ADVERTISEMENT

ಸಂಗತ | ಅರಣ್ಯವಾಸಿಗಳ ಅಳಲು: ಸರ್ಕಾರ ಸ್ಪಂದಿಸಲಿ

ಬಲಿಷ್ಠರೊಡನೆ ಸ್ಪರ್ಧಿಸಲಾಗದೆ ಬುಡಕಟ್ಟು ಸಮುದಾಯಗಳು ಅಸ್ತಿತ್ವನಾಶದ ಆತಂಕ ಎದುರಿಸುತ್ತವೆ. ಎಸ್‌.ಟಿ ಒಳಮೀಸಲಾತಿ ಕೂಗಿಗೆ ಸರ್ಕಾರ ಕಿವಿಗೊಡಲಿ.

ಡಾ.ಸಿ.ಎಸ್.ದ್ವಾರಕಾನಾಥ್
Published 14 ಅಕ್ಟೋಬರ್ 2025, 0:49 IST
Last Updated 14 ಅಕ್ಟೋಬರ್ 2025, 0:49 IST
   

ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ನೀಡಲು ಅಲ್ಲಿರುವ ಪ್ರಬಲ ಸಮುದಾಯಗಳ ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿಯಿತು. ಆದರೆ, ಪರಿಶಿಷ್ಟ ಪಂಗಡದಲ್ಲೂ (ಎಸ್‌.ಟಿ) ಒಳಮೀಸಲಾತಿ ಬೇಕೆಂದು ಮನವಿ ಮಾಡುತ್ತಿರುವ ಅರಣ್ಯವಾಸಿ ಬುಡಕಟ್ಟುಗಳ ಧ್ವನಿಯನ್ನು ಕೇಳಿಸಿಕೊಳ್ಳಲು ಸರ್ಕಾರ ಮನಸ್ಸು ಮಾಡುತ್ತಿಲ್ಲ!

ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದಲ್ಲಿ 50 ಬುಡಕಟ್ಟುಗಳಿವೆ. ಆದರೆ, 49 ಬುಡಕಟ್ಟುಗಳ ಮೀಸಲಾತಿ, ಅನುದಾನ, ಪ್ರಾತಿನಿಧ್ಯವನ್ನು ಒಂದೇ ಸಮುದಾಯ ಬಳಸಿಕೊಳ್ಳುತ್ತಿದೆ. ಈ ಬಲಿಷ್ಠ ಸಮುದಾಯದಿಂದ ಉಳಿದ 49 ಸಮುದಾಯಗಳನ್ನು ಬೇರ್ಪಡಿಸಿ ಒಳಮೀಸಲಾತಿ ನೀಡದಿದ್ದರೆ, ಕೆಲವೇ ವರ್ಷಗಳಲ್ಲಿ ಈ ಸಮುದಾಯಗಳು ನಶಿಸಿಹೋಗುವ ಸಾಧ್ಯತೆಯಿದೆ.

ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ 50 ಬುಡಕಟ್ಟುಗಳಿವೆ. ಇದರಲ್ಲಿನ ಅರಣ್ಯಾಧಾರಿತ 12 ಮೂಲ ಬುಡಕಟ್ಟುಗಳಿಗೆ ಮೀಸಲಾತಿ, ಸರ್ಕಾರದ ಸವಲತ್ತುಗಳ ಪರಿವೆಯೇ ಇಲ್ಲ. ಇದಕ್ಕೆ ನಿದರ್ಶನವೆಂಬಂತೆ, ಚಾಮರಾಜನಗರ ಜಿಲ್ಲೆಯಲ್ಲಿ 1,854 ಕುಟುಂಬಗಳಿಗೆ ಇತ್ತೀಚೆಗಷ್ಟೇ ವಿದ್ಯುತ್ ಸೌಲಭ್ಯ ಕೊಡಲಾಗಿರುವ ಸುದ್ದಿ ಗಮನಿಸಬಹುದು. 1902ರಲ್ಲೇ ವಿದ್ಯುತ್ ಪಡೆದ ಕರ್ನಾಟಕ ರಾಜ್ಯದಲ್ಲಿ 2024ರಲ್ಲಿ ಇಪ್ಪತ್ತೆರಡು ಹಾಡಿಗಳು ಬೆಳಕು ಕಂಡವು ಎಂದರೆ, ಈ ಅರಣ್ಯವಾಸಿಗಳಿಗೆ ಬೆಳಕು ನೀಡಲು ಸರ್ಕಾರ ತೆಗೆದುಕೊಂಡ ಕಾಲ ಒಂದೂಕಾಲು ಶತಮಾನ! ಇನ್ನೂ ನೂರಾರು ಆದಿವಾಸಿ ಹಾಡಿಗಳು ಬೆಳಕಿನ ಕನಸು
ಕಾಣುತ್ತ, ಅಂಧಕಾರದಲ್ಲಿಯೇ ಜೀವಿಸುತ್ತಿವೆ.

ADVERTISEMENT

ಡಿಜಿಟಲ್ ಭಾರತದ ಭಾಗವೇ ಆಗಿರುವ ಆದಿವಾಸಿಗಳು ಹಳ್ಳಕೊಳ್ಳದ ಬಗ್ಗಡದ ನೀರು ಕುಡಿದು ಜೋಪಡಿಗಳಲ್ಲಿ ಬದುಕುತ್ತಿದ್ದಾರೆ. ಇವರ ಹಾಡಿ, ಗದ್ದೆ, ಪೋಡು, ಕಾಲೊನಿ, ದೊಡ್ಡಿಗಳಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರಗಳು ಇಂದಿಗೂ ಸಮರ್ಪಕವಾಗಿ ತಲುಪಿಲ್ಲ. ಮೀಸಲಾತಿಯಲ್ಲಿ ನಗರದ ಬಹುಸಂಖ್ಯಾತ ಬಲಾಢ್ಯ ಬುಡಕಟ್ಟುಗಳ ಜೊತೆಗೆ ಸ್ಪರ್ಧಿಸಲಾರದೆ, ಉದ್ಯೋಗವೂ ಸಿಗದೆ, ನಗರಗಳಲ್ಲೂ ಇರಲಾಗದೆ, ಹಾಡಿಗಳಿಗೂ ಹೋಗಲಾಗದೆ ಅತಂತ್ರ ಸ್ಥಿತಿಯಲ್ಲಿ ಮೊದಲ ತಲೆಮಾರಿನ ಆದಿವಾಸಿ ವಿದ್ಯಾವಂತರು ತೊಳಲಾಡುತ್ತಿದ್ದಾರೆ.

ಸುಪ್ರೀಂ ಕೋರ್ಟ್‌ ಒಳಮೀಸಲಾತಿಗೆ ಸಂಬಂಧಿಸಿದ ತನ್ನ ತೀರ್ಪಿನಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಒಳಮೀಸಲಾತಿ ಜಾರಿ ಮಾಡಬೇಕೆಂದು ಸ್ಪಷ್ಟವಾಗಿ ಹೇಳಿದ್ದರೂ, ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಮಾತ್ರ ಒಳಮೀಸಲಾತಿ ನೀಡಲು ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗವನ್ನು ರಚಿಸಿ, ಪರಿಶಿಷ್ಟ ಪಂಗಡಗಳ ಒಳಮೀಸಲಾತಿ ಕುರಿತು ಮೌನವಹಿಸಿತು.

2011ರ ಜನಗಣತಿ ಪ್ರಕಾರ ಎಸ್‌.ಟಿ ಸಮುದಾಯದ ಒಟ್ಟಾರೆ ಜನಸಂಖ್ಯೆ 42,48,987 ಇದೆ. ಇದರಲ್ಲಿ ಪ್ರಮುಖ ಸಂಘಟಿತ ಒಂದೇ ಸಮುದಾಯದ ಜನಸಂಖ್ಯೆ 32,96,354ರಷ್ಟಿದೆ. ಉಳಿದ ನಲವತ್ತೊಂಬತ್ತು ಬುಡಕಟ್ಟುಗಳ ಒಟ್ಟಾರೆ ಜನಸಂಖ್ಯೆ 9,52,633ರಷ್ಟಿದೆ. ಕುಕ್ನ (32), ಮಲಸಾರ್ (82), ಪಟೇಲಿಯಾ (57), ರಥಾವ (45), ಶೋಲಗ (52), ವರ್ಲಿ (58), ಬರೋಡಿಯ (23), ಬರ್ದಾ (266), ಚೋಧರ (117), ಧೋರ (274), ಕೋಟ (121), ಕಾಟ್ಟುನಾಯಕನ್ (168) ಈ ಜಾತಿಗಳ ಜನಸಂಖ್ಯೆ (ಆವರಣದಲ್ಲಿರುವುದು) ಗಾಬರಿ ಹುಟ್ಟಿಸುವಷ್ಟು ಕನಿಷ್ಠ ಪ್ರಮಾಣದಲ್ಲಿದೆ. ಇವರೆಲ್ಲ ಎಲ್ಲಿದ್ದಾರೆ, ಹೇಗಿದ್ದಾರೆ ಎನ್ನುವ ಕನಿಷ್ಠ ಮಾಹಿತಿಯೂ ಇಲ್ಲ! 1,000ಕ್ಕಿಂತಲೂ ಕಡಿಮೆ ಜನಸಂಖ್ಯೆ ಇರುವ 28 ಬುಡಕಟ್ಟುಗಳಿವೆ. 5,000ಕ್ಕಿಂತಲೂ ಕಡಿಮೆ ಇರುವ ಮೂರು ಬುಡಕಟ್ಟುಗಳಿವೆ. ಗೊಂಡ, ರಾಜಗೊಂಡ (1,58,243), ಕೋಳಿ, ದೋರ್, ಟೋಕರ್ ಕೋಳಿ (1,12,190), ಮರಾಠಿ (82,447), ಜೇನುಕುರುಬ (36,975) ಹಾಗೂ ಸೋಲಿಗ (33,819)  ಬುಡಕಟ್ಟುಗಳು ಹೆಚ್ಚಿನ ಜನಸಂಖ್ಯೆ ಹೊಂದಿವೆ.

ಬೆಟ್ಟಕುರುಬ, ಇರುಳಿಗ, ಯರವ, ಪಣಿಯ, ಹಸಲರು, ಗೌಡ್ಲು, ಸಿದ್ದಿ, ಕೊರಗ, ಕಾಡುಕುರುಬ, ಕುಡಿಯ, ತೋಡ, ಕಣಿಯನ್, ಮಲೆಕುಡಿಯರೇ ಮುಂತಾದ ಅತ್ಯಲ್ಪ ಪ್ರಮಾಣದಲ್ಲಿರುವ ಮೂಲ ಆದಿವಾಸಿಗಳ ಜನಸಂಖ್ಯೆ 2,01,620ದಷ್ಟಿದೆ. ಇವರು ಕನಿಷ್ಠ ರಾಜಕೀಯ ಪ್ರಾತಿನಿಧ್ಯವನ್ನೂ ಹೊಂದಿಲ್ಲ. ವಿಧಾನಸಭೆಗೆ ಎಸ್‌.ಟಿ ಸಮುದಾಯಕ್ಕೆ 15 ಸ್ಥಾನ ಮತ್ತು ಲೋಕಸಭೆಗೆ 2 ಸ್ಥಾನ ಮೀಸಲಿವೆ. ಆದರೆ, ಈವರೆಗೂ 49 ಸಮುದಾಯಗಳು ಒಂದು ಸ್ಥಾನವನ್ನೂ ಪಡೆದಿಲ್ಲ. ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲೂ ಈ ನತದೃಷ್ಟರ ಪಾಲು ಶೂನ್ಯ. ಇರುಳಿಗ, ಕುಡಿಯ, ಪಣಿಯನ್, ಜೇನುಕುರುಬರಲ್ಲಿ ಕನಿಷ್ಠ ‘ಡಿ’ ಮತ್ತು ‘ಸಿ’ ಗ್ರೂಪ್ ನೌಕರಿಯನ್ನೂ ಪಡೆದವರಿಲ್ಲ.

ಅರಣ್ಯವಾಸಿಗಳು ಕಠಿಣ ಕಾನೂನುಗಳಿಂದಾಗಿ ತಮ್ಮ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಪಾರಂಪರಿಕ ವೃತ್ತಿಯಿಂದಲೂ ದೂರವಾಗಿದ್ದಾರೆ. ಕಾಫಿ ಎಸ್ಟೇಟ್‌ಗಳಲ್ಲಿ, ಲೈನ್ ಮನೆಗಳಲ್ಲಿ, ಇಟ್ಟಿಗೆ ಗೂಡುಗಳಲ್ಲಿ ದುಡಿಯುತ್ತಾ ಕೆಲವರಿದ್ದರೆ, ಮತ್ತೆ ಕೆಲವರು ಕಾಡುಮೇಡುಗಳಲ್ಲಿ ಅಲೆಯುತ್ತಾ ಗುಡಾರಗಳಲ್ಲಿ ಜೀವನ ಮಾಡುತ್ತಿದ್ದಾರೆ. ಆದರೂ, ತಮ್ಮದೇ ಆದ ನಂಬಿಕೆ, ಆಚಾರ, ವಿಚಾರ, ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ.

ಬಹುತೇಕ ಅರಣ್ಯವಾಸಿಗಳು ಕುಡುಗೋಲು ಕಣ ರಕ್ತಹೀನತೆ (ಸಿಕಲ್ ಸೆಲ್ ಅನೀಮಿಯಾ), ಥಲಸ್ಸೇಮಿಯಾ, ಆಸ್ತಮಾದಿಂದ ಬಳಲಿ ಅಕಾಲಿಕ ಸಾವಿಗೆ ತುತ್ತಾಗುತ್ತಿದ್ದಾರೆ. 

ನತದೃಷ್ಟ ಅರಣ್ಯವಾಸಿಗಳನ್ನು ಒಳಮೀಸಲಾತಿಯ ಮೂಲಕ ಗುರ್ತಿಸಿ, ಅವರಿಗೆ ಮೀಸಲಾತಿ, ಅನುದಾನ, ಪ್ರಾತಿನಿಧ್ಯ ನೀಡಬೇಕಾಗಿದೆ. ಆ ಮೂಲಕ, ಮೂಲನಿವಾಸಿ, ಆದಿವಾಸಿ, ಅರಣ್ಯವಾಸಿಗಳೆಂಬ ಬುಡಕಟ್ಟುಗಳನ್ನು ಉಳಿಸಿಕೊಳ್ಳಬೇಕಾದ ತುರ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.