ADVERTISEMENT

ಸಂಗತ: ಟ್ರಿಣ್‌ ಟ್ರಿಣ್‌ ಟ್ರಿಣ್‌... ಬರಿಯ ಶಬ್ದವಲ್ಲ!

ಬಿ.ಎಸ್.ಭಗವಾನ್
Published 2 ಜೂನ್ 2024, 23:41 IST
Last Updated 2 ಜೂನ್ 2024, 23:41 IST
   

ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಡಬ್ಲಿನ್‌ ನಗರದಿಂದ ಸ್ಯಾನ್‌ಫ್ರಾನ್ಸಿಸ್ಕೊಗೆ ರೈಲಿನಲ್ಲಿ ಪ್ರಯಾಣಿಸು ತ್ತಿದ್ದೆ. ನಿಲುಗಡೆಗಳಲ್ಲಿ ಜನ ತಮ್ಮ ಬೈಸಿಕಲ್‌ ಸಮೇತ ರೈಲು ಹತ್ತಿಕೊಳ್ಳುತ್ತಿದ್ದುದನ್ನು ಕಂಡು ಅವಾಕ್ಕಾದೆ. ಪಕ್ಕದವರು ಪ್ರತಿಕ್ರಿಯಿಸಿದ್ದರು: ‘ಇಲ್ಲಿ ಬೈಸಿಕಲ್ಲುಗಳನ್ನು ರೈಲಿನ ಒಳಗೆ ತರಲು ನಿರ್ಬಂಧವಿಲ್ಲ. ಅಗೋ, ಬೈಸಿಕಲ್ಲುಗಳಿಗೆ ಬೀಗ ಹಾಕಿಡಲು ಆ ಮೂಲೆ ಮೀಸಲು. ಬಸ್ಸುಗಳಲ್ಲೂ ಹೀಗೇ ಶೆಲ್ಫುಗಳಿರುತ್ತವೆ’. ‘ಇದರಿಂದ ರೈಲಿನಲ್ಲಿ ಆಸನಗಳ ಸಂಖ್ಯೆ ಕಡಿಮೆಯಾದರೇನು, ನಮ್ಮ ಸೇವೆ ದೊಡ್ಡದು’ ಎನ್ನುವಂತೆ ಅಲ್ಲಿ ಬೈಸಿಕಲ್ಲುಗಳು ವಿರಮಿಸಿದ್ದವು!

ಬೈಸಿಕಲ್‌ನದು ಒಂದು ಮೋಹಕ ಲೋಕ. ಬ್ರಿಟನ್ನಿನ ಬಹುಮುಖಿ ಕಾದಂಬರಿಕಾರ, ಚಿಂತಕ ಎಚ್.‌ಜಿ.ವೇಲ್ಸ್‌ ‘ವಯಸ್ಕರನ್ನು ಬೈಸಿಕಲ್‌ ಮೇಲೆ ನೋಡಿದಾಗಲೆಲ್ಲ, ಮನುಷ್ಯಕುಲಕ್ಕೆ ಭವಿಷ್ಯವಿದೆ ಎಂದು ನನಗೆ ಅನ್ನಿಸುತ್ತದೆ’ ಎಂದಿದ್ದರು. ಬೈಸಿಕಲ್‌ ನಮ್ಮನ್ನು ಪ್ರಕೃತಿಯೊಂದಿಗೆ ಬೆಸೆಯುತ್ತದೆ. ಹೆಚ್ಚು ಸದ್ದಿಲ್ಲದ, ಇಂಧನ ಬಯಸದ ದೀರ್ಘಬಾಳಿಕೆಯ ಅದು ನಮ್ಮಲ್ಲಿ ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆಯ ಪ್ರಜ್ಞೆ ಮೂಡಿಸುವ ವಿಶಿಷ್ಟ ವಾಹನ. ನಿರ್ವಹಣೆ ವೆಚ್ಚ ನಗಣ್ಯ.

ಛತ್ತೀಸಗಢದ ಬಸ್ತರ್‌ ಜಿಲ್ಲೆಯಲ್ಲಿ ಯುವ ಉದ್ಯಮಿಯೊಬ್ಬರು ಬರೀ 8.5 ಕೆ.ಜಿ. ತೂಕದ ‘ಬ್ಯಾಂಬೊರಿಕ್‌’ ಎಂಬ ಬೈಸಿಕಲ್‌ ವಿನ್ಯಾಸಗೊಳಿಸಿದ್ದಾರೆ. ಬಿದಿರು, ಮೆದು ಕಬ್ಬಿಣ, ಸೆಣಬು ಮತ್ತು ಕಂಚಿನ ತಂತಿಯಿಂದ ತಯಾರಿಸಿರುವ ಅದು 100 ಕೆ.ಜಿ.ಯಷ್ಟು ತೂಕ ಹೊರಬಲ್ಲದು.

ADVERTISEMENT

ಜಗತ್ತಿನಲ್ಲಿ ಸದ್ಯ ಒಟ್ಟು 200 ಕೋಟಿ ಬೈಸಿಕಲ್‌ಗಳಿವೆ ಎಂದು ಅಂದಾಜಿಸಲಾಗಿದ್ದು, 2050ರ ವೇಳೆಗೆ ಈ ಸಂಖ್ಯೆ 500 ಕೋಟಿ ತಲುಪುವ ನಿರೀಕ್ಷೆ ಇದೆ. 10 ದೇಶಗಳಲ್ಲಿ ಬೈಸಿಕಲ್‌ಗಳನ್ನು ಅತ್ಯಧಿಕವಾಗಿ ಬಳಸಲಾಗುತ್ತಿದೆ. ಬೈಸಿಕಲ್‌ನದು ಎಂತಹ ಅದ್ಭುತವೆಂದರೆ, ಅದನ್ನು ಬಳಸತೊಡಗಿ
ದಂತೆಯೇ ಮಕ್ಕಳಿಗೆ ವಯಸ್ಕರಂತೆಯೂ ವಯಸ್ಕರಿಗೆ ಮಕ್ಕಳಂತೆಯೂ ಅನುಭವವಾಗುತ್ತದೆ. ಬೈಸಿಕಲ್‌ನಿಂದ ಸ್ವತಃ ಸವಾರರಿಗೆ, ರಸ್ತೆಯಲ್ಲಿ ಸಂಚರಿಸುವವರಿಗೆ, ಪ್ರಾಣಿಗಳಿಗೆ ಹೆಚ್ಚಿನ ಅಪಾಯವಿಲ್ಲ. ಪೆಡಲ್‌ ತುಳಿತಕ್ಕೆ ಪ್ರಯೋಗಿಸುವ ಶಕ್ತಿಯ ಶೇಕಡ 98.6ರಷ್ಟು ಚಲನಶಕ್ತಿಯಾಗಿ ರೂಪಾಂತರಗೊಳ್ಳುವುದು ಬೈಸಿಕಲ್ಲಿನ ವಿಶೇಷ. ಮನುಷ್ಯನ ಸಾಮರ್ಥ್ಯವನ್ನು ಈ ಮಟ್ಟದಲ್ಲಿ ಹೆಚ್ಚಿಸಿದ ಇನ್ನೊಂದು ವಾಹನವಿಲ್ಲ.

ಬೈಸಿಕಲ್‌ ಬಹು ಶ್ರೇಷ್ಠ ಆವಿಷ್ಕಾರ. ಯುರೋಪ್‌ ಒಂದರಲ್ಲೇ 6.55 ಲಕ್ಷ ಕಾರ್ಮಿಕರನ್ನು ಒಳಗೊಂಡಿರು ವಷ್ಟು ಪ್ರಮಾಣದಲ್ಲಿ ಬೈಸಿಕಲ್‌ ಉದ್ಯಮ ಬೆಳೆದಿದೆ. ಒಂದು ಸಾಧಾರಣ ಬೈಸಿಕಲ್‌ನ ಹಿಂದೆ ಸಂಚಾರದ ಉದ್ದೇಶವಷ್ಟೇ ಅಲ್ಲ, ಉದ್ಯೋಗ, ಶಿಕ್ಷಣ, ಆರೋಗ್ಯ ವೃದ್ಧಿಯೂ ಅಡಕಗೊಂಡಿದೆ. ಸ್ವಾರಸ್ಯವೆಂದರೆ, ಬೈಸಿಕಲ್‌ ವಿನ್ಯಾಸಗೊಂಡಿದ್ದು 1818ರಲ್ಲಷ್ಟೆ.

ಆಬಾಲವೃದ್ಧರಿಗೆಲ್ಲ ಅಚ್ಚುಮೆಚ್ಚೆನಿಸುವ ಬೈಸಿಕಲ್‌ ಲವಲವಿಕೆಯ ಪ್ರತೀಕ. ಕಾರು, ಬಸ್ಸು, ವ್ಯಾನ್‌ ಬದಲು ಬೈಸಿಕಲ್‌ ಆಯ್ಕೆಯಿಂದ ನಾವು ನಮ್ಮ ಇಂಗಾಲದ ಹೆಜ್ಜೆ ಗುರುತುಗಳನ್ನು ಕಡಿಮೆ ಮಾಡಿರುತ್ತೇವೆ, ಪರಿಸರ ಮಾಲಿನ್ಯ ವಿರುದ್ಧದ ಸಮರಕ್ಕೆ ಕೈಜೋಡಿಸಿ ಶೂನ್ಯ ಇಂಗಾಲ ಹೊರಸೂಸುವಿಕೆಯತ್ತ ಧಾವಿಸಿರುತ್ತೇವೆ. ‘ವಿಶ್ವ ಬೈಸಿಕಲ್‌ ದಿನ’ (ಜೂನ್‌ 3) ಆಚರಣೆಯ ಮೂಲಕ, ಬೈಸಿಕಲ್‌ ಎಂಬ ಸುಸ್ಥಿರ ಸಂಚಾರ ಆಯ್ಕೆಯ ಪ್ರಾಮುಖ್ಯವನ್ನು ನಾವು ಎತ್ತಿ ಹಿಡಿಯಬೇಕಿದೆ.

ಈ ಬಾರಿಯ ಬೈಸಿಕಲ್‌ ದಿನಾಚರಣೆಯ ಸಂಭ್ರಮಕ್ಕೆ ‘ಬೈಸಿಕಲ್‌ನಿಂದ ಆರೋಗ್ಯ, ಔಚಿತ್ಯ ಮತ್ತು ಸುಸ್ಥಿರತೆ’ ಎಂಬ ಧ್ಯೇಯವಾಕ್ಯ ಸ್ಫೂರ್ತಿಯಾಗಿದೆ. ಉತ್ಸಾಹಿ ಸವಾರರಿಗೆ, ರೋಚಕತೆ ಅರಸುವವರಿಗೆ ಸಂಚಾರಕ್ಕೆ ಸರಳ ವಾಹನವನ್ನು ಅಪ್ಪಿದ ಹಿಗ್ಗು. ಬೈಸಿಕಲ್‌ ಸವಾರಿಯೆಂದರೆ, ಒಂದೆಡೆಯಿಂದ ಇನ್ನೊಂದೆಡೆಗೆ ತಲುಪುವುದಷ್ಟೇ ಅಲ್ಲ, ಒಂದು ಅಜ್ಞಾತ ಪ್ರಯಾಣದ ಆಸ್ವಾದ ಅದು. ಬೈಸಿಕಲ್‌ ಸವಾರಿಯೆಂದರೆ ಸಂಗೀತರಹಿತ ಬ್ಯಾಲೆ ನೃತ್ಯವೂ ಹೌದು! ಕಾರಿನ ಹಿಂಬದಿ ಆಸನದಲ್ಲಿ ಕೂತವರಿಗೆ, ಅತಿ ವೇಗದ ಚಾಲನೆಯಿಂದ ಕಿಟಕಿಯಾಚೆಗಿನ ನಿಸರ್ಗ ಕಣ್ತುಂಬದಿದ್ದರೆ, ಆಗ ಅವರು ಇಳಿದು ಬೈಸಿಕಲ್ಲನ್ನು ಏರುವುದೇ ಉಪಾಯ.

ಇಂಧನ ಬಳಕೆಯ ಒಂದು ಸಾಧಾರಣ ವಾಹನ ಸಹ ಅತಿ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್‌ ಹೊರಸೂಸುತ್ತದೆ. ಆದರೆ ಬೈಸಿಕಲ್‌ ಮನುಷ್ಯಬಲ ಚಾಲಿತವಾದ್ದರಿಂದ, ಅದರ ಬಳಕೆಯಿಂದ ಗ್ಯಾಸೊಲಿನ್‌ ಇಂಧನ ದಹನ ತಪ್ಪುತ್ತದೆ. ಸಂಚಾರಕ್ಕೆ ಪ್ರತಿ ಬಾರಿ ಕಾರನ್ನು ಹತ್ತಿದಾಗಲೆಲ್ಲ ಜಾಗತಿಕ ತಪನಕ್ಕೆ ಒಂದಷ್ಟು ಕಾವನ್ನು ಜಮೆ ಮಾಡಿರುತ್ತೇವೆ. ಇಂತಹ ಸಂದರ್ಭದಲ್ಲಿ, ಪ್ರಕೃತಿ ಸಂರಕ್ಷಣೆಗೆ ಬೈಸಿಕಲ್‌ ಒಂದು ಕ್ರಿಯಾವರ್ಧಕ. ವಿಲಾಸಿ ಕಾರುಗಳು, ಮಾಲ್‌ಗಳು ಅಥವಾ ಭವ್ಯ ಸಿನಿಮಾ ಮಂದಿರಗಳೇ ಇದ್ದರೂ ನಗರ ಅಪೂರ್ಣವೇ ಹೌದು. ಬೈಸಿಕಲ್‌ಗಳಿಗೆ ಪ್ರತ್ಯೇಕ ಸಂಚಾರ ಪಥ, ನಿಲುಗಡೆ ವ್ಯವಸ್ಥೆ ಇದ್ದರೆ ಮಾತ್ರ ನಗರಕ್ಕೆ ಪರಿಪೂರ್ಣತೆ.

ಬೈಸಿಕಲ್‌ಗಳು ನಗರದ ಕೀಲಿಕೈಗಳಾಗಬೇಕು. ಎಂದಮೇಲೆ ನಗರಗಳ ಯೋಜನೆಯಲ್ಲೇ ಈ ಕುರಿತು ದೃಢ ನಿರ್ಧಾರ ಅಗತ್ಯ. ಮಳೆ, ಪ್ರವಾಹ, ಭೂ ಸವೆತ, ವಿದ್ಯುತ್‌ ಸಂಪರ್ಕ ಕಡಿತದಂತಹ ಸಂದರ್ಭಗಳಲ್ಲಿ
ಬೈಸಿಕಲ್ಲನ್ನೇರಿ ನಿರಾತಂಕವಾಗಿ ಸಾಗಬಹುದಲ್ಲ. ಬೈಸಿಕಲ್ಲುಗಳಿಗೆಂದೇ ಪ್ರತ್ಯೇಕ ಕಿರುದಾರಿಗಳಿರಲಿ.
ನೆದರ್‌ಲ್ಯಾಂಡ್ಸ್‌ನ ರಾಜಧಾನಿ ಆಮ್‌ಸ್ಟರ್‌ಡ್ಯಾಂ ಅಂತೂ ‘ಬೈಸಿಕಲ್‌ಗಳ ರಾಜಧಾನಿ’ಯೇ ಆಗಿದೆ. ಅಲ್ಲಿ ಜನರಿಗಿಂತ ಬೈಸಿಕಲ್‌ಗಳೇ ಹೆಚ್ಚಾಗಿವೆ.

ಟ್ರಿಣ್‌, ಟ್ರಿಣ್‌, ಟ್ರಿಣ್‌... ಬರಿಯ ಶಬ್ದವಲ್ಲ, ಅದು ಪ್ರಗತಿ ಮತ್ತು ಭವ್ಯ ಭವಿಷ್ಯದ ಶುಭ ಸಂಕೇತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.