ADVERTISEMENT

ಸಂಗತ | ಶಾರ್ಕ್ ಶಿಕಾರಿ: ತಡೆಗೆ ಬೇಕು ರಹದಾರಿ

ಈವರೆಗೆ ಆರ್ಥಿಕವಾಗಿ ಹಿಂದುಳಿದವರ ಸಮುದ್ರ ಆಹಾರವೆನಿಸಿದ್ದ ಶಾರ್ಕ್, ಈಗ ಸ್ಥಿತಿವಂತರ ಆಹಾರವಾಗಿ ಬದಲಾಗುತ್ತಿರುವುದು ಪರಿಸರಾಸಕ್ತರ ಆತಂಕಕ್ಕೆ ಕಾರಣವಾಗಿದೆ

ಗುರುರಾಜ್ ಎಸ್.ದಾವಣಗೆರೆ
Published 16 ಫೆಬ್ರುವರಿ 2024, 0:30 IST
Last Updated 16 ಫೆಬ್ರುವರಿ 2024, 0:30 IST
   

ರಾಜ್ಯದ ಅನೇಕ ಪಟ್ಟಣ, ಅರೆಪಟ್ಟಣ ಮತ್ತು ಹೆದ್ದಾರಿ ಬದಿಯ ಹೋಟೆಲ್‌ಗಳ ಮುಂದೆ ‘ಊಟ ತಯಾರಿದೆ’, ‘ಮುದ್ದೆ ಊಟ ದೊರಕುತ್ತದೆ’, ‘ಆಂಧ್ರ ಸ್ಟೈಲ್’, ‘ನಾಟಿ ಸ್ಟೈಲ್ ಊಟ ತಯಾರಿದೆ’ ಎಂಬಂಥ ಬರಹಗಳ ಬೋರ್ಡ್‌ಗಳನ್ನು  ಕಾಣುತ್ತಿರುತ್ತೇವೆ. ಹಾಗೆಯೇ ದೇಶದಲ್ಲಿ ಕರಾವಳಿ ಇರುವ ರಾಜ್ಯಗಳ ಸಮುದ್ರ ತಟದ ಹೋಟೆಲ್‌ಗಳ ಮುಂದೆ ‘ಬೇಬಿ ಶಾರ್ಕ್ ಊಟ ದೊರಕುತ್ತದೆ’ ಎಂಬ ಬೋರ್ಡ್‌ಗಳು ರಾರಾಜಿಸುತ್ತಿವೆ.

ಇದರಲ್ಲೇನು ವಿಶೇಷ ಅಂತೀರಾ? ತೀರಾ ಇತ್ತೀಚಿನವರೆಗೂ ಬರೀ ಮೀನುಗಾರ ಕುಟುಂಬಗಳ ಅಡುಗೆ ಮನೆಗಳಲ್ಲಿ ಆಹಾರವಾಗಿ ತಯಾರಾಗುತ್ತಿದ್ದ ಶಾರ್ಕ್‌ಗಳೀಗ ರೆಸ್ಟೊರೆಂಟ್‌ಗಳ ಮೆನ್ಯೂ ಕಾರ್ಡಿನಲ್ಲೂ ಕಾಣಿಸಿಕೊಳ್ಳುತ್ತಿವೆ. ಸಾಂಪ್ರದಾಯಿಕ ಆಹಾರಶೈಲಿಯ ಭಾಗವಾಗಿದ್ದ ಶಾರ್ಕ್ ಮಾಂಸ ಈಗ ಮುಕ್ತ ಮಾರುಕಟ್ಟೆ ಯನ್ನು ಪ್ರವೇಶಿಸುತ್ತಿದೆ. ಕರಾವಳಿ ಇರುವ 10 ರಾಜ್ಯಗಳ ಸಮುದ್ರತಟದ ಹೋಟೆಲ್‌ಗಳು ಆನ್‌ಲೈನ್‌ನಲ್ಲೂ ಶಾರ್ಕ್ ಮಾಂಸ ಮಾರಾಟ ಮಾಡುತ್ತಿವೆ.

ಹಿಂದಿನ 50 ವರ್ಷಗಳಲ್ಲಿ ವಿಶ್ವದ ಶೇಕಡ 70ರಷ್ಟು ಶಾರ್ಕ್‌ಗಳ ಸಂಖ್ಯೆ ಕುಸಿದಿರುವುದು ಸಂರಕ್ಷಣಾ ತಜ್ಞರ ನಿದ್ದೆಗೆಡಿಸಿರುವ ಬೆನ್ನಲ್ಲೇ ಶಾರ್ಕ್‌ಗಳು ಹೋಟೆಲ್‌ಗಳಲ್ಲಿ ಮಾಂಸದ ಖಾದ್ಯವಾಗಿ ಮಾರಾಟವಾಗುವುದು ಹೊಸ ಪಾರಿಸರಿಕ ಅಸಮತೋಲನಕ್ಕೆ ಕಾರಣವಾಗು ತ್ತದೆ ಎಂಬ ಆತಂಕ ಎದುರಾಗಿದೆ. ನಮ್ಮಲ್ಲಿ ಕೆಲವು ಪ್ರಭೇದದ ಶಾರ್ಕ್‌ಗಳ ಮಾಂಸ ಮಾರಾಟ ನಿಷೇಧ ಇರುವಾಗಲೇ ಶಾರ್ಕ್‌ಗಳಿಂದ ತಯಾರಾದ ಆಹಾರ ರಾಜಾರೋಷವಾಗಿ ಮಾರಾಟವಾಗುತ್ತಿರುವುದು ಪರಿಸರಾಸಕ್ತರಲ್ಲಿ ಗೊಂದಲ ಮೂಡಿಸಿದೆ.

ADVERTISEMENT

ನಮ್ಮಲ್ಲಿ 170 ಬಗೆಯ ಶಾರ್ಕ್ ಪ್ರಭೇದಗಳಿದ್ದು ಶೇಕಡ 11ರಷ್ಟು ಈಗಾಗಲೇ ಅಳಿವಿನಂಚಿಗೆ ಸರಿದಿವೆ ಎಂದು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಐಯುಸಿಎನ್) ವರದಿ ಮಾಡಿದೆ. ಇದುವರೆಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಸಮುದ್ರ ಆಹಾರವೆನಿಸಿದ್ದ ಶಾರ್ಕ್ ಈಗ ಸ್ಥಿತಿವಂತರ ಆಹಾರವಾಗಿ ಬದಲಾಗುತ್ತಿರುವುದು ಸಂರಕ್ಷಣಾ ಕ್ರಮಗಳಿಗೆ ತೀವ್ರ ಸವಾಲು ಒಡ್ಡಲಿದೆ. ಸಮೀಕ್ಷೆಯೊಂದರ ಪ್ರಕಾರ, ವಾರ್ಷಿಕ 250 ಟನ್ ಶಾರ್ಕ್ ಮಾಂಸ ಮಾರಾಟವಾಗುವ ಸಾಧ್ಯತೆಯಿದೆ. ಸುಮಾರು 3 ಕಿಲೊ ಗ್ರಾಂ ತೂಗುವ ಶಾರ್ಕ್ ಮರಿಗಳ ಮಾಂಸ, ತಿನ್ನುವವರ ಬಾಯಲ್ಲಿ ನೀರೂರಿಸುವುದ ರಿಂದ ತಿಂಗಳಿಗೆ ಸುಮಾರು 20 ಸಾವಿರ ಬೇಬಿ ಶಾರ್ಕ್‌ಗಳು ಭೋಜನಪ್ರಿಯರ ಹೊಟ್ಟೆ ಸೇರಲಿವೆ.

ಮೀನು ಶಿಕಾರಿ ಮಾಡುವಾಗ ಉಪ ಉತ್ಪನ್ನವಾಗಿ ದೊರಕುವ ಶಾರ್ಕ್‌ಗಳನ್ನು ಮೀನುಗಾರರು ತಾವು ಮಾತ್ರ ತಿನ್ನುತ್ತಿದ್ದರು. ಈಗ ಪ್ರವಾಸಿಗರಂತೂ ಶಾರ್ಕ್ ಮಾಂಸ ಬಡಿಸುವ ಐಷಾರಾಮಿ ಹೋಟೆಲ್‌ಗಳಲ್ಲಿ ಮುಂಗಡವಾಗಿ ಟೇಬಲ್ ಬುಕ್ ಮಾಡುತ್ತಿದ್ದಾರೆ.

ಅಶೋಕ ವಿಶ್ವವಿದ್ಯಾಲಯದ ಪರಿಸರ ವಿಭಾಗದ ಅಧ್ಯಾಪಕಿ ದಿವ್ಯ ಕಾರ್ನಾಡ್, ದೊಡ್ಡ ದೊಡ್ಡ ಹೋಟೆಲ್‌ಗಳ ‘ಮೆನ್ಯೂ ಕಾರ್ಡ್’ಗಳಲ್ಲಿ ಶಾರ್ಕ್ ಮಾಂಸ ಕಾಣಿಸಿಕೊಂಡಿರುವುದನ್ನು ಗಂಭೀರವಾಗಿ ಅಭ್ಯ
ಸಿಸುತ್ತಿದ್ದಾರೆ. ‘ನಾವು ಈ ಕೂಡಲೇ ಮೀನುಗಾರರನ್ನು ಕಂಡು, ನೀವು ಶಾರ್ಕ್‌ಗಳನ್ನು ಹೋಟೆಲ್‌ನವರಿಗೆ ಮಾರಕೂಡದು ಎಂದು ಹೇಳುವುದು ಸರಿಯಲ್ಲ. ಅದರ ಬದಲಿಗೆ ಅವರು ಏನು ಮಾಡಬಹುದು ಎಂಬುದನ್ನು ಹೇಳಿದರೆ ಪರಿಸ್ಥಿತಿ ಸುಧಾರಿಸಬಹುದು’ ಎನ್ನುತ್ತಾರೆ. ಹಣವಂತರು ‘ನಾವು ಅದನ್ನೇ ತಿನ್ನಲು ಬಯಸುತ್ತೇವೆ, ಬೇರೆಯದು ಬೇಡ’ ಎಂದು ಹಟ ಹಿಡಿದರೆ ಅದು ದೊಡ್ಡ ಸಮಸ್ಯೆ ಆಗುತ್ತದೆ’ ಎನ್ನುತ್ತಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿ ಹೆಸರಿಸಿರುವ ಪ್ರಭೇದಗಳನ್ನು ಹೊರತುಪಡಿಸಿ ಬಹಳ ಹಿಂದಿನಿಂದಲೂ ಕರಾವಳಿ ಪ್ರದೇಶದ ಜನ ಶಾರ್ಕ್‌ಗಳನ್ನು ತಿನ್ನುತ್ತಿದ್ದಾರೆ. ಸಂಶೋಧಕರು ಗೋವಾ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಏಳು ರಾಜ್ಯಗಳ 292 ರೆಸ್ಟೊರೆಂಟ್‌ಗಳ ಮೆನ್ಯೂ ಕಾರ್ಡ್ ಪರಿಶೀಲಿಸಿದಾಗ, ಗೋವಾದಲ್ಲಿ ಅತಿ ಹೆಚ್ಚು ‘ಎಲಾಸ್ಮೋಬ್ರಾಂಚ್’ (ಮೀನು, ಸ್ಟಿಂಗ್ ರೇ ಮತ್ತು ಶಾರ್ಕ್) ಎಂಬ ಗುಂಪಿಗೆ ಸೇರಿದ ಶಾರ್ಕ್ ಮಾಂಸ ಮಾರಾಟವಾಗುವುದು ಕಂಡುಬಂದಿದೆ.

ವಿದೇಶಿ ಪ್ರವಾಸಿಗರು ‘ಬೇಬಿ ಶಾರ್ಕ್‌ಗಳ ಮಾಂಸದ ರುಚಿ ಅನನ್ಯ ಮತ್ತು ಇದು ನಮ್ಮ ದೇಶದಲ್ಲಿ ಸುಲಭವಾಗಿ ದೊರಕದ್ದರಿಂದ ಇಲ್ಲಿ ಆಸೆಪಟ್ಟು ತಿನ್ನುತ್ತೇವೆ’ ಎನ್ನುತ್ತಾರೆ. ಜನ ಇತ್ತೀಚೆಗೆ ಪ್ರತಿ ಆಹಾರದಲ್ಲೂ ಪೋಷಕಾಂಶ ಹುಡುಕುವುದನ್ನು ರೂಢಿಸಿಕೊಂಡಿದ್ದಾರೆ. ಶಾರ್ಕ್ ಮಾಂಸ ತಿಂದರೆ ತಾಯಿಯ ಎದೆ ಹಾಲು ವೃದ್ಧಿಸುತ್ತದೆ, ಇತರ ಪೋಷಕಾಂಶಗಳು ದೊರಕುತ್ತವೆ ಎಂಬ ಗ್ರಹಿಕೆಯಿಂದ ಅದರ ಮಾಂಸ ಸೇವನೆ ಹೆಚ್ಚಾಗುತ್ತಿದೆ.

ಇದಕ್ಕಿಂತ ದೊಡ್ಡ ಅಪಾಯವಾದ ‘ಶಾರ್ಕ್ ಫಿನ್ನಿಂಗ್’ ಎಲ್ಲ ಬಗೆಯ ಶಾರ್ಕ್‌ಗಳನ್ನೂ ಬಾಧಿಸುತ್ತಿದೆ. ಐಷಾರಾಮಿ ಹೋಟೆಲ್‌ಗಳಲ್ಲಿ ‘ಶಾರ್ಕ್ ಫಿನ್ ಸೂಪ್’ಗೆ ಭಾರಿ ಬೇಡಿಕೆ ಇರುವುದರಿಂದ ಶಾರ್ಕ್‌ನ ರೆಕ್ಕೆಗಳನ್ನು ಕತ್ತರಿಸಿಕೊಂಡು ಬಳಿಕ ಅದನ್ನು ನಿರ್ದಾಕ್ಷಿಣ್ಯವಾಗಿ ಸಮುದ್ರಕ್ಕೆ ಬಿಸಾಡಲಾಗುತ್ತದೆ. ಅದು ವಿಪರೀತ ಯಾತನೆಯಿಂದ ಬಳಲಿ ನಿಧಾನವಾಗಿ ಸಾವನ್ನಪ್ಪುತ್ತದೆ. ಒಂದು ಬಟ್ಟಲು ಶಾರ್ಕ್ ಫಿನ್ ಸೂಪಿಗೆ ಇನ್ನೂರು ಡಾಲರ್‌ನಷ್ಟು ದುಬಾರಿ ಬೆಲೆ ಇದ್ದರೂ ಅದನ್ನು ಕುಡಿಯುವವರ ಸಂಖ್ಯೆ ಕಡಿಮೆಯೇನಿಲ್ಲ. ಇದಕ್ಕಾಗಿ ವರ್ಷವೊಂದಕ್ಕೆ ಸುಮಾರು ಏಳು ಕೋಟಿಗೂ ಹೆಚ್ಚು ಶಾರ್ಕ್‌ಗಳು ಬಲಿಯಾಗುತ್ತಿವೆ.

ಒಂದೆಡೆ, ಎಳೆಯ ಮರಿಗಳು ಊಟದ ತಟ್ಟೆ ಸೇರಿದರೆ, ಇನ್ನೊಂದೆಡೆ, ಬಲಿತ ಶಾರ್ಕ್‌ಗಳು ಮನುಷ್ಯನ ಅಕ್ಷಮ್ಯ ಕ್ರೌರ್ಯಕ್ಕೆ ಬಲಿಯಾಗುತ್ತಿವೆ. ಕಾನೂನಿನಿಂದ ಇದನ್ನೆಲ್ಲಾ ತಡೆಯಲು ಸಾಧ್ಯವಿಲ್ಲ; ನಮ್ಮ ಅಂತಃಕರಣ ಜಾಗೃತವಾಗಬೇಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.