ADVERTISEMENT

ಸಂಗತ | ಮಾತು ಬಿತ್ತದಿರಲಿ ಭಾವಮಾಲಿನ್ಯ

ಯೋಗಾನಂದ
Published 24 ನವೆಂಬರ್ 2021, 20:57 IST
Last Updated 24 ನವೆಂಬರ್ 2021, 20:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸವಿ 1963. ಮೈಸೂರಿನ ಪುರಭವನದ ಆವರಣ. ಭಾರತದ ಗವರ್ನರ್ ಜನರಲ್ ಹುದ್ದೆ ಅಲಂಕರಿಸಿದ್ದ ರಾಜಾಜಿಯವರ ಭಾಷಣ ಇತ್ತು ಅಂದು ಸಂಜೆ. ಮೆಟ್ರಿಕ್ ಓದುತ್ತಿದ್ದ ನಮಗೆ ಅವರ ಪ್ರಬಂಧವೊಂದು ಪಠ್ಯಕ್ರಮದಲ್ಲಿತ್ತು. ಕುತೂಹಲದಿಂದ ನಾವು ಸಮಯಕ್ಕೆ ಮೊದಲೇ ಹಾಜರಿದ್ದೆವು. ನೂಕುನುಗ್ಗಲು.

ರಾಜಾಜಿ ಭಾಷಣ ಆರಂಭಿಸುವಾಗಲೂ ಗದ್ದಲ ಪೂರ್ತಿ ನಿಂತಿರಲಿಲ್ಲ. ಅವರು ಸ್ವಲ್ಪ ಕೂಡ ಸಿಟ್ಟಾಗಲಿಲ್ಲ. ‘ಹಾಲಿನ ಬಟ್ಟಲಿನಲ್ಲಿ ಒಂದೆರಡು ಇರುವೆಗಳಿದ್ದರೂ ಆಯ್ತು. ಇಡೀ ಹಾಲನ್ನು ಚೆಲ್ಲಬೇಕಾದೀತು’ ಎಂದಷ್ಟೇ ಹೇಳಿದ್ದರು. ಸಭೆಯಲ್ಲಿ ದಿಢೀರನೆ ಆವರಿಸಿದ ನೀರವತೆ. ರಾಜಾಜಿ ಮಾತು ಮುಗಿಯುವ ತನಕವೂ ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಶಬ್ದದ್ದೇ ಕಾರುಬಾರು. ಅವರ ಸತ್ವಯುತ ಮೊನಚು ನುಡಿಗಳು ಜನರನ್ನು ಹಾಗೆ ಬಂಧಿಸಿದ್ದವು.

ಇತ್ತೀಚೆಗಂತೂ ಶಿಸ್ತು, ಶಿಷ್ಟಾಚಾರಗಳ ಎಲ್ಲೆ ಮೀರಿ ವೇದಿಕೆಗಳಲ್ಲಿ ಬೀಸು ಹೇಳಿಕೆಗಳು, ಸಲ್ಲದ ಉದ್ಗಾರಗಳದ್ದೇ ಮೇಲುಗೈಯಾಗಿದೆ. ಪರಸ್ಪರ ಅಸಂಬದ್ಧ, ಅಬದ್ಧ ಸವಾಲುಗಳು ತೀರಾ ಮುಜುಗರ ಹುಟ್ಟಿಸುತ್ತವೆ. ಅದರಲ್ಲೂ ಚುನಾವಣಾ ಪ್ರಚಾರ ಸಭೆಗಳಲ್ಲಿ ಸದಭಿರುಚಿಯಲ್ಲದ ವ್ಯಂಗ್ಯ, ಲೇವಡಿ. ಪ್ರತಿಸ್ಪರ್ಧಿಗಳನ್ನುಟೀಕಿಸುವ ಭರದಲ್ಲಿ ಅಮಾಯಕ ಪ್ರಾಣಿಗಳೂ ಬಂದಾವು!

ADVERTISEMENT

ಯಾವುದೇ ಭಾಷಣದ ಯಶಸ್ಸಿಗೆ ಕರತಾಡನಗಳಷ್ಟೇ ಮಾನದಂಡವಲ್ಲ. ತಪ್ಪಾದ, ಪರರನ್ನು ನಿಂದಿಸುವ ಮಾತುಗಳಿಗೂ ಜೋರು ಚಪ್ಪಾಳೆಗಳಾಗುತ್ತವೆ. ಕರತಾಡನ ಕೆಲವೊಮ್ಮೆ ಮಾತು ನಿಲ್ಲಿಸಲು ತಾಕೀತೂ ಹೌದು. ಅಚ್ಚರಿಯ ಸಂಗತಿಯೆಂದರೆ, ಶ್ರೇಷ್ಠ ವಾಗ್ಮಿಗಳು ಚಪ್ಪಾಳೆ ಬಾರಿಸದ ಮಂದಿಗೆ ಹೆಚ್ಚು ಗಮನ ನೀಡಿರುತ್ತಾರೆ. ತಾವು ನುಡಿದಿದ್ದರಲ್ಲಿ ಏನಾದರೂ ಲೋಪಗಳಾದವೆ ಎಂಬ ಹುಡುಕಾಟಕ್ಕಿಳಿಯುತ್ತಾರೆ. ಇತರರನ್ನು ನಿಂದಿಸಿ, ಕಟಕಿಯಾಡಿ ಸಭೆಯನ್ನು ನಗಿಸುವ, ರಂಜಿಸುವ ಅಗತ್ಯವಿಲ್ಲ. ಹಾಗೆ ಪ್ರಚೋದಿಸಬಹುದು, ಆದರೆ ಪ್ರಭಾವಿಸುವುದು ಸಾಧ್ಯವಿಲ್ಲ.

ಕ್ರಿ.ಶ. 6ನೇ ಶತಮಾನದ ಕನ್ನಡ ಕವಿ ಅಣ್ಣಂಭಟ್ಟ ವೇದಿಕೆಯಲ್ಲಿರುವವರನ್ನು ಬೃಹಸ್ಪತಿಗೆ, ಸಭಿಕರನ್ನು ಸರಸ್ವತಿಗೆ ಹೋಲಿಸುತ್ತಾನೆ. ಸಭಿಕರು ಭಾಷಣಪಟುಗಳನ್ನು ಪರೀಕ್ಷಿಸುವಷ್ಟು ಮೇಧಾವಿಗಳು ಎಂಬುದು ಅವನ ಅಂಬೋಣ. ನಾಲಿಗೆ ಉತ್ತಮ ಸ್ನೇಹಿತ, ಅಷ್ಟೇ ಭಯಂಕರ ಯಜಮಾನ ಕೂಡ. ಕೋಪ, ತಾಪದ ಹೇಳಿಕೆಗಳು ಸೃಷ್ಟಿಸುವುದು ವೈರಿಗಳನ್ನೇ.

ನಾವಿಂದು ವಿದುನ್ಮಾನ ದಿನಮಾನಗಳಲ್ಲಿದ್ದೇವೆ. ಆಡಿದ್ದು ರೆಪ್ಪೆ ಮುಚ್ಚಿ ತೆರೆಯುವುದರೊಳಗೆ ದಶದಿಕ್ಕುಗಳಿಗೂ ರವಾನೆಯಾಗಿರುತ್ತದೆ. ರೋಚಕತೆಯ ಅಮಲು ಸುದ್ದಿಯ ರೆಕ್ಕೆಗಳಿಗೆ ಮತ್ತಷ್ಟು ಬಲ ತಂದಿರುತ್ತದೆ. ಒಂದು ಸಂದರ್ಭ ಅಥವಾ ಒಬ್ಬ ವ್ಯಕ್ತಿ, ಒಂದು ವರ್ಗದ ಬಗ್ಗೆ ನಮ್ಮ ಆಲೋಚನೆಗಳು ಸಕಾರಾತ್ಮಕವಾಗಿರದಿದ್ದರೆ ಮಾತಾಡದಿರುವುದೇ ಲೇಸು.

ಒಂದು ವೃತ್ತಾಂತ ನೆನಪಾಗುವುದು. ಗಣಿತದ ಪ್ರೊಫೆಸರ್ ಒಬ್ಬರು ತರಗತಿಗೆ ಬರುತ್ತಲೆ ಬೋರ್ಡಿನ ಮೇಲಿದ್ದ ಗೀಚುಗಳು, ಅಸಂಬದ್ಧ ಚಿತ್ರಗಳು ಮತ್ತು ಒಕ್ಕಣೆಗಳನ್ನು ನೋಡುತ್ತಾರೆ. ಅವರು ಹಾಗೆ ಗಮನಿಸಲಿ ಎಂದೇ ತಾನೆ ಹೈಕಳ ತಂತ್ರ! ರೇಗಿದರೆ ಏನೂ ಫಲವಿಲ್ಲವೆಂದರಿತ ಗುರುಗಳ ಪ್ರತಿಕ್ರಿಯೆ ಭಿನ್ನವೆ ಇತ್ತು. ಅವರು ತಮ್ಮ ಕೋಟಿನ ಕಿಸೆಯಿಂದ ಕರವಸ್ತ್ರ ಹೊರತೆಗೆದು ಬೋರ್ಡ್ ಸ್ವಚ್ಛಗೊಳಿಸುತ್ತಾರೆ. ಇನ್ನು ಮುಂದೆ ಇದರ ಬದಲು ಗಣಿತ ಸೂತ್ರಗಳನ್ನು ಬರೆದರೆ ನಿಮಗೇನೆ ಉಪಯುಕ್ತವಾಗುವುದಲ್ಲ ಎಂದು ಉಲಿಯುತ್ತಾರೆ. ನಾಚಿ ನೀರಾಗಿದ್ದ ವಿದ್ಯಾರ್ಥಿಗಳ ಮನ ಗೆಲ್ಲುತ್ತಾರೆ.

ಮನೆಗೆ ಹಾಲು ತರುವ ಹುಡುಗನಿಗೆ ‘ಇವೊತ್ತು ಯಾಕೆ ತಡ’ ಎನ್ನುವುದರ ಬದಲು ‘ನಿನ್ನೆ ಬೇಗ ಬಂದಿದ್ದೆ’ ಎನ್ನಬಹುದಲ್ಲ? ಎಷ್ಟಾದರೂ ಮಾತೆಂಬುದು ಜೋತಿರ್ಲಿಂಗ. ಅನುಚಿತ ಆಡಿ ಪರರ ಭಾವ ಕೆಡಿಸಬಾರದು. ಭಾವಮಾಲಿನ್ಯ ಪರಿಸರ ಮಾಲಿನ್ಯದಷ್ಟೇ ಸಾಮಾಜಿಕ ನ್ಯೂನತೆ.

‘ಅಪ್ರಿಯ ಸತ್ಯ ಹೇಳಬೇಡ’ ಎಂಬ ಚೆನ್ನುಡಿಗೆ ಹೀಗೊಂದು ಷರಾ ಉಂಟು: ‘ಪ್ರಿಯವಾಗುವುದೆಂಬ ಮಾತ್ರಕ್ಕೆ ಅಬದ್ಧ ಹೇಳಕೂಡದು’. ಅರ್ಥಗೌರವಕ್ಕೆ ಪ್ರಸಿದ್ಧನಾದ ಕವಿ ಭಾರವಿ ‘ಹಿತಂ ಮನೋಹಾರೀ ಚ ದುರ್ಲಭಂ ವಚಃ’ ಎಂದಿದ್ದಾನೆ. ಅಂದರೆ ಹಿತವಾಗಿಯೂ ಮನೋಹರವಾಗಿಯೂ ಮಾತನಾಡುವವರು ವಿರಳ.

ನಾವು ಮಾತನಾಡುವುದು ನಮ್ಮ ಮೌನಕ್ಕಿಂತಲೂ ಉತ್ತಮವಾಗಿದ್ದರೆ ಮಾತ್ರ ಮಾತನಾಡಬೇಕು ಎನ್ನುವುದು ವಿವೇಕ. ಆಡುವುದು ಆವೇಶಕ್ಕೆ ಹೊರತಾಗಿರುವುದು ಜಾಣತನ. ಎಲ್ಲ ವಿಷಯಗಳಿಗೂ ಸ್ಪಂದಿಸುವ ಅನಿವಾರ್ಯವೇನಿಲ್ಲ. ಮಗುಳ್ನಗೆಗಿಂತ ಭೂಷಣವಿಲ್ಲ. ಯಾರನ್ನು ಕುರಿತು, ಯಾವ ಉದ್ದೇಶಕ್ಕೆ ಮಾತಾಡುತ್ತಿದ್ದೇವೆ ಎನ್ನುವ ಸ್ಪಷ್ಟತೆ ಭಾಷಣ ಮಾಡುವವರಿಗಲ್ಲದೆ ಮತ್ತ್ಯಾರಿಗೆ ಗೊತ್ತಿರಬೇಕು? ಎಂದಮೇಲೆ ಯಾವುದೋ ದಾಕ್ಷಿಣ್ಯಕ್ಕೆ ಏನಾದರೂ ಮಾತಾಡಿ ಎಂಬ ಒಬ್ಬರ ಮೇಲಿನ ಒತ್ತಾಯ ಹಾಸ್ಯಾಸ್ಪದ. ಬಲವಂತಕ್ಕೊಳಗಾದವರಿಂದ ಸಭಿಕರು ಏನನ್ನು ತಾನೆ ನಿರೀಕ್ಷಿಸಲಾದೀತು?

ಪಾಂಡಿತ್ಯದಿಂದ ತಲೆ ಕೆರಳಲಿ, ಆದರೆ ಭಾವ ಅರಳಬೇಕು. ತಿರುಗು ಮುರುಗಾದರೆ ಭಾವಮಾಲಿನ್ಯ ಕಟ್ಟಿಟ್ಟ ಬುತ್ತಿ. ಆ ಕವಿಗೋಷ್ಠಿಯ ಆಮಂತ್ರಣ ಪತ್ರಿಕೆಯಲ್ಲಿ ಎರಡು ಸಿಹಿಗಳ ಭೂರಿ ಭೋಜನವೆಂದು ಅಚ್ಚಾಗಿತ್ತು. ಆದರೆ ತಯಾರಾಗಿದ್ದು ಒಂದೇ ಸಿಹಿ ಖಾದ್ಯ. ರಸಿಕರು ಮುನಿಸಿಕೊಂಡರೇನು ಗತಿ? ಆಯೋಜಕರು ತುಸು ಪ್ರಜ್ಞೆ ಮೆರೆದರು. ನೀವು ಬಹಳ ಇಷ್ಟಪಡುವ ಮೊದಲ ಸಿಹಿಯೇ ಘಮಘಮಿಸುತ್ತಿದೆ, ದಯವಿಟ್ಟು ಆಸ್ವಾದಿಸಿ ಎಂದು ಉದ್ಘೋಷಿಸಿದರು. ಗೋಷ್ಠಿಯ ಸಮಾರೋಪ ಸುಸೂತ್ರವಾಗಿತ್ತು. ವೇದಿಕೆ ಮತ್ತು ಸಭಾಂಗಣದ ನಡುವಿನ ಅನನ್ಯತೆಗೆ ಇದೊಂದು ನಿದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.