ADVERTISEMENT

ಸಂಗತ | ಬನ್ನಿ, ಬೆಲ್ಲ ಸವಿದು ಸಂಭ್ರಮಿಸೋಣ

ಮಲ್ಲಿಕಾರ್ಜುನ ಹೆಗ್ಗಳಗಿ
Published 25 ಅಕ್ಟೋಬರ್ 2022, 21:15 IST
Last Updated 25 ಅಕ್ಟೋಬರ್ 2022, 21:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದೀಪಾವಳಿ ಹಬ್ಬದ ಸಂದರ್ಭ ನಮ್ಮ ನೆರೆಮನೆಯ ಅಜ್ಜಿ ‘ಈಗ ಹಬ್ಬಗಳಲ್ಲಿ ರುಚಿ ಉಳಿದಿಲ್ಲ’ ಎಂದು ಥಟ್ಟನೆ ಹೇಳಿದಾಗ ನಾನು ಚಕಿತನಾಗಿ ‘ಅಜ್ಜಿ ಯಾಕೆ ಹೀಗೆ ಹೇಳುತ್ತೀರಿ’ ಎಂದು ಕೇಳಿದೆ. ದೊಡ್ಡ ಹಬ್ಬ ಎಂದು ಪೇಟೆಯೆಲ್ಲಾ ಸುತ್ತಿ ಬೆಲ್ಲ ತಂದು ಹೋಳಿಗೆ, ಕಡುಬು, ಶೇಂಗಾ ಉಂಡಿ ಮಾಡಿದ್ದೆ. ನನ್ನ ಮಕ್ಕಳು, ಮೊಮ್ಮಕ್ಕಳು ಸಿಹಿ ಊಟ ಮಾಡಲೇ ಇಲ್ಲ. ಚಪಾತಿ, ಪಲ್ಯ, ಅನ್ನ ಸಾರು ಮಾತ್ರ ಊಟ ಮಾಡಿದರು’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹೌದು, ನಾವು ಸಿಹಿ ಆಹಾರ ತಿನ್ನುವ ಸಂಭ್ರಮದಿಂದ ದೂರ ಸರಿಯುತ್ತಿದ್ದೇವೆ. ಬೆಲ್ಲ-ಬೇಳೆಯ ಹೂರಣದ ಹೋಳಿಗೆ, ಕಡುಬು ಅತ್ಯುತ್ತಮ ಪೌಷ್ಟಿಕ ಆಹಾರ. ಇಂಥ ಸಿಹಿ ಊಟ ಸವಿಯುವುದಕ್ಕಾಗಿಯೇ ಹಿರಿಯರು ಹಬ್ಬಗಳನ್ನು ರೂಪಿಸಿದ್ದಾರೆ ಎಂಬುದನ್ನು ಮರೆಯಬಾರದು.

ಬೆಲ್ಲ, ಸಕ್ಕರೆ ಬಳಕೆ ಕುರಿತು ಜನರಲ್ಲಿ ತಪ್ಪು ಗ್ರಹಿಕೆ ಇದೆ. ‘ಸಕ್ಕರೆ ಕಾಯಿಲೆ’ ಬರುತ್ತದೆ, ತೂಕ ಜಾಸ್ತಿಯಾಗುತ್ತದೆ ಎಂಬ ಭಯ ಸಾಮಾನ್ಯವಾಗಿದೆ. ಪಾಲಕರು ಸಿಹಿ ತಿನ್ನುವುದಿಲ್ಲ ಎಂದು ಮಕ್ಕಳು ಕೂಡ ಸಿಹಿ ತಿಂಡಿ ದೂರ ಸರಿಸುತ್ತಾರೆ.

ADVERTISEMENT

ಆಯುರ್ವೇದದ ಔಷಧಗಳಲ್ಲಿ ಬೆಲ್ಲಕ್ಕೆ ಅಗ್ರಸ್ಥಾನ. ರಕ್ತಹೀನತೆ ತಡೆಯುವಲ್ಲಿ ಬೆಲ್ಲ ಮಹತ್ವದ ಪಾತ್ರ ವಹಿಸುತ್ತದೆ. ಬೆಲ್ಲದಲ್ಲಿರುವ ಕ್ಯಾಲ್ಸಿಯಂ, ಮ್ಯಾಗ್ನೀಶಿಯಂ, ಕಬ್ಬಿಣ, ಗ್ಲುಕೋಸ್‌, ಕಾರ್ಬೊಹೈಡ್ರೇಟ್ ಮತ್ತು ವಿಟಮಿನ್‍ಗಳು ದೇಹದ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಹಿಂದೆ ಮನೆಗೆ ಬಂದ ಅತಿಥಿಗಳಿಗೆ ಸ್ವಲ್ಪ ಬೆಲ್ಲ, ನೀರು ಕೊಡುವ ಸಂಪ್ರದಾಯವಿತ್ತು. ಹಬ್ಬದ ದಿನಗಳಲ್ಲಿ ಸ್ನೇಹಿತರನ್ನು ಫಳಾರಕ್ಕೆ (ಉಪಾಹಾರ) ಕರೆಯುತ್ತಿದ್ದರು. ಫಳಾರದಲ್ಲಿ ಉಂಡಿ ತಿನ್ನುವ ಸ್ಪರ್ಧೆ ನಡೆಯುತ್ತಿತ್ತು. ಈಗ ಈ ಸಂಸ್ಕೃತಿ ನಿಂತುಹೋಗಿದೆ. ಮದುವೆಯಂತಹ ಸಮಾರಂಭಗಳಲ್ಲಿಯೂ ಜನರು ಸಿಹಿ ಪದಾರ್ಥಗಳನ್ನು ಬಹಳ ಕಡಿಮೆ ತಿನ್ನುತ್ತಾರೆ. ಇದು ರೋಗ ರುಜಿನ ಭಯದಿಂದ ಹುಟ್ಟಿದ ಅನಾರೋಗ್ಯಕರ ಬೆಳವಣಿಗೆಯಾಗಿದೆ.

ರೈತರು ತಾವು ಬೆಳೆದ ಕಬ್ಬಿನಲ್ಲಿ ಕನಿಷ್ಠ ಶೇ 5ರಷ್ಟು ಕಬ್ಬಿನಿಂದಲಾದರೂ ಬೆಲ್ಲ ತಯಾರಿಸಬೇಕು ಎಂದು ಸರ್ಕಾರ ಬಹಳ ಹಿಂದೆಯೇ ಕಡ್ಡಾಯಗೊಳಿಸಿದೆ. ಆದರೆ ಬಹಳಷ್ಟು ರೈತರು ಇದನ್ನು ಪಾಲಿಸುವುದಿಲ್ಲ. ತಾವು ಬೆಳೆದ ಎಲ್ಲ ಕಬ್ಬನ್ನು ಕಾರ್ಖಾನೆಗಳಿಗೆ ಸಾಗಿಸುತ್ತಾರೆ. ಹೀಗಾಗಿ ಕಬ್ಬು ಬೆಳೆದ ರೈತರು ಕೂಡ ಬೆಲ್ಲದ ಸವಿಯಿಂದ ವಂಚಿತರಾಗುತ್ತಿದ್ದಾರೆ.

ಉತ್ತಮ ಗುಣಮಟ್ಟದ ಬೆಲ್ಲ ತಯಾರಿಸುವ ಸುಲಭ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಕಬ್ಬಿನ ಹಾಲು ಸೋಸಿ ದೊಡ್ಡ ಸ್ಟೀಲ್ ಪಾತ್ರೆಯಲ್ಲಿ 30 ನಿಮಿಷ ಚೆನ್ನಾಗಿ ಕುದಿಸಿದರೆ ನೀರಿನ ಅಂಶ ಹೋಗಿ ಬೆಲ್ಲದ ದ್ರಾವಣ ಸಿದ್ಧವಾಗುತ್ತದೆ. ಬೆಲ್ಲ ತಯಾರಿಸುವುದು ಒಂದು ಸಂಭ್ರಮದ ಕೆಲಸ. ಒಂದು ಟನ್ ಕಬ್ಬಿನಿಂದ 115 ಕೆ.ಜಿ.ಯಿಂದ 130 ಕೆ.ಜಿ. ಬೆಲ್ಲ ತಯಾರಾಗುತ್ತದೆ. ಬೆಲ್ಲ ತಯಾರಿಕೆ ಘಟಕಗಳನ್ನು ಕೃಷಿ ಆಧಾರಿತ ಗ್ರಾಮೀಣ ಗುಡಿ ಕೈಗಾರಿಕೆ ಎಂದು ಸರ್ಕಾರ ಘೋಷಿಸಿದೆ. ಇದರ ಲಾಭವನ್ನು ರೈತರು ಪಡೆಯಬಹುದು. ಪ್ರತೀ ಬೆಲ್ಲ ತಯಾರಿಕೆಯ ಘಟಕದಲ್ಲಿ 12-15 ಕೃಷಿ ಕಾರ್ಮಿಕರಿಗೆ ಉದ್ಯೋಗ ಅವಕಾಶ ದೊರೆಯುತ್ತದೆ.

ಇಸ್ರೇಲ್ ದೇಶದ ತಲಾವಾರು ವಾರ್ಷಿಕ ಬೆಲ್ಲದ ಬಳಕೆ 50 ಕೆ.ಜಿ.ಯಷ್ಟಿದೆ. ರಷ್ಯಾ ಸೇರಿದಂತೆ ಇನ್ನೂ ಕೆಲವು ದೇಶಗಳಲ್ಲೂ ಬೆಲ್ಲದ ಬಳಕೆ ಸರಿಸುಮಾರು ಇದೇ ಪ್ರಮಾಣದಲ್ಲಿದೆ. ಆದರೆ ಭಾರತದಲ್ಲಿ ಇದು 8 ಕೆ.ಜಿ. ಮಾತ್ರ. ಭಾರತದ ಬೆಲ್ಲವು ರಷ್ಯಾ, ಇಸ್ರೇಲ್‌ಗೆ ರಫ್ತಾಗುತ್ತದೆ. ರಷ್ಯಾದ ಬೆಲ್ಲ ಖರೀದಿದಾರರು ಕರ್ನಾಟಕ, ಮಹಾರಾಷ್ಟ್ರದಲ್ಲಿ ಕಾಯಂ ಆಗಿ ನೆಲೆಸಿದ್ದಾರೆ.

ಬೆಲ್ಲ ಮಾತ್ರವಲ್ಲ, ಹಿತಮಿತ ಪ್ರಮಾಣದಲ್ಲಿ ಸಕ್ಕರೆ ಸೇವನೆಯೂ ಬೇಕು ಎನ್ನುವವರಿದ್ದಾರೆ.ಸಕ್ಕರೆಯಲ್ಲಿ ದೇಹಕ್ಕೆ ಬೇಕಾಗುವ ಕಾರ್ಬೊ ಹೈಡ್ರೇಟ್ ಮತ್ತು ಸುಕ್ರೋಸ್‌ ಹೇರಳ ಪ್ರಮಾಣದಲ್ಲಿ ಇರುತ್ತವೆ. ದೇಶದಲ್ಲಿ ವಾರ್ಷಿಕ ಸಕ್ಕರೆ ಬಳಕೆ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಿದೆಎಂಬ ಕಳವಳವನ್ನು ಭಾರತೀಯ ಸಕ್ಕರೆ ಸಂಸ್ಥೆವ್ಯಕ್ತಪಡಿಸಿದೆ. ಸಲ್ಫರ್ ಬಳಸಿ ಸಕ್ಕರೆ ಉತ್ಪಾದಿಸುವ ಹಳೆಯ ವಿಧಾನಕ್ಕೆ ಬದಲಾಗಿ ಕಾರ್ಬನ್ ಡೈಆಕ್ಸೈಡ್ ಬಳಸಿ ಉತ್ತಮ ಗುಣಮಟ್ಟದ ಸಕ್ಕರೆಯನ್ನುಉತ್ಪಾದಿಸಲಾಗುತ್ತಿದೆ.‌

ಬೆಲ್ಲ, ಸಕ್ಕರೆ ಮಧುರ ಸಂಗೀತ ಇದ್ದಹಾಗೆ. ಇಂಪಾದ ಸಂಗೀತ ಕಿವಿಗೆ ಬೀಳುತ್ತಲೇ ದೇಹದಲ್ಲಿ ಉತ್ಸಾಹ ತುಂಬುತ್ತದೆ. ಇದೇ ಶಕ್ತಿ ಬೆಲ್ಲ, ಸಕ್ಕರೆಗೆ ಇದೆ. ನಾಲಿಗೆ ಮೇಲೆ ಈ ಸವಿ ವಸ್ತುಗಳನ್ನು ಇಡುತ್ತಲೇ ದೇಹ ಉತ್ಸಾಹಗೊಳ್ಳುತ್ತದೆ.

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದೊಂದಿಗೆ ಸಿಹಿ ತಿಂಡಿ ಕೊಡುವ ಚಿಂತನೆ ನಡೆದಿದೆ. ಹಾಲಿನಲ್ಲಿ ಉತ್ತಮ ಗುಣಮಟ್ಟದ ಬೆಲ್ಲ ಬೆರೆಸಿ ಕೊಡುವ ವಿಧಾನ ಅನುಸರಿಸಿದರೆ ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆಗೆ ಖಂಡಿತ ನೆರವಾಗುತ್ತದೆ.

ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿದೆ. ಮಿತವಾಗಿ ದೇಹಕ್ಕೆ ಒಗ್ಗುವ ಪ್ರಮಾಣದಲ್ಲಿ ಬೆಲ್ಲ, ಸಕ್ಕರೆ ಸವಿ ಸವಿಯಬೇಕು. ಖುಷಿ ಅನುಭವಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.