ADVERTISEMENT

ಸಂಗತ | ಜನಮನ ಗೆಲ್ಲಲು ಜ್ಞಾನಮಾರ್ಗ

ಯೋಗಾನಂದ
Published 26 ಮೇ 2025, 23:30 IST
Last Updated 26 ಮೇ 2025, 23:30 IST
   

ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರಿ ನೌಕರರಿಗೆ ಸಾಹಿತ್ಯದ ಬಗ್ಗೆ ಒಲವು ಮೂಡಿಸಬೇಕು, ಈ ಮೂಲಕ ಅಲ್ಲಿನ ವಾತಾವರಣವನ್ನು ಸ್ವಲ್ಪವಾದರೂ ಸಹನೀಯವಾಗಿಸಲು ಸಾಧ್ಯ ಎಂದು ರಾಜಕುಮಾರ ಕುಲಕರ್ಣಿ ಅವರು ತಮ್ಮ ಲೇಖನದಲ್ಲಿ (ಸಂಗತ, ಮೇ 23) ಅಭಿಪ್ರಾಯಪಟ್ಟಿ
ರುವುದು ಸಕಾಲಿಕವಾಗಿದೆ. ಸಾರ್ವಜನಿಕ ಸೇವೆಯಲ್ಲಿ ಇರುವವರು ಯಾವುದೇ ಹುದ್ದೆ ಅಥವಾ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸುವುದರ ಮೇಲೆ ಸಾಹಿತ್ಯ ಪ್ರಕಾರಗಳು ನಿಸ್ಸಂದೇಹವಾಗಿಯೂ ಪ್ರಭಾವ ಬೀರುತ್ತವೆ.

ಸರ್ಕಾರಿ ನೌಕರ ಬಂಧುಗಳು ಜನರ ಸಂಕಷ್ಟಗಳಿಗೆ ತೆರೆದುಕೊಳ್ಳಲು ಕವಿತೆ, ನಾಟಕ, ವಚನ, ಪ್ರಬಂಧದಂತಹವು ಬೆಳಕಿಂಡಿಗಳಾಗಬಲ್ಲವು. ಅಧಿಕಾರಿಗಳು ಮತ್ತು ಸಿಬ್ಬಂದಿ ತಾವು ಕುಳಿತ ಜಾಗದಲ್ಲೇ ಇನ್ನೊಂದು ಪ್ರಪಂಚವನ್ನು ಕಾಣಲು ಸಾಧ್ಯವಾಗುತ್ತದೆ. ನವಿರಾದ ವಿನೋದದಿಂದಲೇ ಅವರು ಸಾರ್ವಜನಿಕರ ಮನಸ್ಸನ್ನು ಗೆಲ್ಲಬಹುದು. ಶಾಲೆ, ಕಾಲೇಜಿನ ಹಂತದಲ್ಲಿ ಭಾಷೆ, ಸಾಹಿತ್ಯವನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಉದ್ದೇಶವೂ ಅದೇ ಅಲ್ಲವೆ?

ಓದಿದ್ದು ಅಥವಾ ಬರೆದಿದ್ದು ಕಥೆಯೊ, ಕಗ್ಗವೊ, ಕವನವೊ, ಪ್ರಹಸನವೊ ಯಾವುದಾದರೂ ಸರಿ, ಭವಿಷ್ಯದಲ್ಲಿ ಕಂಡುಕೊಳ್ಳುವ ಜೀವನೋಪಾಯಕ್ಕೆ ಅದರಿಂದ ರವಷ್ಟಾದರೂ ಸ್ಫೂರ್ತಿ ದೊರೆಯಲಿ ಎಂಬ ಆಶಯ ಇರುತ್ತದೆ. ದುರ್ದೈವವಶಾತ್‌ ಪರೀಕ್ಷೆಗಷ್ಟೇ ಪಠ್ಯ ಎನ್ನುವಂತಹ ವಾತಾವರಣ ಈಗ ನಿರ್ಮಾಣವಾಗಿದೆ. ಹೀಗಾಗಿ, ವಿದ್ಯಾರ್ಜನೆಯು ಉದ್ಯೋಗ ಗಿಟ್ಟಿಸುವುದರಲ್ಲಿ ಅಂತ್ಯವಾಗುವುದೇ ಹೆಚ್ಚು.

ADVERTISEMENT

ಆಡಳಿತವರ್ಗವು ಮನುಷ್ಯನ ಸಂಕೀರ್ಣ ಸ್ವಭಾವವನ್ನು ಅರಿಯದೆ ಮಹತ್ವದ ಜನಪರ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ನೌಕರರು ತಮ್ಮೆದುರು ಕುಳಿತ ಅಹವಾಲುದಾರರ ಸ್ಥಾನದಲ್ಲಿ ತಮ್ಮನ್ನು ಕಲ್ಪಿಸಿಕೊಂಡಾಗ ಮಾತ್ರ ಆ ಅಹವಾಲುದಾರರ ಸಂವೇದನೆಗಳು ಅವರಿಗೆ ಅರ್ಥವಾಗುತ್ತವೆ, ಅವರ ಮನಸ್ಸನ್ನು ಮುಟ್ಟುತ್ತವೆ. ಆಗಷ್ಟೇ ಅವರು ಅವಕ್ಕೆ ಸೂಕ್ತವಾಗಿ ಸ್ಪಂದಿಸಲು ಸಾಧ್ಯ. ಅದಿಲ್ಲದೆ ‘ಹೋಗಿ ಬನ್ನಿ’, ‘ನಾಳೆ ಬನ್ನಿ’ ಎಂದಾಗ ಮನವಿದಾರರಿಗೆ ನಿರಾಶೆ ಕಟ್ಟಿಟ್ಟಬುತ್ತಿ. ‘ಇಷ್ಟು ತನ್ನಿ’ ಎಂದರಂತೂ ತಮ್ಮ ಕೆಲಸ ಇತ್ಯರ್ಥವಾಗಲಿದೆ ಎಂದು ಕನಸು ಕಂಡವರ ಉತ್ಸಾಹ ಒಂದೇ ಬಾರಿಗೆ ಬತ್ತಿಯೇ ಹೋಗುತ್ತದೆ.

ಪ್ರಜೆಗಳ ರಕ್ಷಣೆ, ಪಾಲನೆ ಮತ್ತು ಯೋಗಕ್ಷೇಮ- ಇವು ಪರಿಪಕ್ವ ಆಳ್ವಿಕೆಗೆ ಅಗತ್ಯವಾದ ಮೂರು ಮುಖ್ಯ ಅಂಶಗಳು ಎಂದು ಕೌಟಿಲ್ಯ ತನ್ನ ‘ಅರ್ಥಶಾಸ್ತ್ರ’ ದಲ್ಲಿ ಉಲ್ಲೇಖಿಸಿದ್ದಾನೆ. ದೇಶಗಳು, ರಾಜ್ಯಗಳು ಭಿನ್ನ ಭಿನ್ನ. ಅವುಗಳ ಇತಿಹಾಸ, ಸಂಸ್ಕೃತಿ, ಅಲ್ಲಿನ ಜನರ ಆಕಾಂಕ್ಷೆಗಳೂ ಬೇರೆ ಬೇರೆಯೇ ಆಗಿರುತ್ತವೆ. ಆದರೆ ಚೆನ್ನಾಗಿ ಓದು, ಚೆನ್ನಾಗಿ ಆಳು ಎನ್ನುವಂತಹ ಹಿತನುಡಿಗಳು ಸರ್ವತ್ರ ಒಂದೇ ಆಗಿರುತ್ತವೆ. ಓದು, ಬರಹದಿಂದ ಕಲಿತ ವಿವೇಕವು ಹೊಣೆಗಾರಿಕೆಯನ್ನು ಬದ್ಧತೆಯಿಂದ ನಿರ್ವಹಿಸಲು ಪೂರಕವಾಗಿರುತ್ತದೆ. ನಿಜವಾದ ಅರ್ಥದಲ್ಲಿ ಜ್ಞಾನವೇ ಸಾಮರ್ಥ್ಯ ಮತ್ತು ಶಕ್ತಿ.

ಉನ್ನತ ಅಧಿಕಾರಿಯಾಗಲಿ ಅಥವಾ ಯಾವುದೇ ದರ್ಜೆಯ ಸಿಬ್ಬಂದಿಯಾಗಲಿ ಸಾಹಿತ್ಯದ ಓದು, ಬರಹದಲ್ಲಿ ಆಸಕ್ತರಾಗಿದ್ದರೆ ಅವರ ಶಬ್ದಸಂಪತ್ತು ವರ್ಧಿಸುತ್ತದೆ ಹಾಗೂ ವ್ಯಾಕರಣ ಶುದ್ಧವಾಗಿ ಇರುತ್ತದೆ. ಯಾರದೇ ಸಹಾಯವಿಲ್ಲದೆ ಅವರು ತಮ್ಮ ವೃತ್ತಿಗೆ ಸಂಬಂಧಿಸಿದ ಕರಡು ತಯಾರಿಸುತ್ತಾರೆ. ಆಗಿಂದಾಗ್ಗೆ ಬರುವ ಸರ್ಕಾರಿ ಆದೇಶಗಳನ್ನು ಸರಿಯಾಗಿ ವ್ಯಾಖ್ಯಾನಿಸಲು ಅವರು ಸಮರ್ಥರಾಗುತ್ತಾರೆ. ಕಠಿಣ ಸಂದರ್ಭಗಳನ್ನು ಸಂಯಮದಿಂದ ಎದುರಿಸುವುದನ್ನು ಕಲಿಯುತ್ತಾರೆ. ಏಕೆಂದರೆ ಸಂವಹನದ ಸೂಕ್ಷ್ಮಗಳು ಅವರ ಜೊತೆಗಿರುತ್ತವೆ. ಹೀಗಾಗಿ, ಓದುವ ಪ್ರಮಾಣಕ್ಕಿಂತ ಅದರ ಗುಣಮಟ್ಟ ಮುಖ್ಯವಾಗುತ್ತದೆ. 

ಯಾವುದೇ ಒಂದು ಭಾಷೆಯ ಸಾಹಿತ್ಯ ಕೃತಿಗಳ ಪರಿಚಯವಿದ್ದರೂ ಅಂತಹವರಿಗೆ ಅನ್ಯಭಾಷೆಗಳು ಪರಕೀಯ ಎನ್ನಿಸುವುದಿಲ್ಲ. ಉತ್ತರ ಭಾರತದ ಕನೌಜ್‌ ಎಂಬ ಪ್ರಾಂತ್ಯವನ್ನು ಕ್ರಿ.ಶ. ಏಳನೇ ಶತಮಾನದ ಆರಂಭದಲ್ಲಿ ದಕ್ಷವಾಗಿ ಆಳಿದ ದೊರೆ ಹರ್ಷವರ್ಧನ. ಆತನ ಆಸ್ಥಾನದಲ್ಲಿ ಕವಿಗಳಿಗೆ ಅಗ್ರ ಸ್ಥಾನಮಾನವಿತ್ತು.
ಅವನು ಸ್ವತಃ ನಾಲ್ಕು ಸಂಸ್ಕೃತ ನಾಟಕಗಳನ್ನು ರಚಿಸಿದ್ದಂತಹ ಮೇಧಾವಿಯಾಗಿದ್ದ. ಭಾರತದ ಇತಿಹಾಸದಲ್ಲಿ ಇಂತಹ ಉದಾಹರಣೆಗಳು ಹಲವಾರು ಸಿಗುತ್ತವೆ.

ಉತ್ತಮ ಗ್ರಂಥವು ಮನುಷ್ಯರನ್ನು ಒಗ್ಗೂಡಿಸುವ ಸಂಪರ್ಕ ಸೇತು. ಪುಸ್ತಕದ ಪುಟಗಳನ್ನು ತೆರೆದಂತೆ ಬಗೆ ಬಗೆಯ ಪಾತ್ರಗಳ ಮನಸ್ಸುಗಳನ್ನು ಎದುರುಗೊಳ್ಳುತ್ತೇವೆ. ಆ ಪಾತ್ರಗಳಿಗೆ ಆಗುತ್ತಾ ಹೋಗುವ ಅನುಭವಗಳು ನಮ್ಮ ಅನುಭವಗಳೇ ಆಗುತ್ತವೆ. ನಮ್ಮ ಸಹಾನುಭೂತಿ ಹಲವು ಪಟ್ಟು ವಿಸ್ತಾರಗೊಳ್ಳುತ್ತದೆ. ಸಾಹಿತ್ಯವು ನಮ್ಮ ಬದುಕನ್ನು ಮತ್ತು ನಮ್ಮ ಸುತ್ತಮುತ್ತಲಿನ ಜಗತ್ತನ್ನು ನಾವಾಗಿಯೇ ಚೆನ್ನಾಗಿ ಅರಿಯಲು ಪೂರಕವಾಗಿ ಇರುತ್ತದೆ. ಅದು ನಮ್ಮ ಅಂತರಂಗವನ್ನು ಕಲಕಿ ಪರಿಷ್ಕರಿಸುತ್ತದೆ. ಸಾಹಿತ್ಯ ಕೃತಿಗಳಲ್ಲಿನ ಜಟಿಲವಾದ ನೈತಿಕ ಸಂದಿಗ್ಧಗಳು ನಮ್ಮಲ್ಲಿ ಪ್ರಜ್ಞೆಯನ್ನು ಮೂಡಿಸಬಲ್ಲವು ಹಾಗೂ ನಮ್ಮ ಹೊಣೆಗಾರಿಕೆಯನ್ನು ಹೆಚ್ಚಿಸಬಲ್ಲವು.

ಹೀಗಾಗಿ, ಸಾಹಿತ್ಯ ಎಲ್ಲರಿಗೂ ಅವಶ್ಯ. ಎಲ್ಲರೂ ಓದುವ ಹವ್ಯಾಸ ರೂಢಿಸಿಕೊಳ್ಳುವುದು ಉತ್ತಮ. ಪ್ರತಿ ಬ್ಯಾಂಕು, ಕಚೇರಿಯಲ್ಲಿ ದಿನಪತ್ರಿಕೆಗಳನ್ನು ತರಿಸುವ ವ್ಯವಸ್ಥೆಯಿದ್ದರೆ ಅಲ್ಲೊಂದು ಪುಟ್ಟ ವಾಚನಾಲಯವೇ ಉಗಮಿಸುತ್ತದೆ. ನಿಯತಕಾಲಿಕಗಳು ಹಾಗೂ ಪುಸ್ತಕಗಳು ಅವುಗಳ ಜೊತೆಗೂಡಿದಲ್ಲಿ ಆಹ್ಲಾದಕರ ವಾತಾವರಣ ಏರ್ಪಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.