ಪ್ರಯೋಗಾಲಯಗಳಲ್ಲಿನ ವೈದ್ಯಕೀಯ ಪರೀಕ್ಷೆಗಳ ಫಲಿತಾಂಶ ನಿಖರವಾಗಿಲ್ಲದೆ ಹೋದರೆ, ರೋಗ ಪತ್ತೆ ಹಾಗೂ ಚಿಕಿತ್ಸೆಯ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು.
ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚಾಗಿದ್ದ ಬಿಳಿ ರಕ್ತಕಣಗಳ ಕಾರಣದಿಂದಾಗಿ, ಒಂದೂವರೆ ವರ್ಷದ ಹಿಂದೆ ಒಂದು ವರ್ಷದ ನನ್ನ ಮಗಳಿಗೆ ಪ್ರತಿಷ್ಠಿತ ಮಕ್ಕಳ ಆಸ್ಪತ್ರೆಯಲ್ಲಿ ಅಸ್ಥಿಮಜ್ಜೆಯ ಬಯಾಪ್ಸಿ ಮಾಡಲಾಯಿತು. ಪ್ರಾಥಮಿಕ ವರದಿ ಮತ್ತು ಅಂತಿಮ ವರದಿ ಎರಡರಲ್ಲೂ ಮಗುವಿಗೆ ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್) ಇರುವುದಾಗಿ ಹೇಳಲಾಗಿತ್ತು. ಆ ಪ್ರಯೋಗಾಲಯದ ವರದಿ ಇಂದಿಗೂ ನನ್ನ ಬಳಿ ಇದೆ.
ಬೇರೆ ಆಸ್ಪತ್ರೆಯಲ್ಲಿ ಮಗುವನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿದೆ. ಲ್ಯುಕೇಮಿಯಾ ಇಲ್ಲವೆಂದರು. ಮೂರನೇ ಅಭಿಪ್ರಾಯಕ್ಕೆಂದು ಕಿದ್ವಾಯಿ ಆಸ್ಪತ್ರೆಗೆ ಹೋಗಿ ಬಂದೆ. ಅಲ್ಲೂ ಮಗುವಿಗೆ ಆ ಕಾಯಿಲೆ ಇಲ್ಲವೆಂದರು. ಸಂಗ್ರಹಿಸಲಾದ ಯಾವ ಮಾದರಿಯಿಂದ ಲ್ಯುಕೇಮಿಯಾ ಎಂಬ ವರದಿ ಬಂದಿತ್ತೋ ಅದನ್ನು ಮತ್ತೊಂದು ಆಸ್ಪತ್ರೆಯಲ್ಲಿ ಪರೀಕ್ಷಿಸಲಾಯಿತು. ಅಲ್ಲೂ ಇಲ್ಲವೆಂದು ದೃಢವಾಯಿತು.
ಹಳೆಯ ಆಸ್ಪತ್ರೆಯವರು ತಮ್ಮ ವರದಿಯನ್ನು ಸಮರ್ಥಿಸಿ ಕೊಂಡರು. ದೊಡ್ಡ ದೊಡ್ಡ ಆಸ್ಪತ್ರೆಯ ಎದುರು ನಿಂತು ಸಾಮಾನ್ಯರು ಬಡಿದಾಡಲು ಸಾಧ್ಯವೇ? ಕೋರ್ಟ್, ಕಚೇರಿ ಅಂತ ಮತ್ತಷ್ಟು ಹಣ ಸುರಿಯಲು ಸಾಧ್ಯವೇ?
ನನ್ನ ಗೆಳೆಯರೊಬ್ಬರಿಗೆ ಹತ್ತು ವರ್ಷಗಳಿಂದ ಸಕ್ಕರೆ ಕಾಯಿಲೆ. ಯಾವಾಗಲೂ ತೋರಿಸಿಕೊಳ್ಳುತ್ತಿದ್ದ ಆಸ್ಪತ್ರೆಯ ಪ್ರಯೋಗಾಲಯದ ಬಗ್ಗೆ ಅನುಮಾನ ಮೂಡಿ, ಒಂದೇ ದಿನ ಎರಡು ಕಡೆ ರಕ್ತ ಪರೀಕ್ಷೆ ಮಾಡಿಸಿಕೊಂಡರು. ಫಲಿತಾಂಶದಲ್ಲಿ ಬಹಳ ವ್ಯತ್ಯಾಸ ಇತ್ತು. ಎಂದಿನ ಪ್ರಯೋಗಾಲಯದ ವರದಿಯಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿತ್ತು. ಹದಿನೈದು ದಿನ ಬಿಟ್ಟು ಮತ್ತೆ ಎರಡೂ ಕಡೆ ಪರೀಕ್ಷೆ ಮಾಡಿಸಿಕೊಂಡರು. ಫಲಿತಾಂಶದಲ್ಲಿ ವ್ಯತ್ಯಾಸ ಮುಂದುವರಿದಿತ್ತು.
ತಾಲ್ಲೂಕು ಕೇಂದ್ರವೊಂದರ ಖಾಸಗಿ ಆಸ್ಪತ್ರೆಯ ಲ್ಯಾಬ್‌ಗೆ ಸಹೋದರನನ್ನು ರಕ್ತ ಪರೀಕ್ಷೆಗಾಗಿ ಕರೆದುಕೊಂಡು ಹೋಗಿದ್ದೆ. ಅಲ್ಲಿನ ಸಿಬ್ಬಂದಿ ನನಗೆ ಪರಿಚಯದವರು. ‘ಸರ್, ಇಲ್ಲಿ ಯಂತ್ರಗಳು ತುಂಬಾ ಹಳೆಯವು. ಸರಿಯಾದ ರಿಪೋರ್ಟ್ ಬರಲ್ಲ. ಒಳ್ಳೆಯ ಕಡೆ ಹೋಗಿ’ ಎಂದು ಸೂಚಿಸಿದರು. ಅದೇಪ್ರಯೋಗಾಲಯದಲ್ಲಿ ವರದಿ ಪಡೆದವರ ಗತಿಯೇನು ಎಂದು ಸಂಕಟವಾಯಿತು.
ಭಾರತದಲ್ಲಿ ವೈದ್ಯಕೀಯ ಪ್ರಯೋಗಾಲಯಗಳ ಸಂಖ್ಯೆ ಸುಮಾರು 1.1 ಲಕ್ಷ (2023ರ ಮಾಹಿತಿ). ಅವುಗಳಲ್ಲಿ 8,561 ಪ್ರಯೋಗಾಲಯಗಳು ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಖಚಿತಪಡಿಸುವ ‘ಎನ್‌ಎಬಿಎಲ್’ ಮಾನ್ಯತೆಯನ್ನು ಹೊಂದಿವೆ. ಹಾಗಾದರೆ, ಮಾನ್ಯತೆ ಪಡೆಯದ ಪ್ರಯೋಗಾಲಯಗಳಿಂದ ಬರುವ ವರದಿಗಳ ಗತಿಯೇನು? ವಿಪರ್ಯಾಸವೆಂದರೆ, ‘ಎನ್‌ಎಬಿಎಲ್’ ಮಾನ್ಯತೆ ಪಡೆಯುವುದು ಪ್ರಯೋಗಾಲಯಗಳಿಗೆ ಕಡ್ಡಾಯವಾಗಿಲ್ಲ. ಗುಣಮಟ್ಟ ವುಳ್ಳ ಪ್ರಯೋಗಾಲಯಗಳ ಕೊರತೆಯು ವೈದ್ಯಕೀಯ ಕ್ಷೇತ್ರದ ಒಂದು ಪ್ರಮುಖ ಸಮಸ್ಯೆಯೆಂದು ಅಧ್ಯಯನಗಳು ಗುರುತಿಸಿವೆ.
‘ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ ಆಕ್ಟ್– 2010’, ಪ್ರಯೋಗಾಲಯ ಗಳ ಗುಣಮಟ್ಟ, ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯ ಅರ್ಹತೆ ಮತ್ತು ಶುಲ್ಕದ ಪಾರದರ್ಶಕತೆ ಖಾತರಿಪಡಿಸುವ ಗುರಿಯನ್ನು ಹೊಂದಿದೆ. ಆದರೆ, ಈ ಕಾಯ್ದೆಯನ್ನು ಕೆಲವು ರಾಜ್ಯಗಳಲ್ಲಿ ಮಾತ್ರ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ‘ಇಂಡಿಯನ್ ಮೆಡಿಕಲ್ ಕೌನ್ಸಿಲ್’ನ 2002ರ ನಿಯಮಗಳು ವೈದ್ಯರು ಕಮಿಷನ್ ಆಸೆಯಿಂದ ರೋಗಿಗಳನ್ನು ಅನಗತ್ಯ ಪರೀಕ್ಷೆಗಳಿಗೆ ಒಳಪಡಿಸುವುದನ್ನು ನಿಷೇಧಿಸುತ್ತವೆ. ಆದರೆ, ಈ ನಿಷೇಧ ಹಾಳೆಯಲ್ಲಿ ಮಾತ್ರ ಉಳಿದಿದೆ.
ಮಾದರಿಗಳನ್ನು ಸರಿಯಾಗಿ ಸಂಗ್ರಹಿಸದಿರುವುದು, ಲೇಬಲ್ ಮಾಡದಿರುವುದು ಹಾಗೂ ಸಂರಕ್ಷಿಸದಿರುವುದು ಪರೀಕ್ಷಾ ಫಲಿತಾಂಶಗಳ ನಿಖರತೆ ಮೇಲೆ ಪರಿಣಾಮ ಬೀರಬಹುದು. ಸಂಗ್ರಹಿಸಿದ ಮಾದರಿಯನ್ನು ಪರೀಕ್ಷೆಗೆ ಬೇರೆಡೆಗೆ ಕಳುಹಿಸುವ ಪ್ರಯೋಗಾಲಯಗಳೂ ಇವೆ. ಇಂಥ ಸಂದರ್ಭದಲ್ಲಿ, ವಿಳಂಬ ಮತ್ತು ಮಾದರಿ ಹಾನಿಯ ಸಾಧ್ಯತೆ ಹೆಚ್ಚಿದೆ. ಮಾದರಿಗಳ ಮಿಶ್ರಣ, ಅಸಮರ್ಪಕ ಉಪಕರಣಗಳು, ತರಬೇತಿ ಇಲ್ಲದ ಸಿಬ್ಬಂದಿಯಿಂದ ನಿಖರ ಫಲಿತಾಂಶ ಪಡೆಯಲು ಹೇಗೆ ಸಾಧ್ಯ? ಮಾದರಿಗಳನ್ನು ನಿಖರವಾಗಿ ಪರೀಕ್ಷಿಸದೆ, ಪೂರ್ವ ನಿರ್ಧರಿತ ಟೆಂಪ್ಲೇಟ್ ಗಳಿಂದ ಪ್ರಯೋಗಾಲಯಗಳು ವರದಿಗಳನ್ನು ಸೃಷ್ಟಿಸುವ ದೂರುಗಳೂ ಇವೆ. ಇದು ರೋಗ ನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಗಂಭೀರ ತಪ್ಪುಗಳಿಗೆ ಕಾರಣವಾಗಬಹುದು.
ಪ್ರಯೋಗಾಲಯಗಳ ಗುಣಮಟ್ಟವನ್ನು ಸುಧಾರಿಸಲು ಮತ್ತು ಅನಗತ್ಯ ಪರೀಕ್ಷೆಗಳನ್ನು ಕಡಿಮೆ ಮಾಡಲು ಸಮಗ್ರ ನಿಯಂತ್ರಣ ವ್ಯವಸ್ಥೆ ಮತ್ತು ಮಾನದಂಡಗಳ ಅಗತ್ಯವಿದೆ. ಪ್ರಯೋಗಾಲಯಗಳು ‘ಎನ್‌ಎಬಿಎಲ್’ ಮಾನ್ಯತೆ ಪಡೆಯುವುದನ್ನು ಕಡ್ಡಾಯಗೊಳಿಸಬೇಕಿದೆ. ವೈದ್ಯಕೀಯ ಪರೀಕ್ಷೆಗಳ ಅಗತ್ಯ ಮತ್ತು ಅವುಗಳ ಫಲಿತಾಂಶಗಳ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇರುವುದರಿಂದ, ವೈದ್ಯರು ನೀಡುವ ಎಲ್ಲಾ ಪರೀಕ್ಷೆಗಳನ್ನು, ಫಲಿತಾಂಶವನ್ನು ಸುಮ್ಮನೆ ಒಪ್ಪಿಕೊಳ್ಳಬೇಕಾಗುತ್ತದೆ. ಜನಸಾಮಾನ್ಯರ ಅಮಾಯಕತೆಯನ್ನು ವೈದ್ಯಕೀಯ ಕ್ಷೇತ್ರ ದುರುಪಯೋಗ ಪಡಿಸಿಕೊಳ್ಳಬಾರದು.
ನಿಖರವಿಲ್ಲದ ವರದಿಗಳು ಹಾಗೂ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಮಾಡುವ ಪ್ರವೃತ್ತಿ ರೋಗಿಗಳಲ್ಲಿ ವೈದ್ಯಕೀಯ ಕ್ಷೇತ್ರದ ಬಗ್ಗೆ ಅಪನಂಬಿಕೆ ಮೂಡಿಸುತ್ತದೆ. ಜನರ ಭಯವು ಯಾರಿಗೋ ದುಡ್ಡು ಮಾಡುವ ಬಂಡವಾಳ ಆಗಬಾರದು. ಬಿಗಿಯಾದ ಕಾನೂನು, ಸರಿಯಾದ ನಿಯಂತ್ರಣವಿಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಚಿಕಿತ್ಸೆಯ ಹೆಸರಿನಲ್ಲಿ ವ್ಯಾಪಾರ ಮಾಡುವವರಿಗೆ ‘ಮನುಷ್ಯನ ಪ್ರಾಣ’ ಆಟಿಕೆಯಂತಾಗಿ ಬಿಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.