ್ದರೆ ಮಾನವೀಯ ಹೃದಯಕ್ಕೆ ಪುರಸ್ಕಾರ, ಕಷ್ಟಕ್ಕೆ ಮರುಗುವ ಗುಣ ಸಾರ್ವತ್ರಿಕ ಆಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.