ADVERTISEMENT

ಸಂಗತ: ‘ವಂದೇ ಮಾತರಂ’ ಗೀತೆಯ ಕಥೆ–ವ್ಯಥೆ!

ದೇಶಪ್ರೇಮ ಹಾಗೂ ಸ್ವಾತಂತ್ರ್ಯದ ಸ್ಫೂರ್ತಿಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ‘ವಂದೇ ಮಾತರಂ’ ಗೀತೆಗೆ ಈಗ 150 ವರ್ಷ ತುಂಬಿದ ಸಂಭ್ರಮ.

ಡಾ.ಸಿ.ಎನ್.ರಾಮಚಂದ್ರನ್
Published 26 ನವೆಂಬರ್ 2025, 23:30 IST
Last Updated 26 ನವೆಂಬರ್ 2025, 23:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕಾದಂಬರಿಯೊಂದರಲ್ಲಿ ಬರುವ ಗೀತೆಯೊಂದು 150 ವರ್ಷಗಳ ನಂತರವೂ ಪ್ರಸ್ತುತವಾಗಿದ್ದು, ಅದು ವಾದ–ವಿವಾದಗಳಿಗೆ ಕಾರಣವಾಗುತ್ತದೆ ಎನ್ನುವುದೇ ಸಾಹಿತ್ಯಲೋಕದಲ್ಲಿ ಒಂದು ಅದ್ಭುತ. ಇಷ್ಟೇ ಅಲ್ಲದೆ, ಆ ಗೀತೆಯ 150ನೇ ವಾರ್ಷಿಕೋತ್ಸವದ ಉದ್ಘಾಟನೆ ಪ್ರಧಾನಮಂತ್ರಿಗಳಿಂದ ಆಗುತ್ತದೆ; ಮತ್ತು ಪ್ರಧಾನಮಂತ್ರಿಗಳು ಈ ಗೀತೆ ವರ್ಷವಿಡೀ ಎಲ್ಲಾ ಶಾಲೆಗಳಲ್ಲಿಯೂ ಹಾಡಲ್ಪಡಬೇಕು ಎಂದು ಹೇಳುತ್ತಾರೆ. ಹೀಗೆ ವಿಶೇಷ ಗೌರವವನ್ನು ಪಡೆಯುವ ಆ ಗೀತೆ ಭಾರತದಲ್ಲಿ ಚಿರಪರಿಚಿತವಾದ ‘ವಂದೇ ಮಾತರಂ’.   

ಸ್ವಾತಂತ್ರ್ಯ ಪೂರ್ವದಲ್ಲಿ ಬಂಕಿಮಚಂದ್ರ ಚಟರ್ಜಿಯವರು ಬಂಗಾಳದಲ್ಲಿ ಬಹು ವಿಜೃಂಭಣೆಯಿಂದ ನಡೆಯುವ ದುರ್ಗಾಪೂಜೆಯಿಂದ ಪ್ರಭಾವಿತರಾಗಿ, ನವೆಂಬರ್‌ 7, 1875ರಲ್ಲಿ ಈ ಹಾಡನ್ನು ಬರೆದರು; ನಂತರ ಅದು ಅವರ ‘ಆನಂದಮಠ’ ಎಂಬ ಕಾದಂಬರಿಯಲ್ಲಿ ಬಳಕೆಯಾಯಿತು. ಕಾದಂಬರಿಯ ಕೊನೆಯಲ್ಲಿ ಈ ಗೀತೆ ಸನ್ಯಾಸಿಗಳಿಂದ ಹಾಡಲ್ಪಡುತ್ತದೆ.

ಆರು ಚರಣಗಳಿರುವ ‘ವಂದೇ ಮಾತರಂ’ ಗೀತೆಯು ದೇಶವನ್ನು ತಾಯಿಯಂತೆ ಕಾಣುತ್ತದೆ. ಮೊದಲ ಎರಡು ಚರಣಗಳು ಆ ತಾಯಿಯ ಪ್ರಾಕೃತಿಕ ಸೌಂದರ್ಯವನ್ನು ಮನೋಜ್ಞವಾಗಿ ವರ್ಣಿಸಿದರೆ, ಮೂರನೆಯ ಚರಣವು ಅವಳ ಮಕ್ಕಳ ಅಗಾಧ ಸಂಖ್ಯೆಯನ್ನು ಹಾಗೂ ಶೌರ್ಯವನ್ನು ಭಾವಪೂರ್ಣವಾಗಿ ವರ್ಣಿಸುತ್ತದೆ (‘ನೀನು ಅಬಲೆಯಲ್ಲ; ನಿನ್ನನ್ನು ರಕ್ಷಿಸಲು 70 ದಶಲಕ್ಷ ಕೈಗಳು ಕತ್ತಿ ಹಿಡಿದು ಮೇಲೇಳುತ್ತವೆ’). ನಾಲ್ಕನೆಯ ಚರಣವು ಜ್ಞಾನ, ಧರ್ಮ ಮತ್ತು ಕಲೆಗಳು ತಾಯಿನಾಡಿನಲ್ಲಿಯೇ ನೆಲೆಗೊಂಡಿವೆ ಮತ್ತು ಎಲ್ಲ ದೇವಾಲಯಗಳಲ್ಲಿ ಪೂಜಿಸಲ್ಪಡುವುದು ಆ ತಾಯಿಯ ಮೂರ್ತಿಯೇ ಎಂದು ಮಂಡಿಸುತ್ತದೆ. ಕೊನೆಯಲ್ಲಿ ತಾಯಿನಾಡೇ ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿ; ಅಥವಾ ಧರ್ಮ, ಹೃದಯ, ಮತ್ತು ಪ್ರಾಣ ಎಂದು ಕೊಂಡಾಡುತ್ತದೆ. ಒಟ್ಟಾರೆಯಾಗಿ ಹೇಳಬೇಕಾದರೆ, ಬಂಕಿಮರ ದೃಷ್ಟಿಯಲ್ಲಿ, ಬಹುಮುಖೀ ಪರಾಕ್ರಮದ ಹಾಗೂ ದೈವಿಕಗುಣಗಳಿರುವ ಶಕ್ತಿಯೇ ತಾಯಿನಾಡು.   

ADVERTISEMENT

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಇಡೀ ದೇಶದ ಸರಿಸುಮಾರು ಎಲ್ಲಾ ಕಾರ್ಯಕ್ರಮಗಳ ಪ್ರಾರಂಭದಲ್ಲಿ ಈ ಗೀತೆ ಹಾಡಲ್ಪಡುತ್ತಿತ್ತು. ಇದರಲ್ಲಿ ಬರುವ ‘ರಿಪು’ (ಶತ್ರು) ಅಂದು ಈ ದೇಶವನ್ನು ಆಳುತ್ತಿದ್ದ ಬ್ರಿಟಿಷರಿಗೆ ಅನ್ವಯವಾಗುತ್ತಿತ್ತು. ಆದರೆ, ಆರು ಭಾಗಗಳಿರುವ ಈ ಗೀತೆಯಲ್ಲಿ ‘ಮೂರನೆಯ ಭಾಗದಿಂದ ಕೊನೆಯವರೆಗೂ ಒಂದು ಧರ್ಮದ (ಹಿಂದೂ ಧರ್ಮದ) ಪ್ರತಿಮೆ–ಪ್ರತೀಕಗಳು ಬರುತ್ತವೆ (ದುರ್ಗೆಯ ಪ್ರತಿಮೆ; ಮಾತೃಭೂಮಿಯನ್ನು ‘ನೀನೇ ಲಕ್ಷ್ಮಿ; ನೀನೇ ಸರಸ್ವತಿ’ ಎಂಬ ವರ್ಣನೆ; ಇತ್ಯಾದಿ); ಒಟ್ಟಾರೆಯಾಗಿ, ಈ ಗೀತೆ ವಿಗ್ರಹಾರಾಧನೆಯನ್ನು ಪ್ರೋತ್ಸಾಹಿಸುತ್ತದೆ ಹಾಗೂ ಇದು ‘ಪ್ರಚ್ಛನ್ನವಾಗಿ’ ಹಿಂದೂ ರಾಷ್ಟ್ರೀಯತೆಯನ್ನು ದೇಶಪ್ರೇಮದ ಹೆಸರಿನಲ್ಲಿ ಹರಡುತ್ತಿದೆ– ಎಂಬ ಕಾರಣವನ್ನು ಕೊಟ್ಟು ಮುಸ್ಲಿಮರು ಈ ಗೀತೆಯನ್ನು ಹಾಡಕೂಡದು ಎಂದು ಮುಸ್ಲಿಂ ಲೀಗ್ 1937ರಲ್ಲಿ, ತನ್ನ ಲಕ್ನೋ ಅಧಿವೇಶನದಲ್ಲಿ ಠರಾವು ಹೊರಡಿಸಿತು. ಹಿಂದೂಗಳಲ್ಲದ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಗೀತೆಯನ್ನು ಸಾರ್ವಜನಿಕವಾಗಿ ಪ್ರಸ್ತುತಪಡಿಸುವುದು ಮುಜುಗರ ಉಂಟು ಮಾಡುತ್ತದೆ’ ಎಂದು ಅನೇಕ ಹಿಂದೂ ನಾಯಕರಿಗೂ ಅನಿಸುತ್ತಿತ್ತು. ಪರಿಣಾಮತಃ, 1937ರಲ್ಲಿ ನಡೆದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ, ಟ್ಯಾಗೋರರ ಸಲಹೆಯಂತೆ, ಸಾರ್ವಜನಿಕ ಸಭೆ–ಸಮಾರಂಭಗಳಲ್ಲಿ ಈ ಕವನದ ಮೊದಲ ಎರಡು ಭಾಗಗಳನ್ನು ಮಾತ್ರ ಹಾಡಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು. ಅಂದಿನಿಂದ ‘ವಂದೇ ಮಾತರಂ’ ಗೀತೆಯು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿತು ಹಾಗೂ ಅದು ‘ಹಿಂದೂಗಳ/ ಹಿಂದೂ ಧರ್ಮಕ್ಕೆ ಸೇರಿದ ಗೀತೆ’ ಎಂಬ ಭಾವನೆ ಎಲ್ಲೆಡೆ ಹರಡಿತು.

ರಾಜಕೀಯ ಸ್ಪರ್ಶದಿಂದಾಗಿ, ಈ ಗೀತೆ ಸ್ವಾತಂತ್ರ್ಯ ಹೋರಾಟವನ್ನೇ ಇಬ್ಭಾಗ ಮಾಡಿತು: ಸ್ವಾತಂತ್ರ್ಯ ನಿಕಟಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯಾನಂತರ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಕೋಮುಗಲಭೆಗಳಲ್ಲಿ, ಒಂದು ಕೋಮಿನವರು ಮತ್ತೊಂದು ಕೋಮಿನವರನ್ನು ಪುರಸ್ಕರಿಸಲು ಅಥವಾ ತಿರಸ್ಕರಿಸಲು ಈ ಗೀತೆಯನ್ನು ಹಾಡುತ್ತಿದ್ದರು ಅಥವಾ ಹಾಡುವುದನ್ನು ನಿಷೇಧಿಸುತ್ತಿದ್ದರು. ಈ ನೆನಪುಗಳ ಕಾರಣದಿಂದ, ಸ್ವಾತಂತ್ರ್ಯಾನಂತರ ಈ ಗೀತೆಯನ್ನು ‘ನ್ಯಾಷನಲ್ ಸಾಂಗ್’ ಎಂದು ಗೌರವಿಸಿದರೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡುವುದು ಕಡ್ಡಾಯವಾಗಲಿಲ್ಲ; ಆ ಗೌರವ ‘ಜನಗಣಮನ’ ಗೀತೆಗೆ ಸಂದಿತು; ಹಾಗೂ ‘ವಂದೇ ಮಾತರಂ’ ಗೀತೆಯನ್ನು ಪ್ರಸ್ತುತಪಡಿಸುವುದು ಅಥವಾ ಬಿಡುವುದು ಕಾರ್ಯಕ್ರಮವನ್ನು ಆಯೋಜಿಸಿದ್ದವರ ಆಯ್ಕೆಗೆ ಬಿಡಲಾಯಿತು. ಇಂದೂ ಕೂಡ ಆಳುವವರಿಗೆ ಈ ಗೀತೆಯನ್ನು ಕುರಿತು ಒಂದು ಬಗೆಯ ಅಳುಕು ಇದ್ದೇ ಇದೆ ಎಂದು ಕಾಣುತ್ತದೆ; ಪ್ರಾಯಃ, ಈ ಕಾರಣದಿಂದಲೇ ಗೀತೆಯ 150ನೇ ವರ್ಷದ ಸಂಭ್ರಮವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಾವ ಸಾರ್ವಜನಿಕ ಕಾರ್ಯಕ್ರಮದ ಮೂಲಕವೂ ತೋರಿಸಲಿಲ್ಲ. 

ಸುಶ್ರಾವ್ಯವಾಗಿ ಹಾಡಲು ಅನುವಾಗುವ, ಬೆಂಗಾಲಿ–ಸಂಸ್ಕೃತ ಭಾಷೆಯಲ್ಲಿರುವ, ಪ್ರಾರಂಭದಿಂದ ಕೊನೆಯ
ವರೆಗೂ ಎದ್ದು ಕಾಣುವ ಮೆಚ್ಚುಗೆ–ಗೌರವ–ಪ್ರೀತಿ ಭಾವನೆಗಳ ಸಂಗಮವಾಗಿರುವ, ಗಾಂಧೀಜಿಯವರಿಗೆ ತುಂಬಾ ಆಪ್ತವಾಗಿದ್ದ ಹಾಗೂ ಒಂದು ಸಫಲ ಕಾಣ್ಕೆಯಾಗಿರುವ ‘ವಂದೇ ಮಾತರಂ’ ಗೀತೆಗೆ ರಾಜಕೀಯ ಕಾರಣಗಳಿಗಾಗಿ ಮತೀಯ ಬಣ್ಣ ಬಂದದ್ದು ದುರದೃಷ್ಟಕರ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.