ADVERTISEMENT

ಸಂಗತ: ಲೈಂಗಿಕ ಶಿಕ್ಷಣಕ್ಕೆ ಇದು ಸಕಾಲ

ಮಕ್ಕಳಿಗೆ ತಮ್ಮ ದೇಹದ ಬಗ್ಗೆ ಅರಿವು ಮೂಡಿಸಲು ಹಾಗೂ ಲೈಂಗಿಕ ಶೋಷಣೆಯ ಬಗ್ಗೆ ತಿಳಿವು ಮೂಡಿಸಲು ‘ಲೈಂಗಿಕ ಶಿಕ್ಷಣ’ ಅಗತ್ಯ.

ಮಮತಾ ಅರಸಿಕೆರೆ
Published 4 ಆಗಸ್ಟ್ 2025, 20:52 IST
Last Updated 4 ಆಗಸ್ಟ್ 2025, 20:52 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ 80 ಸಾವಿರಕ್ಕೂ ಹೆಚ್ಚು ಬಾಲಕಿಯರು ಗರ್ಭಿಣಿಯರಾಗಿದ್ದಾರೆ ಎನ್ನುವುದು ‘ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ ಪ್ರಕಟಿಸಿರುವ ಅಂಕಿಅಂಶ. ಈ ಬಾಲಗರ್ಭಿಣಿ ಯರ ಪಟ್ಟಿಯಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು ಜಿಲ್ಲೆ ಮೊದಲ ಮೂರು ಸ್ಥಾನದಲ್ಲಿವೆ. ಬಾಲ್ಯವಿವಾಹ, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಪ್ರೀತಿಯ ನೆಪದಲ್ಲಿ ದೈಹಿಕ ಸಂಪರ್ಕ, ಲೈಂಗಿಕತೆ ಬಗೆಗಿನ ಕುತೂಹಲ, ಇವೆಲ್ಲವೂ ಬಾಲಕಿಯರು ಗರ್ಭ ಧರಿಸಲಿಕ್ಕೆ ಕಾರಣವಾಗಿವೆ.

ಎಂಟು, ಒಂಬತ್ತು, ಹತ್ತನೇ ತರಗತಿಯ ಬಾಲಕಿಯರು ಗರ್ಭಿಣಿಯರಾಗಿ ತಾಯಂದಿರಾಗುತ್ತಿದ್ದಾರೆ ಇಲ್ಲವೇ ಗರ್ಭಪಾತಕ್ಕೆ ಒಳಗಾಗುತ್ತಿದ್ದಾರೆ. ತಮ್ಮದೇ ಮನೆಯ ಸದಸ್ಯರು, ಪರಿಚಿತರು, ಸಹಪಾಠಿಗಳು, ಅಪರಿಚಿತರಿಂದ ಆಗುವ ಅತ್ಯಾಚಾರ ಎಳೆಯರನ್ನು ಅಸಹಾಯಕತೆಗೆ ದೂಡಿದೆ. ಹದಿಹರೆಯದಲ್ಲಿ ಉಂಟಾಗುವ ಆಕರ್ಷಣೆಗಳು, ಪ್ರೇಮದ ಜಾಲಗಳು ಅಪ್ರಬುದ್ಧರನ್ನು ಲೈಂಗಿಕ ಗೀಳಿಗೆ ದೂಡುತ್ತವೆ. ಸಾವಿರಾರು ಬಾಲಕಿಯರು ಅರಿವಿದ್ದೋ ಇಲ್ಲದೆಯೋ ಈ ವಿಷವರ್ತುಲದಲ್ಲಿ ಸಿಲುಕಿದ್ದಾರೆ.

ಅಪೌಷ್ಟಿಕತೆ, ರಕ್ತಹೀನತೆ, ಗರ್ಭಾವಸ್ಥೆಯ ತೊಡಕುಗಳು ಬಾಲಗರ್ಭಿಣಿಯರಲ್ಲಿ ಕಾಣಿಸಿ ಕೊಳ್ಳುತ್ತವೆ. ಮಗುವಿಗೆ ಜನ್ಮ ನೀಡುವ ಹಾಗೂ ಗರ್ಭಪಾತದ ವೇಳೆ ಕೆಲವರು ಸಾವಿಗೀಡಾಗಿರುವುದೂ ಇದೆ. ಈ ಬಾಲಕಿಯರು ಶಾಲೆಗಳಿಂದ, ವಿದ್ಯಾಭ್ಯಾಸದಿಂದ ವಂಚಿತರಾಗುವ ಸಂಭವವೂ ಇದೆ. ಇದು ಅವರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ; ಭವಿಷ್ಯವನ್ನು ಹಾಳು ಮಾಡುತ್ತದೆ. ಬಾಲ್ಯವಿವಾಹ ನಿಷಿದ್ಧವಾಗಿದ್ದರೂ, ಕಾನೂನು ಪ್ರಕ್ರಿಯೆ ಬಲವಾಗಿದ್ದರೂ, ಅನಾಹುತಗಳನ್ನು ತಡೆಯಲು ಆಗುತ್ತಿಲ್ಲ.

ADVERTISEMENT

ಬೇಕಾದ್ದು, ಬೇಡವಾದ್ದು ಎಲ್ಲವೂ ಗೂಗಲ್ ಮಾಡಿದರೆ ಸಿಗುತ್ತದೆ. ಜಾಲತಾಣಗಳಲ್ಲಿ ಅದೆಷ್ಟು ಬಗೆಯ ವೆಬ್‌ಸೈಟ್‌ಗಳು, ಅಶ್ಲೀಲತೆಯನ್ನೇ ಸರಕನ್ನಾಗಿಸಿಕೊಂಡ ಪೋರ್ನ್‌ಸೈಟ್‌ಗಳು ಬೆರಳ ತುದಿಯಲ್ಲಿ ತೆರೆದುಕೊಳ್ಳುತ್ತವೆ. ಸರಿ ತಪ್ಪುಗಳ ಜ್ಞಾನವಿಲ್ಲದ ವಯಸ್ಸಿನಲ್ಲಿ ಬೇಡದ ವಿಷಯಗಳು ಅವೈಜ್ಞಾನಿಕವಾಗಿ ದಕ್ಕಿದರೆ ಅನಾಹುತವೇ ಹೆಚ್ಚು. ನಿಭಾಯಿಸಲು, ನಿರ್ವಹಿಸಲು ಆಗದೆ ಮಕ್ಕಳು ಒದ್ದಾಡುತ್ತಾರೆ. ಈ ಗೊಂದಲ ಹಾಗೂ ತಲ್ಲಣ ತಪ್ಪಿಸಲಿಕ್ಕಾಗಿ ಮಕ್ಕಳಿಗೆ ವಿಶೇಷ ಶಿಕ್ಷಣದ ಅವಶ್ಯಕತೆಯಿದೆ.

ಶಾಲೆಗಳಲ್ಲಿ ವಿಜ್ಞಾನ, ಜೀವಶಾಸ್ತ್ರ ವಿಷಯವನ್ನು ಕಲಿಸಲಾಗುತ್ತದೆ. ಅವುಗಳ ಜೊತೆಗೆ, ಲೈಂಗಿಕ ಶಿಕ್ಷಣದ ಅವಶ್ಯಕತೆ ಈಗ ಅಗತ್ಯವಾಗಿದೆ. ಜೀವಶಾಸ್ತ್ರ ಕಲಿಸುವಾಗ ‘ಪ್ರಜನನ’ ವಿಷಯದ ಪಾಠವಿದ್ದರೆ, ಅದನ್ನು ವಿವರಿಸಲು ವಿಜ್ಞಾನದ ಶಿಕ್ಷಕರೇ ಹಿಂಜರಿಯುತ್ತಾರೆ. ಅಂಕ ಗಳಿಕೆಗೆ ಎಷ್ಟು ಬೇಕೋ ಅಷ್ಟು ಹೇಳಿ ಮುಗಿಸಿಬಿಡುವ ಸಾಧ್ಯತೆಯೇ ಹೆಚ್ಚು. ಫೋನಿನಲ್ಲೇ ಎಲ್ಲಾ ಬಗೆಯ ವಿಷಯಗಳೂ ಲಭ್ಯವಿರುವಾಗ, ಲೈಂಗಿಕ ವಿಷಯದ ಬಗ್ಗೆ ಮಾತನಾಡುವುದು ಹಾಗೂ ಲೈಂಗಿಕ ತಿಳಿವಳಿಕೆ ಶಿಕ್ಷಣವಾಗಿ ಸಿಗುವುದು ಬೇಡವೆಂದರೆ ಅಥವಾ ಮುಜುಗರದ ವಿಷಯವಾದರೆ ಹೇಗೆ? ಇದು, ಅಸಭ್ಯ ಅಥವಾ ನಿರ್ಲಜ್ಜ ವಿಷಯವಲ್ಲ; ಸಂಸ್ಕೃತಿಯ ವಿರುದ್ಧವೂ ಅಲ್ಲ. ತಾತ್ವಿಕ ವಿಚಾರ ಹಾಗೂ ವೈಚಾರಿಕ, ವೈಜ್ಞಾನಿಕ ನಡೆ.

ಲೈಂಗಿಕ ಶಿಕ್ಷಣವೆಂದರೆ ಬರೀ ಲೈಂಗಿಕ ಅಂಗಗಳ ಬಗ್ಗೆ ತಿಳಿಯುವುದು ಎಂದರ್ಥವಲ್ಲ. ಎಷ್ಟೋ ಮಕ್ಕಳಿಗೆ ಅವರದೇ ದೇಹದ ಬಗ್ಗೆ ಅರಿವಿರುವುದಿಲ್ಲ. ಬಾಲಕಿಯರಿಗೂ ಮಾಸಿಕ ಋತುಸ್ರಾವದ ದಿನಗಳನ್ನು ನಿರ್ವಹಿಸುವುದು ತಿಳಿದಿರುವುದಿಲ್ಲ. ಲೈಂಗಿಕತೆ ಬಗ್ಗೆ ಅಜ್ಞಾನವೇ ಹೆಚ್ಚಿದೆ. ಅನುಮಾನಗಳೂ ಸಾಕಷ್ಟಿವೆ. ಖಾಸಗಿ ಅಂಗಗಳ ಕುರಿತು ಕುತೂಹಲವೂ, ಆಕರ್ಷಣೆಯೂ ಬಾಲ್ಯ ಹಾಗೂ ಹದಿಹರೆಯದಲ್ಲಿ ಹೆಚ್ಚು. ಇಂತಹ ಸಮಯದಲ್ಲೇ ಶಿಕ್ಷಣವಾಗಿ ಲೈಂಗಿಕತೆಯ ಕುರಿತು ತಿಳಿಯುವುದು ಅತ್ಯಗತ್ಯ.

ಮಾನವ ದೇಹದ ರಚನೆ, ಹದಿಹರೆಯದವರಲ್ಲಿ ಆಗುವ ದೈಹಿಕ ಬದಲಾವಣೆಗಳು, ಮಾನಸಿಕ ಪರಿವರ್ತನೆಗಳು, ಲೈಂಗಿಕ ಆಕರ್ಷಣೆ, ಲೈಂಗಿಕ ಶೋಷಣೆ, ಹಾರ್ಮೋನುಗಳ ಪ್ರಭಾವ, ಲೈಂಗಿಕ ಅಂಗಗಳ ಕೆಲಸಗಳು, ಅವುಗಳ ರಕ್ಷಣೆ, ಸುರಕ್ಷತೆ, ಗರ್ಭಧಾರಣೆ, ಫಲಿತಾಂಶಗಳು, ತಡೆಗಟ್ಟುವ ವಿಧಾನ, ಮುಂದಾಲೋಚನೆ, ಸಂಬಂಧಗಳ ಗಡಿಗಳನ್ನು ಗುರುತಿಸುವುದು, ಗುಡ್ ಮತ್ತು ಬ್ಯಾಡ್ ಟಚ್, ಇದೆಲ್ಲದರ ಅರಿವು ಶಿಕ್ಷಣದ ರೂಪದಲ್ಲಿ ದಕ್ಕಿದರೆ ಒಳ್ಳೆಯದು.

ಮಕ್ಕಳ ಸರ್ವತೋಮುಖ ವಿಕಸನಕ್ಕಾಗಿ ಬಾಲ್ಯದಲ್ಲೇ ಲೈಂಗಿಕ ಶಿಕ್ಷಣ ಅಗತ್ಯ. ಲೈಂಗಿಕ ದೌರ್ಜನ್ಯವನ್ನು ಅದರ ಬಗ್ಗೆ ಅರಿವಿಲ್ಲದೆಯೇ ಸಹಿಸಿಕೊಳ್ಳುವ ಮಕ್ಕಳಿಗೂ ಶಿಕ್ಷಣ ಸಹಕಾರಿ. ಬಾಲ್ಯವಿವಾಹ, ಅಕಾಲಿಕ ಗರ್ಭಧಾರಣೆಯಂತಹ ಸಮಸ್ಯೆಗಳನ್ನು ತಡೆಗಟ್ಟಲೂ ಉಪಯುಕ್ತ. ಭಾವನಾತ್ಮಕ ಕುಸಿತ, ಖಿನ್ನತೆ, ಅಪರಾಧಿ ಪ್ರಜ್ಞೆಯಿಂದ ನರಳುವುದನ್ನು ತಪ್ಪಿಸಬಹುದು.

ನೆದರ್ಲೆಂಡ್‌, ಸ್ವೀಡನ್, ಫಿನ್‌ಲೆಂಡ್‌, ನಾರ್ವೆ ಸೇರಿದಂತೆ ಕೆಲವು ದೇಶಗಳು ಮಕ್ಕಳಿಗೆ ಬಾಲ್ಯದಿಂದಲೇ ಲೈಂಗಿಕ ಶಿಕ್ಷಣ ನೀಡುತ್ತವೆ. ಆ ದೇಶಗಳಲ್ಲಿ ದೌರ್ಜನ್ಯಗಳು ಹಾಗೂ ಅಕಾಲಿಕ ಗರ್ಭಧಾರಣೆ ಪ್ರಮಾಣ ಕಡಿಮೆ ಇರುವುದಕ್ಕೂ ಅಲ್ಲಿನ ಲೈಂಗಿಕ ಶಿಕ್ಷಣಕ್ಕೂ ಸಂಬಂಧ ಇದೆ. ಯುನೆಸ್ಕೊ ಕೂಡ ‘ಸಮಗ್ರ ಲೈಂಗಿಕ ಶಿಕ್ಷಣ’ಕ್ಕೆ ಆದ್ಯತೆ ನೀಡುತ್ತಿದೆ.

ನಮ್ಮಲ್ಲೂ ‘ಲೈಂಗಿಕ ಶಿಕ್ಷಣ’ವನ್ನು ಪ್ರಾಥಮಿಕ ಶಾಲೆಗಳಿಂದಲೇ ತುರ್ತಾಗಿ ಆರಂಭಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮೊದಲು ಶಿಕ್ಷಕರಿಗೆ ತರಬೇತಿ ನೀಡಬೇಕು. ಲೈಂಗಿಕ ಶಿಕ್ಷಣವನ್ನು ಮುಜುಗರದ, ಅನಗತ್ಯವಾದ ವಿಷಯವೆಂದು ಯಾರೂ ಭಾವಿಸಬಾರದು. ಹಾಗಾದರೆ ಮಾತ್ರ ಬಾಲ್ಯವಿವಾಹ, ಬಾಲಕಿಯರ ಗರ್ಭಧಾರಣೆ, ಎಳೆಯರ ಸಾವು, ಹುಡುಗಿಯರ ವಿದ್ಯಾಭ್ಯಾಸ ಕುಂಠಿತವಾಗುವುದು ಮೊದಲಾದ ಪಿಡುಗುಗಳನ್ನು ತಪ್ಪಿಸಬಹುದು.

ಸಾಂಕೇತಿಕ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.