ADVERTISEMENT

ಸಂಗತ: ಶಾಲಾ ಶಿಕ್ಷಣ; ಯಾಕೀ ಕುಸಿತ?

ಸಮಗ್ರ ಶಿಕ್ಷಣ ವ್ಯವಸ್ಥೆಯಲ್ಲಿ ಶಾಲಾ ಶಿಕ್ಷಣ ತಳಪಾಯ ಇದ್ದಂತೆ. ರಾಜ್ಯದಲ್ಲಿ ಆ ತಳಪಾಯವೇ ಅಭದ್ರವಾಗಿದೆ ಎಂದು ಸಮೀಕ್ಷೆಯೊಂದು ಹೇಳುತ್ತಿದೆ.

ಡಾ.ಎಚ್.ಬಿ.ಚಂದ್ರಶೇಖರ್‌
Published 8 ಆಗಸ್ಟ್ 2025, 21:36 IST
Last Updated 8 ಆಗಸ್ಟ್ 2025, 21:36 IST
ಸಂಗತ
ಸಂಗತ   

ರಾಜ್ಯದ ಶಾಲಾ ಶಿಕ್ಷಣದ ಗುಣಮಟ್ಟ ಹೇಗಿದೆ? ಎಲ್ಲವೂ ಸರಿಯಾಗಿಲ್ಲ ಎನ್ನುತ್ತಿದೆ ಒಂದು ರಾಷ್ಟ್ರೀಯ ಸಮೀಕ್ಷೆ. ‘ಪರಾಖ್‌ ರಾಷ್ಟ್ರೀಯ ಸಮೀಕ್ಷೆ’ಯ ವರದಿ ಇತ್ತೀಚೆಗೆ ಪ್ರಕಟ ಗೊಂಡಿದ್ದು, ಶಾಲಾ ಶಿಕ್ಷಣದ ಗುಣಮಟ್ಟ ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದನ್ನು ಗುರ್ತಿಸಿದೆ.

ರಾಜ್ಯದಲ್ಲಿನ ಶಾಲಾ ಶಿಕ್ಷಣದ ಕುಸಿತವನ್ನು ಸಮೀಕ್ಷೆ ಗುರ್ತಿಸಿರುವುದು ಇದು ಮೊದಲೇನಲ್ಲ. ಈ ಮೊದಲು, ‘ರಾಷ್ಟ್ರೀಯ ಸಾಧನಾ ಸಮೀಕ್ಷೆ’ ಹೆಸರಿನಲ್ಲಿ ನಡೆಯುತ್ತಿದ್ದ ಅಧ್ಯಯನಗಳೂ ಶಾಲಾ ಶಿಕ್ಷಣದ ಗುಣಮಟ್ಟ ಕುರಿತು ಕಳವಳಕಾರಿ ಮಾಹಿತಿ ನೀಡಿರುವುದಿದೆ. 2021ರ ನಂತರ ನಡೆದಿರುವ ‘ರಾಷ್ಟ್ರೀಯ ಸಾಧನಾ ಸಮೀಕ್ಷೆ’ಗಳಲ್ಲಿ ರಾಜ್ಯದ ಸಾಧನೆಯ ಮಟ್ಟದಲ್ಲಿ ಕುಸಿತ ಆಗುತ್ತಲೇ ಇದೆ. ಪ್ರಸ್ತುತ, 2024ರಲ್ಲಿ ನಡೆಸಿದ ಸಮೀಕ್ಷೆಯ ವರದಿಯಲ್ಲಿ ರಾಜ್ಯದ ಸಾಧನೆಯ ಕುಸಿತ ತೀವ್ರ ಎನ್ನುವಷ್ಟು ಆಗಿರುವುದನ್ನು ಗಮನಿಸಬಹುದು.

ಪರಾಖ್‌ ರಾಷ್ಟ್ರೀಯ ಸಮೀಕ್ಷೆಯ ವರದಿಯು ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ‘ಪರಾಖ್‌’ನ (parakh.ncert.gov.in/prs-reports-2024) ಜಾಲತಾಣದಲ್ಲಿ ಎಲ್ಲರ ಅವಲೋಕನಕ್ಕೆ ಲಭ್ಯವಿದೆ.

ADVERTISEMENT

ಈ ಸಮೀಕ್ಷೆಯನ್ನು ದೇಶದ ಎಲ್ಲಾ ರಾಜ್ಯಗಳ ಆಯ್ದ ಶಾಲೆಗಳಲ್ಲಿ ನಡೆಸಲಾಗಿದೆ. 3, 6 ಹಾಗೂ 9ನೇ ತರಗತಿಗಳ ಆಯ್ದ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಆಯ್ದುಕೊಳ್ಳಲಾಗಿದೆ. ವಿದ್ಯಾರ್ಥಿಗಳ ಸ್ಮರಣ ಶಕ್ತಿಯ ಬದಲಿಗೆ ಅವರ ಅನ್ವಯಿಕ ಸಾಮರ್ಥ್ಯವನ್ನು ಗುರ್ತಿಸುವುದು ಸಮೀಕ್ಷೆಯ ವಿಶೇಷ.

ಪಂಜಾಬ್, ಕೇರಳ, ಹಿಮಾಚಲ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಒಡಿಶಾ ರಾಜ್ಯಗಳು ಉತ್ತಮ ಸಾಧನೆಯನ್ನು ತೋರಿ, ಪರಾಖ್‌ ಸಮೀಕ್ಷೆಯಲ್ಲಿ ‘ಟಾಪ್ 10’ ಪಟ್ಟಿಯಲ್ಲಿವೆ. ಸಮೀಕ್ಷೆ ಕೈಗೊಂಡ ಮೂರೂ ತರಗತಿಗಳಲ್ಲಿ ಕಡಿಮೆ ಸಾಧನೆ ಮಾಡಿ, ಕೊನೆಯ ಹತ್ತು ರಾಜ್ಯಗಳ ಪಟ್ಟಿಯಲ್ಲಿ ಇರುವ ರಾಜ್ಯಗಳಲ್ಲಿ ಗುಜರಾತ್, ಮೇಘಾಲಯ, ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೇರಿ ಸೇರಿವೆ. ನಮ್ಮ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು 6 ಮತ್ತು 9ನೇ ತರಗತಿಗಳಲ್ಲಿ ಹಾಗೂ ಕರ್ನಾಟಕವು 9ನೇ ತರಗತಿಯಲ್ಲಿ ಕೊನೆಯ 10 ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಅತ್ಯುತ್ತಮ ಸಾಧನೆ ತೋರಿದ ಹಾಗೂ ಕನಿಷ್ಠ ಸಾಧನೆ ತೋರಿದ 50 ಜಿಲ್ಲೆಗಳ ಪಟ್ಟಿಯನ್ನು ಸಮೀಕ್ಷೆಯಲ್ಲಿ ನೀಡಲಾಗಿದೆ. ಉತ್ತಮ ಸಾಧನೆ ತೋರಿದ ಜಿಲ್ಲೆಗಳ ಪಟ್ಟಿಯಲ್ಲಿ ರಾಜ್ಯದ ಯಾವುದೇ ಜಿಲ್ಲೆ ಸ್ಥಾನ ಪಡೆದಿಲ್ಲ. 

ಪಂಜಾಬ್ ರಾಜ್ಯದಲ್ಲಿ 23 ಜಿಲ್ಲೆಗಳಿವೆ. ಅವುಗಳಲ್ಲಿ 20 ಜಿಲ್ಲೆಗಳು 3ನೇ ತರಗತಿಯಲ್ಲಿ, 16 ಜಿಲ್ಲೆಗಳು 6ನೇ ತರಗತಿಯಲ್ಲಿ ಹಾಗೂ 18 ಜಿಲ್ಲೆಗಳು 9ನೇ ತರಗತಿಯಲ್ಲಿ ದೇಶದ ‘ಟಾಪ್ 50’ ಜಿಲ್ಲೆಗಳ ಪಟ್ಟಿಯಲ್ಲಿವೆ. ನೆರೆಯ ಕೇರಳ ರಾಜ್ಯದ 3 ಜಿಲ್ಲೆಗಳು 3ನೇ ತರಗತಿಯಲ್ಲಿ, 10 ಜಿಲ್ಲೆಗಳು 6ನೇ ತರಗತಿಯಲ್ಲಿ ಹಾಗೂ 9 ಜಿಲ್ಲೆಗಳು 9ನೇ ತರಗತಿಯಲ್ಲಿ ದೇಶದ ಟಾಪ್ 50 ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿವೆ.

ರಾಜ್ಯದ ಯಾವುದೇ ಜಿಲ್ಲೆಯು ಟಾಪ್ 50 ಜಿಲ್ಲೆಗಳ ಪಟ್ಟಿಯಲ್ಲಿ ಇಲ್ಲದಿದ್ದರೂ, ಕೊನೆಯ 50 ಜಿಲ್ಲೆಗಳಲ್ಲಿ ಕೆಲವು ಜಿಲ್ಲೆಗಳು ಸ್ಥಾನ ಪಡೆದಿವೆ. 3ನೇ ತರಗತಿಯಲ್ಲಿ ವಿಜಯಪುರ, 6ನೇ ತರಗತಿಯಲ್ಲಿ ಬಳ್ಳಾರಿ ಮತ್ತು ಬೀದರ್ ಹಾಗೂ 9ನೇ ತರಗತಿಯಲ್ಲಿ ಬೀದರ್, ಯಾದಗಿರಿ, ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯು ದೇಶದ ಕೊನೆಯ ಜಿಲ್ಲೆಗಳ ಪಟ್ಟಿಯಲ್ಲಿ ಇವೆ. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿದ ಜಿಲ್ಲೆಗಳೆಂದೇ ಪ್ರಸಿದ್ಧಿ ಪಡೆದಿರುವ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳು ಈ ಸಮೀಕ್ಷೆಯ ಟಾಪ್ 50 ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ!

ಪಂಜಾಬ್ ರಾಜ್ಯವು ಸಾಮರ್ಥ್ಯ ಮತ್ತು ಕಲಿಕಾ ಫಲ ಆಧಾರಿತ ತರಗತಿ ಪ್ರಕ್ರಿಯೆಗೆ ವಿಶೇಷ ಒತ್ತು ನೀಡುತ್ತಿದೆ. ಮೌಲ್ಯಮಾಪನ ಪ್ರಕ್ರಿಯೆಗೆ ವಿಶೇಷ ಆದ್ಯತೆ ನೀಡುವುದರ ಜೊತೆಗೆ, ಅನೇಕ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಸುಧಾರಣೆಗಳನ್ನು ಜಾರಿಗೊಳಿಸಿದೆ. ಅದೆಲ್ಲದರ ಫಲವಾಗಿ ಶಾಲಾ ಶಿಕ್ಷಣದಲ್ಲಿ ಪಂಜಾಬ್‌ ದೇಶದ ಗುರಿ ಸಾಧನೆ ಉತ್ತಮವಾಗಿದೆ. ಅಲ್ಲಿನ ಶೈಕ್ಷಣಿಕ ಸುಧಾರಣೆಗಳನ್ನು ಮಾದರಿಯ ರೂಪದಲ್ಲಿ ನಾವು ಗಮನಿಸಬಹುದಾಗಿದೆ.

ರಾಜ್ಯದಲ್ಲಿ ಶಾಲಾ ಶಿಕ್ಷಣದ ಗುಣಮಟ್ಟಕ್ಕೆ ಅನೇಕ ಕಾರಣಗಳಿರಬಹುದು. ಆ ಕಾರಣಗಳನ್ನು ಗುರ್ತಿಸುವ ಕೆಲಸ ಮೊದಲು ಆಗಬೇಕು. ನಂತರದ ಹಂತದಲ್ಲಿ ಚಿಕಿತ್ಸಾತ್ಮಕ ಕ್ರಮಗಳನ್ನು ಜಾರಿಗೊಳಿಸಿ, ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಬೇಕಾಗಿದೆ.

ಪೂರ್ಣಕಾಲಿಕ ಶಿಕ್ಷಕರ ನೇಮಕಾತಿಯನ್ನು ಮಾಡುವುದು ಶಿಕ್ಷಣದ ಗುಣಮಟ್ಟ ಉತ್ತಮಗೊಳಿಸುವ ನಿಟ್ಟಿನಲ್ಲಿ ಜರೂರಾಗಿ ಆಗಬೇಕಿರುವ ಕೆಲಸ. ಹಾಗೆಯೇ, ಶಿಕ್ಷಕರ ಬೋಧಕೇತರ ಕಾರ್ಯಗಳ ಹೊರೆ ಇಳಿಸುವುದೂ ಬಹಳ ಮುಖ್ಯ.

ಶಿಕ್ಷಕರನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗುವಂತೆ ಮಾಡಿ, ಶೈಕ್ಷಣಿಕ ಸುಧಾರಣೆ ನಿರೀಕ್ಷಿಸುವುದು ಸರಿಯಲ್ಲ, ಕಾರ್ಯಸಾಧುವೂ ಅಲ್ಲ. ಕಲಿಕಾ ಫಲ ಆಧಾರಿತ ತರಗತಿ ಪ್ರಕ್ರಿಯೆಯೂ ನಿರಂತರವಾಗಿ ನಡೆಯಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.