ADVERTISEMENT

ರಾಜಕೀಯ ಮೇಲಾಟದಲ್ಲಿ ಕಾರ್ಯಕರ್ತ ಅತಂತ್ರ

ಸಿದ್ಧಾಂತದ ಬಗ್ಗೆ ಕೆಲವು ಕಾರ್ಯಕರ್ತರು ಬೆಳೆಸಿಕೊಳ್ಳುವ ಕುರುಡುಭಕ್ತಿ ಮತ್ತು ಕುರುಡು ಕಾಂಚಾಣವು ರಾಜಕೀಯ ವಾತಾವರಣವನ್ನು ಕಲುಷಿತಗೊಳಿಸುತ್ತಿವೆ

ಹೇಮಾ ಸಿಂಗಿಪಾಳ್ಯ
Published 29 ಮಾರ್ಚ್ 2019, 3:21 IST
Last Updated 29 ಮಾರ್ಚ್ 2019, 3:21 IST
.
.   

ಸುಮಲತಾ ಅಂಬರೀಷ್‌ ಮತ್ತು ತೇಜಸ್ವಿನಿ ಅನಂತಕುಮಾರ್ ಇಬ್ಬರೂ ತಾವು ನಂಬಿದ್ದ ಪಕ್ಷಗಳಿಂದ ನಿರಾಶೆ ಅನುಭವಿಸಿಯೂ ರಾಜಕೀಯವಾಗಿ ಕ್ರಿಯಾಶೀಲವಾಗಿರುವ ನಾಯಕಿಯರ ಎರಡು ವಿಭಿನ್ನ ಮಾದರಿಗಳಾಗಿದ್ದಾರೆ. ತೇಜಸ್ವಿನಿ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡದೆ ನಿರಾಶೆ ಉಂಟು ಮಾಡಿದೆ. ಸುಮಲತಾ ವಿಷಯದಲ್ಲೂ ಅವರು ನಂಬಿದ್ದ ಪಕ್ಷ ಬಿಜೆಪಿಯ ರೀತಿಯಲ್ಲೇ -ಬಿಜೆಪಿಯಷ್ಟು ಚಾಣಾಕ್ಷತನದಿಂದ ಅಲ್ಲದಿದ್ದರೂ- ವಂಚಿಸಿದೆ. ಸುಮಲತಾ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಪಕ್ಷಕ್ಕೆ ಸವಾಲೊಡ್ಡಿದ್ದಾರೆ. ಆದರೆ ಇತ್ತ ತೇಜಸ್ವಿನಿ ಅವರು ಪಕ್ಷದ ಆಜ್ಞಾನುವರ್ತಿಯಾಗಿ ಚುನಾವಣಾ ಪ್ರಚಾರದಲ್ಲಿ ತೊಡಗುವುದಾಗಿ ಹೇಳಿದ್ದಾರೆ.

ಅಂದಮಾತ್ರಕ್ಕೆ ತೇಜಸ್ವಿನಿ ಅವರಿಗೆ ಪಕ್ಷದ ಈ ನಿರ್ಧಾರದ ಬಗ್ಗೆ ಸಂಪೂರ್ಣ ಸಮ್ಮತಿ ಇದೆ ಎಂದೇನೂ ಹೇಳಲಾಗದು. ‘ಸಣ್ಣ ಪುಟ್ಟ ಅಸಮಾಧಾನಗಳು ಸಹಜ. ನಮ್ಮ ಭಾವನೆಗಳನ್ನು ಸಾರ್ವಜನಿಕವಾಗಿ ತೋರಿಸಬಾರದು. ಇದು ನಮ್ಮ ಪಕ್ಷದ ಸಿದ್ಧಾಂತಕ್ಕೆ ಸರಿ ಹೊಂದುವಂತಹ ನಡವಳಿಕೆ ಅಲ್ಲ’ ಎಂಬ ಅವರ ಮಾತುಗಳಲ್ಲಿ (ಪ್ರ.ವಾ., ಮಾರ್ಚ್‌ 27) ‘ನನಗೆ ಸಮಾಧಾನವಿಲ್ಲ, ಆದಾಗ್ಯೂ ನನಗೆ ನಾನೇ ನಿರ್ಬಂಧ ಹಾಕಿಕೊಂಡಿದ್ದೇನೆ’ ಎಂಬಂತಹ ಧ್ವನಿ ಇದೆ.

ಪಕ್ಷದ ಹಿರಿಯರು ಕೈಗೊಳ್ಳುವ ತೀರ್ಮಾನಗಳ ವಿಷಯದಲ್ಲಿ ಕಾರ್ಯಕರ್ತರು, ಸ್ಥಳೀಯ ನಾಯಕರು ಸೊಲ್ಲೆತ್ತಬಾರದು ಎಂದರೆ ಎಷ್ಟರಮಟ್ಟಿಗೆ ಸರಿ? ಎಷ್ಟೋ ಸಲ ಹೈಕಮಾಂಡ್ ಕೈಗೊಳ್ಳುವ ನಿರ್ಧಾರ ನ್ಯಾಯಯುತವಲ್ಲದೇ ಇರಬಹುದು. ಅದು ಆತ್ಮಹತ್ಯಾತ್ಮಕ ನಿರ್ಧಾರವೂ ಆಗಿರಬಹುದು. ಅಂತಹ ಸಂದರ್ಭದಲ್ಲಿ ಕಾರ್ಯಕರ್ತರು ಸ್ವಾರ್ಥಕ್ಕಲ್ಲದಿದ್ದರೂ ಪಕ್ಷದ ಉಳಿವಿನ ದೃಷ್ಟಿಯಿಂದ ಸೊಲ್ಲೆತ್ತಬೇಕಾಗುತ್ತದೆ, ಬಂಡಾಯ ಏಳಬೇಕಾಗುತ್ತದೆ.

ADVERTISEMENT

ಒಟ್ಟಿನಲ್ಲಿ ರಾಜಕಾರಣಿಗಳ ಈ ಮೇಲಾಟಗಳಿಂದ ಅಂತಿಮವಾಗಿ, ಪ್ರಾಮಾಣಿಕರಾದ ಕಾರ್ಯಕರ್ತರು ನಿರಾಶೆ ಅನುಭವಿಸಬೇಕಾಗುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕಿಳಿದಿದ್ದ ರಮ್ಯಾ ಅವರನ್ನುಕಾಂಗ್ರೆಸ್ ಕಾರ್ಯಕರ್ತರು ಬಹುಮಟ್ಟಿಗೆ ಬೆಂಬಲಿಸಿದ್ದರಾದರೂ ಅಂತಿಮವಾಗಿ ಅವರಿಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಅವರ ಸೋಲಿಗೆ ಅನ್ಯಪಕ್ಷದವರಲ್ಲ, ಅವರ ಪಕ್ಷದವರೇ ವ್ಯವಸ್ಥಿತವಾಗಿ ಹವಣಿಕೆ ಮಾಡಿದ್ದರು ಎಂಬ ಆರೋಪಗಳು ಆಗ ಕೇಳಿ ಬಂದಿದ್ದವು.

ಪಕ್ಷದ ಏಳಿಗೆಗಾಗಿ ಕಾರ್ಯಕರ್ತರು ಜೈಲಿಗೆ ಹೋಗಿರುವ, ಆತ್ಮಹತ್ಯೆ ಮಾಡಿಕೊಂಡಿರುವ, ಆಸ್ತಿಪಾಸ್ತಿ ಮಾರಿಕೊಂಡಿರುವ ಹಲವು ನಿದರ್ಶನಗಳುಂಟು. ಅಧಿಕಾರ ಲೋಭದಿಂದಲೋ ಅಥವಾ ಸೈದ್ಧಾಂತಿಕ ಕಾರಣದಿಂದಲೋ ಅಥವಾ ರಾಜಕೀಯ ಹವಣಿಕೆಯಿಂದಲೋ ಹಿರಿಯ ನಾಯಕರು ಮತ್ತೊಂದು ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಾಗ ಅಥವಾ ತಮ್ಮದೇ ಪಕ್ಷದ ನಾಯಕರನ್ನು ಸೋಲಿಸಿದಾಗ ಸ್ಥಳೀಯ ಮಟ್ಟದ ಪಂಚಾಯಿತಿ ರಾಜಕಾರಣದಲ್ಲಿ ಸಂಭವಿಸುವ ವೈಮನಸ್ಯಗಳಾಗಲೀ ಅಥವಾ ಕಾರ್ಯಕರ್ತರು ಅನುಭವಿಸುವ ಅತಂತ್ರ, ಅನಾಥ ಸ್ಥಿತಿಯಾಗಲೀ ಅವರಿಗೆ ಅರ್ಥವಾಗಲು ಸಾಧ್ಯವಿಲ್ಲ. ಒಂದು ಕ್ಷೇತ್ರದಲ್ಲಿ ಹಲವು ದಶಕಗಳಿಂದಲೂ ಪ್ರಾಬಲ್ಯ ಸ್ಥಾಪಿಸಿಕೊಂಡಿದ್ದ ಪಕ್ಷಗಳು ಹೊಂದಾಣಿಕೆಯ ರಾಜಕಾರಣದಿಂದಾಗಿ, ಅಲ್ಲಿ ತಮ್ಮ ಬೇರುಗಳನ್ನೇ
ಕಳೆದುಕೊಂಡಿರುವುದುಂಟು.

ಸದ್ಯದ ರಾಜಕೀಯ ವಾಸ್ತವ ಹೀಗಿರುವಾಗ, ಕಾರ್ಯಕರ್ತರ ಸೈದ್ಧಾಂತಿಕ ಬದ್ಧತೆ ಎಷ್ಟೋ ಸಲ ದಡ್ಡತನವಾಗಿ ಪರಿಣಮಿಸುತ್ತದೆ. ಇದರರ್ಥ ಕಾರ್ಯ ಕರ್ತರು ಸಿದ್ಧಾಂತವನ್ನು ಗಾಳಿಗೆ ತೂರಬೇಕೆಂದಲ್ಲ. ಸ್ವಾರ್ಥಕ್ಕಲ್ಲದಿದ್ದರೂ ಪಕ್ಷದ ಹಿತಕ್ಕಾಗಿ ಹಿರಿಯ ನಾಯಕರ ವಿರುದ್ಧ ಧ್ವನಿ ಎತ್ತಬೇಕಾಗುತ್ತದೆ, ಬಂಡಾಯ ಏಳಬೇಕಾಗುತ್ತದೆ. ಹಿಂದೆ ಎಪ್ಪತ್ತರ ದಶಕದಲ್ಲಿ ದೇವರಾಜ ಅರಸರು ಇಂತಹುದೇ ತಾತ್ವಿಕ ಕಾರಣಕ್ಕಾಗಿ ಇಂದಿರಾ ಗಾಂಧಿ ಅವರ ವಿರುದ್ಧ ಬಂಡೆದ್ದು ತಮ್ಮ ರಾಜಕೀಯ ನಿರ್ಧಾರಕ್ಕೆ ಕೊನೆತನಕ ಬದ್ಧರಾಗಿದ್ದರು.ಆದರೆ, ಇಂತಹ ಬದ್ಧತೆ ಇಂದು ಯಾವುದೇ ಪಕ್ಷದ ಕಾರ್ಯಕರ್ತರಲ್ಲಿ ಕಾಣಿಸದಿರುವುದು ದುರದೃಷ್ಟಕರ.

ಹೈಕಮಾಂಡ್ ರಾಜಕಾರಣ ಅಂತಿಮವಾಗಿ ಸ್ಥಳೀಯ ರಾಜಕಾರಣವನ್ನು ದುರ್ಬಲಗೊಳಿಸುತ್ತದೆ. ಅಧಿಕಾರ ಲೋಭದಿಂದಲೋ ಸಿದ್ಧಾಂತಕ್ಕೆ ತೋರಿಸುವ ಕುರುಡು ಭಕ್ತಿಯಿಂದಲೋ ಹೈಕಮಾಂಡ್‍ಗೆ ಶರಣಾಗುವುದರಿಂದ ಎಷ್ಟೋ ಸಲ ಸ್ಥಳೀಯ ಮತದಾರರಿಗೆ, ಹಾಗೆಯೇ ಪಕ್ಷಕ್ಕೆ ಅನ್ಯಾಯವಾಗುತ್ತದೆ ಎಂಬುದನ್ನು ನಾಯಕರು ಮನಗಾಣಬೇಕಾಗುತ್ತದೆ. ಕಾರ್ಯಕರ್ತರಲ್ಲೂ ದೋಷ ಇಲ್ಲದಿಲ್ಲ. ಸುಮಲತಾ ಅವರಿಗೆ ಆದ ಅನ್ಯಾಯವನ್ನು ಖಂಡಿಸುವ ಬಿಜೆಪಿ ಮಹಿಳಾಮಣಿಯರಿಗೆ ತಮ್ಮದೇ ಪಕ್ಷದ ತೇಜಸ್ವಿನಿ ಅವರಿಗಾದ ಮೋಸದ ಬಗ್ಗೆ ಮಾತಾಡಲು ಧ್ವನಿ ಇಲ್ಲವಲ್ಲ!

ಸಿದ್ಧಾಂತದ ಬಗ್ಗೆ ಕೆಲವು ಕಾರ್ಯಕರ್ತರು ಬೆಳೆಸಿಕೊಳ್ಳುವ ಕುರುಡುಭಕ್ತಿ ಮತ್ತು ಕುರುಡು ಕಾಂಚಾಣ ಕೆಲವು ಕಾರ್ಯಕರ್ತರಲ್ಲಿ ಹುಟ್ಟಿಸುವ ಪ್ರಲೋಭನೆ ಇಂದು ಆರೋಗ್ಯಕರ ರಾಜಕೀಯ ವಾತಾವರಣವನ್ನು ಕಲುಷಿತಗೊಳಿಸುತ್ತಿವೆ, ದುರ್ಬಲ
ಗೊಳಿಸುತ್ತಿವೆ. ಸುಮಲತಾ ಅವರಂತೆಯೇ ತೇಜಸ್ವಿನಿ ಸಹ ಬಂಡೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿದ್ದರೆ...? ಗೆಲುವು ಅಥವಾ ಸೋಲಿನ ಪ್ರಶ್ನೆ ಆನಂತರದ್ದು, ಕೊನೆಯಪಕ್ಷ ಆ ಪಕ್ಷದಲ್ಲಿ ಸ್ಥಳೀಯ ನಾಯಕಿಯರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತಲು ಅವರ ಬಂಡಾಯವೇ ಒಂದು ನೆವವಾಗಿಯಾದರೂ ಒದಗಿ ಬರುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.