ADVERTISEMENT

ಸಂಗತ | ತ್ರಿಭಾಷಾ ಕಲಿಕೆ: ಜಾಣತನದ ನಡೆ

ಭಾಷೆಗಳ ಆಯ್ಕೆ ಮಕ್ಕಳ ಭವಿಷ್ಯ ರೂಪಿಸುವ ಗುರಿಯನ್ನಷ್ಟೇ ಹೊಂದಿರಬೇಕು

ಎಂ.ಅಬ್ದುಲ್ ರೆಹಮಾನ್ ಪಾಷ
Published 26 ಫೆಬ್ರುವರಿ 2025, 18:50 IST
Last Updated 26 ಫೆಬ್ರುವರಿ 2025, 18:50 IST
.
.   

ಶಿಕ್ಷಣದಲ್ಲಿ ಭಾಷಾ ನೀತಿ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ತಮಿಳುನಾಡು ಸರ್ಕಾರ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿ, ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳುವ ನಿಲುವನ್ನು ಗಟ್ಟಿಯಾಗಿ ಹಿಡಿದಿದೆ. ಅದನ್ನು ಉದಾಹರಣೆಯನ್ನಾಗಿ ಇಟ್ಟುಕೊಂಡು, ನಮ್ಮ ರಾಜ್ಯದಲ್ಲಿಯೂ ದ್ವಿಭಾಷಾ ನೀತಿಯನ್ನೇ ಅನುಸರಿಸಬೇಕು ಎಂದು ಕೆಲವು ವಿದ್ವಾಂಸರು ಬಯಸುತ್ತಾರೆ. ಭಾಷೆ ಕುರಿತ ರಾಜಕೀಯವನ್ನು ಒಂದು ಕ್ಷಣ ಬದಿಗಿರಿಸಿ, ಇದನ್ನು ಭಾಷಾ ವೈಜ್ಞಾನಿಕ ದೃಷ್ಟಿಯಿಂದ, ಭಾಷೆಯ ಕಲಿಕೆಯು ವ್ಯಕ್ತಿಯ ಅಭ್ಯುದಯಕ್ಕೆ ಪೂರಕವಾಗಬೇಕು ಎನ್ನುವ ನೆಲೆಯಿಂದ ನಾವು ಈ ಕುರಿತು ಚಿಂತನೆ ಮಾಡಬಹುದು.

ಭಾರತದ ಶ್ರೀಮಂತ ಭಾಷಿಕ ಬಹುತ್ವವನ್ನು ಪರಿಗಣಿಸಿ, 2020ರ ರಾಷ್ಟ್ರೀಯ ಶಿಕ್ಷಣ ನೀತಿಯು (ನಂತರದ ಕೆಲವು ಪರಿಷ್ಕರಣೆಗಳನ್ನೂ ಒಳಗೊಂಡು) ಶಿಕ್ಷಣದ ಭಾಷೆಯ ಕುರಿತು ಹೇಳಿರುವುದು ಹೀಗೆ: ‘ಎಲ್ಲೆಲ್ಲಿ ಸಾಧ್ಯವೋ ಅಲ್ಲಿ, ಕನಿಷ್ಠ ಐದನೇ ತರಗತಿ ಯವರೆಗೆ, ಸಾಧ್ಯವಾದರೆ 8ನೇ ತರಗತಿಯವರೆಗೆ ಅಥವಾ ಇನ್ನೂ ಮುಂದಕ್ಕೂ, ಶಿಕ್ಷಣದ ಮಾಧ್ಯಮವು ಕಲಿಯುವವರ ಮನೆಮಾತು, ಮಾತೃಭಾಷೆ, ಸ್ಥಳೀಯ ಭಾಷೆ, ಪ್ರಾದೇಶಿಕ ಭಾಷೆ ಆಗಿರತಕ್ಕದ್ದು’. ಶಾಲೆಯಲ್ಲಿ ಮೂರು ಭಾಷೆಗಳನ್ನು ಕಲಿಯಬೇಕು ಎಂದು ಹೇಳುತ್ತಾ, ‘ಮಕ್ಕಳು ಕಲಿಯುವ ಮೂರು ಭಾಷೆಗಳು ರಾಜ್ಯ, ಪ್ರದೇಶ ಮತ್ತು ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದು, ಈ ಮೂರರಲ್ಲಿ ಕನಿಷ್ಠ ಎರಡು ಭಾರತೀಯ ಭಾಷೆಗಳಾಗಿರಬೇಕು’ ಎಂಬ ಆಶಯವನ್ನು ತೋರಿದೆ.

ರಾಜ್ಯದಲ್ಲಿನ ಕನ್ನಡೇತರ ಮಾತೃಭಾಷೆಯವರಲ್ಲಿ ಹೆಚ್ಚಿನವರು ತಮ್ಮ ಮಾತೃಭಾಷೆಯ ಜೊತೆ ಪರಿಸರದ ಭಾಷೆಯಾದ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಕಲಿತಿರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಶಿಕ್ಷಣದಲ್ಲಿ ಕನ್ನಡವನ್ನೇ ಮಾಧ್ಯಮವನ್ನಾಗಿ ಅಳವಡಿಸಿಕೊಳ್ಳು ವುದು ಒಳ್ಳೆಯ ವಿಧಾನ. ಇದರಿಂದ ಕನ್ನಡೇತರ ಅಲ್ಪಸಂಖ್ಯಾತ ಭಾಷೀಯರಿಗೆ ಆಗಬಹುದಾದ ಸಮಸ್ಯೆ ಗಳನ್ನು ಬಗೆಹರಿಸಿದರೆ, ಭಾಷಿಕವಾಗಿ ಎಲ್ಲರನ್ನೂ ಮುಖ್ಯವಾಹಿನಿಗೆ ತಂದಂತಾಗುತ್ತದೆ. ಇದು ಕಲಿಕೆಯ ಸೌಲಭ್ಯವಷ್ಟೇ ಅಲ್ಲ, ಶಿಕ್ಷಣವನ್ನು ಜೀವನೋಪಾಯದ ಸಾಧನವನ್ನಾಗಿ ಕಾಣುವುದಕ್ಕೂ ಸಾಧ್ಯವಾಗುತ್ತದೆ. ಇದಿಲ್ಲವಾದರೆ, ಉದಾಹರಣೆಗೆ, ಉರ್ದು ಮಾತೃ ಭಾಷೆಯಲ್ಲಿ ಹತ್ತನೇ ತರಗತಿ ಓದಿರುವ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಹೋಗುವುದಕ್ಕೆ ಅಥವಾ ಉದ್ಯೋಗಗಳನ್ನು ಗಳಿಸಿಕೊಳ್ಳುವುದಕ್ಕೆ ಇರುವ ಅವಕಾಶಗಳು ತೀವ್ರವಾಗಿ ಕಡಿಮೆ ಆಗುತ್ತವೆ.

ADVERTISEMENT

ಕನ್ನಡವು ಕಲಿಕೆಯ ಮಾಧ್ಯಮವಾಗಿದ್ದರೆ, ಕನ್ನಡವನ್ನೇ ಪ್ರಥಮ ಭಾಷೆಯನ್ನಾಗಿ ಕಲಿಯುವುದು ಇತರ ವಿಷಯಗಳ ಕಲಿಕೆಗೆ ಪೂರಕವಾಗಿರುತ್ತದೆ. ಇನ್ನು ದ್ವಿತೀಯ ಭಾಷೆಯಾಗಿ ಇಂಗ್ಲಿಷ್‌ನ ಆಯ್ಕೆಯೂ ಭವಿಷ್ಯದ ದೃಷ್ಟಿಯಿಂದ ಹೆಚ್ಚು ಉಪಯುಕ್ತವೆ.ಇನ್ನು ಇರುವುದು ಮೂರನೇ ಭಾಷೆ. ಇಲ್ಲಿ ಹಿಂದಿ ಕಲಿಯುವುದು ಕಲಿಕೆಗೆ ಒಂದು ಸಮಗ್ರತೆಯನ್ನು ಒದಗಿಸುತ್ತದೆ. ರಾಜ್ಯದ ಅಧಿಕೃತ ಭಾಷೆಯಾದ ಕನ್ನಡವನ್ನು ಪ್ರಥಮ ಭಾಷೆಯಾಗಿ ಹೇಗೂ ಕಲಿಯುತ್ತಾರೆ. ಅದೇ ರೀತಿ ರಾಷ್ಟ್ರದ ಆಡಳಿತ ಭಾಷೆಯಾಗಿರುವ ಹಿಂದಿಯನ್ನೂ ಕಲಿತರೆ ಮಕ್ಕಳಿಗೆ ಹೆಚ್ಚು ಪ್ರಯೋಜನ. ಹಿಂದಿಯು ಕನ್ನಡದ ಹಾಗೆಯೇ ಅನೇಕ ಮಾಧ್ಯಮಗಳ ಜನಪ್ರಿಯ ರೂಪದಲ್ಲಿ, ಅದಕ್ಕೆ ಹತ್ತಿರವಾದ ಉರ್ದುವಿನಲ್ಲಿ ಕಿವಿಗೆ ಬೀಳುವುದರಿಂದ ಹಿಂದಿಯು ಇಂಗ್ಲಿಷಿನಷ್ಟು ಆಗಂತುಕವಾಗಿ ಅನ್ನಿಸುವುದಿಲ್ಲ. ಅಲ್ಲದೆ ಹಿಂದಿ ವರ್ಣಮಾಲೆಯು ಕನ್ನಡದ ತರಹವೇ ಇರುವುದರಿಂದ ವ್ಯಾವಹಾರಿಕ ಹಿಂದಿಯನ್ನು ಕಲಿಯುವುದು ಹೆಚ್ಚು ಸುಲಭ. ಔಪಚಾರಿಕ ಹಿಂದಿ ಭಾಷೆಯಲ್ಲಿ ಸಂಸ್ಕೃತದಿಂದ ಎರವಲು ಪಡೆದ ನೂರಾರು ಪದಗಳು ಕನ್ನಡಕ್ಕೂ ಸಮಾನವಾದ್ದರಿಂದ ಅಧಿಕೃತ ಹಿಂದಿಯನ್ನೂ ಕಲಿಯುವುದು ಸುಲಭ.

ಅಧಿಕೃತ ಕನ್ನಡವನ್ನು ಕಲಿತರೆ ರಾಜ್ಯದಲ್ಲಿ ಹೇಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆಯೋ ಹಾಗೆಯೇ ಹಿಂದಿಯನ್ನು ಚೆನ್ನಾಗಿ ಕಲಿಯುವ ಮೂಲಕ, ಅಂತರರಾಜ್ಯ, ರಾಷ್ಟ್ರ ಮಟ್ಟ, ಕೇಂದ್ರ ಸರ್ಕಾರಿ ಹುದ್ದೆಗಳ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕವಾದ ವೃತ್ತಿ ಅವಕಾಶಗಳು ತೆರೆಯುತ್ತವೆ. ಕರ್ನಾಟಕ ಅಧಿಕೃತ ಭಾಷಾ ಕಾಯ್ದೆ– 1963ರ ಪ್ರಕಾರ, ರಾಜ್ಯದ ಆಡಳಿತ ಭಾಷೆಯಾದ ಕನ್ನಡವನ್ನು ನಾವೆಲ್ಲರೂ ಕಲಿಯುತ್ತಿರುವ ಹಾಗೆ, ಸಂವಿಧಾನದ ವಿಧಿ 343ರ ಪ್ರಕಾರ, ಒಕ್ಕೂಟದ ಆಡಳಿತದ ಭಾಷೆಯೆಂದು ಗುರುತಿಸಲಾಗಿರುವ ಹಿಂದಿ ಭಾಷೆಯನ್ನು ಕಲಿತ ಹಾಗೂ ಆಗುತ್ತದೆ.

ಆಡಳಿತ, ನ್ಯಾಯಾಂಗ, ಶಿಕ್ಷಣದಂಥ ಕ್ಷೇತ್ರ ಗಳಲ್ಲಿ ಬಳಕೆಯಾಗುತ್ತಿರುವ ಮಾದರಿಯ ಕನ್ನಡವು ನಿಜವೆಂದರೆ ಯಾರ ಮನೆ ಮಾತೂ ಅಲ್ಲ. ಕನ್ನಡದ ಅನೇಕ ಮನೆಮಾತುಗಳಿಗೆ ಸರ್ವೇಸಾಮಾನ್ಯವಾದ ಅಂಶಗಳು ಮತ್ತು ವ್ಯಾವಹಾರಿಕ ಅಗತ್ಯಕ್ಕೆ ತಕ್ಕಂತೆ ಸಂಸ್ಕೃತ, ಇಂಗ್ಲಿಷ್, ಪರ್ಶಿಯನ್‌ನಂಥ ಭಾಷೆಗಳಿಂದ ಪದಗಳನ್ನು ಎರವಲು ಪಡೆದು, ವ್ಯಾಕರಣ ಪದ್ಧತಿಯನ್ನೂ ತಕ್ಕಮಟ್ಟಿಗೆ ಬದಲಾಯಿಸಿಕೊಂಡು ವಿಕಸನ ಹೊಂದಿರುವ ಒಂದು ರೀತಿಯ ಕೃತ್ರಿಮ ಶೈಲಿಯಾಗಿದೆ ಆಡಳಿತ ಕನ್ನಡ. ಹಾಗೆಯೇ ಔಪಚಾರಿಕ ಹಿಂದಿಯೂ ಭೋಜಪುರಿ, ಬುಂದೇಲಿ, ಹರಿಯಾಣ್ವಿಯಂಥ ಭಾಷೆಗಳಿಂದ ಎರವಲು ಪಡೆದು ಅಧುನಿಕವಾಗಿ ವಿಕಾಸ ಹೊಂದಿದ ಔಪಚಾರಿಕ ಶೈಲಿ.

ಈ ಎಲ್ಲ ಅಂಶಗಳನ್ನು ಮನಗಂಡು, ಶಾಲಾ ಶಿಕ್ಷಣದಲ್ಲಿ ಕನಿಷ್ಠ ಮೂರು ಭಾಷೆಗಳನ್ನು ಕಲಿಯುವುದು ಜಾಣತನ. ಭಾಷೆಗಳ ಆಯ್ಕೆಯು ಮಕ್ಕಳ ಭವಿಷ್ಯವನ್ನು ರೂಪಿಸುವ ಗುರಿಯನ್ನು ಹೊಂದಿರಬೇಕೇ ವಿನಾ, ಅದು ಭಾಷೆ-ಭಾಷೆ, ರಾಜ್ಯ-ಕೇಂದ್ರದ ನಡುವಿನ ರಾಜಕಾರಣದಲ್ಲಿ ನಲುಗಿ ಹೋಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.