ADVERTISEMENT

ಸಂಗತ | ವೈಚಾರಿಕ ಪಾತಳಿಯ ದಾರಿದೀಪ

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಸಮತೋಲನದಿಂದ ನಡೆಸಿಕೊಂಡು ಹೋಗುವ ಬೆಳಕಾಗಿ ಬಂದದ್ದು ಸಮಸಮಾಜದ ವಿಚಾರಧಾರೆ

ಲೋಕೇಶ ಅಗಸನಕಟ್ಟೆ
Published 18 ಜನವರಿ 2025, 0:30 IST
Last Updated 18 ಜನವರಿ 2025, 0:30 IST
   

ಸಮಾಜೋ ಧಾರ್ಮಿಕ ಕ್ರಾಂತಿಯನ್ನು ಮಾಡಿದ ಹನ್ನೆರಡನೆಯ ಶತಮಾನದ ಬಸವಣ್ಣ ಅವರನ್ನು ‘ಸಾಂಸ್ಕೃತಿಕ ನಾಯಕ’ ಎಂದು ರಾಜ್ಯ ಸರ್ಕಾರ ಘೋಷಿಸಿ ಇಂದಿಗೆ (ಜ. 18) ಸರಿಯಾಗಿ ಒಂದು ವರ್ಷವಾಯಿತು. ಅದರ ಫಲದ ಪರಿಣಾಮವೋ ಎಂಬಂತೆ, ಇಂದು ಆಯೋಜಿಸಿರುವ 13ನೇ ಶರಣ ಸಾಹಿತ್ಯ ಸಮ್ಮೇಳನವು ಮೊದಲ ಬಾರಿಗೆ, ದಲಿತ ಶರಣರಾದ ಬೆಲ್ದಾಳ ಸಿದ್ದರಾಮ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ. ಇದು, ಸಾಂಸ್ಕೃತಿಕ ನಾಯಕ ಬಸವಣ್ಣನವರ ತಾತ್ವಿಕತೆ
ಯನ್ನು ಸಾಧ್ಯವಾಗಿಸುವ ಒಂದು ಪ್ರಯತ್ನದಂತೆಯೂ ತೋರುತ್ತಿದೆ.

ಒಂಬೈನೂರು ವರ್ಷಗಳ ಹಿಂದೆ ಸಮಸಮಾಜದ ಕನಸನ್ನು ಕಂಡು ಅದನ್ನು ಎಲ್ಲ ಹಂತಗಳಲ್ಲೂ ಸಾಧ್ಯವಾಗಿಸುವ ಒಂದು ಪ್ರಯತ್ನವೇ ಇಂದಿಗೆ ಚೋದ್ಯದಂತೆ ತೋರುತ್ತದೆ. ದುಡಿಯುವ ಲಕ್ಷಾಂತರ ಜನ ಈ ತತ್ವವನ್ನು ಒಪ್ಪಿ, ಸ್ವೀಕರಿಸಿ ಅದನ್ನು ಆಗು ಮಾಡಲು ಬಸವಣ್ಣನವರಿಗೆ ಹೆಗಲೆಣೆಯಾಗಿ ನಿಂತದ್ದೂ ಈ ಚಳವಳಿಯ ತಾತ್ವಿಕತೆಯ ಶಕ್ತಿ. ಜನಸಮುದಾಯದ ನಡುವಿನಿಂದ ಹುಟ್ಟಿಕೊಂಡು ಬಂದ ಜನತಾ ಧರ್ಮ
ಇದು. ಅನುಭವದಿಂದ ಅನುಭಾವ ಹುಟ್ಟಿಕೊಂಡು ಬಂದ ಅಪರೂಪದ ಏಕೈಕ ತಾತ್ವಿಕ ಧರ್ಮವಿದು.

ಸಮುದಾಯದ ಸೃಜನಶೀಲತೆಯು ಸೃಷ್ಟಿಸಿದ ಈ ಧರ್ಮವು ‘ದಯವೇ ಧರ್ಮದ ಮೂಲ’ ಎಂದಿತು. ಏಕದೇವೋಪಾಸನೆಯನ್ನು ಇಷ್ಟಲಿಂಗದ ಮೂಲಕ ದರ್ಶಿಸಿತು. ಮನುಷ್ಯರಾದವರೆಲ್ಲರೂ ಮಾನವೀಯತೆಗಾಗಿ ತುಡಿದ ಕಾಯಕಜೀವಿಗಳೆಲ್ಲರೂ ಒಂದುಗೂಡಿ ರೂಪಿಸಿದ ದೂರದೃಷ್ಟಿಯ ಕಾಣ್ಕೆ ಇದು. ಎಲ್ಲರನ್ನೂ ಒಳಗೊಳ್ಳುವ ಬಹುದೊಡ್ಡ ಆಶಯದ ಈ ಚಿಂತನಾಕ್ರಮವು ಚಳವಳಿಯ ಉಪ ಉತ್ಪನ್ನವಾದ ವಚನಗಳಲ್ಲಿ ರೂಪುಗೊಂಡು ಬಂದಿದೆ.

ADVERTISEMENT

‘ಆವನಾದಡೇನು ಶ್ರೀ ಮಹಾದೇವನ ನೆನೆವನ, ಬಾಯ ತಂಬುಲವ ಮೆಲುವೆ’, ‘...ಇವನಾರವ
ನೆಂದೆನಿಸದಿರಯ್ಯ, ...ಇವ ನಮ್ಮವನೆಂದೆನಿಸಯ್ಯ’... ಹೀಗೆ ಎಲ್ಲರನ್ನೂ ಎಲ್ಲ ಜಾತಿ, ಧರ್ಮ, ಲಿಂಗ, ಮತಗಳನ್ನೂ ಒಳಗೊಂಡು, ವಸ್ತು ಚೈತನ್ಯವೇ ದೇಹ ಎಂಬ ದೇವಾಲಯದೊಳಗಿರುವ ಆತ್ಮ, ದೇವರು ಎಲ್ಲರೊಳಗೂ ಇರುವನು ಎಂದು ಹೇಳಿ, ತರತಮ ಭಾವವನ್ನು ತೊರೆಯಬೇಕೆಂದು ಕರೆ ಕೊಟ್ಟರು ಬಸವಣ್ಣ.

ವಾದ– ಸಂವಾದ ರೂಪದ, ಅಚ್ಚ ಕನ್ನಡದ ದೇಸಿ ರೂಪದ, ಅನುಭಾವವನ್ನು ಸರಳವಾಗಿಸಿ, ಕೇಳು
ವವನ ಅಂತಃಕರಣವನ್ನು, ಅವನ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತೆ ಇರುವ ಸರ್ವ ಶರಣರ ವಚನ ಸಮುಚ್ಚಯವು ಕಾಲದಿಂದ ಕಾಲಕ್ಕೆ ಸಾಹಿತ್ಯ ಪಂಥಗಳಿಗೆ, ಪ್ರಕಾರಗಳಿಗೆ ಪ್ರೇರಕಶಕ್ತಿಯಾಗಿದೆ. ಹಲವು ಚಳವಳಿಗಳ ಚಾಲಕಶಕ್ತಿಯೂ ಆಗಿದೆ.

ಇಪ್ಪತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ‘ಖಡ್ಗವಾಗಲಿ ಕಾವ್ಯ’ ಎಂದ ದಲಿತ ಬಂಡಾಯದ ನೇಪಥ್ಯದಲ್ಲಿ ಇದ್ದದ್ದು ನಿಸ್ಸಂಶಯವಾಗಿ ಅಂಬೇಡ್ಕರ್‌ ಅವರ ವಿಚಾರಧಾರೆಯೇ. ಅದಕ್ಕೆ ಒದಗಿಬಂದ ಇನ್ನೆರಡು ಶಕ್ತಿಗಳೆಂದರೆ ಬುದ್ಧ ಹಾಗೂ ಬಸವಣ್ಣ. ಈ ತ್ರಿಶಕ್ತಿಗಳು ಇಪ್ಪತ್ತನೆಯ ಶತಮಾನದಲ್ಲಿ ಪ್ರಜಾಪ್ರಭುತ್ವ
ವನ್ನು ಗೌರವಿಸುವವರೆಲ್ಲರ ಧಾರಣಾಶಕ್ತಿಯಾಗಿವೆ. ಕುವೆಂಪು ಸಾರಿದ ವಿಶ್ವಮಾನವ ಸಂದೇಶ ಕೂಡ ಈ ವಿಚಾರಧಾರೆಯ ಮುಂದುವರಿದ ಭಾಗವೇ ಹೌದು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಸಮತೋಲನದಿಂದ ನಡೆಸಿಕೊಂಡು ಹೋಗುವ ಬೆಳಕಾಗಿ ಬಂದದ್ದು ಈ ಸಮಸಮಾಜದ ವಿಚಾರಧಾರೆಯೇ. ಇದರ ಜೊತೆಗೆ ಸಮತಾವಾದ ಹಾಗೂ ಸಮಾಜವಾದವೂ ಕೈ ಜೋಡಿಸಿ ಭಾರತದ ಸಾಂಸ್ಕೃತಿಕತೆಯನ್ನು ಕಾಪಾಡುವಲ್ಲಿ ಸಹಾಯಕ್ಕೆ ಬಂದವು. ಆಡಳಿತದ ಚುಕ್ಕಾಣಿ ಹಿಡಿದು ಭಾರತವನ್ನು ಮುನ್ನಡೆಸಿದ ನೆಹರೂ ಈ ಚಿಂತನಾ ಶಾಲೆಯ ವಿಚಾರ
ಗಳನ್ನು ಒಪ್ಪಿಕೊಂಡದ್ದರಿಂದಲೇ ಬಹುತ್ವವನ್ನು, ಬಹು ಸಂಸ್ಕೃತಿಯ ಸಮಾಜಗಳನ್ನು ಒಟ್ಟಿಗೆ ಮುನ್ನಡೆಸಲು ಸಾಧ್ಯವಾದುದು.

ಇಂತಹ ಚಿಂತನೆಯ ಕುರಿತು ಇಂದು ಹಲವರು ಅಪಸ್ವರ ಎತ್ತಬಹುದಾದರೂ ಅಂದು ದೇಶವನ್ನು ಕಾಪಾಡಿದ್ದು ಇದೇ ಚಿಂತನೆ ಎಂಬುದನ್ನು ಮರೆಯಲಾಗುವುದಿಲ್ಲ. ಈ ವೈಚಾರಿಕಾ ಪಾತಳಿಯ ಮೇಲೆಯೇ ಆಡಳಿತ ನಡೆಸಿದ ಇಂದಿರಾ ಗಾಂಧಿ ಅವರ ಗರೀಬಿ ಹಠಾವೊ, ರಾಷ್ಟ್ರೀಕರಣದಂತಹ ಧೀರ ನಿರ್ಧಾರ
ಗಳು ಈ ದೇಶದ ಬಹುಸಂಖ್ಯಾತರ ಬದುಕಿಗೆ ದಾರಿ ದೀಪವಾದದ್ದರ ಹಿಂದಿನ ಚಿಂತನೆಯೂ ಇದೇ ಆಗಿದೆ.

ಕರ್ನಾಟಕದಲ್ಲಿ ಹಲವು ಪಕ್ಷಗಳು ಆಡಳಿತ ನಡೆಸಿವೆ. ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲೇ ಬಹುಸಮಯವನ್ನು ಕಳೆದಿವೆ. ಸಾಂಸ್ಕೃತಿಕ ಬಿಕ್ಕಟ್ಟು ತೀವ್ರ ಸ್ವರೂಪವನ್ನು ತಾಳುತ್ತಾ ಹೊರಟ ಸಮಯದಲ್ಲಿ, ಇದಕ್ಕೆ ಸರಿಯಾದ ಉತ್ತರ ಇರುವುದು ಬುದ್ಧ, ಬಸವ, ಅಂಬೇಡ್ಕರ್‌ ಅವರ ಚಿಂತನೆಗಳಲ್ಲಿಯೇ ಎನ್ನುವ ವಾದವನ್ನು ಚಳವಳಿಗಳು ಮುಂದೆ ಇಡುತ್ತಲೇ ಬಂದಿವೆ. ಇದಕ್ಕೆ ಪರ್ಯಾಯ ನಾಯಕರ, ಪರ್ಯಾಯ ಪಠ್ಯಗಳ ಅಪವ್ಯಾಖ್ಯಾನಗಳ ಮೆರವಣಿಗೆಯೂ ನಡೆದೇ ಇದೆ. ಈ ಮೂವರು ದಾರ್ಶನಿಕರ ಚಿಂತನೆಗಳ ಜೊತೆಯಲ್ಲಿ ಅವೈದಿಕ ತಾತ್ವಿಕತೆಯನ್ನು ರೂಪಿಸಿದ ಹಲವು ಧಾರ್ಮಿಕ, ಸಾಮಾಜಿಕ ಹೋರಾಟಗಾರರ ಚಿಂತನೆಗಳು ನಮ್ಮ ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಬಲ್ಲವು.

ಈಗ ಇರುವ ಪ್ರಶ್ನೆ, ಪ್ರಭುತ್ವದ ಆಶಯಕ್ಕೆ ಪೂರಕವಾಗಿ ಸಮುದಾಯಗಳು ವಹಿಸುವ ಜವಾಬ್ದಾರಿಯ ಸ್ವರೂಪ ಎಂಥಾದ್ದು ಎಂಬುದು. ಪ್ರಭುತ್ವ ಮತ್ತು ಬಹುತ್ವದ ಸಹಸ್ಪಂದನದಿಂದ ಮಾತ್ರವೇ ಸಮಸಮಾಜವನ್ನು ರೂಪಿಸಲು ಸಾಧ್ಯ ಎಂಬುದು ಈವರೆಗೂ ಶೋಧಿಸಿಕೊಂಡ ಉತ್ತರವಾಗಿದೆ. ಅದು ಈಗ ಅನುಷ್ಠಾನಗೊಳ್ಳಬೇಕಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.