ಶಿಕ್ಷಣದ ಮಹತ್ವ ಕುರಿತು ಯೋಚಿಸುವಾಗ, ಒಂದೇ ಕಾಲೇಜಿನಲ್ಲಿ ನಡೆದ ಎರಡು ಪ್ರಸಂಗಗಳು ನೆನಪಾಗುತ್ತವೆ. ಅಂತಿಮ ಪದವಿ ಪರೀಕ್ಷೆಯ ಕೊನೆಯ ದಿನ, ಪರೀಕ್ಷೆ ಪ್ರಾರಂಭವಾಗುವ ಮುಂಚೆ ವಿದ್ಯಾರ್ಥಿಯೊಬ್ಬ ಬಣ್ಣದ ಪುಡಿಗಳ ಪ್ಯಾಕೆಟ್‌ಗಳನ್ನು ತಂದು ಕಾಲೇಜಿನ ಜವಾನನ ಕೈಯಲ್ಲಿ ಕೊಟ್ಟ. ಕುತೂಹಲದಿಂದ ವಿಚಾರಿಸಿದೆ. ‘ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳು ಬಣ್ಣ ಹಚ್ಚಿಕೊಂಡು ಖುಷಿಪಡುತ್ತಾರೆ’ ಎನ್ನುವ ವಿಷಯ ತಿಳಿಯಿತು. ಸಂಭ್ರಮದ ಆಚರಣೆಯ ಹೊಸ ಸ್ವರೂಪ ಎಂದುಕೊಂಡೆ.
ಪರೀಕ್ಷೆ ಮುಗಿದ ಸೂಚಕವಾಗಿ ಫೈನಲ್ ಬೆಲ್ ಆಗುತ್ತಿದ್ದಂತೆ, ವಿದ್ಯಾರ್ಥಿಗಳು ಜೇನುಹುಳುಗಳಂತೆ ಕಾಲೇಜು ಆವರಣದಲ್ಲಿ ಸೇರಿಕೊಂಡರು. ಅಷ್ಟರಲ್ಲಿ, ಡಿಜೆ ವ್ಯವಸ್ಥೆಯ ಟ್ರ್ಯಾಕ್ಟರ್‌ವೊಂದು ಮೈದಾನಕ್ಕೆ ಬಂತು. ಹಾಡಿನ ಭೋರ್ಗರೆತ, ಪಟಾಕಿಗಳ ಸಿಡಿತ ಮೊಳಗತೊಡಗಿತು. ವಿದ್ಯಾರ್ಥಿಗಳು ಬಣ್ಣ ಎರಚುತ್ತಾ ಕುಣಿಯಲಾರಂಭಿಸಿದರು. ಟ್ರ್ಯಾಕ್ಟರ್ ಅನ್ನು ವೃತ್ತಾಕಾರವಾಗಿ ಓಡಿಸಿದರು. ಅದಾದ ನಂತರ, ತೆಂಗಿನಕಾಯಿ ಮೇಲೆ ಕರ್ಪೂರ ಹಚ್ಚಿ, ಕಾಲೇಜಿನ ಮೆಟ್ಟಿಲುಗಳಿಗೆ ಒಡೆಯುವುದರೊಂದಿಗೆ ವಿದ್ಯಾರ್ಥಿಗಳ ಸಂಭ್ರಮಾಚರಣೆ ಕೊನೆಗೊಂಡಿತು.
ವಿದ್ಯಾರ್ಥಿಗಳ ಸಂಭ್ರಮಾಚರಣೆ ಬಗ್ಗೆ ನಾನು ಅಚ್ಚರಿಯಲ್ಲಿ ಮುಳುಗಿದ್ದಾಗಲೇ ಮತ್ತೂ ಆಶ್ಚರ್ಯದ ವಿಷಯವೊಂದು ತಿಳಿಯಿತು. ಸಂಭ್ರಮದ ಕೇಂದ್ರವಾಗಿ, ಟ್ರ್ಯಾಕ್ಟರ್ ಚಾಲನೆ ಮಾಡಿದ ವಿದ್ಯಾರ್ಥಿಯು ತನ್ನ ನಾಲ್ಕನೇ ಸೆಮಿಸ್ಟರ್‌ನಲ್ಲಿ ಬಹುತೇಕ ವಿಷಯಗಳನ್ನು ಉಳಿಸಿಕೊಂಡಿದ್ದ. ಆ ವಿದ್ಯಾರ್ಥಿಯ ಪದವಿ ಇನ್ನೂ ಪೂರ್ಣ ಗೊಂಡಿರಲಿಲ್ಲ. ಆದರೂ ಪದವಿ ಪ್ರಮಾಣ ಪತ್ರ ಕೈಸೇರಿದಂತೆ ಆತನೇ ಎಲ್ಲರಿಗಿಂತ ಮುಂದಾಗಿ ಕುಣಿಯುತ್ತಿದ್ದ. ಕಾಲೇಜಿನಿಂದ ಹೊರಗೆ ಬಂದ ಕ್ಷಣದಿಂದ ಬದುಕಿನ ಬಹುದೊಡ್ಡ ಪರೀಕ್ಷೆಯೊಂದು ಶುರುವಾಗುತ್ತದೆ ಎನ್ನುವ ಅರಿವು ಕೆಲವು ವಿಷಯಗಳನ್ನು ಉಳಿಸಿಕೊಂಡ ವಿದ್ಯಾರ್ಥಿ ಗಾಗಲೀ, ಅವರ ಸಂಗಡಿಗರಿಗಾಗಲೀ ಇದ್ದಂತಿರಲಿಲ್ಲ.
ಮತ್ತೊಂದು ಪ್ರಸಂಗದಲ್ಲಿ, ಪರೀಕ್ಷೆ ಶುರುವಾಗುವ ಮುನ್ನ ಬಹುತೇಕ ವಿದ್ಯಾರ್ಥಿಗಳು ಮೊಬೈಲ್ ಫೋನ್ ನೋಡುತ್ತಾ ಕಾಲ ಕಳೆಯುತ್ತಿದ್ದರು. ಒಬ್ಬ ವಿದ್ಯಾರ್ಥಿ ಮಾತ್ರ ಗುಂಪಿನಿಂದ ದೂರವುಳಿದು ತನ್ನ ಪಾಡಿಗೆ ತಾನು ಓದಿನಲ್ಲಿ ಮಗ್ನನಾಗಿದ್ದ.
‘ನಿನ್ನ ಸ್ನೇಹಿತರೆಲ್ಲ ಆರಾಮಾಗಿದ್ದಾರೆ. ನೀನು ಮಾತ್ರ ಕೊನೆಯ ಕ್ಷಣದಲ್ಲೂ ಓದುತ್ತಿರುವೆ. ಯಾಕೆ?’ ಎಂದೆ. ಆ ಹುಡುಗ ಹೇಳಿದ: ‘ನನ್ನ ಇಂದಿನ ಸ್ಥಿತಿಗೆ ಓದುವುದರ ಹೊರತು ಬೇರೆ ದಾರಿ ಇಲ್ಲ. ಅವರಿಗೆ ನಾಳಿನ ಚಿಂತೆ ಇಲ್ಲ. ಅಪ್ಪ, ಅಮ್ಮ ಚೆನ್ನಾಗಿ ಸಂಪಾದನೆ ಮಾಡಿದ್ದು, ಅವರಲ್ಲಿ ಅನೇಕರು ಯಾರದೋ ಬಲವಂತಕ್ಕೆ ಕಾಲೇಜಿಗೆ ಬರುತ್ತಿದ್ದಾರೆ. ನನ್ನದು ಬಡ ಕುಟುಂಬ. ಓದಿನ ಮೂಲಕವೇ ನಾನು ನನ್ನ ಅಸ್ತಿತ್ವ ಕಂಡುಕೊಳ್ಳ ಬೇಕಿದೆ’. ಆ ವಿದ್ಯಾರ್ಥಿಯ ಮಾತು ಕೇಳಿದಾಗ, ಆತನಿಗೆ ಶಿಕ್ಷಣದ ಮಹತ್ವ ಹಾಗೂ ಬದುಕು ಅರ್ಥವಾಗಿದೆ ಎನ್ನಿಸಿತು. ಭಾಸನ ‘ಪ್ರತಿಮಾ ನಾಟಕ’ದಲ್ಲಿ ಒಂದು ಸನ್ನಿವೇಶ ಬರುತ್ತದೆ. ಭರತ ಪ್ರತಿಮಾ ಗೃಹವನ್ನು ಪ್ರವೇಶ ಮಾಡುವಾಗ, ಅಲ್ಲಿರುವ ಪ್ರತಿಮೆಗಳನ್ನು ಒಂದೊಂದಾಗಿ ನೋಡುತ್ತಾ ಬರುತ್ತಾನೆ. ದಶರಥನ ಪ್ರತಿಮೆ ಕಾಣಿಸಿದಾಗ, ಭರತ ಅದನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿ, ‘ಬದುಕಿರುವವರ ಪ್ರತಿಮೆಗಳನ್ನೂ ಇಲ್ಲಿ ನಿಲ್ಲಿಸುತ್ತಾರೆಯೇ?’ ಎಂದು ಪ್ರತಿಮಾ ಗೃಹದಲ್ಲಿನ ನೌಕರನನ್ನು ಪ್ರಶ್ನಿಸುತ್ತಾನೆ. ‘ಇಲ್ಲ’ ಎನ್ನುವ ಉತ್ತರ ಅವನಿಗೆ ಎದುರಾಗುತ್ತದೆ. ಅಲ್ಲಿಯವರೆಗೂ ತಿಳಿಯದ ದಶರಥನ ಸಾವಿನ ವಿಷಯ ಭರತನಿಗೆ ತಿಳಿಯುವ ಸಂದರ್ಭವದು. ಮಗನಿಗೆ ತಂದೆಯ ಸಾವಿನ ವಿಷಯವನ್ನು ನೇರವಾಗಿ ಹೇಳದ ಆ ಪ್ರಸಂಗವನ್ನು ಕವಿ ಅಪೂರ್ವ ಕೌಶಲದಿಂದ ನಿಭಾಯಿಸಿದ್ದಾನೆ.
ಭಾಸನ ನಾಟಕದಲ್ಲಿನ ಪ್ರತಿಮೆಗಳಿಗೆ ಜೀವವಿಲ್ಲ. ನಮ್ಮ ವಿದ್ಯಾರ್ಥಿಗಳು ಜೀವಂತ ಪ್ರತಿಮೆಗಳು. ಸಮಾಜ ಎನ್ನುವ ಪ್ರತಿಮಾ ಗೃಹದಲ್ಲಿ ವಿದ್ಯಾರ್ಥಿಗಳು ಸೃಜನಶೀಲವಾಗಿ ತಮ್ಮ ಅಸ್ತಿತ್ವ ಕಂಡುಕೊಳ್ಳಬೇಕಾಗಿದೆ. ಅವರ ಜೀವಂತಿಕೆ ಬಗ್ಗೆ ಸಮಾಜ ಪ್ರಶ್ನಿಸುವ ಪರಿಸ್ಥಿತಿ ಬರಬಾರದು. ಹಾಗಾದರೆ, ವಿದ್ಯಾರ್ಥಿಗಳನ್ನು ಜೀವಂತ ಪ್ರತಿಮೆಗಳನ್ನಾಗಿ ರೂಪಿಸುವವರು ಯಾರು? ಬೋಧಕರು, ಪೋಷಕರು ಹಾಗೂ ಸಮಾಜದಲ್ಲಿ ಭಾಸ ಕವಿಯ ಪಾತ್ರವನ್ನು ವಹಿಸುವವರು ಯಾರು? ವಿದ್ಯಾರ್ಥಿಗಳನ್ನು ಸೃಜನಶೀಲವಾಗಿ ರೂಪಿಸುವ ಹೊಣೆ ಹೊತ್ತವರು ಪರಸ್ಪರ ನಂಬಿಕೆ ಮತ್ತು ವಿಶ್ವಾಸದ ಕೊರತೆಯಲ್ಲಿ ಬದುಕುತ್ತಿದ್ದಾರೆ. ಕಾಲವನ್ನು ಆರೋಪಿಯನ್ನಾಗಿ ಮಾಡುವ ಮೂಲಕ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ.
ಮೊಬೈಲ್ ಫೋನ್ ವ್ಯಸನ ಮತ್ತು ಸ್ವಯಂ ಶಿಸ್ತಿನ ಕೊರತೆಯ ಕಾರಣದಿಂದಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಉದ್ದೇಶವನ್ನೇ ಮರೆತಿದ್ದಾರೆ. ಈ ಮಕ್ಕಳು ಮೇಲ್ವಿಚಾರಣೆ ಇಲ್ಲದ ಅತಿಯಾದ ಸ್ವಾತಂತ್ರ್ಯದ ಫಲಾನುಭವಿಗಳು. ಮಹಾಭಾರತದ ಧೃತರಾಷ್ಟ್ರ ಮತ್ತು ಗಾಂಧಾರಿ ನಮ್ಮ ಪೋಷಕರಿಗೆ ಮಾದರಿ ಆಗಬಾರದು. ಹುಟ್ಟು ಕುರುಡನಾದ ಧೃತರಾಷ್ಟ್ರನನ್ನು ಕಂಡು ಗಾಂಧಾರಿಯು ಸ್ವಯಂ ಕುರುಡುತನ ಅನುಭವಿಸುತ್ತಾಳೆ. ಈ ಕುರುಡ ದಂಪತಿ ಮಕ್ಕಳ ಬೆಳವಣಿಗೆಯನ್ನೇ ಕಾಣದೆ, ಅವರನ್ನು ಮೇಲ್ವಿಚಾರಣೆ ಮಾಡದೆ ಸೋಲುತ್ತಾರೆ. ಈ ಪೌರಾಣಿಕ ಕಥನ ಚರಿತ್ರೆಯಲ್ಲಿ ಮತ್ತೆ ಮತ್ತೆ ಮರುಕಳಿಸಿದೆ, ವರ್ತಮಾನದಲ್ಲೂ ಜೀವಂತವಾಗಿದೆ.
‘ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ, ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ, ನಿಮ್ಮ ಶರಣರ ಸೂಳ್ನುಡಿಯ ಒಂದರಗಳಿಗೆ ಇತ್ತಡೆ ನಿಮ್ಮನಿತ್ತೆ ಕಾಣಾ ರಾಮನಾಥ!’ ಎನ್ನುವ ಜೇಡರ ದಾಸಿಮಯ್ಯನ ವಚನ ವಿದ್ಯಾರ್ಥಿಗಳಿಗೆ ದಾರಿದೀಪ ಆಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.