ADVERTISEMENT

ಬಂಧನದ ಬೆಸುಗೆಗೊಂದು ಒಸಗೆ

ಕೊರೊನಾ ತಂದ ಕಂಟಕಗಳ ನಡುವೆಯೂ ಆಡಂಬರದ ಮದುವೆಗಳು ತತ್ಕಾಲಕ್ಕಾದರೂ ನಿಯಂತ್ರಣಕ್ಕೆ ಬಂದವೆಂಬುದು ಸಮಾಧಾನದ ಸಂಗತಿ

ಡಾ.ಸಿಬಂತಿ ಪದ್ಮನಾಭ ಕೆ.ವಿ.
Published 6 ಅಕ್ಟೋಬರ್ 2020, 19:30 IST
Last Updated 6 ಅಕ್ಟೋಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂತಹ ಮದುವೆ ನೋಡದೆ ವರ್ಷಗಳೆಷ್ಟಾದವು ಅಂತನ್ನಿಸಿತ್ತು. ಅಬ್ಬಬ್ಬಾ ಎಂದರೆ ಐವತ್ತರ ಆಸುಪಾಸಿನಲ್ಲಿದ್ದರು ಜನ. ಆದರೂ ಮದುವೆ ಮನೆಯ ಗದ್ದಲ ಒಂದು ಫರ್ಲಾಂಗಿನಾಚೆಗೂ ಕೇಳಿಸುತ್ತಿತ್ತು. ಹಾಗೆಂದು ಧ್ವನಿವರ್ಧಕ, ಬ್ಯಾಂಡು, ವಾಲಗ ಇರಲಿಲ್ಲ. ಮನೆಯ ಸುತ್ತ ಆಲಂಕಾರಿಕ ವಿದ್ಯುದ್ದೀಪಗಳು ಝಗಮಗಿಸುತ್ತಿರಲಿಲ್ಲ. ಮನೆಯೆದುರು ಸಣ್ಣದೊಂದು ಶಾಮಿಯಾನ ಇತ್ತು. ಪ್ರವೇಶದ್ವಾರದಲ್ಲಿ ಎರಡು ಬಾಳೆ ಕಂದು, ಮಾವಿನೆಲೆಯ ಪುಟ್ಟ ತೋರಣ.

ಚಪ್ಪರದ ತುಂಬ ನಗು, ಮಾತು, ಗೌಜು ಗದ್ದಲ. ಇದ್ದದ್ದು ತೀರಾ ಹತ್ತಿರದ ಬಂಧುಬಳಗ ಮಾತ್ರ. ಹಳಬರು ಹಳೆ ಕಥೆಗಳನ್ನು ಬಿಚ್ಚುತ್ತಿದ್ದರೆ, ಹೊಸಬರು ಹೊಸ ಕನಸು ಕಟ್ಟಿಕೊಂಡು ಓಡಾಡುತ್ತಿದ್ದರು. ದಿನವಿಡೀ ಮಾತು, ತಮಾಷೆ, ಕೀಟಲೆ, ಮಧ್ಯಾಹ್ನಕ್ಕೆ ಬಂಧುಬಳಗವೇ ಬಡಿಸಿದ ಹಿತಮಿತ ಊಟ. ಮದುವೆ ಗಂಡು-ಹೆಣ್ಣು ಬಿಡುವಾಗಿ, ನಿರಾಳವಾಗಿ, ಬಂದವರ ಕ್ಷೇಮ ಸಮಾಚಾರ ವಿಚಾರಿಸಿಕೊಂಡು ಓಡಾಡುತ್ತಿದ್ದರು. ಹಳ್ಳಿ ಮನೆಯಾದ್ದರಿಂದ ಮಧ್ಯಾಹ್ನ ದಾಟುವ ಹೊತ್ತಿಗೆ ಪಕ್ಕದ ಹೊಲಗಳಿಂದ ನವಿಲಿನ ಜೋಡಿಯೊಂದು ಬಂದು ಅಂಗಳದಾಚೆ ನರ್ತನಕ್ಕೇ ನಿಂತುಬಿಟ್ಟಿತು- ಹೇಳಿ ಕರೆಸಿದ ಹಾಗೆ. ಕೊರೊನಾ ನಿಜವಾಗಿಯೂ ಎಂತಹ ಮದುವೆ ಉಡುಗೊರೆ ನೀಡಿಹೋಯಿತಲ್ಲ ಎಂದನ್ನಿಸಿಬಿಟ್ಟಿತು.

ಮನೆಯಲ್ಲಿ ಮದುವೆ ನಿಶ್ಚಯವಾಯಿತೆಂದರೆ ಅದರೊಂದಿಗೆ ಚಿಂತೆಯೇ ಉಡುಗೊರೆಯಾಗಿ ಬರುವ ಕಾಲವಿದು. ಉಳಿದ ಖರ್ಚುಗಳೆಲ್ಲ ಒತ್ತಟ್ಟಿಗಿರಲಿ, ಮದುವೆ ಆಸುಪಾಸಿನ ಒಂದೆರಡು ದಿನಗಳ ಖರ್ಚೇ ಹೈರಾಣಾಗಿಸುವುದಿದೆ. ಜೀವಮಾನವಿಡೀ ಕೂಡಿಟ್ಟ ಉಳಿತಾಯ, ಹೊಲ, ಸೈಟ್ ಮಾರಿಸುವ ಮದುವೆಯೆಂಬುದು ಮಧ್ಯಮವರ್ಗದ ಅನೇಕರಿಗೆ ಒಂದು ದುಃಸ್ವಪ್ನ. ದೊಡ್ಡ ಚೌಲ್ಟ್ರಿ ಗೊತ್ತುಮಾಡಬೇಕು, ಆಮಂತ್ರಣ ಪತ್ರಿಕೆಯಲ್ಲೇ ತಮ್ಮ ಸ್ಥಾನಮಾನಗಳು ಪ್ರತಿಫಲಿಸಬೇಕು, ಊಟದ ಮೆನು ಮಾರುದ್ದ ಇರಬೇಕು, ಪ್ರಿ-ವೆಡ್ಡಿಂಗ್, ಪೋಸ್ಟ್-ವೆಡ್ಡಿಂಗ್ ಫೋಟೊ ಶೂಟುಗಳಾಗಬೇಕು, ಛತ್ರವನ್ನು ಲೋಡುಗಟ್ಟಲೆ ಹೂವು, ವಿದ್ಯುದ್ದೀಪಗಳಿಂದ ಸಿಂಗರಿಸಬೇಕು...

ADVERTISEMENT

ಬಹುತೇಕ ಮದುವೆಗಳು ನಡೆಯುವುದು ಹೀಗೆ. ಎಲ್ಲರೂ ಒಂದೊಂದು ಅಡಾವುಡಿಯಲ್ಲಿ ಕಳೆದುಹೋಗಿರುತ್ತಾರೆ. ವ್ಯವಸ್ಥೆಗಳ ನಿರ್ವಹಣೆಯಲ್ಲಿ ನಿತ್ರಾಣರಾಗಿರುವ ಮನೆಮಂದಿಗೆ ಬಂದವರೆಷ್ಟು, ಹೋದವರೆಷ್ಟು, ಉಂಡವರೆಷ್ಟು ಎಂದೆಲ್ಲ ವಿಚಾರಿಸಿಕೊಳ್ಳುವ ವ್ಯವಧಾನವಾಗಲೀ ಚೈತನ್ಯವಾಗಲೀ ಉಳಿದಿರುವುದಿಲ್ಲ. ಖುದ್ದು ಮದುಮಗ- ಮದುಮಗಳು ಸಾಲುಗಟ್ಟಿದ ಅತಿಥಿಗಳೆದುರು ನಗುಮುಖ ಪ್ರದರ್ಶಿಸಿ, ಕಣ್ಣು ಕೋರೈಸುವ ಕ್ಯಾಮೆರಾ ಬೆಳಕಿಗೆ ಮುಖವೊಡ್ಡಿ, ವಾಸ್ತವವಾಗಿ ಏನೇನು ನಡೆಯಿತು ಎಂದು ನೆನಪಿಟ್ಟುಕೊಳ್ಳುವ ಪರಿಸ್ಥಿತಿಯಲ್ಲೂ ಇರುವುದಿಲ್ಲ.

ಎಲ್ಲರೂ ಊಟದ ಸಮಯಕ್ಕೆ ಬರುವವರಾದ್ದರಿಂದ ಅದಕ್ಕೆ ಹೆಚ್ಚು ನೂಕುನುಗ್ಗಲು. ಊಟಕ್ಕೆ ಕುಳಿತವರು ಎದ್ದ ತಕ್ಷಣ ಸೀಟು ಹಿಡಿಯಬೇಕಾದ್ದರಿಂದ ಅವರ ಬೆನ್ನಹಿಂದೆ ಸರತಿಸಾಲು. ಇವರ ಊಟ ಯಾವಾಗ ಮುಗಿಯುತ್ತದೋ ಎಂಬ ಅಸಹನೆಯ ಮುಖ ಹೊತ್ತ ಮಂದಿ ಹಿಂದೆ ನಿಂತಿದ್ದಾಗ, ಊಟಕ್ಕೆ ಕುಳಿತವನಿಗೂ ‘ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂಥ’ ಅನುಭವ.

ಕೊರೊನಾ ತಂದ ಎಲ್ಲ ಕಂಟಕಗಳ ನಡುವೆಯೂ ಆಡಂಬರದ ಮದುವೆಗಳು ತತ್ಕಾಲಕ್ಕಾದರೂ ನಿಯಂತ್ರಣಕ್ಕೆ ಬಂದವು ಎಂಬುದೊಂದು ಸಮಾಧಾನದ ಸಂಗತಿ. ಕೊರೊನಾದಿಂದ ಅನೇಕ ಮದುವೆಗಳು ಮುಂದೂಡಲ್ಪಟ್ಟವು. ಇನ್ನೇನು ಮುಂದಿನ ವಾರ ಮದುವೆ ಎಂದು ಕಾಯುತ್ತಿದ್ದವರು ನಿರಾಸೆಗೊಳಗಾದರು. ಎಲ್ಲವೂ ನಿಜ. ಆದರೆ ಸೀಮಿತ ಸಂಖ್ಯೆಯ ನೆಂಟರನ್ನು ಸೇರಿಸಿಕೊಂಡು ಮದುವೆ ನಡೆಸಬಹುದು ಎಂಬ ಸೂಚನೆ ಬರುತ್ತಿದ್ದಂತೆಯೇ ಜನರ ಒಟ್ಟಾರೆ ದೃಷ್ಟಿಯೇ ಬದಲಾಗಿಹೋಯಿತು. ವೈಭವದ ಚೌಲ್ಟ್ರಿಗಳನ್ನೆಲ್ಲ ಬಿಟ್ಟು ಜನ ಮನೆಗೆ ಮರಳಿದರು. ಇರುವ ವ್ಯವಸ್ಥೆಯಲ್ಲೇ ಸರಳ ಮದುವೆಗಳು ಆರಂಭವಾದವು. ತೀರಾ ಹತ್ತಿರದ ಬಂಧುವರ್ಗ, ಸ್ನೇಹಿತರು ಮಾತ್ರ ಒಟ್ಟಾದರು. ಪರಸ್ಪರ ಕಲೆತರು, ಮನಸಾರೆ ಮಾತಾಡಿದರು, ಅಚ್ಚಳಿಯದ ಚಿತ್ರವೊಂದಕ್ಕೆ ಚೌಕಟ್ಟು ತೊಡಿಸಿ ಹೃದಯದಲ್ಲಿ ಭದ್ರವಾಗಿಸಿಕೊಂಡರು.

ಈ ಬೆಳವಣಿಗೆಯಿಂದ ಆಗಿರುವ ತೊಂದರೆ ಗಳೇನೂ ಕಮ್ಮಿಯಿಲ್ಲ. ಒಬ್ಬನೇ ಮಗನ, ಒಬ್ಬಳೇ ಮಗಳ ಮದುವೆಯನ್ನು ನೂರಾರು ಬಂಧುಬಳಗ, ಸ್ನೇಹಿತರನ್ನು ಕರೆದು ವರ್ಣರಂಜಿತವಾಗಿ ನಡೆಸಬೇಕು ಎಂದು ಕಾಯುತ್ತಿದ್ದವರಿಗೆ ನಿರಾಸೆಯಾಗಿದೆ. ಒಂದು ದೊಡ್ಡ ಮಟ್ಟದ ಮದುವೆ ನಡೆದರೆ ಅದರಿಂದ ತಮ್ಮ ದಿನದ ಕೂಲಿ ದುಡಿಯುವ ಹತ್ತಾರು ಮಂದಿಯ ಆದಾಯಕ್ಕೆ ಪೆಟ್ಟುಬಿದ್ದಿದೆ. ಮದುವೆ ಹಾಲ್‍ನ ಮಂದಿ, ಅಡುಗೆಯವರು, ಶಾಮಿಯಾನದವರು, ಹೂವಿನ ವ್ಯಾಪಾರಿಗಳು, ಛಾಯಾಗ್ರಾಹಕರು, ಸಹಾಯಕರು... ಎಲ್ಲರ ವ್ಯವಹಾರ ಕುಂಠಿತವಾಗಿದೆ.

ಆದರೆ ಒಟ್ಟಾರೆ ಬೆಳವಣಿಗೆ ಸರಳ ವಿವಾಹಗಳನ್ನು ಇಷ್ಟಪಡುವವರಿಗೆ ವರದಾನವಾಗಿ ಪರಿಣಮಿಸಿದೆ. ಮದುವೆ ಮನೆಗಳಲ್ಲಿ ಮತ್ತೆ ಮನುಷ್ಯ ಸಂಬಂಧಗಳು ಚಿಗುರಿಕೊಂಡಿವೆ. ಮದುವೆಯೇನೋ ಸ್ವರ್ಗದಲ್ಲಿ ನಡೆಯುತ್ತದೆ. ಮದುವೆ ಮಾಡಿಸಿದವನ ಬದುಕು ನರಕವಾಗಬಾರದಲ್ಲ? ಹಾಗಾಗದಂತಹ ಭಾರಿ ಒಸಗೆಯೊಂದನ್ನು ಕೊರೊನಾ ತಂದಿತೇ? ಇದು ಹೀಗೆಯೇ ಉಳಿದೀತೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.