ADVERTISEMENT

ಸಂಗತ | ಕಾರ್ಮಿಕ ಸಂಹಿತೆಗಳು: ಮಾಲೀಕರಿಗೆ ಬೆಣ್ಣೆ, ಕಾರ್ಮಿಕ ವರ್ಗಕ್ಕೆ ಸುಣ್ಣ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 0:30 IST
Last Updated 12 ಫೆಬ್ರುವರಿ 2026, 0:30 IST
   
ಕೇಂದ್ರದ ನೂತನ ಕಾರ್ಮಿಕ ಸಂಹಿತೆಗಳು ಶ್ರಮಿಕರ ಹಿತ ರಕ್ಷಿಸುವಂತಿಲ್ಲ ಹಾಗೂ ಕಾರ್ಮಿಕರ ಬದುಕಿನ ಸಂಕಷ್ಟಗಳನ್ನು ಮತ್ತಷ್ಟು ಅಸಹನೀಯಗೊಳಿಸುವಂತಿವೆ.

ಕೇಂದ್ರದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರ ಪಡೆದಿರುವ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರವು ನಾಲ್ಕು ಕಾರ್ಮಿಕ ಸಂಹಿತೆಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದೇ 2026ರ ಏ.1ರಿಂದ ದೇಶದಾದ್ಯಂತ ಈ ನಾಲ್ಕು ಸಂಹಿತೆಗಳು ಕಾರ್ಯಾಚರಣೆಗೆ ಬರಲಿವೆ. ಸರ್ಕಾರದ ಈ ನಡೆ ವಿರೋಧಿಸಿ ಕೇಂದ್ರ ಕಾರ್ಮಿಕ-ನೌಕರ ಸಂಘಟನೆಗಳು 2026 ಫೆಬ್ರವರಿ 12 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಇದಕ್ಕೆ 500 ಕ್ಕೂ ಅಧಿಕ ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ಕೂಡ ಬೆಂಬಲ ಪ್ರಕಟಿಸಿದೆ.

1998ರಲ್ಲಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ನೇಮಿಸಿದ್ದ ರವೀಂದ್ರ ವರ್ಮ ನೇತೃತ್ವದ ಎರಡನೇ ಕಾರ್ಮಿಕ ಆಯೋಗ 2002ರಲ್ಲಿ ಕಾರ್ಮಿಕ ಕಾನೂನುಗಳ ಸಂಹಿತೀಕರಣಕ್ಕೆ ಶಿಫಾರಸು ಮಾಡಿತ್ತು. 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದಲ್ಲಿ ಜಾರಿಯಲ್ಲಿದ್ದ 44 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳನ್ನಾಗಿ ರೂಪಿಸುವ ಘೋಷಣೆ ಮಾಡಿತ್ತು. ಅದಕ್ಕೆ ದೇಶದ ಕಾರ್ಮಿಕ ವರ್ಗದಿಂದ ಒಗ್ಗಟ್ಟಿನ ಪ್ರತಿರೋಧ ಎದುರಾಗಿತ್ತು. ಆದರೆ ದೇಶದ ಶ್ರೀಮಂತ ಕಾರ್ಪೊರೇಟ್ ಉದ್ಯಮಪತಿಗಳು ಕಾರ್ಮಿಕ ಸುಧಾರಣೆಗೆ ಒತ್ತಾಯ ಮಾಡುತ್ತಲೇ ಬಂದಿದ್ದರು. ಪರಿಣಾಮ, ಕೇಂದ್ರ ಸರ್ಕಾರ 2019–2020ರಲ್ಲಿ 29 ಕಾರ್ಮಿಕ ಕಾನೂನುಗಳನ್ನು ನಾಲ್ಕು ಸಂಹಿತೆಗಳಲ್ಲಿ ವಿಲೀನಗೊಳಿಸಿತು; ವೇತನ ಸಂಹಿತೆ, ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತಾ ಸಂಹಿತೆ, ವೃತ್ತಿ ಸುರಕ್ಷತೆ ಮತ್ತು ಕೆಲಸ ಪರಿಸ್ಥಿತಿ ಕುರಿತಾದ ಸಂಹಿತೆ ರೂಪಿಸಿ, ಅವುಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿತ್ತು.

ಕೇಂದ್ರವು ನಾಲ್ಕು ಸಂಹಿತೆಗಳನ್ನು ‘ಈಸ್ ಆಫ್ ಡೂಯಿಂಗ್’ ಹೆಸರಿನಲ್ಲಿ ಜಾರಿ ಮಾಡಿದೆ. ಉದ್ಯಮಪತಿಗಳ ವ್ಯವಹಾರಗಳನ್ನು ಸುಗಮಗೊಳಿಸುವ ಮತ್ತು ದೇಶದ ಅಭಿವೃದ್ಧಿ ಹಾಗೂ ಬೆಳವಣಿಗೆ ದೃಷ್ಟಿಯಿಂದ ಇದು ಮಹತ್ತರ ಹೆಜ್ಜೆ ಎಂದು ಕೇಂದ್ರ ಸರ್ಕಾರ ವಾದಿಸುತ್ತಿದೆ. ಆದರೆ ಹಲವು ದಶಕಗಳಿಂದ ಪಡೆದಿರುವ, ಸಾಮಾಜಿಕ ಭದ್ರತೆಗಳು ಹಾಗೂ ‘ಸಂಘ ಕಟ್ಟುವ’ ಸ್ವಾತಂತ್ರ್ಯ ಸೇರಿ ಹಲವು ಹಕ್ಕುಗಳನ್ನು ಕಳೆದುಕೊಂಡು ಶ್ರಮಿಕರನ್ನು ಮತ್ತಷ್ಟು ಅಸಹನೀಯ ಪರಿಸ್ಥಿತಿಗೆ ದೂಡಲಿವೆ ಎಂದು ಈ ಸಂಹಿತೆಗಳು ಜಾರಿ ವಿರುದ್ಧ ಕಾರ್ಮಿಕ ಸಂಘಗಳು ನಿರಂತರ ಹೋರಾಟಗಳನ್ನು ನಡೆಸುತ್ತ ಬಂದಿವೆ. ಕಾರ್ಮಿಕರ ಕೂಗಿಗೆ ಕಿವಿಗೊಡದ ಕೇಂದ್ರ ಸರ್ಕಾರವು ಕೊನೆಗೂ 2025 ನವೆಂಬರ್ 21 ರಿಂದ ದೇಶಾದ್ಯಂತ ನಾಲ್ಕು ಸಂಹಿತೆಗಳನ್ನು ಜಾರಿಗೊಳಿಸಲು ಹೊರಟಿದೆ. ಕೇಂದ್ರದ ನಿಲುವು ‘ಮಾಲೀಕರ ಕಣ್ಣಿಗೆ ಬೆಣ್ಣೆ, ಶ್ರಮಜೀವಿಗಳ ಪಾಲಿಗೆ ಸುಣ್ಣ’.

ADVERTISEMENT

ಕೇಂದ್ರ ಸರ್ಕಾರದ ನೂತನ ವೇತನ ಸಂಹಿತೆ ಎಲ್ಲ ಕೆಲಸಗಾರರಿಗೂ ಕನಿಷ್ಠ ವೇತನ ಖಾತ್ರಿಪಡಿಸುತ್ತದೆ. ಮಾತ್ರವಲ್ಲ ಅಸಂಘಟಿತರು ಸೇರಿ ಎಲ್ಲಾ ನೌಕರರು/ಕಾರ್ಮಿಕರಿಗೆ ಕಾನೂನುಬದ್ಧ ಕನಿಷ್ಠ ವೇತನದ ಹಕ್ಕನ್ನು ನೀಡುತ್ತದೆ. ಆದರೆ, ವೇತನ ಸಂಹಿತೆಯ ಸೆಕ್ಷನ್ 2 (z) (d) ಪ್ರಕಾರ, ‘ಕಾರ್ಮಿಕ (worker)’ ಎಂಬ ಪದವು ‘ಪ್ರತಿ ತಿಂಗಳು ಹದಿನೈದು ಸಾವಿರ ರೂಪಾಯಿಗಿಂತ ಹೆಚ್ಚು ವೇತನ ಪಡೆಯುವ ಮೇಲ್ವಿಚಾರಣಾ ಹುದ್ದೆಯಲ್ಲಿರುವ ಯಾವುದೇ ನೌಕರ/ಳನ್ನು ಒಳಗೊಳ್ಳುವುದಿಲ್ಲ.

ಆದ್ದರಿಂದ, ವೇತನ ಸಂಹಿತೆಯ ವ್ಯಾಪ್ತಿಯಿಂದ ಬಹುಸಂಖ್ಯೆಯ ಕಾರ್ಮಿಕರನ್ನು ಹೊರಗಿಡಲಾಗಿದೆ. ಹತ್ತು ಮಂದಿಗಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಯಾವುದೇ ಕಾರ್ಖಾನೆ ಹಾಗೂ ವಿದ್ಯುತ್ ಸಹಾಯವಿಲ್ಲದೆ ನಡೆಯುವ ಮತ್ತು ಇಪ್ಪತ್ತು ಮಂದಿಗಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಯಾವುದೇ ಕಾರ್ಖಾನೆ ವೇತನ ಸಂಹಿತೆಯ ವ್ಯಾಪ್ತಿಗೆ ಬರುವುದಿಲ್ಲ. ಅಂದರೆ, ವಾರ್ಷಿಕ ಕೈಗಾರಿಕಾ ಸಮೀಕ್ಷಾ ವರದಿ 2017–18 ಪ್ರಕಾರ ಸುಮಾರು ಶೇ 48 ಕಾರ್ಖಾನೆಗಳು ವೇತನ ಸಂಹಿತೆಯ ವ್ಯಾಪ್ತಿಯಿಂದ ಹೊರಗುಳಿಯುತ್ತವೆ. ಹೀಗಾಗಿ, ‘ಎಲ್ಲರಿಗೂ ಕಾನೂನುಬದ್ಧ ಕನಿಷ್ಠ ವೇತನದ ಹಕ್ಕನ್ನು ಸ್ಥಾಪಿಸುತ್ತದೆ’ ಎಂಬ ಸರ್ಕಾರದ ಹೇಳಿಕೆ ಅಪ್ಪಟ ಸುಳ್ಳಾಗಿದೆ.

2018ರಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಕನಿಷ್ಠ ವೇತನವನ್ನು ನಿಗದಿ ಮಾಡಲು ತಜ್ಞರ ಸಮಿತಿ ನೇಮಿಸಿತು. ಈ ಸಮಿತಿ 2019 ರಲ್ಲಿ ದಿನಕ್ಕೆ ₹375 (ತಿಂಗಳಿಗೆ ₹9,750) ‘ರಾಷ್ಟ್ರೀಯ ಕನಿಷ್ಠವೇತನವಾಗಿ ವೈಜ್ಞಾನಿಕವಾಗಿ ನಿಗದಿಪಡಿಸಿದ್ದೇವೆ’ ಎಂದು ಸಮಿತಿ ಶಿಫಾರಸು ಮಾಡಿತ್ತು. 7ನೇ ವೇತನ ಆಯೋಗ ಶಿಫಾರಸು ಮಾಡಿದ ₹18,000 ಕನಿಷ್ಠ ವೇತನಕ್ಕಿಂತ ಬಹಳ ಕಡಿಮೆ ಎಂದು ಕಾರ್ಮಿಕ ಸಂಘಗಳು ಇದನ್ನು ತಿರಸ್ಕರಿಸಿದ್ದವು. ಇಷ್ಟಾಗಿಯೂ, ಜುಲೈ 2019 ರಲ್ಲಿ ರಾಷ್ಟ್ರೀಯ ಫ್ಲೋರ್ ಕನಿಷ್ಠ ವೇತನವನ್ನು (ಎನ್‌ಎಫ್‌ಎಂಡಬ್ಲ್ಯು) ದಿನಕ್ಕೆ ₹176 ರಿಂದ ಕೇವಲ ₹2 ಹೆಚ್ಚಿಸಿ ₹178 ಏರಿಸಲಾಯಿತು. ಪ್ರಸ್ತುತ ದಿನಕ್ಕೆ ಕೇವಲ ₹178 ನಿಗದಿಪಡಿಸಿದ ಮೊತ್ತವನ್ನು ನೋಡಿದಾಗ, ‘ಉತ್ತಮ ಜೀವನಮಟ್ಟವನ್ನು ಒದಗಿಸುತ್ತೇವೆ’ ಎನ್ನುವ ಮೋದಿ ಆಡಳಿತದ ಭರವಸೆಯು ದೇಶದ ದುಡಿಯುವ ಜನರಿಗೆ ಮಾಡಿದ ವಂಚನೆಯಾಗಿ ಕಾಣುತ್ತದೆ.

ಸಾಮಾಜಿಕ ಭದ್ರತೆಯ ಸಂಹಿತೆ-2020 ಸೆಕ್ಷನ್‌ಗಳು (109–114) ಗಿಗ್ ಹಾಗೂ ಪ್ಲಾಟ್‌ಫಾರ್ಮ್ ಕಾರ್ಮಿಕರನ್ನು ಒಳಗೊಂಡಂತೆ ಎಲ್ಲ ಕಾರ್ಮಿಕರಿಗೆ ಜೀವನ, ಆರೋಗ್ಯ, ಮಾತೃತ್ವ ಮತ್ತು ಭವಿಷ್ಯ ನಿಧಿ ಸೌಲಭ್ಯಗಳನ್ನು ಒಳಗೊಂಡ ಸಾಮಾಜಿಕ ಭದ್ರತೆಯನ್ನು ವಿಸ್ತರಿಸುತ್ತದೆ ಎನ್ನುತ್ತಲೇ ಅಗ್ರಿಗೇಟರ್ ಸಂಸ್ಥೆಗಳ ಕೊಡುಗೆಯ ಮೊತ್ತವನ್ನು ಶೇ 1–2ಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಇದರಿಂದ ಯಾವ ಸೌಲಭ್ಯಗಳೂ ಸಿಗುವ ಖಾತ್ರಿಯೇ ಇಲ್ಲ. 50 ಉದ್ಯೋಗಿಗಳನ್ನು ಹೊಂದಿರುವ ಸಹಕಾರಿ ಸಂಘಗಳನ್ನು ಭವಿಷ್ಯ ನಿಧಿ (ಇಪಿಎಫ್) ವ್ಯಾಪ್ತಿಯಿಂದ ಹೊರಗುಳಿಸಲಾಗಿದೆ. ಜತೆಗೆ 10ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳ ಜೊತೆಗೆ ತಿಂಗಳಿಗೆ ₹21,001 ವೇತನ ಪಡೆಯುವ ನೌಕರರು ಕಾರ್ಮಿಕರ ರಾಜ್ಯ ವಿಮೆ (ಇಎಸ್‌ಐ) ವ್ಯಾಪ್ತಿಯಿಂದ ಹೊರಬರುತ್ತಾರೆ. ಜತೆಗೆ 10 ಅಥವಾ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳ ಉದ್ಯೋಗಿಗಳು ಮಾತ್ರವೇ ಗ್ರಾಚ್ಯುಯಿಟಿ, ಮಾತೃತ್ವ ಲಾಭಗಳಿಗೆ ಅರ್ಹರಾಗುತ್ತಾರೆ.

ಹತ್ತಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಕಟ್ಟಡ ನಿರ್ಮಾಣ ಸಂಸ್ಥೆಗಳು ಸಾಮಾಜಿಕ ಭದ್ರತಾ ಸಂಹಿತೆಯ ವ್ಯಾಪ್ತಿಗೆ ಬರುವುದಿಲ್ಲ. ₹50 ಲಕ್ಷಕ್ಕಿಂತ ಕಡಿಮೆ ವೆಚ್ಚದ ನಿರ್ಮಾಣ ಕಂಪನಿಗಳನ್ನು ಸಂಹಿತೆಯಿಂದ ಹೊರಗಿಡಲಾಗಿದೆ. ಇದರಿಂದ ರಾಜ್ಯಗಳ ಕಲ್ಯಾಣ ಮಂಡಳಿಗೆ ಬರುವ ನಿಧಿಹರಿವು ನಿಂತುಹೋಗಲಿದೆ. ಇದುವರೆಗೂ ಕಲ್ಯಾಣ ಸೌಲಭ್ಯಗಳಿಗೆ ಮಾತ್ರವೇ ಸೆಸ್ ನಿಧಿ ಬಳಕೆ ಮಾಡಬೇಕೆಂಬ ಷರತ್ತು ತೆಗೆದು ವಲಸೆ ಕಾರ್ಮಿಕರಿಗೆ ತಂಗುದಾಣ, ಕೌಶಲ್ಯ ತರಬೇತಿ ಕೇಂದ್ರಗಳು, ವಸತಿ ಶಾಲೆಗಳ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ.

ಇದರಿಂದ ಕಾರ್ಮಿಕರು, ಅವರ ಅವಲಂಬಿತರ ಭವಿಷ್ಯಕ್ಕಾಗಿ ಶೇಖರಣೆಯಾಗುವ ಸಾವಿರಾರು ಕೋಟಿ ನಿಧಿ ರಾಜಕೀಯ ಹಿಂಬಾಲಕರಾದ ಗುತ್ತಿಗೆದಾರರ ಜೇಬು ಸೇರಲಿದೆ. ಲಕ್ಷಾಂತರ ಕಾರ್ಮಿಕರು ಈಗ ಪಡೆಯುವ ವಿವಿಧ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ತಿಂಗಳಿಗೆ ₹18,000ಕ್ಕಿಂತ ಹೆಚ್ಚಿನ ವೇತನ ಪಡೆಯುವ ಅಂತರರಾಜ್ಯ ವಲಸೆ ಕಾರ್ಮಿಕರು ಈ ಸಂಹಿತೆಯ ವ್ಯಾಪ್ತಿಗೆ ಬರುವುದಿಲ್ಲ. ಮೇಲ್ಕಂಡ ಅಂಶಗಳನ್ನು ಪರಿಶೀಲಿಸಿದಾಗ ಸುಮಾರು 50 ಕೋಟಿ ಕಾರ್ಮಿಕರಿಗೆ ಸಾರ್ವತ್ರಿಕವಾಗಿ ಸಾಮಾಜಿಕ ಭದ್ರತೆ ಒದಗಿಸುತ್ತೇವೆ ಎನ್ನುವ ಕೇಂದ್ರ ಸರ್ಕಾರದ ವಾದದಲ್ಲಿ ಯಾವುದೇ ಸತ್ಯಾಂಶವಿಲ್ಲ ಎನ್ನುವುದು ಮನದಟ್ಟಾಗುತ್ತದೆ.

ನೂತನ ಸಂಹಿತೆಯಲ್ಲಿ ನಿಗದಿತ ಅವಧಿಯ (fixied term) ನೌಕರರ ನೇಮಕ್ಕಕೆ ಅವಕಾಶ ನೀಡಲಾಗಿದೆ. ಇದರಿಂದ ಮಾಲೀಕರು ನೌಕರರನ್ನು ಉದ್ಯೋಗದ ಅವಧಿಯ ಒಂದು ವರ್ಷಕ್ಕಿಂತ ಮೊದಲೇ ಮನೆಗೆ ಕಳಿಸಿ ಗ್ರಾಚ್ಯುಯಿಟಿ ಪಾವತಿಯಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು. ಇದಲ್ಲದೆ ಕಾರ್ಮಿಕರು ಸಂಘ ಕಟ್ಟಿಕೊಳ್ಳುವ ಹಕ್ಕು, ನ್ಯಾಯಬದ್ದ ಬೇಡಿಕೆಗಳಿಗಾಗಿ ‘ಮುಷ್ಕರ’ ನಡೆಸುವ ಹಕ್ಕು, ನಿಗದಿತ ಅವಧಿಯ ಕೆಲಸದ ಹಕ್ಕು ಮತ್ತು ಹೆಚ್ಚುವರಿ ಭತ್ಯೆಗಳಿಂದ ವಂಚಿತರನ್ನಾಗಿಸುವ ನಿಯಮಾವಳಿಗಳನ್ನು ಸಂಹಿತೆಗಳಲ್ಲಿ ರೂಪಿಸಲಾಗಿದೆ. ಕೆಲಸದ ಸ್ಥಳ ಹಾಗೂ ಕಾರ್ಮಿಕ ಕಾನೂನುಗಳ ಉಲ್ಲಂಘನೆಗಳನ್ನು ತಡೆಯುವ ಹಾಗೂ ದಂಡ ಮತ್ತು ಶಿಕ್ಷೆ ವಿಧಿಸುವ ಅಧಿಕಾರ ಹೊಂದಿದ್ದ ಫ್ಯಾಕ್ಟರಿ ಹಾಗೂ ಕಾರ್ಮಿಕ ನಿರೀಕ್ಷಕರ ಹುದ್ದೆಗಳನ್ನು ‘ಫೆಸಿಲಿಟೇಟರ್’ ಎಂದು ಬದಲಾಯಿಸಲಾಗಿದೆ.

ಲಿಂಗಾಧಾರಿತ ಭೇದಭಾವವನ್ನು ನಿಷೇಧಿಸಲಾಗಿದೆ ಎಂದು ಹೇಳುತ್ತಲೇ ಮೂಲ ಕಾಯ್ದೆಯಲ್ಲಿ ಇದ್ದ ಲಿಂಗಾಧಾರಿತ ಸಮಾನತೆಯ ವಿಧಿಗಳನ್ನು ಕುಂದುಗೊಳಿಸಿ ಅಪಾಯಕಾರಿ ಮತ್ತು ಹಾನಿಕಾರಕ ಕೆಲಸಗಳಲ್ಲಿ ಮಹಿಳಾ ಕಾರ್ಮಿಕರನ್ನು ಸಂಜೆ ಏಳು ಗಂಟೆಯಿಂದ ಬೆಳಿಗ್ಗೆ ಆರು ಗಂಟೆಯವರೆಗೆ ದುಡಿಸಲು ಅನುಮತಿ ನೀಡಿವೆ. ಜತೆಗೆ ಕೈಗಾರಿಕಾ ಸಂಬಂಧ ಸಂಹಿತೆ ನಿಯಮವು 300 ಜನರಿಗಿಂತಲೂ ಕಡಿಮೆ ಕಾರ್ಮಿಕರನ್ನು ಹೊಂದಿರುವ ಸಂಸ್ಥೆ/ಉದ್ಯಮಗಳು ಲೇಆಫ್ ಘೋಷಿಸಿಕೊಳ್ಳಲು, ಸರ್ಕಾರದ ಪೂರ್ವಾನುಮತಿ ಪಡೆಯದೆ ಕಾರ್ಮಿಕರನ್ನು ವಜಾಗೊಳಿಸಲು ಅವಕಾಶ ನೀಡಿದೆ. ಕಾರ್ಮಿರನ್ನು ನೇಮಿಸಲು ಮತ್ತು ವಜಾಗೊಳಿಸಲು ನಮಗೆ ಸಂಪೂರ್ಣ ಹಕ್ಕಿರಬೇಕು ಎನ್ನುವ ಮಾಲೀಕರ ವಾದವನ್ನು ಕೇಂದ್ರ ಸರ್ಕಾರ ಮಾನ್ಯ ಮಾಡಿದೆ. ಹೀಗಾಗಿ ವ್ಯವಸ್ಥೆಯಡಿಯಲ್ಲಿ ಈಗಾಗಲೇ ತೀವ್ರ ಶೋಷಣೆ ಅನುಭವಿಸುವ ಶ್ರಮಜೀವಿಗಳು ನ್ಯಾಯಸಮ್ಮತ ಹಕ್ಕು, ಸೌಲಭ್ಯಗಳ ಉಳಿವಿಗಾಗಿ ಇದೇ ಫೆಬ್ರವರಿ 12 ರಂದು ದೇಶವ್ಯಾಪಿ ಮುಷ್ಕರದ ಹಾದಿಯಲ್ಲಿದ್ದಾರೆ.

ಲೇಖಕ: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.