ADVERTISEMENT

ಸಂಗತ | ಸಕ್ಕರೆ ನಾಡಲ್ಲಿ ‘ಕಹಿ’ಯ ಪಾರುಪತ್ಯ

ಸಿಹಿ ಉಳಿಸಿಕೊಳ್ಳಲಿ ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆ

ಮಲ್ಲಿಕಾರ್ಜುನ ಹೆಗ್ಗಳಗಿ
Published 22 ಫೆಬ್ರುವರಿ 2023, 22:15 IST
Last Updated 22 ಫೆಬ್ರುವರಿ 2023, 22:15 IST
   

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ 2023–24ರ ಬಜೆಟ್ಟಿನಲ್ಲಿ ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್ ಘಟಕ ಸ್ಥಾಪಿಸುವ ಪ್ರಸ್ತಾಪ ಮಾಡಿರುವುದನ್ನು ಓದಿ ಅಚ್ಚರಿಗೆ ಒಳಗಾದೆ. ಏಕೆಂದರೆ, ಈ ಕಾರ್ಖಾನೆಯಲ್ಲಿ ಈಗಾಗಲೇ ಡಿಸ್ಟಿಲರಿ ಘಟಕ ಇದೆ. ಇದು ದಿನಕ್ಕೆ 42,000 ಲೀಟರ್ ಎಥೆನಾಲ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ದಿನಕ್ಕೆ ಆರು ಸಾವಿರ ಟನ್ ಕಬ್ಬು ಅರೆದರೆ ಮಾತ್ರ ಡಿಸ್ಟಿಲರಿ ಘಟಕ ನಡೆಯುತ್ತದೆ. ಆದರೆ ಮೈ ಶುಗರ್ ಕಾರ್ಖಾನೆ ದಿನಕ್ಕೆ ಒಂದು ಸಾವಿರ ಟನ್ ಕೂಡ ಅರೆಯುವುದಿಲ್ಲ. ಇದರಿಂದಾಗಿ ಘಟಕ ಬಾಗಿಲು ಮುಚ್ಚಿದೆ.

ಇನ್ನೊಂದು ನೋವಿನ ಸಂಗತಿ ಎಂದರೆ, ಕಾರ್ಖಾನೆಯಲ್ಲಿ 2007ರಲ್ಲಿ 32 ಮೆಗಾವಾಟ್ ಉತ್ಪಾದನೆಯ ಕೊ–ಜನರೇಷನ್ ವಿದ್ಯುತ್ ಘಟಕವನ್ನು ₹ 93 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಘಟಕ ಇಲ್ಲಿಯವರೆಗೆ ಒಂದು ಮೆಗಾವಾಟ್ ವಿದ್ಯುತ್‌ ಕೂಡ ಉತ್ಪಾದಿಸಿಲ್ಲ. ಯಂತ್ರಗಳು ತುಕ್ಕು ಹಿಡಿಯತೊಡಗಿವೆ.

ಈ ವರ್ಷದ ಹಂಗಾಮಿನಲ್ಲಿ ಕಾರ್ಖಾನೆ ಕುಂಟುತ್ತ ಸಾಗಿ ಬರೀ ಒಂದು ಲಕ್ಷ ಟನ್ ಕಬ್ಬು ಅರೆದು, 90 ಕ್ವಿಂಟಲ್ ಸಕ್ಕರೆ ಉತ್ಪಾದಿಸಿದೆ. ರಾಜ್ಯದ ಉಳಿದ ಸಕ್ಕರೆ ಕಾರ್ಖಾನೆಗಳು ಈ ವರ್ಷ ಸರಾಸರಿ ಆರು ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಿವೆ. ಮಂಡ್ಯ ಜಿಲ್ಲೆಯ ಪಾಂಡವಪುರ ಸಕ್ಕರೆ ಕಾರ್ಖಾನೆ ಕೂಡ ಈ ವರ್ಷ 6 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಿದೆ. ಮೈ ಶುಗರ್ ಕಾರ್ಖಾನೆಯಲ್ಲಿ ಒಂದು ಕ್ವಿಂಟಲ್ ಸಕ್ಕರೆ ಉತ್ಪಾದನೆಗೆ ₹ 21 ಸಾವಿರ ಖರ್ಚಾಗಿದೆ. ಸಕ್ಕರೆಯ ಮಾರಾಟ ಬೆಲೆ ಕ್ವಿಂಟಲ್ಲಿಗೆ ₹ 3,100 ಇದೆ. ಮೈ ಶುಗರ್ ಕಾರ್ಖಾನೆ ಒಂದು ಕ್ವಿಂಟಲ್ ಸಕ್ಕರೆ ಮಾರಾಟದಿಂದ ₹ 17,900 ನಷ್ಟ ಅನುಭವಿಸಲಿದೆ.

ADVERTISEMENT

ಮಂಡ್ಯ ಕಾರ್ಖಾನೆ ಕಾರ್ಯವೈಖರಿ ನೋಡಿದರೆ ನೋವಾಗುತ್ತದೆ. ಹಿಂದಿನ 11 ವರ್ಷಗಳ ಅವಧಿಯಲ್ಲಿ ಈ ಕಾರ್ಖಾನೆ ನಡೆದಿದ್ದು ನಾಲ್ಕು ವರ್ಷ ಮಾತ್ರ. ವರ್ಷಕ್ಕೆ 10 ಲಕ್ಷ ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿರುವ ಕಾರ್ಖಾನೆ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು ಐದು ಲಕ್ಷ ಟನ್ ಕಬ್ಬು ಅರೆದಿದೆ. ಇಲ್ಲಿ ಉತ್ಪಾದನೆಯಾದ ಸಕ್ಕರೆಯ ಗುಣಮಟ್ಟ ಸಾಧಾರಣವಾಗಿದೆ, ಇದರಿಂದಾಗಿ ಸಕ್ಕರೆಯ ಮಾರಾಟಕ್ಕೆ ಹಿನ್ನಡೆಯಾಗುತ್ತಿದೆ. ಕಾರ್ಖಾನೆಯ ನವೀಕರಣಕ್ಕೆ ಸರ್ಕಾರ ಒಟ್ಟು ₹ 504 ಕೋಟಿ ಅನುದಾನ ನೀಡಿದೆ. ಅದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ. ಹೀಗೆ ಕೊಟ್ಟ ಅನುದಾನದ ಹಣದಲ್ಲಿ ಎರಡು ಹೊಸ ಸಕ್ಕರೆ ಕಾರ್ಖಾನೆಗಳನ್ನು ಕಟ್ಟಬಹುದಾಗಿತ್ತು.

ಮೈ ಶುಗರ್ ಕಾರ್ಖಾನೆಗೆ ಬಹುದೊಡ್ಡ ಇತಿಹಾಸ ಇದೆ. ಇದು ರಾಜ್ಯದ ಮೊದಲ ಸಕ್ಕರೆ ಕಾರ್ಖಾನೆ. ಬ್ರಿಟಿಷ್ ಕೃಷಿ ಅಧಿಕಾರಿಯಾಗಿದ್ದ ಕೋಲ್ಮನ್ ಈ ಭಾಗದಲ್ಲಿ ಕಬ್ಬು ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಿ, ಸ್ವಂತದ ಹಣ ಹಾಕಿ ಕಾರ್ಖಾನೆ ಕಟ್ಟಿದ ಮಹಾಪುರುಷ. ಕೋಲ್ಮನ್‌ರ ಗೌರವಾರ್ಥ ಅವರ ಪ್ರತಿಮೆಯನ್ನು ಕಾರ್ಖಾನೆಯ ಆಡಳಿತ ಮಂಡಳಿ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗಿದೆ.

80ರ ದಶಕದವರೆಗೆ ಕಾರ್ಖಾನೆ ತುಂಬಾ ವೈಭವದಿಂದ ನಡೆಯಿತು. ಇಲ್ಲಿಯ ಡಿಸ್ಟಿಲರಿ ಘಟಕ ಉತ್ಪಾದಿಸುತ್ತಿದ್ದ ಮೈ ಶುಗರ್ ರಮ್‌ ಮಿಲಿಟರಿಗೆ ಪೂರೈಕೆ ಆಗುತ್ತಿತ್ತು. ಕಾರ್ಖಾನೆ ಉತ್ಪಾದಿಸುತ್ತಿದ್ದ ಮೈಸೂರು ಜಾಮ್, ಚಾಕೊಲೆಟ್ ತುಂಬಾ ಜನಪ್ರಿಯವಾಗಿದ್ದವು. ಫೋಟೊಗ್ರಫಿ ಫಿಲಂ ಕೂಡ ಇಲ್ಲಿ ತಯಾರಾಗುತ್ತಿತ್ತು. ಕಾರ್ಮಿಕರಿಗೆ ಉತ್ತಮ ನಿವೇಶನಗಳನ್ನು ಕೊಡಲಾಗಿದೆ. ಸಾರ್ವಜನಿಕರ ಉಪಯೋಗಕ್ಕಾಗಿ ಈಜುಕೊಳ ಕೂಡ ನಿರ್ಮಿಸಲಾಗಿದೆ. ಈ ಎಲ್ಲ ವೈಭವದಿಂದಾಗಿ ಮಂಡ್ಯ ಭಾಗವು ‘ಸಕ್ಕರೆಯ ನಾಡು’ ಎಂಬ ಹೆಗ್ಗಳಿಕೆ ಪಡೆಯಿತು. ಆದರೆ ಈಗ ಹೆಸರು ಮಾತ್ರ ಉಳಿದಿದೆ. ಸಕ್ಕರೆಯ ‘ರುಚಿ’ ಕಡಿಮೆಯಾಗಿದೆ.

ಮೈ ಶುಗರ್ ಕಾರ್ಖಾನೆಯು ಸಕ್ಕರೆ, ಡಿಸ್ಟಿಲರಿ, ಕನ್ಫೆಕ್ಷನರಿ, ಸಂಶೋಧನಾ ಕೇಂದ್ರ ಎಲ್ಲವನ್ನೂ ಹೊಂದಿದ ಪೂರ್ಣ ಪ್ರಮಾಣದ ಶುಗರ್ ಕಾಂಪ್ಲೆಕ್ಸ್ ಆಗಿದೆ. ಕಾರ್ಖಾನೆ ಐದು ಸಾವಿರ ಎಕರೆ ಸ್ವಂತದ ಭೂಮಿ ಹೊಂದಿದೆ. ಬೆಂಗಳೂರು ಮತ್ತು ಮಂಡ್ಯ ನಗರಗಳಲ್ಲಿ ಬೆಲೆಬಾಳುವ ನಿವೇಶನಗಳಿವೆ. ಆದರೆ ಸಮರ್ಪಕ ಉಸ್ತುವಾರಿ ಎಲ್ಲಿಯೂ ಕಾಣುತ್ತಿಲ್ಲ.

ಕಾರ್ಖಾನೆಯನ್ನು ಸರ್ಕಾರವೇ ನಡೆಸಬೇಕೆಂಬುದು ಈ ಭಾಗದ ಜನಪ್ರತಿನಿಧಿಗಳ ಆಗ್ರಹವಾಗಿದೆ. ಇದು ಒಳ್ಳೆಯ ವಿಚಾರ. ಆದರೆ ಫಲಿತಾಂಶ ಬಹಳ ಕಹಿಯಾಗಿದೆ. ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಸಮರ್ಥವಾಗಿ ನಡೆಸುವ ಹಿರಿಯ ತಂತ್ರಜ್ಞರು ಬಹಳ ಜನರಿದ್ದಾರೆ. ಮಹಾರಾಷ್ಟ್ರದ ಅನೇಕ ಸಕ್ಕರೆ ಕಾರ್ಖಾನೆಗಳು ಕರ್ನಾಟಕದ ತಜ್ಞರ ಸೇವೆ ಪಡೆದು ಅಭಿವೃದ್ಧಿ ಪಥದಲ್ಲಿ ನಡೆಯುತ್ತಿವೆ. ಸರ್ಕಾರ ಇಂಥವರ ಸೇವೆ ಪಡೆಯಬೇಕು. ಅವರಿಗೆ ಪೂರ್ಣ ಅಧಿಕಾರ ನೀಡಿ ದಕ್ಷ ಅಧಿಕಾರಿಗಳ ತಂಡ ಕಟ್ಟಿ ನಡೆಸಲು ಅವಕಾಶ ಮಾಡಿಕೊಡಬೇಕು. ಸಕ್ಕರೆ ಕಾರ್ಖಾನೆ ನಡೆಸುವುದು ರಾಜಕೀಯ ನಿರ್ಧಾರವಾಗದೆ, ವ್ಯಾವಹಾರಿಕ ನಿರ್ಧಾರವಾಗಬೇಕು. ಇದರಿಂದ ಈ ಕಾರ್ಖಾನೆ ತನ್ನ ಗತವೈಭವವನ್ನು ಪುನಃ ಪಡೆದುಕೊಳ್ಳಬಹುದು.

ಲೇಖಕ: ಸಕ್ಕರೆ ಉದ್ಯಮ ತಂತ್ರಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.