ADVERTISEMENT

ಸಂಗತ | ಕಾಲೇಜು ಆಯ್ಕೆ: ಗೊಂದಲ ಬೇಡ

ಪ್ಲೇಸ್‌ಮೆಂಟ್‌ ಪ್ಯಾಕೇಜ್‌ ಒಂದಕ್ಕೇ ಜೋತುಬೀಳುವ ಬದಲು ಹಲವು ಮಾನದಂಡಗಳ ಆಧಾರದ ಮೇಲೆ ಕಾಲೇಜು ಆರಿಸಿಕೊಳ್ಳುವುದು ಸೂಕ್ತ

ಎಚ್.ಕೆ.ಶರತ್
Published 9 ಜೂನ್ 2025, 0:26 IST
Last Updated 9 ಜೂನ್ 2025, 0:26 IST
<div class="paragraphs"><p>ಸಂಗತ</p></div>

ಸಂಗತ

   

ಪದವಿಪೂರ್ವ ಶಿಕ್ಷಣವನ್ನು ಈಗಷ್ಟೇ ಪೂರೈಸಿ ಎಂಜಿನಿಯರಿಂಗ್ ಓದಲು ಆಸಕ್ತಿ ತೋರುತ್ತಿರುವ ಮಗ ತಮ್ಮ ಮುಂದೆ ಇಡುತ್ತಿರುವ ಆಯ್ಕೆ ಸೂಕ್ತವಾದುದೇ ಎಂಬುದನ್ನು ನಿರ್ಧರಿಸಲು ಅಗತ್ಯವಿರುವ ಮಾಹಿತಿ ಪಡೆಯಲು ವ್ಯಕ್ತಿಯೊಬ್ಬರು ನಾನು ಕಾರ್ಯನಿರ್ವಹಿಸುವ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ, ಅಲ್ಲಿನ ಅಧ್ಯಾಪಕರೊಂದಿಗೆ ಸಮಾಲೋಚಿಸುತ್ತಿದ್ದರು. ಸಿಇಟಿಯಲ್ಲಿ ಉತ್ತಮ ರ‍್ಯಾಂಕ್ ಹಾಗೂ ಜೆಇಇ ಮೇನ್ಸ್‌ನಲ್ಲಿ ಗಮನಾರ್ಹ ಅಂಕಗಳನ್ನು ಪಡೆದಿರುವ ಮಗನಿಗೆ, ಸದ್ಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ (ಎನ್‌ಐಟಿ) ಸೀಟು ಸಿಗುವಂತಿದೆ. ಹೀಗಿದ್ದರೂ ಅವನು ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಓದಬೇಕೆಂದು ಅಪೇಕ್ಷಿಸುತ್ತಿರುವುದು ತಂದೆಯ ಅಸಮಾಧಾನಕ್ಕೆ ಕಾರಣವಾಗಿತ್ತು.

ತನಗೆ ಸೀಟು ಸಿಗಲಿರುವ ಎನ್‌ಐಟಿಗಳಿಗಿಂತ ಖಾಸಗಿ ಸ್ವಾಯತ್ತ ಕಾಲೇಜು ಉತ್ತಮವೆಂದು ವಾದಿಸುತ್ತಿರುವ ಮಗನ ನಿಲುವಿನಲ್ಲಿ ಏನೋ ಸಮಸ್ಯೆ ಇರುವಂತಿದೆ ಎಂಬ ಅನುಮಾನ ಮೂಡಿ, ಅದಕ್ಕೆ ತಿಳಿದವರಿಂದಲೇ ಸಲಹೆ, ಸೂಚನೆ ಪಡೆಯೋಣವೆಂಬ ನಿರ್ಧಾರಕ್ಕೆ ಅವರು ಬಂದಿದ್ದರು.

ADVERTISEMENT

ಎನ್‌ಐಟಿಗಳನ್ನು ಬದಿಗಿರಿಸಿ ವಿದ್ಯಾರ್ಥಿ ಆಯ್ಕೆ ಮಾಡಿಕೊಂಡಿದ್ದ ಖಾಸಗಿ ಕಾಲೇಜು ಕೂಡ ಎಂಜಿನಿಯರಿಂಗ್ ಶಿಕ್ಷಣಕ್ಕೆ ರಾಜ್ಯದಲ್ಲಿ ಹೆಸರುವಾಸಿಯಾದದ್ದೆ. ಎನ್‌ಐಟಿಗಿಂತ ಈ ಕಾಲೇಜು ಉತ್ತಮ ಎಂದು ಭಾವಿಸಲು ಏನು ಕಾರಣವೆಂಬ ಪ್ರಶ್ನೆಯನ್ನು ವಿದ್ಯಾರ್ಥಿಗೆ ಕೇಳಲಾಯಿತು.

‘ಎನ್‌ಐಟಿಗಳಿಗಿಂತ ಈ ಖಾಸಗಿ ಕಾಲೇಜಿನ ಪ್ಲೇಸ್‌ಮೆಂಟ್ ಪ್ಯಾಕೇಜ್ ತುಂಬಾ ಚೆನ್ನಾಗಿದೆ. ನನಗೆ ಸೀಟು ದಕ್ಕುವ ಸಾಧ್ಯತೆ ಇರುವ ಎನ್‌ಐಟಿಗಳಲ್ಲಿ ಸರಾಸರಿ ಪ್ಲೇಸ್‌ಮೆಂಟ್ ಪ್ಯಾಕೇಜ್ ₹6 ಲಕ್ಷ ಇದ್ದರೆ, ಈ ಕಾಲೇಜಿನಲ್ಲಿ ₹17 ಲಕ್ಷ ಇದೆ. ನಾನು ಅದನ್ನೆಲ್ಲ ಪರಿಶೀಲಿಸಿಯೇ ಆಯ್ಕೆ ಮಾಡಿಕೊಂಡಿರುವುದು’ ಎಂದು ತಿಳಿಸಿದ.

ವಿದ್ಯಾರ್ಥಿಯ ಆಯ್ಕೆಯಲ್ಲಿ ತಪ್ಪಿದ್ದಂತೆ ತೋರದಿದ್ದರೂ ಆಯ್ಕೆಗೆ ಪರಿಗಣಿಸಿದ ಮಾನದಂಡ ಮತ್ತು ಪ್ಲೇಸ್‌ಮೆಂಟ್ ಪ್ಯಾಕೇಜಿಗೆ ಸಂಬಂಧಿಸಿದಂತೆ ನೀಡಿದ ಅಂಕಿ-ಅಂಶ ಸಮಸ್ಯಾತ್ಮಕವಾಗಿತ್ತು. ಪ್ಲೇಸ್‌
ಮೆಂಟ್ ಪ್ಯಾಕೇಜ್ ಎಂದರೆ, ಕ್ಯಾಂಪಸ್ ಸಂದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಆರಿಸಿಕೊಳ್ಳುವ ಕಂಪನಿಗಳು ಶುರುವಿನಲ್ಲೇ ನೀಡುವ ವಾರ್ಷಿಕ ವೇತನದ ಮೊತ್ತ.

ಮುಂಬರುವ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾತಿ ಪ್ರಕ್ರಿಯೆ ಪ್ರಾರಂಭಿಸಿರುವ ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳು, ವಿದ್ಯಾರ್ಥಿಗಳನ್ನು ತಮ್ಮೆಡೆಗೆ ಸೆಳೆಯಲು ಪ್ಲೇಸ್‌ಮೆಂಟ್ ಪ್ಯಾಕೇಜ್ ಅನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಹೀಗಾಗಿ, ಜಾಹೀರಾತುಗಳಲ್ಲಿ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗೆ ಭೇಟಿ ನೀಡಿದ ಕಂಪನಿಗಳು, ಅವು ನೀಡಿದ ಉದ್ಯೋಗಗಳ ಸಂಖ್ಯೆ, ಅತಿಹೆಚ್ಚು ಮತ್ತು ಸರಾಸರಿ ವಾರ್ಷಿಕ ವೇತನವನ್ನು ಪ್ರಮುಖ ಸಾಧನೆಯಾಗಿ ಉಲ್ಲೇಖಿಸಿರುತ್ತವೆ. ಬೇರೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗಿಂತ ತಮ್ಮಲ್ಲಿನ ಪ್ಲೇಸ್‌ಮೆಂಟ್ ಉತ್ತಮವಾಗಿದೆ ಎಂದು ಬಿಂಬಿಸಿಕೊಳ್ಳುವ ಈ ರೇಸಿನಲ್ಲಿ ಒಂದು ಹೆಜ್ಜೆ ಮುಂದಿರುವ ಉಮೇದು ಖಾಸಗಿ ಕಾಲೇಜುಗಳಲ್ಲಿದೆ. ಇದಕ್ಕಾಗಿ ಕೆಲವೊಮ್ಮೆ ಉತ್ಪ್ರೇಕ್ಷಿತ ಅಂಕಿ-ಅ‌ಂಶಗಳನ್ನು ಜಾಹೀರಾತುಗಳಲ್ಲಿ ಬಳಸಿಕೊಳ್ಳುವುದೂ ಇದೆ.

ಉದಾಹರಣೆಗೆ, ಅತಿಹೆಚ್ಚು ಪ್ಲೇಸ್‌ಮೆಂಟ್ ಪ್ಯಾಕೇಜ್‌ ₹50 ಲಕ್ಷ ಎಂದು ಜಾಹೀರಾತು ನೀಡುವ ಕಾಲೇಜು, ಈ ಸಾಲಿನಲ್ಲಿ ಪದವಿ ಮುಗಿಸುತ್ತಿರುವ ವಿದ್ಯಾರ್ಥಿಗಳ ಪೈಕಿ ಎಷ್ಟು ಮಂದಿಗೆ ಈ ಮೊತ್ತದ ಪ್ಯಾಕೇಜ್ ದೊರೆತಿದೆ ಎನ್ನುವ ವಿವರವನ್ನು ಬಹಿರಂಗಪಡಿಸಿರುವುದಿಲ್ಲ. ಇನ್ನು ಸರಾಸರಿ ಪ್ಯಾಕೇಜ್‌ ₹18 ಲಕ್ಷ ಎಂದು ಹೇಳುವ ಕಾಲೇಜು, ಈ ಲೆಕ್ಕ ಹಾಕಿದ್ದು ಹೇಗೆ ಎಂಬ ವಿವರ ನೀಡುವುದಿಲ್ಲ. ಹೀಗಾಗಿ ಬಹುತೇಕ ಸಂದರ್ಭಗಳಲ್ಲಿ ಜಾಹೀರಾತಿನಲ್ಲಿ ಬಿಂಬಿಸುವುದಕ್ಕೂ ವಾಸ್ತವಕ್ಕೂ ಬಹಳಷ್ಟು ವ್ಯತ್ಯಾಸ ಇರಲಿದೆ. 

ತಮ್ಮ ಉದ್ಯೋಗಿಗೆ ನೀಡುವ ವೇತನ ಮೊತ್ತದ ಕುರಿತು ಗೋಪ್ಯತೆ ಕಾಯ್ದುಕೊಳ್ಳುವ ನೀತಿಯನ್ನು ಹಲವು ಬಹುರಾಷ್ಟ್ರೀಯ ಕಂಪನಿಗಳು ಪಾಲಿಸುತ್ತಿವೆ. ಆ ಕುರಿತು ನೇಮಕಾತಿ ಪತ್ರದಲ್ಲೂ ಸ್ಪಷ್ಟವಾಗಿ ಉಲ್ಲೇಖಿಸಿ
ರುತ್ತವೆ. ಹೀಗಿದ್ದೂ ಪ್ರಚಾರಕ್ಕಾಗಿ ಕಾಲೇಜುಗಳು ಆಯಾ ಕಂಪನಿಯ ಹೆಸರಿನೊಂದಿಗೆ ಅವು ನೀಡುತ್ತಿರುವ ವೇತನದ ಮೊತ್ತವನ್ನೂ ನಮೂದಿಸುತ್ತಿವೆ.

ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಯು ಅದರಲ್ಲೂ ಹೊಸದಾಗಿ ಪ್ರಾರಂಭವಾಗಿರುವ ಕಾಲೇಜು ಅಥವಾ ವಿಶ್ವವಿದ್ಯಾಲಯದ ಕುರಿತು ತಿಳಿಯಲು, ಅದು ತನ್ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಮತ್ತು ಮಾಧ್ಯಮಗಳಲ್ಲಿ ನೀಡುವ ಜಾಹೀರಾತನ್ನು ಮಾತ್ರ ನೆಚ್ಚಿಕೊಳ್ಳುವುದಕ್ಕಿಂತ, ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಅಭಿಪ್ರಾಯ ಪಡೆದುಕೊಳ್ಳುವುದು ಸೂಕ್ತ. ಪ್ಲೇಸ್‌ಮೆಂಟ್ ಪ್ಯಾಕೇಜ್‌ಗೆ ಸಂಬಂಧಿಸಿದಂತೆ ಕಾಲೇಜು ನೀಡುತ್ತಿರುವ ಅಂಕಿ-ಅಂಶಕ್ಕೂ, ಪ್ಲೇಸ್‌ಮೆಂಟ್ ಆದ ವಿದ್ಯಾರ್ಥಿಗಳು ಹೇಳುತ್ತಿರುವ ಪ್ಯಾಕೇಜ್‌ಗೂ ಹೆಚ್ಚಿನ ಅಂತರ ಇರದಿದ್ದರೆ ಮಾತ್ರ ಅದನ್ನು ನಂಬಬಹುದು.

ಖಾಸಗಿ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚುತ್ತಲೇ ಇರುವ ಪ್ರಸಕ್ತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳನ್ನು ಸೆಳೆಯುವ ದಿಸೆಯಲ್ಲಿ ಜಾಹೀರಾತಿಗೆ ಹೆಚ್ಚಿನ ಸಂಪನ್ಮೂಲ ವಿನಿಯೋಗಿಸಲಾಗುತ್ತಿದೆ. ಆಕರ್ಷಕ ಜಾಹೀರಾತುಗಳನ್ನು ಗಮನಿಸಿ ಕಾಲೇಜುಗಳ ಆಯ್ಕೆಗೆ ಮುಂದಾಗುವ ಬದಲು, ಎನ್‌ಐಆರ್‌ಎಫ್ ರ‍್ಯಾಂಕಿಂಗ್, ಎನ್‌ಬಿಎ ಮಾನ್ಯತೆ, ಹಳೆ ಹಾಗೂ ಹಾಲಿ ಓದುತ್ತಿರುವ ವಿದ್ಯಾರ್ಥಿಗಳ ಅಭಿಪ್ರಾಯ ಹೀಗೆ ಹಲವು ಮಾನದಂಡಗಳ ಆಧಾರದ ಮೇಲೆ ಕಾಲೇಜು ಆರಿಸಿಕೊಳ್ಳುವುದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.