ADVERTISEMENT

ಸಂಗತ: ಕೇಳುತ್ತಿಲ್ಲ ಸಾಂಸ್ಕೃತಿಕ ಧ್ವನಿ

ಸಾಂಸ್ಕೃತಿಕ ವಲಯದ ಪುನರುಜ್ಜೀವನದತ್ತ ಹೆಜ್ಜೆ ಇಡುವುದು ಸರ್ಕಾರದ ಸಾಮಾಜಿಕ ಜವಾಬ್ದಾರಿಯೂ ಹೌದು, ಸಾಂಸ್ಕೃತಿಕ ಹೊಣೆಗಾರಿಕೆಯೂ ಹೌದು

ಎನ್‌.ದಿವಾಕರ
Published 14 ಜನವರಿ 2024, 20:43 IST
Last Updated 14 ಜನವರಿ 2024, 20:43 IST
<div class="paragraphs"><p>ಸಂಗತ</p></div>

ಸಂಗತ

   

ಅಧಿಕಾರಕೇಂದ್ರಿತ ರಾಜಕಾರಣದಲ್ಲಿ ಸಾಮಾನ್ಯವಾಗಿ ಸಾಂಸ್ಕೃತಿಕ ವಲಯದ ಅಗತ್ಯಗಳು ಹಾಗೂ ಆಶಯಗಳು ಬದಿಗೆ ಸರಿದಿರುತ್ತವೆ ಅಥವಾ ತಮ್ಮ ಚುನಾವಣಾ ರಾಜಕಾರಣದ ಅನುಕೂಲಗಳಿಗೆ ತಕ್ಕಂತೆ ಸಾಂಸ್ಕೃತಿಕ ವಲಯವನ್ನೂ ಬಳಸಿಕೊಳ್ಳುವ ಒಂದು ವಿಕೃತ ಪರಂಪರೆ ತೆರೆದುಕೊಳ್ಳುತ್ತದೆ. ಬಿಜೆಪಿ ನೇತೃತ್ವದ ಹಿಂದಿನ ಅವಧಿಯ ಸರ್ಕಾರ ತನ್ನ ಹಿಂದುತ್ವ ರಾಜಕಾರಣದ ಸಾಮಾನ್ಯ ಕಾರ್ಯಸೂಚಿಯ ಒಂದು ಭಾಗವಾಗಿಯೇ ಸಾಂಸ್ಕೃತಿಕ ವಲಯವನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದನ್ನು ನೋಡಿದ್ದೇವೆ. ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರ ಸಹ ಇದೇ ನೀತಿಯನ್ನು ಅನುಸರಿಸುತ್ತಿದೆ.

ಈ ಆಡಳಿತ ನೀತಿಗಳಿಂದ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಉಂಟಾದ ವ್ಯತ್ಯಯಗಳು, ಅಪಾಯಗಳು ಹಾಗೂ ನಾಡಿನ ಸಾಕ್ಷಿಪ್ರಜ್ಞೆಯನ್ನೇ ಕದಡುವಂತಹ ಬೆಳವಣಿಗೆಗಳು ಚುನಾಯಿತ ಸರ್ಕಾರಗಳನ್ನು ಎಚ್ಚರದಿಂದ ಇರಿಸಬೇಕು. ಆದರೆ ಅಧಿಕಾರ ವಹಿಸಿಕೊಂಡು ಎಂಟು ತಿಂಗಳು ಕಳೆದರೂ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಅಂಗಳದಲ್ಲಿ ಸಾಂಸ್ಕೃತಿಕ ಧ್ವನಿ ಕೇಳಿಸುತ್ತಲೇ ಇಲ್ಲ ಎನ್ನುವುದು ವಿಷಾದಕರ ಸಂಗತಿ.

ADVERTISEMENT

ಸಚಿವ ಸಂಪುಟ, ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನದಂತಹ ಅಧಿಕಾರಯುತ ಹುದ್ದೆಗಳನ್ನು ಭರ್ತಿ ಮಾಡುವುದು ಮುಂಬರುವ ಚುನಾವಣೆಗಳು ಹಾಗೂ ಸರ್ಕಾರದ ಉಳಿವಿನ ದೃಷ್ಟಿಯಿಂದ ಪ್ರಾಮುಖ್ಯ ಪಡೆದುಕೊಂಡರೂ, ಇದರಿಂದಾಚೆಗೂ ಇರುವ ಸಾಮಾಜಿಕ-ಸಾಂಸ್ಕೃತಿಕ ಜವಾಬ್ದಾರಿಯನ್ನೂ ಸರ್ಕಾರ ಅರಿತಿರಬೇಕಲ್ಲವೇ?

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಬರುವ 20ಕ್ಕೂ ಹೆಚ್ಚು ಸಂಸ್ಥೆಗಳು ಕರ್ನಾಟಕದಲ್ಲಿ ಸಕ್ರಿಯವಾಗಿವೆ. ಹಾಗೆಯೇ ವರ್ತಮಾನದ ವಿಷಮ ಸ್ಥಿತಿಯಲ್ಲಿ ಅತ್ಯಂತ ಪ್ರಮುಖವಾದ ರಂಗಭೂಮಿಯನ್ನು ಪ್ರತಿನಿಧಿಸುವ ರಂಗಾಯಣಗಳು, ರಂಗಸಮಾಜ ಇವೆ. ಈ ಸಾಂಸ್ಥಿಕ ವಲಯದಲ್ಲಿ ನಡೆಯುವ ಚಟುವಟಿಕೆಗಳು ಅಧಿಕಾರ ರಾಜಕಾರಣಕ್ಕೆ ನೇರವಾಗಿ ನೆರವಾಗುವುದಿಲ್ಲವಾದರೂ, ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಮತದ್ವೇಷ, ಜಾತೀಯತೆ ಹಾಗೂ ಪಿತೃಪ್ರಧಾನ ವ್ಯವಸ್ಥೆಯನ್ನು ಹೋಗಲಾಡಿಸುವ ದಿಸೆಯಲ್ಲಿ ಈ ಸಂಸ್ಥೆಗಳು ನೆರವಾಗುತ್ತವೆ. ಸಾಹಿತ್ಯ ಹಾಗೂ ಕಲಾ ಪ್ರಕಾರಗಳನ್ನು ವ್ಯವಸ್ಥಿತವಾಗಿ ತಲುಪಿಸುವುದೇ ಅಲ್ಲದೆ, ಜನಸಾಮಾನ್ಯರ ನಡುವೆ ಸಂವೇದನಾಶೀಲ ಮನಃಸ್ಥಿತಿಯನ್ನು ಉಂಟುಮಾಡುವ ದಿಸೆಯಲ್ಲಿ ಇವು ಕಾರ್ಯನಿರ್ವಹಿಸಬೇಕಿದೆ.

ಸಾಂಸ್ಕೃತಿಕ ಕ್ಷೇತ್ರವನ್ನು ಪ್ರತಿನಿಧಿಸುವ ಬೌದ್ಧಿಕ ವಲಯದ ಸಾಹಿತಿಗಳು, ಕಲಾವಿದರು, ಬರಹಗಾರರು ಸರ್ಕಾರದ ಆಡಳಿತ ವ್ಯಾಪ್ತಿಯಲ್ಲಿ ನಿರ್ವಹಿಸಲಾಗುವ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ಬಯಸುವುದು ಆಕ್ಷೇಪಾರ್ಹವೇನಲ್ಲ. ಆದರೆ ಈ ಸಂಸ್ಥೆಗಳ ಸ್ವಾಯತ್ತತೆ, ಸ್ವಾತಂತ್ರ್ಯ ಮತ್ತು ಸ್ವಂತಿಕೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ, ನಿರಪೇಕ್ಷವಾಗಿ ಸೇವೆ ಸಲ್ಲಿಸುವ ವ್ಯಕ್ತಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿರುತ್ತದೆ. ಆ ಕಾರಣಕ್ಕಾಗಿಯೇ ಸರ್ಕಾರಗಳಿಗೆ ಒಂದು ಸಾಂಸ್ಕೃತಿಕ ನೀತಿ ಎನ್ನುವುದೂ ಬಹಳ ಮುಖ್ಯವಾಗುತ್ತದೆ.

ಬರೀ ಅಕಾಡೆಮಿಗಳು, ಪ್ರಾಧಿಕಾರಗಳ ಅಧಿಕಾರಯುತ ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಸಾಂಸ್ಕೃತಿಕ ವಲಯದಲ್ಲಿ ಉಂಟಾಗಿರುವ ಬೌದ್ಧಿಕ ಕ್ಷೋಭೆ ಮತ್ತು ತಾತ್ವಿಕ ಅಪಾಯಗಳನ್ನು ಸರಿಪಡಿಸಲಾಗುವುದಿಲ್ಲ. ಈ ಸಂಸ್ಥೆಗಳು ತಮ್ಮ ಕಾರ್ಯನಿರ್ವಹಣೆಯಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಂಡು, ಸಮಾಜದ ಅಲಕ್ಷಿತ ಸಮುದಾಯಗಳ ಆಶಯಗಳಿಗೆ ಸ್ಪಂದಿಸುವ ರೀತಿಯಲ್ಲಿ ರೂಪುಗೊಳ್ಳಬೇಕಿದೆ.

ಮೈಸೂರು ರಂಗಾಯಣದಲ್ಲಿ ನಡೆದಂತಹ ಬೆಳವಣಿಗೆಗಳ ಅರಿವಿದ್ದಾಗ್ಯೂ, ರಂಗಸಮಾಜವನ್ನು ಪುನರ್‌ರಚನೆ ಮಾಡಿ, ರಾಜ್ಯದ ರಂಗಾಯಣಗಳಿಗೆ ಸಾಮಾಜಿಕ ಬದ್ಧತೆ ಇರುವ ಸಮರ್ಥ ನಿರ್ದೇಶಕರನ್ನು ಆಯ್ಕೆ ಮಾಡುವುದು ಸರ್ಕಾರದ ಪ್ರಥಮ ಆದ್ಯತೆ ಆಗಬೇಕಿತ್ತು. ಹದಗೆಟ್ಟಿರುವ ವಿಶ್ವವಿದ್ಯಾಲಯಗಳಿಗೆ ಕಾಯಕಲ್ಪ ಒದಗಿಸುವುದು ಸರ್ಕಾರದ ಕಾರ್ಯಸೂಚಿಯ ಒಂದು ಭಾಗವಾಗಬೇಕಿತ್ತು. ವಿಶ್ವವಿದ್ಯಾಲಯದ ಸಿಂಡಿಕೇಟ್‌ಗಳಿಗೆ, ಸಾಂಸ್ಕೃತಿಕ ಸಂಸ್ಥೆಗಳಿಗೆ ನೇಮಕ ಮಾಡುವಾಗ ರಾಜಕೀಯ ಉದ್ದೇಶಗಳಿಗಿಂತಲೂ ಮುಖ್ಯವಾಗಿ ರಾಜ್ಯದ ಸಾಂಸ್ಕೃತಿಕ ಮುನ್ನಡೆ ಆದ್ಯತೆ ಪಡೆಯಬೇಕಲ್ಲವೇ? ಚುನಾವಣಾ ರಾಜಕಾರಣದ ಲಾಭ, ನಷ್ಟದ ನೆಲೆಯಲ್ಲಿ ನಿಂತು ಸಾಂಸ್ಕೃತಿಕ ವಲಯವನ್ನೂ ರಾಜಕೀಯ ಕಾರ್ಯಕರ್ತರ ಆಶ್ರಯತಾಣಗಳನ್ನಾಗಿ ಮಾಡಿದರೆ, ಈಗಾಗಲೇ ಕವಲುಹಾದಿಯಲ್ಲಿರುವ ಸಮಾಜವು ಸಂಪೂರ್ಣ ದಿಕ್ಕು ತಪ್ಪಿದಂತೆ ಆಗುವುದಿಲ್ಲವೇ?

ದುರದೃಷ್ಟವಶಾತ್‌, ಈ ದಿಸೆಯಲ್ಲಿ ರಾಜ್ಯ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ ಅಥವಾ ಎಚ್ಚರವಾಗಿದ್ದರೂ ತನ್ನದೇ ಆದ ರಾಜಕೀಯ ಲೆಕ್ಕಾಚಾರಗಳಲ್ಲಿ ಲಾಬಿಕೋರರ ಒತ್ತಡಗಳಿಗೆ ಮಣಿದು ಮೌನ ವಹಿಸಿರುವಂತೆ ತೋರುತ್ತದೆ. ಸಾಂಸ್ಕೃತಿಕ ನೀತಿಯನ್ನು ಜಾರಿಗೊಳಿಸಲು ಬೇಕಾದ ಬೌದ್ಧಿಕ ಪರಿಕರಗಳು, ಜ್ಞಾನಶಾಖೆಗಳು ಹಾಗೂ ಕಲೆ-ಸಾಹಿತ್ಯಕ ಸಂಪತ್ತು, ಸಂಪನ್ಮೂಲ ರಾಜ್ಯದಲ್ಲಿ ಅಗಾಧ ಪ್ರಮಾಣದಲ್ಲಿ ಲಭ್ಯ ಇವೆ. ಇವುಗಳನ್ನು ವಸ್ತುನಿಷ್ಠವಾಗಿ ಬಳಸಿಕೊಳ್ಳುವ ಮೂಲಕ ಸಾಂಸ್ಕೃತಿಕ ವಲಯದ ಪುನರುಜ್ಜೀವನದತ್ತ ಹೆಜ್ಜೆ ಇಡುವುದು ಸರ್ಕಾರದ ಸಾಮಾಜಿಕ ಜವಾಬ್ದಾರಿಯೂ ಹೌದು, ಸಾಂಸ್ಕೃತಿಕ ಹೊಣೆಗಾರಿಕೆಯೂ ಹೌದು.

ಸಂವಿಧಾನ ಪೀಠಿಕೆಯ ಪಠಣವನ್ನು ವಿಧ್ಯುಕ್ತವಾಗಿ ಸಾರ್ವತ್ರೀಕರಣಗೊಳಿಸಿ, ಜಾರಿಗೊಳಿಸಿರುವ ಸರ್ಕಾರ, ಇದೇ ಸಂವಿಧಾನದ ಆಶಯದಂತೆ ಸಮನ್ವಯ-ಸೌಹಾರ್ದ- ಭ್ರಾತೃತ್ವದ ನೆಲೆಗಳನ್ನು ವಿಸ್ತರಿಸುವ, ಆಳಕ್ಕಿಳಿಸುವ, ಶಾಶ್ವತಗೊಳಿಸುವ ದಿಸೆಯಲ್ಲಿ ಕ್ರಿಯಾಶೀಲವಾಗಿ ತೊಡಗಬಹುದಾದ ಸಾಂಸ್ಕೃತಿಕ ವಲಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಿದೆ. ಜಾಗೃತ ಸಮಾಜ ನಿರ್ಮಾಣದ ದೃಷ್ಟಿಯಿಂದ ಇದು ತುರ್ತು ಅನಿವಾರ್ಯವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.