ADVERTISEMENT

ಸಂಗತ: ‘ನಿರ್ಜೀವ’ ಹಾಳೆಯಲ್ಲೊಂದು ಭಾವಲಹರಿ

ಕವಿತೆಗಳ ಬಳಕೆಯು ಬಜೆಟ್ ಪ್ರಸ್ತುತಿಗೆ ಸೃಜನಶೀಲ ಮತ್ತು ಸಾಂಸ್ಕೃತಿಕ ಆಯಾಮವನ್ನು ನೀಡುತ್ತದೆ...

ಸದಾಶಿವ ಸೊರಟೂರು
Published 9 ಮಾರ್ಚ್ 2025, 23:30 IST
Last Updated 9 ಮಾರ್ಚ್ 2025, 23:30 IST
.
.   

ಅಂಕಿಗಳು, ಆ ಕೋನ ಈ ಕೋನ, ಬೀಜಗಣಿತ, ಕೂಡಿಸು, ಭಾಗಿಸು... ಇಂಥವೇ ಪದಗಳಿಂದ ತುಂಬಿಹೋಗಿರುತ್ತಿದ್ದ ಗಣಿತದ ತರಗತಿಗಳೆಂದರೆ ನನಗೆ ಮೊದಲಿನಿಂದಲೂ ತಿರಸ್ಕಾರ.‌ ಆ ರೈಲು ಹೋಗಲು ಎಷ್ಟು ಹೊತ್ತು ಬೇಕು, ಕುರಿಯನ್ನು ಎಷ್ಟಕ್ಕೆ ಮಾರಬೇಕಾಯಿತು, ಅಪ್ಪನ ವಯಸ್ಸು ಇಷ್ಟಾದರೆ ಮಗನ ವಯಸ್ಸು ಎಷ್ಟು... ಇಂಥವೇ ಲೆಕ್ಕಾಚಾರ. ಅಷ್ಟೂ‌ ಸಮಯ ಶುಷ್ಕವಾಗಿ ಕಳೆದುಹೋಗುತ್ತಿತ್ತು. ಕಲಿತದ್ದು ಮರೆತುಹೋಗುತ್ತಿತ್ತು.

ಹತ್ತನೇ ತರಗತಿ ವೇಳೆಗೆ, ಗಣಿತ ಹೇಳಿಕೊಡಲು ಹೊಸ ಶಿಕ್ಷಕರೊಬ್ಬರು ಬಂದರು. ಗಣಿತವನ್ನು ಒಂದು ಭಾಷೆಯಂತೆ, ಸಮಾಜ ವಿಜ್ಞಾನದಂತೆ, ಕಥೆಯಂತೆ ಹೇಳುತ್ತಿದ್ದರು. ಅಲ್ಲಿ ನಗುವಿರುತ್ತಿತ್ತು, ಭಾವನಾತ್ಮಕ ಸನ್ನಿವೇಶ ಇರುತ್ತಿತ್ತು. ಅದರ ನಡುವೆ ಯಾವುದೋ ಮಾಯೆಯಲ್ಲಿ ಲೆಕ್ಕಗಳು ಎದೆಗೆ ಇಳಿಯುತ್ತಿದ್ದವು.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಬಜೆಟ್ ಮಂಡನೆಯ ಪ್ರತಿಗಳನ್ನು ನನ್ನ ಮೊದಲಿನ ಗಣಿತದ ತರಗತಿಗಳನ್ನು ನೆನಪಿಸಿಕೊಂಡು ಮುಟ್ಟಲೂ ಹೋಗುತ್ತಿರಲಿಲ್ಲ. ಅದೊಂದು ಬರೀ ಅಂಕಿಗಳ ದಾಖಲೆ, ಯಾವುದೇ ಭಾವನೆ ಇಲ್ಲದ ಒಂದು ನಿರ್ಜೀವ ಪತ್ರಿಕೆ ಅನ್ನಿಸುತ್ತಿತ್ತು.

ADVERTISEMENT

ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಹಾಳೆಗಳನ್ನು ತಿರುವಿ ಹಾಕುವಾಗ ನನ್ನ ಆ ಹೊಸ ಗಣಿತ ಶಿಕ್ಷಕರು ನೆನಪಾದರು. ‘ನಮ್ಮ ಕೈಬುಟ್ಟಿಯಲಿ/ ಸಿಡಿಲ ಗೂಡಿಹುದು/ ಹುಡುಕಿ ನೋಡಿದರಲ್ಲಿ/ ಸುಮದ ಬೀಡಿಹುದು...’ ಎಂಬ ಕುವೆಂಪು ಅವರ ಕವಿತೆಯಿಂದ ಅದು ಶುರುವಾಗುತ್ತದೆ. ಬರೀ ಲೆಕ್ಕಾಚಾರದ ನಿರ್ಜೀವ ಹಾಳೆಗೆ ಥಟ್ಟನೆ ಜೀವ ಬಂದಂತೆ ಆಗುತ್ತದೆ. ‘ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ/ ಸಮಬಗೆಯ ಸಮಸುಖದ ಸಮದುಃಖದ/ ಸಾಮರಸ್ಯದ ಸಾಮಗಾನ ಲಹರಿಯ ಮೇಲೆ/ ತೇಲಿ ಬರಲಿದೆ ನೋಡು, ನಮ್ಮ ನಾಡು...’ ಎಂಬ ಗೋಪಾಲಕೃಷ್ಣ ಅಡಿಗರ ಕವಿತೆಯು ಲೆಕ್ಕಾಚಾರ ಓದಲು ಬಂದವನನ್ನು ಒಳಗೆ ಎಳೆದುಕೊಳ್ಳುತ್ತದೆ.

ಅವ್ವ ನಮಗೆ ಎಂದಾದರೂ ಹತ್ತು ರೂಪಾಯಿ ನೀಡಿದಾಗ ಅದರಲ್ಲಿ ಜೀರಿಗೆಯ ಘಮ ಇರುತ್ತಿತ್ತು. ಹತ್ತು ರೂಪಾಯಿ ಬೆಲೆಗಿಂತ ಹೆಚ್ಚಾಗಿ ಅದಕ್ಕೆ ಮಹತ್ವ ಬರುತ್ತಿದ್ದುದು ಜೀರಿಗೆಯ ವಾಸನೆಯಿಂದ. ಎಷ್ಟೋ ಬಾರಿ ಅದನ್ನು ಖರ್ಚು ಮಾಡಲು ಕೂಡ ಮನಸ್ಸಾಗುತ್ತಿರಲಿಲ್ಲ. ಕವಿತ್ವದಿಂದ, ಗಣ್ಯರ ಮಾತುಗಳಿಂದ ಕೂಡಿದ ಬಜೆಟ್ ಹಾಳೆಗಳಿಗೆ ಜೀರಿಗೆಯ ವಾಸನೆಯಿಂದ ಬಂದಂತಹ ಜೀವಂತಿಕೆ ಬಂದಂತೆ ಆಗುತ್ತದೆ.

1991ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಬಜೆಟ್ ಮಂಡಿಸುವಾಗ ಬಳಸಿಕೊಂಡ ವಿಕ್ಟರ್ ಹ್ಯೂಗೊ ಅವರ ಸಾಲುಗಳು ಮೆಚ್ಚುಗೆಗೆ ಪಾತ್ರವಾಗಿದ್ದವು.‌ ಅದುವರೆಗಿನ ಬಜೆಟ್ ಹಾಳೆಗಳು ಅಷ್ಟೇನೂ ಮನ ಸೆಳೆಯುವಂತೆ ಇರುತ್ತಿರಲಿಲ್ಲ. ನಂತರ ಪಿ.ಚಿದಂಬರಂ ಅವರು ಬಜೆಟ್ ಹಾಳೆಗಳನ್ನು ಕವಿತೆಗಳನ್ನು ಬಳಸಿ ಬಹಳಷ್ಟು ಹೊಸತಾಗಿಸಿದರು. ಅವರು 2008ರಲ್ಲಿ ಬಜೆಟ್ ಮಂಡಿಸುವಾಗ ಬಳಸಿದ ‘ಕೃಷಿ ಮಾಡಿ ಜೀವನ ನಡೆಸುವವರೇ ನಿಜವಾದ ಜೀವನವನ್ನು ನಡೆಸುತ್ತಾರೆ; ಇತರರು ಭಿಕ್ಷೆ ಬೇಡುವವರಂತೆ’ ಎಂಬ ತಿರುವಳ್ಳುವರ್ ಅವರ ಕವಿತೆಯ ಸಾಲುಗಳು ಬಹಳಷ್ಟು ಮೆಚ್ಚುಗೆ ಗಳಿಸಿದ್ದವು.

ಈ ವರ್ಷಗಳಲ್ಲಿ ಹಲವು ಬಜೆಟ್‌ಗಳನ್ನು ಮಂಡಿಸಿರುವ ನಿರ್ಮಲಾ ಸೀತಾರಾಮನ್‌ ಅವರ ಬಜೆಟ್‌ನ‌ ಪ್ರಸ್ತುತಿಗಳು ಕೂಡ ಕವಿತೆಗಳಿಂದ ಆಕರ್ಷಕವಾಗಿ ಇರುತ್ತವೆ. ಅವರು 2021- 22ರ ಬಜೆಟ್ ಮಂಡನೆ ವೇಳೆಯಲ್ಲಿ‌ ರವೀಂದ್ರನಾಥ ಟ್ಯಾಗೋರ್ ಅವರ ‘ವೇರ್ ದಿ ಮೈಂಡ್ ಈಸ್ ವಿದೌಟ್ ಫಿಯರ್’ ಎಂಬ ಕವಿತೆಯನ್ನು ಉಲ್ಲೇಖಿಸಿದ್ದರು. ಅದು ಆ ಹೊತ್ತಿಗೆ ತುಂಬಾ ಸೂಕ್ತವಾದ ಕವಿತೆಯಾಗಿತ್ತು.

ಕವಿತೆಯ ಶಕ್ತಿ ದೊಡ್ಡದು. ಕವಿತೆಗಳು ಜಗತ್ತಿನ ಅಘೋಷಿತ ಶಾಸನಗಳು. ನೂರಾರು ಪುಟಗಳ ಬಜೆಟ್ ಏನು ಹೇಳಬೇಕು ಎಂಬುದನ್ನು ಒಂದು ಕವಿತೆಯ ಸಾಲು ಹೇಳಿಬಿಡುತ್ತದೆ. ಬಜೆಟ್ ಮಂಡಿಸುವವರು ಈ ಬಜೆಟ್ ಮೂಲಕ ನಾಡಿಗೆ ತಾವೇನು ಕೊಡುತ್ತಿದ್ದೇವೆ ಎಂಬುದನ್ನು ಒಂದು ಕವಿತೆಯ ಸಾಲಿನ ಮುಖೇನ ಹೇಳಲು ಸಾಧ್ಯ.‌  

ಕವಿತೆ ಮತ್ತು ವಿಶೇಷ ಸಾಲುಗಳ ಬಳಕೆಯು ಸರ್ಕಾರ ರೂಪಿಸಹೊರಟಿರುವ ನೀತಿಯ ಉದ್ದೇಶಗಳನ್ನು ಸಾಂಸ್ಕೃತಿಕವಾಗಿ ಸಮರ್ಥಿಸಿಕೊಳ್ಳಲು ಸಹ ನೆರವಾಗುತ್ತದೆ. ಕವಿತೆಗಳ ಸರಳ ಭಾಷೆ ಮತ್ತು ಭಾವನಾತ್ಮಕ ಆಯಾಮವು ಸಂಕೀರ್ಣ ಆರ್ಥಿಕ ಪರಿಕಲ್ಪನೆಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ತಲುಪಿಸುತ್ತದೆ. ನಾಡಿನ, ದೇಶದ ಬಹುಸಾಂಸ್ಕೃತಿಕತೆಯನ್ನು ಪ್ರದರ್ಶಿಸುವ ಸಾಧನವಾಗಿಯೂ ಕೆಲಸ ಮಾಡುತ್ತದೆ, ಒಗ್ಗೂಡಿಸುತ್ತದೆ.‌

ಕವಿತೆಗಳ ಬಳಕೆಯು ಬಜೆಟ್ ಪ್ರಸ್ತುತಿಗೆ ಸೃಜನಶೀಲ ಮತ್ತು ಸಾಂಸ್ಕೃತಿಕ ಆಯಾಮವನ್ನು ನೀಡುತ್ತದೆ. ಆದರೆ, ಇದು ನೀತಿಯ ವಿವರಗಳೊಂದಿಗೆ ಸ್ಪಷ್ಟವಾಗಿ ಹೊಂದಿಕೊಂಡಾಗ ಮಾತ್ರ ಪರಿಣಾಮಕಾರಿಯಾಗು ತ್ತದೆ. ಸರಳ, ಪ್ರಾಸಂಗಿಕ ಮತ್ತು ಸಂವೇದನಾಶೀಲ ನಡೆಯ ನಡುವಿನ ಸಮತೂಕವೇ ಬಜೆಟ್ ಹಾಳೆಗಳನ್ನು ಸೆಳೆಯುವಂತೆ ಮಾಡುತ್ತದೆ. 

ಕೆಲವು ವಿಮರ್ಶಕರು ಬಜೆಟ್‌ಗಳಲ್ಲಿ‌ ಕವಿತೆಗಳ ಬಳಕೆ ‘ಅಸಂಬದ್ಧ ಅಲಂಕಾರ’ ಎಂದು ಟೀಕಿಸುತ್ತಾರೆ. ಕವಿತೆಗಳು ನೀತಿಯ ವಾಸ್ತವಿಕ ಅನುಷ್ಠಾನದಿಂದ ಗಮನವನ್ನು ವಿಚಲಿತಗೊಳಿಸಬಹುದು ಎನ್ನುತ್ತಾರೆ. ಆದರೆ ಎಚ್ಚರಿಕೆಯಿಂದ ಬಳಸಿದ್ದೇ ಆದರೆ ಇದರ ಪರಿಣಾಮ ತುಂಬಾ ದೊಡ್ಡದು.‌ ಬಜೆಟ್ ಪ್ರಸ್ತುತಿಗಳು ಸಾಹಿತ್ಯದ ಹೊರೆಯಿಂದ ಅತಿಯಾಗಿ ಭಾರವಾಗದಂತೆಯೂ ಅರ್ಥವೇ ಆಗದ ಕಠಿಣ ಭಾಷೆಯ ಅಬ್ಬರದಿಂದಲೂ ತೂಗದೆ, ಸಮತೋಲನ ಕಾಯ್ದುಕೊಂಡು, ಜನರಿಗೆ ಹತ್ತಿರವಾಗುವಂತೆ ಇರಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.