ಬಾಗಲಕೋಟೆಯಲ್ಲಿ ಏರ್ಪಡಿಸಿದ್ದ ಸರ್ಕಾರಿ ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಹೋಗಿದ್ದೆ. ಅಲ್ಲಿ ಸೇರಿದ್ದ ಬಹಳಷ್ಟು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ತಮ್ಮ ಎಡಗಾಲಿಗೆ ಕಪ್ಪು ದಾರ ಕಟ್ಟಿಕೊಂಡಿದ್ದರು. ವಿಚಾರಿಸಿದಾಗ, ‘ಆರೋಗ್ಯ ಸುಧಾರಿಸಬೇಕು, ದೃಷ್ಟಿ ತಾಕಬಾರದು, ಹೆಚ್ಚು ಅಂಕ ಬರಬೇಕು, ತೊಂದರೆಗಳು ದೂರ ಆಗಬೇಕು ಎಂದು ಮಂತ್ರ ಹಾಕಿ ಈ ದಾರ ಸಿದ್ಧಪಡಿಸಲಾಗಿದೆ. ಇದು ಮಂತ್ರರಕ್ಷಾ ಕವಚ. ಬೆಲೆ 50 ರೂಪಾಯಿ ಮಾತ್ರ’ ಎಂದು ವಿವರ ನೀಡಿದರು.
ತಮಿಳುನಾಡಿನ ಕೊಯಮತ್ತೂರಿನಲ್ಲಿ, ಮುಟ್ಟಾದ 8ನೇ ತರಗತಿ ವಿದ್ಯಾರ್ಥಿನಿಯನ್ನು ‘ಮುಟ್ಟಾದವರನ್ನು ಮುಟ್ಟಬಾರದು’ ಎಂಬ ಮೂಢನಂಬಿಕೆಯ ಕಾರಣಕ್ಕೆ ಶಾಲೆಯ ಹೊರಗೆ ಕೂರಿಸಿ ವಾರ್ಷಿಕ ಪರೀಕ್ಷೆ ಬರೆಸ ಲಾಯಿತು ಎನ್ನಲಾದ ಅಮಾನವೀಯ ಪ್ರಕರಣವನ್ನು ಪತ್ರಿಕೆಯಲ್ಲಿ ಓದಿದಾಗ, ವಿದ್ಯಾರ್ಥಿಗಳು ಸಾಮೂಹಿಕ ವಾಗಿ ಮೂಢನಂಬಿಕೆಗೆ ಒಳಗಾಗಿ ಕರಿ ದಾರ ಕಟ್ಟಿಕೊಳ್ಳುವ ಸಂಗತಿ ನೆನಪಾಯಿತು.
ಕೃತಕ ಬುದ್ಧಿಮತ್ತೆ, ಹೊಸ ಹೊಸ ಸಂಶೋಧನೆಗಳು, ತಂತ್ರಜ್ಞಾನ, ಬಾಹ್ಯಾಕಾಶ ಸಂಶೋಧನೆ, ಆರೋಗ್ಯ ಮತ್ತು ವೈದ್ಯಕೀಯ ರಂಗದಲ್ಲಿ ಬಹಳಷ್ಟು ಬೆಳವಣಿಗೆಗಳಾಗಿವೆ. ಇದನ್ನೆಲ್ಲ ವಿದ್ಯಾರ್ಥಿಗಳು ಗಮನಿಸಿದ್ದರೂ ಯಾವುದೋ ಮಾತಿಗೆ ಮರುಳಾಗಿ ಮಂತ್ರದ ಕರಿ ದಾರ ಕಟ್ಟಿಕೊಳ್ಳುತ್ತಿದ್ದಾರೆ. ಇದನ್ನು ಕೆಲವು ಶಿಕ್ಷಕರು, ಪಾಲಕರು ಪ್ರೋತ್ಸಾಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಇದು ತೀರಾ ಹೆಚ್ಚಾಗಿದೆ. ಇದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ, ಪ್ರಯತ್ನ ಮತ್ತು ದೃಢತೆ ಕುಗ್ಗುವ ಅಪಾಯವಿದೆ ಎಂಬುದನ್ನು ಎಲ್ಲರೂ ಗಮನದಲ್ಲಿ ಇಟ್ಟುಕೊಳ್ಳುವುದು ಅವಶ್ಯ.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಶಿಕ್ಷಣದ ಪ್ರಮುಖ ಆಶಯವಾಗಿದೆ. ಪಠ್ಯಗಳಲ್ಲಿ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ವಿಷಯಗಳನ್ನು ಅಳವಡಿಸಲಾಗಿದೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸೇರಿದಂತೆ ಹಲವಾರು ಸಂಸ್ಥೆಗಳು ವೈಜ್ಞಾನಿಕ ಮನೋಭಾವ ಬೆಳೆಸುವುದಕ್ಕಾಗಿ ಶ್ರಮಿಸುತ್ತಿವೆ. ಇದು ಭಾರತದ ಸಂವಿಧಾನದ ಪ್ರಮುಖ ಆಶಯ ಕೂಡ ಆಗಿದೆ.
ಶಿಕ್ಷಕರು ವೈಜ್ಞಾನಿಕ ಮನೋಭಾವ, ವೈಚಾರಿಕ ನಿಲುವನ್ನು ಹೊಂದಿ ಅದನ್ನು ಮಕ್ಕಳಿಗೆ ಬೋಧಿಸಬೇಕು ಮತ್ತು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸ ಬೇಕು. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದ ಎಚ್.ನರಸಿಂಹಯ್ಯ, ವಿಚಾರವಾದಿ ಅಬ್ರಹಾಂ ಕೋವೂರ್ ಅಂಥವರು ಮೂಢನಂಬಿಕೆಗಳ ವಿರುದ್ಧ ನಡೆಸಿದ ಹೋರಾಟವನ್ನು ಮಕ್ಕಳಿಗೆ ಪರಿಚಯಿಸಬೇಕು.
ದೇಶದ ಸಮಗ್ರ ಅಭಿವೃದ್ಧಿಯಲ್ಲಿ ವೈಜ್ಞಾನಿಕ ಮನೋಭಾವ ನಿರ್ಣಾಯಕ ಪಾತ್ರ ವಹಿಸುತ್ತದೆ. ಮೂಢನಂಬಿಕೆ, ಕಂದಾಚಾರ ಬಹುದೊಡ್ಡ ಆತಂಕ ಸೃಷ್ಟಿಸುತ್ತವೆ. ಮಕ್ಕಳಿಗೆ ಅನಾರೋಗ್ಯ ಕಾಡತೊಡಗಿದರೆ ವೈದ್ಯರ ಬಳಿಗೆ ಹೋಗದೆ ಮಂತ್ರವಾದಿ, ತಂತ್ರಿಗಳ ಬಳಿಗೆ ಹೋಗುತ್ತಾರೆ. ಅವರು ‘ಶನಿ ಕಾಟ’ ಎಂದು ಹೇಳಿ ದಾರ, ಚೀಟಿ, ತಾಯತ ಮಾಡಿಕೊಡುತ್ತಾರೆ. ಜ್ವರಬಾಧಿತ ಮಕ್ಕಳ ಮೈ ಸುಡುವ ಮೌಢ್ಯದ ಆಚರಣೆಗಳು ಈಗಲೂ ಕೆಲವು ಭಾಗಗಳಲ್ಲಿ ತೆರೆಯಮರೆಯಲ್ಲಿ ನಡೆಯುತ್ತಿವೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ವಿಠಲಾಪುರ ಗ್ರಾಮದಲ್ಲಿ ಜ್ವರಬಾಧಿತ ಮಕ್ಕಳಿಗೆ ಊದಿನ ಕಡ್ಡಿಯಿಂದ ಬರೆ ಹಾಕಿದ ಪ್ರಕರಣ ವರದಿ ಯಾಗಿತ್ತು. ದೇಹ ಸುಡುವುದರಿಂದ ಜ್ವರ ನಿವಾರಣೆ ಆಗುವುದಿಲ್ಲ. ಅದರಿಂದ ಸಮಸ್ಯೆ ಇನ್ನಷ್ಟು ಉಲ್ಬಣವಾಗುತ್ತದೆ. ಮಕ್ಕಳಿಗೆ ಮೌಢ್ಯದ ಹೆಸರಿನಲ್ಲಿ ನೋವುಂಟು ಮಾಡುವುದು ಹಿಂಸೆ. ಇಂಥ ವಿಚಾರ ಗಳನ್ನು ಶಿಕ್ಷಕರು ಧೈರ್ಯವಾಗಿ ವಿದ್ಯಾರ್ಥಿಗಳಿಗೆ, ಪಾಲಕ ರಿಗೆ ವಿವರಿಸಿ ಹೇಳಬೇಕು. ಹೀಗೆ ಹೇಳುವುದಕ್ಕೆ ಶಿಕ್ಷಕರಲ್ಲಿ ವೈಜ್ಞಾನಿಕ ಮನೋಭಾವ, ಸ್ಪಷ್ಟವಾದ ವೈಚಾರಿಕ ಅರಿವು ಇರಬೇಕಾಗುತ್ತದೆ. ಇದನ್ನು ಓದು, ಸಂವಾದ, ಪ್ರಾತ್ಯಕ್ಷಿಕೆಯಿಂದ ಗಳಿಸಬಹುದು. ಮಕ್ಕಳು ಬಹುಬೇಗ ತಮ್ಮ ಶಿಕ್ಷಕರನ್ನು ಮಾದರಿಯಾಗಿ ಸ್ವೀಕರಿಸುತ್ತಾರೆ.
ಶಾಲೆಯೊಂದರ ಗೋಡೆಯ ಮೇಲೆ ‘ಕಾಳಭೈರವ’ ಎಂದು ಐದು ಕಡೆ ಬರೆದಿದ್ದರು. ಏನಿದು ಎಂದು ಮುಖ್ಯ ಅಧ್ಯಾಪಕರನ್ನು ವಿಚಾರಿಸಿದರೆ, ‘ಶಾಲೆಯ ಆವರಣದಲ್ಲಿ ಹಾವುಗಳು ಬರುತ್ತಿವೆ. ಕಾಳಭೈರವ ಎಂದು ಬರೆದರೆ ಬರುವುದಿಲ್ಲವಂತೆ’ ಎಂದು ಅವರು ಹೇಳಿದರು. ‘ಈಗ ಹಾವುಗಳು ಬರುವುದು ನಿಂತಿದೆಯೇ’ ಎಂದು ಕೇಳಿದಾಗ, ಅಲ್ಲಿಯೇ ನಿಂತುಕೊಂಡಿದ್ದ ಮಕ್ಕಳು ‘ನಿನ್ನೆ ಬಂದಿತ್ತು’ ಎಂದು ಒಂದೇ ಧ್ವನಿಯಲ್ಲಿ ಹೇಳಿದರು. ಮುಖ್ಯ ಅಧ್ಯಾಪಕರ ಮುಖ ಕಪ್ಪಿಟ್ಟಿತು.
ಮಕ್ಕಳಿಗೆ ಬೀದಿನಾಯಿಗಳು ಕಚ್ಚಿದರೆ ಮಂತ್ರವಾದಿ ಗಳ ಬಳಿ ಕರೆದುಕೊಂಡು ಹೋಗುವ ಪಾಲಕರಿದ್ದಾರೆ. ಶಿಕ್ಷಕರು ಸರಿಯಾಗಿ ಮಾರ್ಗದರ್ಶನ ಮಾಡಬೇಕು. ವೈದ್ಯರ ಬಳಿ ಕಳಿಸುವ ವ್ಯವಸ್ಥೆ ಮಾಡಬೇಕು.
ಛತ್ರಪತಿ ಶಿವಾಜಿ ಮಹಾರಾಜರ ರಾಜ್ಯದಲ್ಲಿ ಕೆಲವು ರೈತರು ತಮ್ಮ ಭೂಮಿ ಶಾಪಗ್ರಸ್ತವಾಗಿದೆ ಎಂಬ ಮೂಢನಂಬಿಕೆಯಿಂದ ಉಳುಮೆ ಮಾಡುತ್ತಿರ ಲಿಲ್ಲ. ಶಾಪಗ್ರಸ್ತ ಎಂದು ಭಾವಿಸಿದ್ದ ಭೂಮಿಯಲ್ಲಿ ಕೃಷಿ ಮಾಡಿದರೆ ಅಕಾಲಿಕ ಸಾವು ಬರುತ್ತದೆ ಎಂದು ಹೆದರಿದ್ದರು. ಈ ಮೂಢನಂಬಿಕೆ ದೂರ ಮಾಡಲು ಶಿವಾಜಿ ಮಹಾರಾಜರು ಚಿನ್ನದ ಕೋರಿಗೆ ಮಾಡಿಸಿ ತಮ್ಮ ತಾಯಿಯಿಂದ ಬಿತ್ತನೆ ಕಾರ್ಯ ಆರಂಭಿಸಿದರು. ರಾಜ್ಯ ಸಮೃದ್ಧವಾಯಿತು. ನಾಯಕನಾದವನು ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂಬುದಕ್ಕೆ ಇದೊಂದು ಅತ್ಯುತ್ತಮ ಮಾದರಿ.
ವೈಜ್ಞಾನಿಕ ಮನೋಭಾವ ಆರೋಗ್ಯಪೂರ್ಣ ವ್ಯಕ್ತಿತ್ವದ ಲಕ್ಷಣ. ಇಲ್ಲಿ ಗೊಂದಲಗಳು ಇರುವುದಿಲ್ಲ. ವಿದ್ಯಾರ್ಥಿಗಳನ್ನು ಹಾಗೆ ರೂಪಿಸುವುದು ಬಹಳ ಅವಶ್ಯ. ಇದು ನಾಳಿನ ಸಮಾಜವನ್ನು ಸಶಕ್ತವಾಗಿ ಕಟ್ಟುವ ಕೆಲಸವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.