ADVERTISEMENT

ಸಂಗತ: ಕಾಡಹಾದಿ...ಮೊಗೆದಷ್ಟೂ ವಿಸ್ತಾರ

ಕಾಡೊಳಗಿನ ಪ್ರತೀ ಇಣುಕೂ ಹಿತಕರ, ಸುಂದರ, ಅಲ್ಲಿ ಏನೆಲ್ಲಾ ಕೌತುಕ!

ಸತೀಶ್ ಜಿ.ಕೆ. ತೀರ್ಥಹಳ್ಳಿ
Published 19 ಮಾರ್ಚ್ 2021, 19:31 IST
Last Updated 19 ಮಾರ್ಚ್ 2021, 19:31 IST
ಕಾಡು–ಪ್ರಾತಿನಿಧಿಕ ಚಿತ್ರ
ಕಾಡು–ಪ್ರಾತಿನಿಧಿಕ ಚಿತ್ರ   

ಇದು ಮನುಷ್ಯಕೇಂದ್ರಿತ ಕಾಲ. ತನ್ನ ಬುಡವನ್ನಷ್ಟೇ ಧ್ಯಾನಿಸುತ್ತಾ ಕೂರುವ ಆತ ಬಯಕೆಗಳ ಬೆನ್ನುಹತ್ತಿ ಬಸವಳಿಯುತ್ತಿದ್ದಂತೆ, ಬದುಕಿನ ಭರವಸೆಗಳೂ ಬತ್ತುತ್ತಿವೆ. ‘ಪ್ರಾಣಿಗಳೇ ಗುಣದಲಿ ಮೇಲು’ ಎಂಬುದನ್ನರಿತ ಮನುಷ್ಯನಿಗೆ ತಾನೊಬ್ಬ ಬುದ್ಧಿಶಾಲಿ ಪಶುವಾಗಿಯೂ ಪಶುತ್ವವನ್ನು ಮೀರಬಲ್ಲ ವ್ಯಕ್ತಿತ್ವ ಹೊಂದಲು ಬೇಕಿರುವುದು ತನ್ನ ಸಹಜೀವಗಳೊಂದಿ ಗಿನ ಸಹಬಾಳ್ವೆ ಎಂಬುದಂತೂ ಸತ್ಯ. ತನ್ನೆಲ್ಲಾ ಕಾತರ ನಿರೀಕ್ಷೆಗಳನ್ನು ನಿಭಾಯಿಸಲಾಗದೇ ಹೊಯ್ದಾಡುವ ಮನುಷ್ಯನಿಗೆ ಸಲಹೆ-ಸಾಂತ್ವನದ ಒರತೆಯಾಗಿ, ಜೀವನಪ್ರೀತಿಯ ಗಣಿಯಾಗಿ ಕಾಣುವುದು, ಕಾಡುವುದು ವನ್ಯಜೀವಿಗಳು. ಹಾಗೆ ನೋಡಿದರೆ, ಕಾಡೊಳಗಿನ ಪ್ರತೀ ಇಣುಕೂ ಹಿತಕರ, ಸುಂದರ.

ಸ್ವಯಂಘೋಷಿತ ಶ್ರೇಷ್ಠಜೀವಿ ಮನುಷ್ಯನಿಗಿಂತ ಉಳಿದೆಲ್ಲಾ ಜೀವಿಗಳು ಭಿನ್ನ. ಅವಕ್ಕೆ ಯಾರನ್ನೂ ಮೆಚ್ಚಿಸಬೇಕಾದ, ಒಪ್ಪಿಸಬೇಕಾದ ದರ್ದು ಇಲ್ಲ. ಹಸಿವು, ನಿದ್ರೆ, ನೀರಡಿಕೆಗಳೆಲ್ಲ ಸ್ವಯಂಚಾಲಿತ. ತಮ್ಮಿಷ್ಟಕ್ಕೆ-ತಮ್ಮಷ್ಟಕ್ಕೆ ತಾವು ಬದುಕುತ್ತವೆ. ಆತ್ಮರಕ್ಷಣೆ, ಮರಿಸಾಕಣೆ- ಪೋಷಣೆಯ ವಿನಾ ಅತಿಯಾಗಿ ಏನನ್ನೂ ಬಯಸದ ನಿರುಪದ್ರವಿ ಜೀವಿಗಳವು. ತಮ್ಮ ಉಳಿವಿಗಾಗಿ ಮಾತ್ರವೇ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತವೆ. ಪರಸ್ಪರ ಪೂರಕವಾಗಿ ಬದುಕುತ್ತವೆ.

ನಮಗೆಲ್ಲಾ ‘ಪ್ರಕೃತಿಯೇ ಶ್ರೇಷ್ಠ ಗುರು’ ಎಂಬಂತೆ, ಶ್ರಮಸಂಸ್ಕೃತಿಯ ಯಶೋಗಾಥೆ ಹೇಳುವ ಇರುವೆ, ಮಣ್ಣುಸೇವೆಯ ಎರೆಹುಳು, ನೂಲು ನೇಯಲು ಜೀವ ತೇಯುವ ರೇಷ್ಮೆಹುಳು, ಕೂಡುಕುಟುಂಬದ ಹಿರಿಮೆ ಸಾರುವ ಜೇನ್ನೊಣಗಳು, ಸೋಲಪ್ಪದೇ ಸೆಣಸುವ ಜೇಡ, ಗುರಿತಪ್ಪದ ಚಿರತೆ, ದ್ವೇಷ ಬಿಡದ ಹಾವು-ಮುಂಗುಸಿ, ಹೊಂಚುಹಾಕುತ್ತಲೇ ಕೂರುವ ಗುಳ್ಳೆನರಿ, ಹಸಿದರೂ ಹುಲ್ಲು ತಿನ್ನದ ಹುಲಿರಾಯ, ರಾಜ ಗಾಂಭೀರ್ಯದಲ್ಲಿ ಹೆಜ್ಜೆಹಾಕುವ ಆನೆ... ಏನೆಲ್ಲಾ ಕೌತುಕ, ವನ್ಯಜೀವಿಯಾನ, ಕಾಡ ಹಾದಿ ಬಗೆದಷ್ಟೂ ಆಳ, ಮೊಗೆದಷ್ಟೂ ವಿಸ್ತಾರ.

ADVERTISEMENT

ನೆಲದ ಕಂಪನವನ್ನು ಯಃಕಶ್ಚಿತ್ ಪ್ರಾಣಿಗಳು ಗ್ರಹಿಸಿ ಅನಾಹುತ ತಪ್ಪಿಸಿದ ಉದಾಹರಣೆಗಳಿವೆ. ಸಮುದ್ರವಾಸಿಯಾಗಿದ್ದೂ ಮೊಟ್ಟೆಯಿಡುವ ಕಾಲಕ್ಕೆ, ಜನ್ಮವೆತ್ತಿದ ಅಮೆಜಾನ್ ನದಿತೀರಕ್ಕೆ ವಲಸೆ ಬರುವ ಸಾಲ್ಮೋನಾ ಮೀನುಗಳಿಗೂ ತವರು ತೊರೆದು ಸಾವಿರಾರು ಮೈಲು ಸಾಗುವ ಹಕ್ಕಿಗಳಿಗೂ ಸ್ವಸ್ಥಾನಕ್ಕೆ ಮರಳುವಾಗಿನ ಹೆಜ್ಜೆ ಮೂಡದ ಹಾದಿಯ ಯಾತ್ರೆಯು ಸೋಜಿಗವೇ! ಭೂಕಾಂತವನ್ನು ಆಧರಿಸಿದ ಜೈವಿಕ ಗಡಿಯಾರದ ಪ್ರಕ್ರಿಯೆಯದು. ಬಾವಲಿಯು ನಮ್ಮ ಮಿತಿಗೆ ನಿಲುಕದ ಧ್ವನಿತರಂಗಗಳ ಪ್ರತಿಧ್ವನಿಯಿಂದ ದಾರಿಯನ್ನು ಕಂಡುಕೊಳ್ಳುವುದು ಕೂಡ ವಿಶಿಷ್ಟವೇ.

ಕಾಲಾಂತರದಿಂದಲೂ ಪ್ರಕೃತಿಯು ಮನುಷ್ಯನ ಕುತೂಹಲಕ್ಕೆ ನೀರೆರೆಯುತ್ತಲೇ ಬಂದಿದೆ. ಹಾರುವ ಯಂತ್ರಗಳಿಗೆ ಹಕ್ಕಿಪಕ್ಷಿಗಳು, ಜಲಾಂತರ್ಗಾಮಿಗಳಿಗೆ ಮೀನುಗಳು, ಮಣ್ಣುತಳ್ಳುವ ಯಂತ್ರಗಳಿಗೆಲ್ಲಾ ಆನೆಯ ಪರಾಕ್ರಮಗಳು ಸ್ಫೂರ್ತಿಯಾಗಿದ್ದು ಸುಳ್ಳಲ್ಲ. ಕಾಡಹಣ್ಣನ್ನು ತಿಂದು ಹತ್ತಾರು ಮೈಲಿವರೆಗೆ ಬೀಜ ಪಸರಿಸುವ ಮುಂಗಟ್ಟೆ ಹಕ್ಕಿಗಳ ಪರಿಸರ ಸೇವೆ ದೊಡ್ಡದೇ. ವೈರಿಗಳಿಗೆ ಬೆಚ್ಚಿಬೀಳುವಷ್ಟು ವಿದ್ಯುತ್‍ಆಘಾತ ನೀಡುವುದು ರೇ ಫಿಷ್‍ಗೆ ಸಾಧ್ಯವಿದೆ. ನೆಲದ ಉಷ್ಣಾಂಶವನ್ನೂ ವಾತಾವರಣದ ತೇವಾಂಶವನ್ನೂ ಗ್ರಹಿಸಿ ಹೊರಡುವ ಕಟ್ಟಿರುವೆ ಸಾಲು ಮಳೆಯ ಮುನ್ಸೂಚನೆಯನ್ನು ಕಾಲಾಂತರದಿಂದ ರೈತರಿಗೆ ನೀಡುತ್ತಲೇ ಬಂದಿದೆ. ಹುತ್ತಕಟ್ಟುವ ಗೆದ್ದಲಿಗೇ ನೆಲತಳದ ನೀರಸೆಲೆಯ ಜ್ಞಾನವು ಹೆಚ್ಚು ಸಿದ್ಧಿಸಿದೆ. ಹುಲ್ಲುಕಡ್ಡಿಗಳಿಂದ ಕಟ್ಟುವ ಗೀಜಗನ ಗೂಡು ಕಲಾಕಾರನಿಗೊಂದು ಪಾಠ. ಮೇಣದ ಮಿತವ್ಯಯ ಸಾಧಿಸಿ ರಚಿಸುವ ಷಟ್ಭುಜಾಕೃತಿಯ ಕೋಣೆಗಳ ಜೇನುಗೂಡು ಸಿವಿಲ್ ಎಂಜಿನಿಯರ್‌ಗೊಂದು ಸವಾಲು ಎಸೆಯುತ್ತದೆ. ರೇಷ್ಮೆಗೂಡಿನೊಳಗಿನ ಉಷ್ಣಾಂಶ ಮತ್ತು ವಾಯು ನಿಯಂತ್ರಿತ ಅಪೂರ್ವ ವ್ಯವಸ್ಥೆಯಿಂದಾಗಿ ಜಡನಿಂಫ್‍ಗೆ ಚಿಟ್ಟೆಯಾಗಿ ಹಾರುವುದು ಸಾಧ್ಯವಾಗುತ್ತದೆ. ಈ ಅಂಶವೀಗ ಕಾನ್ಪುರದ ಉನ್ನತ ತಂತ್ರಜ್ಞಾನ ಸಂಸ್ಥೆಯ ಪರಿಸರವಿಜ್ಞಾನಿಗಳನ್ನು ಹೊಸ ಸಾಧ್ಯತೆಗಳ ಹುಡುಕಾಟಕ್ಕೆ ತುದಿಗಾಲ ಮೇಲೆ ಕೂರಿಸಿದೆ.

ಕೊಳೆಯುವಿಕೆಗೆ ಕಾರಣವಾಗುವ ಸೂಕ್ಷ್ಮಾಣು ಗಳಿಂದಲೇ ಜೀವಪದರದಲ್ಲಿ ಪೋಷಕಾಂಶದ ಚಕ್ರೀಯ ಚಲನೆ ಸಾಧ್ಯವಾಗುವುದು. ಕೊಳೆಯುವಿಕೆಯು ಹೊಸ ಜೀವಪದರದ ಮೊಳೆಯುವಿಕೆಯ ಸಂಕೇತವೂ ಹೌದು.

ಆಹಾರ ಸರಪಳಿಯಲ್ಲಿ ಹಸಿರನ್ನು ತಿನ್ನುವ ಸಸ್ಯಾಹಾರಿಗಳು, ಸಸ್ಯಾಹಾರಿಗಳನ್ನು ತಿನ್ನುವ ಮಾಂಸಾ ಹಾರಿಗಳು ಪ್ರಕೃತಿ ನಿಯಮವನ್ನು ಪಾಲಿಸುತ್ತವಷ್ಟೇ. ಮಾಂಸಾಹಾರಿಗಳಿಲ್ಲದಿದ್ದಲ್ಲಿ ಸಸ್ಯಾಹಾರಿಗಳ ಸಂಖ್ಯೆ ಮಿತಿಮೀರಿ, ಸಸ್ಯಪ್ರಭೇದದ ಸಂಖ್ಯೆ-ಸಾಂದ್ರತೆಯು ಕ್ಷೀಣಿಸುತ್ತದೆ. ಒಂದನ್ನು ಕ್ರೂರಿ ಮತ್ತೊಂದನ್ನು ಸಾಧುಪ್ರಾಣಿ ಎಂಬಂತೆ ಕಲ್ಪಿಸುವುದು ಮನುಷ್ಯನ ಮನೋಮಿತಿಯಷ್ಟೇ.

ಮನುಷ್ಯ ಪ್ರಕೃತಿಯ ಕೂಸು. ಆತನಿಗೀಗ ಪರಿಸರಕ್ಕೆ ಹತ್ತಿರವಾಗಿ, ನೆಲದ ಬಾಂಧವ್ಯವನ್ನು ವೃದ್ಧಿಸಿಕೊಳ್ಳುವುದು ಮುಖ್ಯವಾಗಬೇಕು. ಎಲ್ಲ ಪ್ರದೇಶ ಗಳನ್ನೂ ಒಂದೇ ಅಳತೆಗೋಲಲ್ಲಿ ಪರಿಗಣಿಸದೆ ಆಯಾ ಪ್ರದೇಶಗಳು ಬೇಡುವ ಮತ್ತು ಕಾರ್ಯಸಾಧು ವುಳ್ಳ ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಬೇಕಾದ್ದು ನಿಜಕ್ಕೂ ಅಗತ್ಯ. ಸಾಧ್ಯವಾದಷ್ಟೂ ಮನುಷ್ಯಕೇಂದ್ರಿತ ಯೋಜನೆಗಳನ್ನು ಜೀವಕೇಂದ್ರಿತ ಯೋಜನೆಗಳನ್ನಾಗಿ ಮಾರ್ಪಡಿಸಿಕೊಂಡರೆ ಮನುಷ್ಯ ನಿಗಷ್ಟೇ ಅಲ್ಲದೆ ಬಾಳ್ವೆಯ ಭೂಮಿಗದು ಕ್ಷೇಮ. ವನ್ಯಜೀವಿಗಳ ಮೌಲ್ಯವನ್ನರಿತು ಒಳಗೊಳ್ಳುವಿಕೆಯಲ್ಲಿ ಬೆಳೆಯುತ್ತಾ ಸಾಗುವುದು ಅವನ ಹೊಣೆಗಾರಿಕೆ. ಆತ ತನ್ನ ನಡಿಗೆಯನ್ನು ಸಹಜೀವಿಗಳೊಂದಿಗೆ ಪ್ರೀತಿ, ಗೌರವ, ಕಾಳಜಿಯೆಡೆಗೆ ವಿಸ್ತರಿಸಿಕೊಳ್ಳುವಂತಾಗಲಿ. ಅಂದಹಾಗೆ ನಾಳೆ (ಮಾರ್ಚ್ 21) ಅಂತರರಾಷ್ಟ್ರೀಯ ಅರಣ್ಯ ದಿನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.