ADVERTISEMENT

ಸಂಗತ | ಹೃದಯದಲಿ ಚಿಮ್ಮಲಿ ಹಿಗ್ಗಿನ ಬುಗ್ಗೆ

ಯೋಗಾನಂದ
Published 19 ಮಾರ್ಚ್ 2025, 23:30 IST
Last Updated 19 ಮಾರ್ಚ್ 2025, 23:30 IST
...
...   

ಮಹಾನಗರದಲ್ಲಿ ಒಂದೆಡೆ ಮನೆ ಕಟ್ಟಿಸುತ್ತಿದ್ದವ ಹೊರಗೋಡೆಗೆ ಪಾಯ ಕಡಿಮೆಯಾಯಿತೆಂದು ಗುತ್ತಿಗೆದಾರನೊಂದಿಗೆ ಬಿಸಿಮಾತಿಗಿಳಿದಿದ್ದ. ಪಕ್ಕದಲ್ಲಿ ಮರಕ್ಕೆ ಕಟ್ಟಿದ್ದ ಡೋಲಿಯಲ್ಲಿ ಕೂಸು ಸುಖವಾಗಿ ನಿದ್ರಿಸುತ್ತಿತ್ತು. ಕೂಲಿಗೆ ಬಂದಿದ್ದ ಅದರ ಅಪ್ಪ, ಅಮ್ಮ ಅದೇ ಮರದ ಕೆಳಗೆ ಕೂತು ನಗುನಗುತ್ತಾ ಮಾತಾಡಿಕೊಂಡು ಊಟ ಮಾಡುತ್ತಿದ್ದರು. ಸಂತೋಷ ಯಾರಿಗೆ, ಎಲ್ಲಿ, ಹೇಗೆ ಎನ್ನುವುದು ಸಂಕೀರ್ಣ.

ಆರೋಗ್ಯದ ಮೂಲವೂ ಸಂತೋಷವೆ. ಸಮಯವಿರಲಿ, ಸಂಪನ್ಮೂಲವಿರಲಿ ಅಥವಾ ಮುಗುಳ್ನಗೆಯಿರಲಿ ಹಂಚಿಕೊಂಡರೆ ಅದು ಇನ್ನೊಬ್ಬರ ದಿನವನ್ನು ಖುಷಿಯಾಗಿಸುತ್ತದೆ. ಹಂಚುವ ಹೃದಯವೇ ನಗುವ ಹೃದಯ. ಸಂತೋಷವು ಮಾನವನ ಮೂಲಭೂತ ಹಕ್ಕೆಂದು ವಿಶ್ವಸಂಸ್ಥೆ ಮಾನ್ಯ ಮಾಡಿದೆ. ಅದಕ್ಕೆ ಆರ್ಥಿಕ ಬೆಳವಣಿಗೆಯಷ್ಟೇ ಆದ್ಯತೆ ನೀಡುವುದು ಅಗತ್ಯ ಎಂದಿದೆ.

2012ರಲ್ಲಿ ವಿಶ್ವಸಂಸ್ಥೆ ಒಂದು ನಿರ್ಣಯವನ್ನು ಅಂಗೀಕರಿಸಿತು. ಪ್ರತಿವರ್ಷ ಮಾರ್ಚ್‌ 20 ‘ವಿಶ್ವ ಸಂತೋಷದ ದಿನ’ ಎಂದು ಘೋಷಿಸಿತು. 2013ರ ಮಾರ್ಚ್‌ 20ರಂದು ಮೊದಲ ವಿಶ್ವ ಸಂತೋಷದ ದಿನವಾಗಿ ಜಗತ್ತು ಸಡಗರಿಸಿತು.

ADVERTISEMENT

‘ಪರರ ಬಗ್ಗೆ ಕಾಳಜಿ ವಹಿಸುವುದು ಮತ್ತು ಹಂಚಿಕೊಳ್ಳುವುದು’ ಈ ಬಾರಿಯ ವಿಶ್ವ ಸಂತೋಷದ ದಿನಾಚರಣೆಯ ಧ್ಯೇಯವಾಕ್ಯ. ಐಕಮತ್ಯ, ಪರಸ್ಪರ ದಯೆ ಮತ್ತು ಔದಾರ್ಯದ ಮೂಲಕ ಮಾನವರೆಲ್ಲರೂ ಸುಖ, ಸಂತಸದತ್ತ ಸಾಗಲು ಈ ಉದ್ಘೋಷ ಪ್ರೇರಣೆಯಾಗುತ್ತದೆ. ಮಾನವೀಯತೆಯ ಪರಿಕಲ್ಪನೆಯು ಜಾಗತಿಕ ಬದ್ಧತೆಯಾಗಬೇಕಿದೆ. ಸಂತೋಷವನ್ನು ಅಳೆಯಲು ಹೊರಟರೆ ಆಗುವುದು ನಿರಾಸೆಯೇ. ಏಕೆಂದರೆ ಅದನ್ನು ಅಳೆಯುತ್ತಾ ಹೋದಂತೆ ಅವರಿವರ ಸಂತಸದ ಜೊತೆಗೆ ಹೋಲಿಸಿಕೊಳ್ಳಲು ಮುಂದಾಗುತ್ತೇವೆ. ಇದರ ಪರಿಣಾಮ ನಮ್ಮ ಹಿಗ್ಗಿಗೂ ಸಂಚಕಾರ. ಆನಂದವಾಗಿರಲು ಸರ್ವದಾ ಯತ್ನಿಸುವುದರಿಂದ ಪ್ರತಿಕೂಲವೇ. ಬದುಕಿನ ಪ್ರತಿ ಗಳಿಗೆಯಲ್ಲೂ ನೆಮ್ಮದಿ ಅಸಂಭವ. ಕಷ್ಟವಿದ್ದರೇನೆ ಸುಖದ ಅನುಭಾವ.

ಸ್ವರ್ಗಕ್ಕಾಗಿ ಹಪಹಪಿಸಿದವನೊಬ್ಬನಿಗೆ ಕಡೆಗೂ ಅದು ಸಿಕ್ಕಿತಂತೆ. ಅಲ್ಲಾದರೂ ಅವನು ನೆಮ್ಮದಿಯಾಗಿ ಇದ್ದನೇ? ಇಲ್ಲ, ಏಕೆಂದರೆ ಸದಾ ಅಮೃತ ಸೇವಿಸಿ ಬೇಸರ ಎಂದು ಗೊಣಗತೊಡಗಿದನಂತೆ! ಅನಗತ್ಯ ಸಾಮಗ್ರಿಗಳನ್ನು ವಿಲೇವಾರಿ ಮಾಡಿ ನಮ್ಮ ಕೊಠಡಿಯನ್ನು ಸ್ವಚ್ಛವಾಗಿ ಇರಿಸಿಕೊಂಡರೆ ಸಾಕು, ಹಿಗ್ಗಿನತ್ತ ಒಂದು ಹೆಜ್ಜೆಯಿಟ್ಟಂತೆ. ಇಂದು ಇಂದಿಗೆ, ನಾಳೆ ನಾಳೆಗೆ, ಇರಲಿ ಈ ಕ್ಷಣ ನಮಗೆ ಎನ್ನುವಂತೆ ವರ್ತಮಾನದಲ್ಲಿ ಬದುಕುವುದೇ ಒಂದು ಕೌಶಲ. ಭೂತಕಾಲದ ಬಗ್ಗೆ ವಿಷಾದ, ಭವಿಷ್ಯದತ್ತ ಭಯ- ಇವೆರಡನ್ನೂ ದೂರವಾಗಿಸುವ ಸಾಮರ್ಥ್ಯ ವರ್ತಮಾನಕ್ಕಿದೆ. ನಮ್ಮ ಗಮನವನ್ನು ಯಾವುದರತ್ತ ಹರಿಸುತ್ತೇವೆಯೊ ಅದು ನಮ್ಮ ಭಾವನಾತ್ಮಕ ಅನುಭವವನ್ನು ಪ್ರಭಾವಿಸುತ್ತದೆ. ಕೊರತೆಗೆ ಅಥವಾ ಕಳೆದುದಕ್ಕೆ ವೃಥಾ ಚಿಂತಿಸದೆ, ಇರುವುದನ್ನು ಹಬ್ಬವಾಗಿಸಿಕೊಳ್ಳುವುದು ವಿವೇಕ.

ಬದುಕಿನಲ್ಲಿ ನಿಭಾಯಿಸಲಾಗದ ಕಠಿಣ ಸಂದರ್ಭಗಳು ಎದುರಾದರೇನು? ಅವು ನೆನಪಿನ ಬುತ್ತಿ ಸೇರುವ ಉತ್ತಮ ಅನುಭವಗಳೇ. ಮುಂದೆ ಸಂಕಷ್ಟ ಒದಗಿದರೆ ಅವೇ ಮನಸ್ಸನ್ನು ಹಗುರಾಗಿಸಬಲ್ಲ ಘನ ಮಾರ್ಗಸೂಚಿಗಳು. ನಿಂದನೆಗಳಿರಲಿ, ಅವಮಾನಗಳಿ ರಲಿ ಅಥವಾ ನಷ್ಟಗಳಿರಲಿ ಅವನ್ನು ಹೇಗೆ ಸಂಸ್ಕರಿಸು ತ್ತೇವೆ ಎನ್ನುವುದು ಮುಖ್ಯವಾಗುತ್ತದೆ.

ಸಂತಸದ ಮನಸ್ಸೇ ಸೃಜನಶೀಲ ಮನಸ್ಸು. ಗ್ರೀಕ್‌ ದಾರ್ಶನಿಕ ಅರಿಸ್ಟಾಟಲ್‌ ಹೇಳಿರುವಂತೆ, ಸಂತೋಷವು ನಮ್ಮನ್ನೇ ಅವಲಂಬಿಸಿದೆ. ನಾವು ನಮ್ಮೊಳಗೆ ಕಂಡು ಕೊಳ್ಳುವ ಸಂತೋಷವು ಷರತ್ತುರಹಿತ ಆಗಿರುತ್ತದೆ. ಒಂದು ಚಮಚ ಉಪ್ಪನ್ನು ನೀರಿರುವ ಬಟ್ಟಲಿಗೆ ಹಾಕಿದರೆ ಆ ನೀರನ್ನು ಸೇವಿಸಲಾದೀತೆ? ಆದರೆ ಅದೇ ಒಂದು ಚಮಚ ಉಪ್ಪನ್ನು ಸರೋವರಕ್ಕೆ ಹಾಕಿದರೆ, ಏನೂ ವ್ಯತ್ಯಾಸವಾಗದು. ಎಂದಿನಂತೆ ಸರೋವರದ ನೀರನ್ನು ಸೇವಿಸಬಹುದು. ಅಂದರೆ, ನಮ್ಮ ಆಲೋಚನೆಯನ್ನು ವಿಶಾಲಗೊಳಿಸಿದರೆ ಸಂಕಟಗಳು ನಮ್ಮನ್ನು ಬಾಧಿಸವು.

ಒಂದು ದೇಶದ ಪ್ರಜೆಗಳ ಸಂತೃಪ್ತಿಯನ್ನು ನಿರ್ಧರಿಸುವ ಕೆಲವು ಅಂಶಗಳಿವು: ತನ್ನ ಸಂಕಷ್ಟದಲ್ಲಿ ಒಬ್ಬರಾದರೂ ನೆರವಿಗೆ ಬರುತ್ತಾರೆಂಬ ಭಾವ ಪ್ರತಿಯೊಬ್ಬರಲ್ಲೂ ಬರಬೇಕು. ಇದನ್ನೇ ಸಾಮಾಜಿಕ ಬೆಂಬಲ ಎನ್ನುವುದು. ನಿಗದಿತ ಅವಧಿಯಲ್ಲಿ ಒಂದು ದೇಶದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಆ ದೇಶದ ಆರ್ಥಿಕ ಆರೋಗ್ಯದ ಸೂಚಕ. ಜಿಡಿಪಿ ವಾರ್ಷಿಕ ಬೆಳವಣಿಗೆಯ ದರ ನಿಗದಿತ ಪ್ರಮಾಣದಲ್ಲಿ ಇದ್ದರೆ ನಿರಾತಂಕ ಸ್ಥಿತಿ ಎನಿಸುವುದು. ತಲಾ ಜಿಡಿಪಿ ಹೆಚ್ಚಿರುವುದು ಅಪೇಕ್ಷಣೀಯ.

ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಬೇಕು. ದೇಶವಾಸಿಗಳಿಗೆ ಬದುಕಿನ ಆಯ್ಕೆಗಳ ಸ್ವಾತಂತ್ರ್ಯ ಅಗತ್ಯ. ಇವೆಲ್ಲಕ್ಕೂ ಪ್ರಧಾನವಾಗಿ ದೇಶವು ಭ್ರಷ್ಟಾಚಾರಮುಕ್ತ ಆಗಿರಬೇಕು. ಈ ದಿಸೆಯಲ್ಲಿ ಫಿನ್‌ಲ್ಯಾಂಡ್‌, ಡೆನ್ಮಾರ್ಕ್‌, ಐಸ್‌ಲ್ಯಾಂಡ್‌- ಈ ಮೂರು ದೇಶಗಳು ಸಂತೋಷದ ದೇಶಗಳ ಪಟ್ಟಿಯಲ್ಲಿ
ಅಗ್ರಸ್ಥಾನದಲ್ಲಿವೆ.

ಸಾಮಾಜಿಕ ಮಾಧ್ಯಮಗಳು ಕೆಲವರನ್ನು ಅತಿಶಯೋಕ್ತಿಯಿಂದ ಚಿತ್ರಿಸಿ ನಮ್ಮನ್ನು ಕೀಳರಿಮೆಗೆ ದೂಡುತ್ತವೆ. ಅವು ಸೃಷ್ಟಿಸುವ ಭ್ರಮೆಯಿಂದ ಪಾರಾಗುವ ಧೈರ್ಯ, ಜಾಣ್ಮೆಯನ್ನು ರೂಢಿಸಿಕೊಳ್ಳದಿದ್ದರೆ ನಮ್ಮ ಪಾಲಿಗೆ ಆನಂದ ಸಾಧ್ಯವೇ? ಇಡೀ ಜಗತ್ತೇ ದಿನವಿಡೀ ಆನ್‌ಲೈನ್‌ನಲ್ಲಿ ಮುಳುಗಿರಲಿ, ತಕ್ಕ ಬೇಲಿಗಳನ್ನು ಹಾಕಿ ವಾಸ್ತವವಾದ ಸಂವಹನಗಳನ್ನು ಗಮನಿಸಬಹುದಲ್ಲ. ಎಲ್ಲಕ್ಕೂ ತಂತ್ರಜ್ಞಾನವನ್ನು ನೆಚ್ಚಿಕೊಳ್ಳುವುದಕ್ಕಿಂತ ಜನರಲ್ಲಿ ಪ್ರೀತಿ, ನಂಬಿಕೆ ಇಟ್ಟು ಮುಂದುವರಿಯುವುದು ದೊಡ್ಡದಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.