ADVERTISEMENT

ಸಂಗತ | ಒಲವಿನ ಕೊಳಕ್ಕೆ ಎಸೆಯಬಹುದೆ ಕಲ್ಲು?

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 0:30 IST
Last Updated 15 ಜುಲೈ 2025, 0:30 IST
   
ಮದುವೆ ಮುರಿದುಕೊಳ್ಳುವವರು ಹೆಚ್ಚುತ್ತಿರುವುದು ಹಾಗೂ ಗಂಡ– ಹೆಂಡತಿ ಪರಸ್ಪರ ಕೊಂದುಕೊಳ್ಳುವ ಹಂತಕ್ಕೆ ಹೋಗುತ್ತಿರುವುದು ಕಳವಳಕಾರಿ.

‘ನಾನು ಬಡವಿ ಆತ ಬಡವ, ಒಲವೆ ನಮ್ಮ ಬದುಕು’ ಎಂಬ ವರಕವಿ ದ.ರಾ. ಬೇಂದ್ರೆ ಅವರ ಕವಿತೆಯ ಸಾಲುಗಳ ಜೀವಂತ ನಿದರ್ಶನಗಳನ್ನು ಈಗ ಕಾಣುವುದು ಕಷ್ಟ. ಒಲವೇ ಜೀವನ ಸಾಕ್ಷಾತ್ಕಾರ ಎನ್ನುವ ಹಾಡು ಜ್ಞಾಪಕ ಚಿತ್ರಶಾಲೆಯಲ್ಲಷ್ಟೇ ಉಳಿದಿದೆ. ಒಲವು ಒಡಕಾಗಿ, ದಾಂಪತ್ಯ ಹಳಿ ತಪ್ಪುತ್ತಿರುವ ಪ್ರಸಂಗಗಳು ಪ್ರತಿದಿನ ವರದಿಯಾಗುತ್ತಿವೆ.

ಮದುವೆಯಾದ ಮೂರೇ ತಿಂಗಳಿಗೆ ಪತಿಯನ್ನು ನದಿಗೆ ತಳ್ಳಿದ ಪತ್ನಿ ಇಲ್ಲವೇ ಹೆಂಡತಿಯನ್ನು ಚುಚ್ಚಿ ಚುಚ್ಚಿ ಕೊಲೆ ಮಾಡಿದ ಗಂಡ, ಇಬ್ಬರೂ ‘ಸಖೀಗೀತ’ವನ್ನು ಓದಿಕೊಂಡವರಲ್ಲ. ಸಖ್ಯದ ಆಖ್ಯಾನವನ್ನು ಅನುಭವದಿಂದ ದಕ್ಕಿಸಿಕೊಂಡವರೂ ಅಲ್ಲ. ಒಂದಾಗಿ ಬೆರೆತು ಸಮರಸದಿಂದ ಬಾಳಬೇಕಾದ ಕುಟುಂಬಗಳಲ್ಲಿ ಒಬ್ಬರನ್ನು ಇನ್ನೊಬ್ಬರು ಕೊಲೆ ಮಾಡಿ ಜೈಲು ಸೇರುವ ಉದಾಹರಣೆಗಳು ಹೆಚ್ಚಾಗುತ್ತಿವೆ. ಅವರಿಗೆ ಮಕ್ಕಳಿದ್ದರೆ ಅವರ ಗತಿಯೇನು?

ಲೈಂಗಿಕ ಶಿಕ್ಷಣ ಪಠ್ಯದ ಭಾಗವಾಗಬೇಕು ಎಂದು ವೈದ್ಯರು, ತಜ್ಞರು ಹಲವು ವರ್ಷಗಳಿಂದ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಲೈಂಗಿಕ ಶಿಕ್ಷಣ ಪಡೆಯದೆಯೇ ಕಲಿಕೆಯ ಹಂತದಲ್ಲಿ ಅನಾಹುತಗಳಾಗುತ್ತಿವೆ; ಇನ್ನು ಶೈಕ್ಷಣಿಕ ಮಾರ್ಗದರ್ಶನ ಸಿಕ್ಕಿದರೆ ಏನೇನಾಗಬಹುದೋ ಎಂದು ಮೂಗು ಮುರಿಯುವವರೂ ಇದ್ದಾರೆ. ಆದರೆ, ವೈವಾಹಿಕ ಬದುಕಿನ ಸುಗಮಯಾನಕ್ಕೆ ಯಾರೂ ಶಿಕ್ಷಣ ಕೊಡುವುದಿಲ್ಲ. ಹಣೆಗೆ ಸಿಂಧೂರ, ಕತ್ತಿಗೆ ತಾಳಿ ಮುಂತಾದ ಹಳೆಯ ಪಾಠಗಳನ್ನು ವೇದಿಕೆಗಳಲ್ಲಿ ರಂಜನೀಯವಾಗಿ ಉಪನ್ಯಾಸ ಮಾಡಿದರೆ, ಹಳೆಯ ಕಾಲದ ಒಂದಷ್ಟು ಮುತ್ತೈದೆಯರನ್ನು ಬಿಟ್ಟರೆ ಇಂದಿನ ಪೀಳಿಗೆಯವರು ಕಿವಿಗೊಡುವ ಸಾಧ್ಯತೆ ತೀರಾ ಕಡಿಮೆ. ಮದುವೆಯಾದ ವರ್ಷಕ್ಕೇ ವಿಚ್ಛೇದನದ ಹಾದಿ ಹಿಡಿಯುವ ಸಾಲು ಸಾಲು ಪ್ರಕರಣಗಳನ್ನು ಗಮನಿಸಿದರೆ ದಾಂಪತ್ಯದ ಕಲ್ಪನೆಯ ತಳಹದಿಯೇ ಅಲುಗಾಡುತ್ತಿರುವ ಲಕ್ಷಣ ಗೋಚರಿಸುತ್ತದೆ.

ADVERTISEMENT

ಗಂಡ– ಹೆಂಡತಿ ನಡುವಿನ ಅತೃಪ್ತಿ, ಅಸಹನೆ ಅಥವಾ ಜಗಳ, ಕೊಲೆಯಲ್ಲಿ ಪರ್ಯಾವಸಾನ ಆಗುತ್ತಿರುವುದು ಏಕೆ ಎಂಬುದರ ಬಗೆಗೆ ತಾರ್ಕಿಕವಾದ ನಿರ್ಣಯಗಳು ಲಭ್ಯವಿಲ್ಲ. ಹೆಂಡತಿ ತನಗೆ ಅಡಿಯಾಳಾಗಿರಬೇಕೆಂಬ ಗಂಡಿನ ಆಕ್ರಮಣಕಾರಿ ಮನೋವೃತ್ತಿಯತ್ತ ಆಕೆ ಕೈ ತೋರಿಸಿದರೆ– ಹೆಂಡತಿಗೆ ತಾನು ದುಡಿಯುತ್ತಿದ್ದೇನೆ, ಯಾರ ಹಂಗೂ ಇಲ್ಲದೆ ಬದುಕಬಲ್ಲೆ ಎಂಬ ಹಮ್ಮು ತಲೆಗೇರಿದೆ ಎಂದು ಆತ ಆರೋಪ ಮಾಡುತ್ತಾನೆ. ಮದುವೆಯಾದ ತಿಂಗಳಿಗೇ ಬಿಡುಗಡೆಯ ಹಾದಿ ಹಿಡಿಯುವವರು, ಅದಕ್ಕೆ ನೀಡುವ ಸಾಮಾನ್ಯ ಕಾರಣ, ಸಂಗಾತಿಯ ದೈಹಿಕ– ಮಾನಸಿಕ ಸಮಸ್ಯೆ.

ವೈದ್ಯಕೀಯ ಜಗತ್ತು ಸಾಕಷ್ಟು ಮುಂದುವರಿದಿದೆ. ದೈಹಿಕ ಸಮಸ್ಯೆಗಳನ್ನು ಸರಿಪಡಿಸಬಲ್ಲ ಚಿಕಿತ್ಸೆಗಳು ಕೈಗೆಟಕುವಂತಿವೆ. ಮಾನಸಿಕ ತಜ್ಞರು ಸಮಸ್ಯೆಯ ಮೂಲವನ್ನು ಹುಡುಕಿ ಹೊಂದಿಕೊಂಡು ಬಾಳುವ ವಿಧಾನವನ್ನು ತೋರಿಸಿಕೊಡಬಲ್ಲರು. ಹೀಗಿದ್ದರೂ, ದಾಂಪತ್ಯದ ಕೀಲು ಯಾಕೆ ಸಡಿಲವಾಗುತ್ತಿದೆ ಎನ್ನುವ ಬಗ್ಗೆ ಉತ್ತರ ಹುಡುಕುವ ಅಗತ್ಯವಿದೆ.

ಕಲಿತವರ ದಾಂಪತ್ಯವೇ ನೆಲೆ ಕಳೆದುಕೊಳ್ಳುತ್ತಿರುವ ಪ್ರಸಂಗ ಎದ್ದು ಕಾಣುವಂತಿದೆ. ಎಲ್ಲ ವಿದ್ಯೆ ಕಲಿತರೂ ದಾಂಪತ್ಯ ಪಾಠದ ಕೊರತೆ ಕಾಡುತ್ತದೆ. ಸಂಬಂಧದಲ್ಲಿನ ಅತೃಪ್ತಿ ಇಬ್ಬರಲ್ಲಿ ಒಬ್ಬರನ್ನು ಅನೈತಿಕ ವ್ಯವಹಾರದತ್ತ ನೂಕುವಂತೆ ಭಾಸವಾಗುತ್ತಿದೆ. ವಿವಾಹ ವಿಚ್ಛೇದನ ಕಾನೂನಿನ ಜಾಗೃತಿಯಿಂದಾಗಿ, ದಾಂಪತ್ಯ ಕಷ್ಟವೆನ್ನಿಸಿದಾಗ ಅದರಿಂದ ಹೊರಬರುವ ಅವಕಾಶ ಮುಕ್ತವಾಗಿದೆ. ಹಿಂದೆಲ್ಲ, ಮದುವೆ ಮುರಿದುಕೊಳ್ಳಲಿಕ್ಕೆ ಕೌಟುಂಬಿಕ ನ್ಯಾಯಾಧೀಶರು ಸುಲಭವಾಗಿ ಒಪ್ಪುತ್ತಿರಲಿಲ್ಲ. ಶಿಥಿಲವಾದ ಸಂಬಂಧವನ್ನು ಮರು ಸ್ಥಾಪಿಸಲು ಮಾತುಕತೆ ಮಾಡಿ ಮನವೊಲಿಸುತ್ತಿದ್ದರು. ಈಗ ಅಂತಹ ಪದ್ಧತಿಗಳು ಕಡಿಮೆಯಾಗಿವೆ.

ದಾಂಪತ್ಯದ ಮಾದರಿಗೆ ಭಾರತದಂತೆ ಉದಾಹರಣೆಯಾಗುವ ದೇಶ ಇನ್ನೊಂದಿರಲಾರದು. ಹಕ್ಕಿಗೂಡಿನಂತಹ ಸಂಸಾರ. ಒಲವನ್ನೇ ಬದುಕು ಎಂದುಕೊಂಡ ಸತಿ, ಪತಿ. ಮುದ್ದಾದ ಮಕ್ಕಳು. ಇಂಥ ಸುಂದರ ಕುಟುಂಬವನ್ನು ಕಥೆ– ಕಾವ್ಯಗಳಲ್ಲಿ ಮಾತ್ರವಲ್ಲದೆ, ನಿಜ ಜೀವನದಲ್ಲೂ ಕಾಣಬಹುದಾಗಿತ್ತು. ಈಗ ಕಾಲ ಬದಲಾಗಿದೆ. ಕುಟುಂಬದ ಕನ್ನಡಿಯಲ್ಲಿ ಒಡಕಲು ಬಿಂಬಗಳು! ಸಾಂಸಾರಿಕ ಹಲ್ಲೆಯ ಪ್ರಕರಣಗಳನ್ನು ನೋಡಿದರೆ, ದಾಂಪತ್ಯದ ಪರಿಕಲ್ಪನೆಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿರುವುದು ಸ್ಪಷ್ಟವಾಗುತ್ತದೆ. ಸಂಗಾತಿಯನ್ನು ಕೊಲ್ಲುತ್ತಿರುವವರು ಅಪ್ರಬುದ್ಧರಲ್ಲ, ಅಶಿಕ್ಷಿತರೂ ಅಲ್ಲ. ಕಾನೂನಿನ ಪರಿಣಾಮಗಳನ್ನು ತಿಳಿಯದವರೂ ಅಲ್ಲ. ಹೀಗಿದ್ದೂ ಯಾಕೆ ಕೊಲೆಯಂಥ ಘಟನೆಗಳು ನಡೆಯುತ್ತವೆ? ಗಂಡ– ಹೆಂಡತಿ ಆಜನ್ಮ ವೈರಿಗಳಂತೆ ಪ್ರತೀಕಾರಕ್ಕೆ ಯಾಕೆ ಮುಂದಾಗುತ್ತಾರೆ? ಇವು ಸುಲಭಕ್ಕೆ ಉತ್ತರ ದೊರಕದ ಪ್ರಶ್ನೆಗಳು. ಕೊಲ್ಲುವ ಬದಲು ಸಂಗಾತಿಯನ್ನು ಎಲ್ಲಾದರೂ ಬದುಕಿಕೊಳ್ಳಲು ಅವಕಾಶ ನೀಡುವ ಮಾನವೀಯತೆಯೇ ಮರೆಯಾಗುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.

ವಿವಾಹಪೂರ್ವ ಲೈಂಗಿಕ ಶಿಕ್ಷಣ ಬೇಕೋ ಬೇಡವೋ ಎನ್ನುವ ಚರ್ಚೆಯಾಚೆಗೆ, ಸಾಮರಸ್ಯದಿಂದ ಬದುಕುವ ಜೀವನ ಪಾಠ ಕಲಿಸುವ ಶಿಕ್ಷಣವಂತೂ ನಮ್ಮ ಮಕ್ಕಳಿಗೆ, ತರುಣ, ತರುಣಿಯರಿಗೆ ಅಗತ್ಯವಾಗಿದೆ. ಅಸಹನೆ, ಕ್ರೋಧ, ಕೊಲೆಗೆ ಮುಂದಾಗುವ ರಾಕ್ಷಸೀ ಪ್ರವೃತ್ತಿ ಮಾಯವಾಗುವಂತಹ ಮನೋಭೂಮಿಕೆ ಸೃಷ್ಟಿಯಾಗದೆ ಹೋದರೆ, ದಾಂಪತ್ಯದ ಸೌಧ ಜಡ ಸ್ಥಾವರವಾಗುತ್ತದೆ. ಸಂಸಾರ ಹಾಲಿನಂತಿಲ್ಲದೆ ಹೋದರೂ ಪರವಾಗಿಲ್ಲ; ಹಾಲಾಹಲ ಆಗಬಾರದು ಎನ್ನುವ ವಿವೇಕವನ್ನು ಕಲಿಸುವ, ಕಲಿತುಕೊಳ್ಳುವ ಮನೋಭಾವ ಯುವಜನರಿಗೆ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.