ADVERTISEMENT

ಸಂಗತ: ಭಾರತ ಸಂವಿಧಾನ ಪ್ರಜಾಪ್ರಭುತ್ವದ ನಾಡಿ– ಬಿ.ವೈ. ವಿಜಯೇಂದ್ರ ಲೇಖನ

ಸಂವಿಧಾನ ಭಾರತೀಯರ ಸ್ವಾಭಿಮಾನದ ಸಂಕೇತ. ಸಂವಿಧಾನವನ್ನು ಅಲಕ್ಷಿಸಿರುವಕಾರಣದಿಂದಲೇ ಕಾಂಗ್ರೆಸ್‌ ಪಕ್ಷವನ್ನು ದೇಶದ ಜನ ಮತ್ತೆ ಮತ್ತೆ ತಿರಸ್ಕರಿಸಿದ್ದಾರೆ.

ಬಿ.ವೈ.ವಿಜಯೇಂದ್ರ
Published 24 ನವೆಂಬರ್ 2025, 0:19 IST
Last Updated 24 ನವೆಂಬರ್ 2025, 0:19 IST
<div class="paragraphs"><p>ಸಂಗತ: ಭಾರತ ಸಂವಿಧಾನ ಪ್ರಜಾಪ್ರಭುತ್ವದ ನಾಡಿ– ಬಿ.ವೈ. ವಿಜಯೇಂದ್ರ ಲೇಖನ </p></div>

ಸಂಗತ: ಭಾರತ ಸಂವಿಧಾನ ಪ್ರಜಾಪ್ರಭುತ್ವದ ನಾಡಿ– ಬಿ.ವೈ. ವಿಜಯೇಂದ್ರ ಲೇಖನ

   

‘ಸಂವಿಧಾನ ದಿವಸ’ ಭಾರತೀಯರ ಪಾಲಿಗೆ ಹೆಮ್ಮೆಯ ಆಚರಣೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ವಹಿಸುವ ಹೃದಯ ಸ್ಥಾನದಲ್ಲಿ ನಿಂತಿರುವ ಸಂವಿಧಾನ ಭಾರತವನ್ನು ಬೆಳಗುತ್ತಿದೆ. ಭಾರತೀಯರ ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಸಂರಕ್ಷಿಸಿ ಪ್ರಜಾತಂತ್ರ ವ್ಯವಸ್ಥೆಯ ನಾಡಿಮಿಡಿತವಾಗಿ ತನ್ನ ಮಹತ್ವವನ್ನು ಸಾರುತ್ತಿದೆ.

ಮಹಾಭಾರತ, ರಾಮಾಯಣದ ಜೊತೆಗೆ ಅನೇಕ ಶ್ರೇಷ್ಠ ಗ್ರಂಥಗಳು ಭಾರತದ ಭವ್ಯ ಪರಂಪರೆಯ ಸರ್ವಮಾನ್ಯ ಶ್ರೇಷ್ಠತೆಯನ್ನು ಗತಕಾಲದಿಂದಲೂ ಪ್ರತಿನಿಧಿಸುತ್ತಿವೆ. ಆದರೆ, ಬ್ರಿಟಿಷರ ದಾಸ್ಯಸಂಕೋಲೆಯನ್ನು ಮೆಟ್ಟಿ ಸ್ವಾತಂತ್ರ್ಯ ಪಡೆದ ನಮಗೆ ಬಾಬಾ ಸಾಹೇಬ್ ಅಂಬೇಡ್ಕರ್ ಕೊಡಮಾಡಿದ ಸಂವಿಧಾನ ಆತ್ಮವಿಶ್ವಾಸದ ಜ್ಯೋತಿಯಾಗಿ ಬೆಳಗುತ್ತಿದೆ.

ADVERTISEMENT

‘ಸಂವಿಧಾನ’ ಪ್ರಜಾಪ್ರಭುತ್ವ ಕಾಯುವ ಏಕೈಕ ಗ್ರಂಥ. ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು, ‘ಸಂವಿಧಾನ ಬರೀ ನ್ಯಾಯಾಲಯಗಳಿಗೆ ಸೀಮಿತವಾಗಿರಬಾರದು. ಸಂವಿಧಾನವು ನಮ್ಮ ಜೀವನ, ನಮ್ಮ ಸಂಸ್ಕಾರಗಳಿಗೆ, ನಮ್ಮ ಭಾವನೆಗಳಿಗೆ ನವಚೈತನ್ಯವನ್ನು ಕೊಡಬಲ್ಲದು. ಅದಕ್ಕಾಗಿ ನಾವು ಅದನ್ನು ಜನಸಾಮಾನ್ಯರ ಹೃದಯಸ್ಪರ್ಶಿಸುವವರೆಗೂ ತೆಗೆದುಕೊಂಡು ಹೋಗಬೇಕು’ ಎನ್ನುವ ಹಿನ್ನೆಲೆಯಲ್ಲಿ, ನವೆಂಬರ್ 26ರ ದಿನವನ್ನು ‘ಸಂವಿಧಾನ ದಿವಸ’ ಎಂದು ಆಚರಿಸುವ ನಿರ್ಧಾರ ತೆಗೆದುಕೊಂಡರು.

ಸಂವಿಧಾನವು ದೇಶದ ಪ್ರತಿ ಪ್ರಜೆಯ ಸ್ವಾಭಿಮಾನದ ಸಂಕೇತವಾಗಬೇಕು. ಸಂವಿಧಾನದ ಜಾಗೃತಿ ಪ್ರತಿಯೊಬ್ಬರ ಮನದಲ್ಲೂ ಅಚ್ಚೊತ್ತಬೇಕು. ಸಂವಿಧಾನದ ಅರಿವು ಪ್ರತಿ ಪ್ರಜೆಯ ಕರ್ತವ್ಯ ವಾಗಬೇಕು. ಈ ಆಶಯವನ್ನು ಸಾಕಾರಗೊಳಿಸುವ ದೃಷ್ಟಿಯಿಂದಲೇ ಸಂವಿಧಾನ ದಿನ ಆಚರಿಸಲಾಗುತ್ತಿದೆ.

ಸಂವಿಧಾನದ ಉದ್ದೇಶ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಸಮಾನವಾಗಿ ವಿತರಿಸುವುದು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವುದಾಗಿದೆ. ಸಂವಿಧಾನದ ಅರ್ಥ, ಮಹತ್ವ ಹಾಗೂ ಜವಾಬ್ದಾರಿಯನ್ನು ನಮ್ಮ ಜನ ಅರ್ಥ ಮಾಡಿಕೊಳ್ಳಬೇಕು ಎಂಬುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯವಾಗಿತ್ತು.

ಸತತ ಮೂರು ವರ್ಷಗಳ ಕಾಲ ಬಲಿಷ್ಠ ಭಾರತವನ್ನು ಕಟ್ಟುವ ಮಹಾಸಂಕಲ್ಪದಿಂದ ಸಂವಿಧಾನ ರಚನೆಯ ಕಾರ್ಯಕ್ಕಾಗಿ ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನ ರಚನಾ ಸಮಿತಿಯು ಶ್ರಮಿಸಿದ್ದನ್ನು ಸ್ವತಂತ್ರ ಭಾರತದ ಪ್ರಜಾಪ್ರಭುತ್ವದ ಸವಿಯನ್ನು ಅನುಭವಿಸುತ್ತಿರುವ ನಾವೆಲ್ಲರೂ ಕೃತಜ್ಞತೆಯಿಂದ ಸ್ಮರಿಸಬೇಕು. ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡ ಪ್ರಸಂಗಗಳೇ ಹೆಚ್ಚು ಎನ್ನುವುದನ್ನೂ ಇಲ್ಲಿ ನೆನಪಿಸಿಕೊಳ್ಳ ಬೇಕು. ಪ್ರಸ್ತುತ, ಕಾಂಗ್ರೆಸ್ಸಿಗರು ಸಂವಿಧಾನವನ್ನು ಹಾಗೂ ಅಂಬೇಡ್ಕರ್ ಅವರನ್ನು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಗುರಾಣಿಯಂತೆ ಬಳಸಿಕೊಳ್ಳುತ್ತಿದ್ದಾರೆ. ಅಧಿಕಾರ ರಾಜಕಾರಣಕ್ಕಾಗಿ ಸುಳ್ಳಿನ ಜಾಲವನ್ನು ಹೆಣೆದು, ಅದನ್ನು ಭಾರತೀಯ ಜನತಾ ಪಾರ್ಟಿಯ ಹಣೆಗೆ ಕಟ್ಟಲು ವಿಫಲಯತ್ನ ನಡೆಸಿದ್ದಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ಸಿಗರ ಈ ಇಬ್ಬಂದಿತನಕ್ಕೆ ಜನತೆ ತಕ್ಕ ಪಾಠವನ್ನೇ ಕಲಿಸಿದ್ದಾರೆ. ಅದರಲ್ಲೂ ಪರಿಶಿಷ್ಟ ಸಮುದಾಯಗಳು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ದೂರಸರಿಸಿ ದ್ದಾರೆ. ಬಿಹಾರದ ಚುನಾವಣೆ ಯಲ್ಲಂತೂ ಇದು ಸ್ಪಷ್ಟವಾಗಿ ಗೋಚರಿಸಿದೆ. ಪರಿಶಿಷ್ಟರು, ಹಿಂದುಳಿದವರು ಹಾಗೂ ಅತೀ ಹಿಂದುಳಿದವರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಧಿಕ್ಕರಿಸಿದ್ದಾರೆ. ಕಾಂಗ್ರೆಸ್ ತನ್ನ ಅಸ್ತಿತ್ವಕ್ಕಾಗಿ ರಾಜಕೀಯ ಭೂಪಟದಲ್ಲಿ ತಿಣುಕಾಡುತ್ತಿದೆ.

ಕಾಂಗ್ರೆಸ್‌ನ ಇಂದಿನ ಸ್ಥಿತಿಗೆ ಸಂವಿಧಾನದ ಆಶಯವನ್ನು ಬದಿಗೆ ಸರಿಸಿರುವುದೇ ಕಾರಣವಾಗಿದೆ. ಐತಿಹಾಸಿಕ ಸ್ವಾತಂತ್ರ್ಯ ಸಂಗ್ರಾಮದ ತ್ಯಾಗ– ಬಲಿದಾನಗಳನ್ನು ಅವಮಾನಿಸುವ ರೀತಿಯಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಕತ್ತು ಹಿಸುಕಿ, ಸಂವಿಧಾನವನ್ನು ಅಮಾನತುಗೊಳಿಸಿ, ಎಪ್ಪತ್ತರ ದಶಕದಲ್ಲಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ ಹಾಗೂ ಬಾಬಾ ಸಾಹೇಬರ ಕುರಿತು ಮಾತನಾಡುವ ಯಾವ ನೈತಿಕತೆಯಿದೆ? ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರು ರಾಷ್ಟ್ರಭಕ್ತ ಸಂಘಟನೆಗಳನ್ನು, ನೈಜ ಭಾರತೀಯತೆಯ ಪ್ರತಿಪಾದಕರನ್ನು ಅವಮಾನಿಸಲೆಂದೇ ಸಂವಿಧಾನದ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಕಟ್ಟುಕಥೆಗಳನ್ನು ಹೆಣೆದು ದಮನಿತ ಸಮುದಾಯಗಳನ್ನು ದಿಕ್ಕುತಪ್ಪಿಸಲು ಹವಣಿಸುತ್ತಿದ್ದಾರೆ. ಇಂತಹ ಹಸಿ ಸುಳ್ಳಿನ ಅಪಪ್ರಚಾರಗಳಿಗೆ ಹೆಚ್ಚಿನ ಆಯುಷ್ಯವಿಲ್ಲ ಎಂಬುದನ್ನು ಬಿಹಾರದ ಫಲಿತಾಂಶ ತೋರಿಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಇದರ ಪ್ರತಿಫಲನವಾಗಲಿದೆ. ಸಂವಿಧಾನದ ಮಾರ್ಗದಲ್ಲಿ ಭವಿಷ್ಯತ್ತಿನಲ್ಲಿ ಇವರಿಗೆ ತಕ್ಕ ಉತ್ತರ ಸಿಗಲಿದೆ.

ಭಾರತೀಯ ಜನತಾ ಪಾರ್ಟಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಎಂದಿಗೂ ನಡೆದುಕೊಂಡ ಉದಾಹರಣೆಗಳಿಲ್ಲ. ಕಾಂಗ್ರೆಸ್ಸಿಗರಂತೆ ಸ್ವಾರ್ಥಕ್ಕಾಗಿ ಹಲವು ಬಾರಿ ಸಂವಿಧಾನಕ್ಕೆ ತಿದ್ದುಪಡಿ ತರಲಿಲ್ಲ. ತಂದ ಬೆರಳೆಣಿಕೆಯ ತಿದ್ದುಪಡಿ ಗಳೆಲ್ಲವೂ ರಾಷ್ಟ್ರದ ಹಿತಕ್ಕಾಗಿಯೇ: ಅದು ಆರ್ಟಿಕಲ್ 370 ಇರಬಹುದು, ಸಿಎಎ ಇರಬಹುದು ಅಥವಾ ಇತರ ಯಾವುದೇ ತಿದ್ದುಪಡಿಗಳಿರಬಹುದು. ಅವೆಲ್ಲವೂ ರಾಷ್ಟ್ರರಕ್ಷಣೆ ಮತ್ತು ಪ್ರಜಾಪ್ರಭುತ್ವದ ಸಬಲತೆಗಾಗಿ ತಂದ ತಿದ್ದುಪಡಿ ಗಳಾಗಿವೆ. ಸಂವಿಧಾನ ಬದ್ಧತೆಯ ಪ್ರತೀಕದ ರೂಪದಲ್ಲೇ ‘ಸಂವಿಧಾನ ದಿನ’ದ ಆಚರಣೆಯ ಕೇಂದ್ರ ಸರ್ಕಾರದ ನಿರ್ಧಾರವನ್ನು ಗುರ್ತಿಸಬಹುದು. ನವೆಂಬರ್ 26ರಿಂದ ಡಿಸೆಂಬರ್ 6ರವರೆಗೆ ಸಂವಿಧಾನ ಸಮರ್ಪಣಾ ದಿನವನ್ನು ರಾಜ್ಯ ಬಿಜೆಪಿ ಹೆಮ್ಮೆಯಿಂದ ಆಚರಿಸುತ್ತಿದೆ; ‘ಭೀಮ ಸ್ಮರಣೆ’ ಅಭಿಯಾನವನ್ನೂ ಹಮ್ಮಿಕೊಂಡಿದೆ.

ಲೇಖಕ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.