
ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಹಾಗೂ ಎಳೆಯ ತಲೆಮಾರಿಗೆ ವಿಜ್ಞಾನ–ತಂತ್ರಜ್ಞಾನದ ಬಗ್ಗೆ ಅರಿವು–ಆಸಕ್ತಿ ಮೂಡಿಸುವಲ್ಲಿ ದೇಶದ ಪ್ರತಿಷ್ಠಿತ ಸಂಸ್ಥೆ ‘ಇಸ್ರೋ’ದ ಕೊಡುಗೆ ದೊಡ್ಡದು. ಆದರೆ, ಇತ್ತೀಚಿನ ಕೆಲವು ಬೆಳವಣಿಗೆಗಳು ಇಸ್ರೋದ ಖ್ಯಾತಿಗೆ ತಕ್ಕುದಾಗಿಲ್ಲ.
ವಿಕ್ರಂ ಸಾರಾಬಾಯಿ ಅವರು ತಮ್ಮ ಆಸಕ್ತಿ, ಬದ್ಧತೆ ಮತ್ತು ಪರಿಶ್ರಮದಿಂದ ಈ ಸಂಸ್ಥೆಯನ್ನು ಕಟ್ಟಿದರು. ನಂತರ ಸತೀಶ್ ಧವನ್ ಸೇರಿದಂತೆ ಅನೇಕ ಗಣ್ಯರು ಇಸ್ರೋ ಅಧ್ಯಕ್ಷರಾಗಿ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಕನ್ನಡಿಗರೇ ಆದ ಪ್ರೊ. ಯು.ಆರ್. ರಾವ್ ಅವರು ಇಸ್ರೋಗೆ ನೀಡಿದ ಕೊಡುಗೆ ಅನನ್ಯ. ದೇಶದ ಹಾಗೂ ನಾಗರಿಕರ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವಲ್ಲಿ ಇಸ್ರೋ ಪರಿಶ್ರಮ ಹಾಗೂ ಸಾಧನೆ ಅಪಾರ. ಆದರೆ, ಇತ್ತೀಚಿನ ಇಸ್ರೋ ಮುಖ್ಯಸ್ಥರ ನಡವಳಿಕೆ ಪ್ರಶ್ನೆಗಳಿಗೆ ಆಸ್ಪದವನ್ನು ಕಲ್ಪಿಸುವಂತಿದೆ.
ಯಾವುದಾದರೂ ಪ್ರಮುಖ ಯೋಜನೆಯನ್ನು ಕೈಗೆತ್ತಿಕೊಂಡಾಗ ಅದರ ಮಾದರಿಯೊಂದಿಗೆ ತಿರುಪತಿಗೆ ಭೇಟಿ ನೀಡಿ ಪೂಜೆ ಮಾಡಿಸುವುದು ಇತ್ತೀಚೆಗೆ ಅಭ್ಯಾಸವಾಗಿದೆ. ಇಸ್ರೋ ಅಧ್ಯಕ್ಷರಾಗಿದ್ದ ರಾಧಾಕೃಷ್ಣನ್, ಉಪಗ್ರಹ ಮಾದರಿಯೊಂದಿಗೆ ತಿರುಪತಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದರು. ಅನೇಕರು ಆ ಅವೈಜ್ಞಾನಿಕ ನಡೆಯನ್ನು ಪ್ರಶ್ನಿಸಿದರೂ, ಮುಂದೆಯೂ ಪೂಜಾ ಪರಂಪರೆ ಮುಂದುವರಿಯಿತು. ಪ್ರಸ್ತುತ ಇಸ್ರೋ ಅಧ್ಯಕ್ಷರಾಗಿರುವ ಡಾ. ವಿ. ನಾರಾಯಣನ್ ಕೂಡ ಅದೇ ದಾರಿಯಲ್ಲಿ ನಡೆದಿದ್ದಾರೆ. ‘ಬ್ಲೂಬರ್ಡ್ ಬ್ಲಾಕ್–2 ಸಂವಹನ ಉಪಗ್ರಹ’ದ ಉಡ್ಡಯನ ಯಶಸ್ವಿಯಾಗಲೆಂದು ಅವರು ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಉಪಗ್ರಹದ ಪ್ರತಿಕೃತಿಯನ್ನೂ ಕೊಂಡೊಯ್ದು ಪೂಜೆ ಸಲ್ಲಿಸಿರುವುದಾಗಿ ವರದಿಯಾಗಿದೆ.
ಒಂದು ಉಪಗ್ರಹವನ್ನು ಉಡ್ಡಯನ ಮಾಡಲು ಇಸ್ರೋದ ಸಾವಿರಾರು ವಿಜ್ಞಾನಿಗಳು ಹಾಗೂ ತಂತ್ರಜ್ಞರು ಕೆಲಸ ಮಾಡುತ್ತಾರೆ. ಅವರು ವಿಭಿನ್ನ ಭಾಷೆ, ಧರ್ಮಕ್ಕೆ ಸೇರಿದವರಾಗಿರುತ್ತಾರೆ ಮತ್ತು ತಮ್ಮದೇ ಆದ ನಂಬಿಕೆಗಳನ್ನು ಹೊಂದಿರುತ್ತಾರೆ. ಇಸ್ರೋದ ಒಂದು ಕಾರ್ಯಕ್ರಮ ಯಶಸ್ವಿಯಾಗುವುದರ ಹಿಂದೆ ಹಲವು ವಿಜ್ಞಾನಿಗಳು, ತಂತ್ರಜ್ಞರ ಪರಿಶ್ರಮ ಇರುತ್ತದೆ. ಯಶಸ್ವಿಯಾಗದಿದ್ದರೂ ಅದರ ಕಾರಣವನ್ನು ಹುಡುಕಿ ಮುಂದೆ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹೀಗಿರುವಾಗ, ಇಸ್ರೋ ಅಧ್ಯಕ್ಷರು ತಿಮ್ಮಪ್ಪನ ಸನ್ನಿಧಿಗೆ ಹೋಗಿ ಪೂಜೆ ಮಾಡಿಸುವುದು ಇಸ್ರೋದ ಅಸಂಖ್ಯ ತಂತ್ರಜ್ಞರ ಪರಿಶ್ರಮವನ್ನು ಪ್ರಶ್ನಿಸಿದಂತಾಗಿದೆ.
ಇಸ್ರೋದಂತಹ ಜಗತ್ ಪ್ರಸಿದ್ಧ ಸಂಸ್ಥೆಯ ಮುಖ್ಯಸ್ಥರು ಸಮಾಜಕ್ಕೆ ವೈಜ್ಞಾನಿಕ ಮನೋಭಾವದ ಸಂದೇಶ ನೀಡುವಂತೆ ನಡೆದುಕೊಳ್ಳಬೇಕು. ಇಸ್ರೋದ ನಿಯಮಗಳಲ್ಲಿ ತಿರುಪತಿಗೆ ಹೋಗಿ ಪೂಜಿಸಬೇಕೆಂಬ ಸೂಚನೆ ಇದೆಯೆ? ಇದಕ್ಕಾಗಿ ಅವರು ವ್ಯಯಿಸುವ ಸಮಯ, ಮಾಡುವ ವೆಚ್ಚವನ್ನು ಯಾರು ಭರಿಸುತ್ತಾರೆ? ಒಂದು ವೇಳೆ ಅವರೇ ಭರಿಸಿದರೂ ಇಸ್ರೋ ಮುಖ್ಯಸ್ಥರಾಗಿ ಅವರ ಈ ನಡೆ ಸರಿಯೇ? ಈ ಪ್ರಶ್ನೆಗಳ ಜೊತೆಗೆ, ಯೋಜನೆಯ ಯಶಸ್ಸಿಗೆ ವಿಜ್ಞಾನಿಗಳ ಪರಿಶ್ರಮ ಗುರ್ತಿಸಬೇಕೋ ಅಥವಾ ತಿಮ್ಮಪ್ಪನ ಕೃಪೆಯನ್ನೋ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ.
ಈ ಮೊದಲು ಇಸ್ರೋದ ವಿಜ್ಞಾನಿಗಳು ಶಾಲೆ–ಕಾಲೇಜುಗಳಿಗೆ ತೆರಳಿ ಉಪನ್ಯಾಸ ನೀಡುತ್ತಾ ಇಸ್ರೋದ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿದ್ದರು. ಈಚೆಗೆ ಅಂಥ ಕಾರ್ಯಕ್ರಮಗಳು ವಿರಳವಾಗಿವೆ. ಇತ್ತೀಚೆಗೆ ಇಸ್ರೋ ವಿಜ್ಞಾನಿಗಳು ಜನರಿಂದ ದೂರವಾಗಿ ಜನಾರ್ದನನ ಕಡೆಗೆ ಮುಖ ಮಾಡಿರುವುದು ವಿಪರ್ಯಾಸ.
ಇಸ್ರೋ ಮುಖ್ಯಸ್ಥರಿಗೆ ಪ್ರೇರಣೆ ಎಂಬಂತೆ ಅನೇಕ ಘಟನೆಗಳೂ ನಡೆಯುತ್ತಿವೆ. ದೇಶದ ಪ್ರಧಾನಿಗಳು ನೂತನ ಸಂಸತ್ ಭವನದ ಉದ್ಘಾಟನೆಯಲ್ಲಿ ಧಾರ್ಮಿಕ ಪ್ರಕ್ರಿಯೆಗಳನ್ನು ನಡೆಸಿದರು. ಅನೇಕ ಸರ್ಕಾರಿ ಯೋಜನೆಗಳ ಉದ್ಘಾಟನೆಯಲ್ಲಿ, ಭೂಮಿ ಪೂಜೆಯ ಹೆಸರಿನಲ್ಲಿ ವಿಧಿವಿಧಾನಗಳು ನಡೆಯುತ್ತಿವೆ. ಜಲಾಶಯಗಳು ಭರ್ತಿ ಯಾದ ಕೂಡಲೇ ಮಂತ್ರಿ ಮಹೋದಯರು ಬಾಗಿನ ಅರ್ಪಿಸಿ ಪೂಜೆಗೈದು ಸಂಭ್ರಮಿಸುತ್ತಾರೆ. ಇದಕ್ಕೆಲ್ಲ ಸಾರ್ವಜನಿಕರ ಹಣ ಖರ್ಚಾಗುತ್ತಿದೆ.
ಸರ್ಕಾರಿ ಶಾಲೆ–ಕಾಲೇಜುಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ದೇವರ ಫೋಟೋ ಇಟ್ಟು ಪೂಜಿಸುವುದುಂಟು. ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ, ಶೌಚಾಲಯ, ಆಟದ ಮೈದಾನ ಮತ್ತು ಆಟದ ಸಾಮಗ್ರಿಗಳು, ಅದನ್ನು ನಿರ್ವಹಿಸುವ ಸಿಬ್ಬಂದಿ ಇರಬೇಕಾದ್ದು ಅಪೇಕ್ಷಣೀಯ. ಆದರೆ ಅವುಗಳ ಕಡೆಗೆ ಸರ್ಕಾರದ ಗಮನ ನಿರಾಶಾದಾಯಕವಾಗಿದೆ. ಶಾಲೆಗಳಲ್ಲಿ ನಡೆಯುವ ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿಗಳಿಗೆ ಒಂದು ಪ್ರೋಟೋಕಾಲ್ ಇದ್ದಂತಿಲ್ಲ. ತೆಂಗಿನಕಾಯಿ ಒಡೆದು, ಬಾಳೆಹಣ್ಣು ಇಟ್ಟು ಪೂಜಿಸುವುದೇ ಆಚರಣೆಯಾಗಿದೆ. ವೈಯಕ್ತಿಕ ನಂಬಿಕೆ ಹಾಗೂ ಸಾರ್ವಜನಿಕ ಕೆಲಸಗಳ ನಡುವೆ ಅಂತರವೇ ಇಲ್ಲದಂತಾಗಿದೆ. ನಾವು ಮಾಡುವ ಕೆಲಸವನ್ನು ಬದ್ಧತೆ, ಪ್ರಾಮಾಣಿಕತೆಯಿಂದ ಮಾಡಿದರೆ ಅದಕ್ಕಿಂತ ದೊಡ್ಡ ಪೂಜೆಯಿಲ್ಲ.
ಸಂವಿಧಾನದ 51ಎ(ಎಚ್) ಪ್ರಕಾರ, ವೈಜ್ಞಾನಿಕ ಮನೋಭಾವ ಬೆಳೆಸುವುದು ಭಾರತದ ನಾಗರಿಕರ ಕರ್ತವ್ಯ. ಇದಕ್ಕೆ ವಿರೋಧವಾಗಿ, ದೇಶದ ಅತ್ಯುನ್ನತ ವಿಜ್ಞಾನ ಸಂಸ್ಥೆಯ ಮುಖ್ಯಸ್ಥರು ನಡೆದುಕೊಳ್ಳಬಹುದೆ?
⇒ ಲೇಖಕ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.