ADVERTISEMENT

ಸಂಗತ | ಪೊಲೀಸ್ ವ್ಯವಸ್ಥೆ: ಸುಧಾರಣೆಗೆ ಸಕಾಲ

ಪೊಲೀಸ್ ವ್ಯವಸ್ಥೆ ಬಗ್ಗೆ ಜನರಿಗೆ ಇರುವ ನಂಬಿಕೆಯನ್ನೇ ಅಲ್ಲಾಡಿಸುವಂತಹ ಬೆಳವಣಿಗೆಗಳು ನಡೆಯುತ್ತಿರುವುದು ದುರದೃಷ್ಟಕರ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 19:31 IST
Last Updated 6 ಜುಲೈ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಖಾಕಿ ಸಮವಸ್ತ್ರದಲ್ಲಿರುವ ಕ್ರಿಮಿನಲ್‌ಗಳನ್ನು ಸಹಿಸುವುದಿಲ್ಲ’. ಇದು, ಬೆಂಗಳೂರು ಪೊಲೀಸ್ ಕಮಿಷನರ್ ಆಗಿದ್ದ ಕಮಲ್ ಪಂಥ್ ಅವರು ಕಳೆದ ವರ್ಷ ನೀಡಿದ್ದ ಹೇಳಿಕೆ.ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ದುರ್ವರ್ತನೆಗೆ ರೋಸಿಹೋಗಿ ಅವರು ಈ ಮಾತು ಆಡಿದ್ದರು. ಆಗ ಡಕಾಯಿತಿ, ಸುಲಿಗೆ, ಬೆದರಿಕೆ, ನಕಲಿ ದಾಳಿ, ಡ್ರಗ್ಸ್ ದಂಧೆಕೋರರೊಂದಿಗೆ ಶಾಮೀಲು, ಅಕ್ರಮ ಬಂಧನ ಸೇರಿದಂತೆ ವಿವಿಧ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾದ ಆರೋಪದ ಮೇಲೆ 20ಕ್ಕೂ ಹೆಚ್ಚು ಪೊಲೀಸರು ಅಮಾನತಿಗೆ ಒಳಗಾಗಿದ್ದರು. ಕೆಲವರನ್ನು ಎತ್ತಂಗಡಿ ಮಾಡಲಾಗಿತ್ತು.

ಕೋವಿಡ್‌ನಂತಹ ದುರಿತ ಕಾಲವನ್ನೂ ಕೆಲವು ಅಧಿಕಾರಿಗಳು ದುರುಪಯೋಗ ಮಾಡಿಕೊಂಡಿದ್ದರು. ಲಾಕ್‌ಡೌನ್ ವೇಳೆ ಸಿಗರೇಟ್ ವಹಿವಾಟಿಗೆ ಅವಕಾಶ ನೀಡಲು ಡೀಲರ್ ಒಬ್ಬರಿಂದ ₹ 30 ಲಕ್ಷ ಸುಲಿಗೆ ಮಾಡಿದ್ದ ಆರೋಪದ ಮೇಲೆ ಸಿಸಿಬಿ ಎಸಿಪಿ ಮತ್ತು ಇಬ್ಬರು ಇನ್‌ಸ್ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿತ್ತು. ದುಬಾರಿ ಬೆಲೆಯ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದವರಿಂದ ₹ 50 ಲಕ್ಷ ಲಂಚ ಪಡೆದ ಆರೋಪದ ಮೇಲೆ ಎಲೆಕ್ಟ್ರಾನಿಕ್ ಸಿಟಿ ಎಸಿಪಿ ಮತ್ತು ಇನ್ನಿಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.

ಅಕ್ರಮಗಳಲ್ಲಿ ಪೊಲೀಸರೇ ಶಾಮೀಲಾಗಿದ್ದರೂ ಅವುಗಳಿಗೆ ಸಂಬಂಧಿಸಿದಂತೆ ಹೆಚ್ಚಿನಪ್ರಕರಣಗಳು ಬಯಲಿಗೆ ಬರುವುದೇ ಇಲ್ಲ. ಪೊಲೀಸ್ ವ್ಯವಸ್ಥೆ ಬಗ್ಗೆ ಜನರಿಗೆ ಇರುವ ನಂಬಿಕೆಯನ್ನೇ ಅಲ್ಲಾಡಿಸುವಂತಹ ಬೆಳವಣಿಗೆಗಳು ನಡೆಯುತ್ತಿವೆ. ಸಬ್‌ಇನ್‌ಸ್ಪೆಕ್ಟರ್‌ಗಳ ನೇಮಕಾತಿ ಅಕ್ರಮವು ದೇಶದಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ.

ADVERTISEMENT

ನಮ್ಮ ರಾಜ್ಯದ ನೇಮಕಾತಿ ವ್ಯವಸ್ಥೆ ಇಡೀ ದೇಶದಲ್ಲಿಯೇ ಮನ್ನಣೆ ಪಡೆದಿತ್ತು. ಇದೀಗ ಇಂತಹ ಬೆಳವಣಿಗೆ ನಡೆದಿರುವುದು ಅತ್ಯಂತ ದುರದೃಷ್ಟಕರ. ಪಿಎಸ್ಐ ನೇಮಕಾತಿ ಹಗರಣದಲ್ಲಿ, ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಎಡಿಜಿಪಿಯೂ ಸೇರಿದಂತೆ 20 ಅಧಿಕಾರಿಗಳನ್ನು ಬಂಧಿಸಲಾಗಿದೆ. ಪೊಲೀಸ್ ಪ್ರಧಾನ ಕಚೇರಿಯಲ್ಲಿಯೇ ಇಂತಹ ದೊಡ್ಡ ಕ್ರಿಮಿನಲ್ ಹುನ್ನಾರ ನಡೆದಿದ್ದರೂ ಹಿರಿಯ ಅಧಿಕಾರಿಗಳಿಗೆ ಅಥವಾ ಇಲಾಖಾ ಮುಖ್ಯಸ್ಥರಿಗೆ ಅದರ ಸುಳಿವು ಸಿಗಲಿಲ್ಲ ಎಂಬುದು ತೀವ್ರ ಆಘಾತಕಾರಿ. ಎಸ್ಐ ಹುದ್ದೆಗೆ ₹ 40 ಲಕ್ಷದಿಂದ ₹ 1 ಕೋಟಿವರೆಗೆ ಕೊಟ್ಟು ಬಂದವರು ತಮ್ಮ ಆಸ್ತಿಪಾಸ್ತಿ ಮತ್ತು ಪ್ರಾಣವನ್ನು ರಕ್ಷಣೆ ಮಾಡುತ್ತಾರೆಂಬ ನಂಬಿಕೆ ಜನರಲ್ಲಿ ಉಳಿಯುವುದಾದರೂ ಹೇಗೆ?

‘ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಲೆಕ್ಷನ್ ಕೇಂದ್ರವಾಗಿದೆ’ ಎಂದು ಹೈಕೋರ್ಟ್ ಛೀಮಾರಿ ಹಾಕಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇಡೀ ಪೊಲೀಸ್ ಇಲಾಖೆಯೇ ಇಂತಹ ಛೀಮಾರಿ ಹಾಕಿಸಿಕೊಳ್ಳುವ ದುಃಸ್ಥಿತಿ ಒದಗಬಹುದು. ‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ, ಧರೆ ಹತ್ತಿ ಉರಿದಡೆ ನಿಲಲುಬಾರದು...’ ಎಂಬ ವಚನದ ಸಾಲುಗಳು ನೆನಪಿಗೆ ಬರುತ್ತವೆ. ಹಾಗಾದರೆ ಮುಂದೇನು ಎಂಬ ಪ್ರಶ್ನೆ ಸಹಜ.

ದೌರ್ಜನ್ಯ, ಭ್ರಷ್ಟಾಚಾರ, ಅತಿರೇಕದ ವರ್ತನೆಯ ಆರೋಪಗಳು ಪೊಲೀಸರ ಮೇಲೆ ಕೇಳಿಬಂದಾಗ ಕೆಲವರು ಒಂದು ವಾದವನ್ನು ಮಂಡಿಸುತ್ತಾರೆ: ‘ಪೊಲೀಸರು ಕೂಡಾ ಸಮಾಜದ ಅವಿಭಾಜ್ಯ ಅಂಗ. ಆದ್ದರಿಂದ ಅವರೂ ಸಮಾಜದಲ್ಲಿರುವ ಕೊಳೆಯನ್ನು ಅಂಟಿಸಿಕೊಂಡಿರುತ್ತಾರೆ’. ಆದರೆ ಇದು ಜನರ ದಿಕ್ಕು ತಪ್ಪಿಸುವ ವಾದ. ಏಕೆಂದರೆ ಪೊಲೀಸ್ ಅಧಿಕಾರಿಗಳು ಸಮಾಜದ ಪ್ರತಿಷ್ಠಿತ ವರ್ಗ. ಅವರು ಸಮಾಜದ ಕೆನೆಪದರ. ಒಬ್ಬ ಪೊಲೀಸ್ ಅಧಿಕಾರಿಯನ್ನು ರೂಪಿಸಲು ಸರ್ಕಾರವು ಅಪಾರ ಸಂಪನ್ಮೂಲವನ್ನೂ
ಅಧಿಕಾರವನ್ನೂ ಕ್ರೋಡೀಕರಿಸಿ ಆತನ ಮೇಲೆ ವಿನಿಯೋಗಿಸುತ್ತದೆ. ಪೊಲೀಸ್ ಅಧಿಕಾರಿಗಳಿಗೆ ಉನ್ನತ ತರಬೇತಿಯನ್ನು ನೀಡಲಾಗುತ್ತದೆ. ನೀತಿ ಪಾಠಗಳನ್ನು ಎಲ್ಲಾ ಪೊಲೀಸ್ ಅಕಾಡೆಮಿಗಳಲ್ಲೂ
ಬೋಧಿಸಲಾಗುತ್ತದೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ನೈತಿಕ ಗುಣಮಟ್ಟದ ಬಗ್ಗೆ ಪ್ರಶ್ನೆಗಳಿರುತ್ತವೆ. ಜನಸಾಮಾನ್ಯರು ಕೂಡಾ ಪೊಲೀಸ್ ಅಧಿಕಾರಿಗಳನ್ನು ಅಸಾಮಾನ್ಯ ಮತ್ತು ಮಾದರಿ ವ್ಯಕ್ತಿಗಳನ್ನಾಗಿ ಕಲ್ಪಿಸಿಕೊಳ್ಳುತ್ತಾರೆ. ಆದ್ದರಿಂದ ಪೊಲೀಸ್ ಅಧಿಕಾರಿಗಳು ಕೊಳೆಯನ್ನು ಅಂಟಿಸಿಕೊಳ್ಳಬಾರದು. ಒಬ್ಬ ಸಾಮಾನ್ಯ ವ್ಯಕ್ತಿ ಅಪರಾಧ ಕೃತ್ಯಗಳನ್ನು ಎಸಗಿದರೆ ಅದರಿಂದ ಮತ್ತೊಬ್ಬ ವ್ಯಕ್ತಿಗೆ ಅಥವಾ ಒಂದು ಕುಟುಂಬಕ್ಕೆ ಸೀಮಿತವಾಗಿ ಹಾನಿ–ನಷ್ಟ ಆಗಬಹುದು. ಆದರೆ ಒಬ್ಬ ಪೊಲೀಸ್ ಅಧಿಕಾರಿ ಅಪರಾಧ ಕೃತ್ಯಗಳಲ್ಲಿ ತೊಡಗಿದರೆ ಇಡೀ ವ್ಯವಸ್ಥೆಗೆ ಹಾನಿಯಾಗುತ್ತದೆ. ಕಾನೂನು– ಸುವ್ಯವಸ್ಥೆಯ ಮೇಲೆ ಗಂಭೀರವಾದ ಪರಿಣಾಮ ಉಂಟಾಗುತ್ತದೆ. ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಹಂದರವೇ ಕುಸಿತಕ್ಕೆ ಒಳಗಾಗಬೇಕಾಗುತ್ತದೆ.

ಕ್ರಿಮಿನಲ್ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವ ಅಧಿಕಾರಿಗಳನ್ನು ಆರಂಭದ ಹಂತದಲ್ಲಿಯೇ ಪತ್ತೆ ಹಚ್ಚಿ ಸರಿದಾರಿಗೆ ತರುವ ಪ್ರಯತ್ನಗಳು ಏಕೆ ನಡೆಯುತ್ತಿಲ್ಲ? ಪೊಲೀಸರ ಮೇಲೆ ಜನರು ಸಂಪೂರ್ಣವಾಗಿ ನಂಬಿಕೆ ಕಳೆದುಕೊಳ್ಳುವ ಮೊದಲು, ಆ ಇಲಾಖೆಯಲ್ಲಿ ಇರಬಹುದಾದ ನೀತಿವಂತ ಅಧಿಕಾರಿಗಳು ಆತ್ಮಾವಲೋಕನದ ಮೂಲಕ ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಮುಂದಾಗಲು ಇದು ಸಕಾಲ. ಈ ದಿಸೆಯಲ್ಲಿ ಸರ್ಕಾರ ಕೂಡ ಗಂಭೀರವಾಗಿ ಚಿಂತಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.