ADVERTISEMENT

ಸಂಗತ | ತಂಬಾಕು ಉತ್ಪನ್ನ: ತೆರೆಮರೆಯ ಆಟ

ಡಾ.ಸುಶಿ ಕಾಡನಕುಪ್ಪೆ
Published 15 ಮೇ 2025, 0:30 IST
Last Updated 15 ಮೇ 2025, 0:30 IST
   
ತಂಬಾಕಿನಿಂದ ವಿವಿಧ ಉತ್ಪನ್ನಗಳನ್ನು ಸೃಷ್ಟಿಸುವ ಕಂಪನಿಗಳಿಗೆ ಮಾರುಕಟ್ಟೆಯ ತಂತ್ರಗಾರಿಕೆ ಆಧಾರವಾಗಿರುತ್ತದೆಯೇ ವಿನಾ ವೈಜ್ಞಾನಿಕ ಸಂಶೋಧನೆಗಳಲ್ಲ

‘ನಮ್ ಬಾಸು ಸಿಗರೇಟ್ ಸೇದೋ ಸ್ಟೈಲೇ ಸ್ಟೈಲು’ ಎಂದು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ನಟನ ಬಗ್ಗೆ ಮಾತನಾಡಿಕೊಳ್ಳುವುದನ್ನು ನಾವು ಕೇಳಿಯೇ ಇರುತ್ತೇವೆ. ಚಿತ್ರನಟರು, ಸಂಗೀತಗಾರರು, ಆಟಗಾರರು, ಸೆಲೆಬ್ರಿಟಿಗಳು ಸಿಗರೇಟ್ ಸೇದುತ್ತಾ ಆಕರ್ಷಕ ಭಂಗಿಗಳಲ್ಲಿ ಮತ್ತು ಹಾಡಿನ ದೃಶ್ಯಗಳಲ್ಲಿ ಸಿನಿಮಾ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಕಾಣಸಿಗುತ್ತಾರೆ. ಲಕ್ಷಾಂತರ ಲೈಕುಗಳನ್ನು ಪಡೆಯುವ ಇಂತಹ ವ್ಯಕ್ತಿಗಳಿಗೆ ಯುವಕರೇ ಅತಿ ಹೆಚ್ಚಿನ ಸಂಖ್ಯೆಯ ಹಿಂಬಾಲಕರಾಗಿದ್ದಾರೆ.

ಇ-ಸಿಗರೇಟುಗಳು, ನಿಕೋಟಿನ್ ಪೌಚ್‍ಗಳು ಮತ್ತು ಹುರಿದ ತಂಬಾಕು ಉತ್ಪನ್ನಗಳನ್ನು ಉತ್ತೇಜಿಸುವ ಮಾರ್ಕೆಟಿಂಗ್‌ಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ನೂರಾರು ಕೋಟಿ ವೀಕ್ಷಣೆಗಳನ್ನು ಕಂಡಿವೆ. ಇದರ ಹಿಂದೆ ತಂಬಾಕು ಮತ್ತು ನಿಕೋಟಿನ್ ಉದ್ಯಮಗಳ ಕೈಚಳಕವಿದೆ.

ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ಪ್ರತಿವರ್ಷ ವಿಶ್ವದಾದ್ಯಂತ ಸುಮಾರು 12 ಲಕ್ಷ ಜನ ಸಾಯುತ್ತಿದ್ದಾರೆ. ಈ ಭೂಮಿಯ ಬಹುಪಾಲು ಮಕ್ಕಳು ತಂಬಾಕು ಹೊಗೆಯಿಂದ ಕಲುಷಿತವಾದ ಗಾಳಿಯನ್ನೇ ಸೇವಿಸುತ್ತಿದ್ದಾರೆ. ಇವರಲ್ಲಿ ಪ್ರತಿವರ್ಷ ಸುಮಾರು 65,000 ಮಕ್ಕಳು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ. ಈ ಮೂಲಕ ಕಳೆದುಕೊಳ್ಳುವ ತನ್ನ ಗ್ರಾಹಕರನ್ನು ತಂಬಾಕು ಉದ್ಯಮ ಮತ್ತೆ ಪಡೆಯುವುದು ಹೇಗೆ? ಅದು ಬಹಳ ಜಾಣತನದಿಂದ ತನ್ನ ಮಾರುಕಟ್ಟೆಯನ್ನು ಉಳಿಸಿಕೊಳ್ಳುತ್ತಾ, ವಿಸ್ತರಿಸಿಕೊಳ್ಳುತ್ತಾ ಬಂದಿದೆ. ಸಾವಿಗೀಡಾಗುವ ಲಕ್ಷಾಂತರ ಗ್ರಾಹಕರ ಜಾಗಕ್ಕೆ ಹೊಸ ಪೀಳಿಗೆಯ ಹದಿಹರೆಯದ ಮಕ್ಕಳು ಸೇರಿಕೊಳ್ಳುತ್ತಾರೆ. ಅವರ ಮಾರುಕಟ್ಟೆಯ ತಂತ್ರಗಳೆಲ್ಲಾ ಈ ವಯಸ್ಸಿನವರನ್ನೇ ಗುರಿಯಾಗಿಸಿಕೊಂಡಿರುತ್ತವೆ.

ADVERTISEMENT

ತಂಬಾಕು ಉದ್ಯಮ ಎಲೆಕ್ಟ್ರಾನಿಕ್ ಸಿಗರೇಟನ್ನು ಮಾರುಕಟ್ಟೆಗೆ ತಂದಿದೆ. ಇ-ಸಿಗರೇಟನ್ನು 2019ರಲ್ಲಿ ಭಾರತ ಸರ್ಕಾರ ನಿಷೇಧಿಸಿತು. ಆದರೆ ಮಾರುಕಟ್ಟೆಯಲ್ಲಿ ಅದು ಅಕ್ರಮವಾಗಿ ಸಿಗುತ್ತಿದೆ. ಇ-ಸಿಗರೇಟುಗಳಲ್ಲಿ ತಂಬಾಕಿನ ದುಷ್ಪರಿಣಾಮ ಇಲ್ಲವೆಂದು ಹೇಳುವ ಕಂಪನಿಗಳು ನಿಕೋಟಿನ್ ಅಂಶವನ್ನು ಸೇರಿಸಿರುತ್ತವೆ. ನಿಕೋಟಿನ್  ಇಲ್ಲದೇ ಇರುವ ಇ-ಸಿಗರೇಟುಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯ. ಆದರೆ ಯಾವುದೇ ಇ-ಸಿಗರೇಟಾಗಲಿ ಶ್ವಾಸಕೋಶದ ಮೇಲೆ ದುಷ್ಪರಿಣಾಮ ಬೀರುವುದನ್ನು ವೈದ್ಯಕೀಯ ಸಂಶೋಧನೆಗಳು ತೋರಿಸಿವೆ. ತಂಬಾಕು ಕಂಪನಿಗಳು ಹದಿವಯಸ್ಕರನ್ನು ಗಮನದಲ್ಲಿ ಇರಿಸಿಕೊಂಡು ತಂಬಾಕು ಪದಾರ್ಥಗಳನ್ನು ಉತ್ಪಾದಿಸುತ್ತವೆ. ಯುವಕರು ಇಷ್ಟಪಡುವ ಬಬಲ್‌ಗಮ್, ಕಾಟನ್‌ಕ್ಯಾಂಡಿ, ಚೆರ‍್ರಿ, ಮಿಂಟ್, ವೆನಿಲಾದಂತಹ ಸುಮಾರು 16,000 ಫ್ಲೇವರ್‌ಗಳಲ್ಲಿ ತಂಬಾಕನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡಲಾಗುತ್ತದೆ. ಮಕ್ಕಳು ಇಷ್ಟಪಡುವ ಕ್ಯಾಂಡಿ ರೂಪದಲ್ಲೂ ದೊರೆಯುತ್ತದೆ.

ತಂಬಾಕು ಉತ್ಪನ್ನವನ್ನು ಹೆಸರಿಸದೆ ಬೇರೆ ಹೆಸರಿನ ಕೋಡ್ ಬಳಸಿ ಗ್ರಾಹಕರಿಗೆ ತಲುಪಿಸುವ ಜಾಲವೂ ಬಹಳ ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆ. ಹಾಗೆಯೇ ತಂಬಾಕಿನ ದುಷ್ಪರಿಣಾಮಗಳು ಇಲ್ಲವಾದರೂ ಅಷ್ಟೇ ಕಿಕ್ ಕೊಡುತ್ತವೆ ಎಂಬ ಭರವಸೆಯೊಂದಿಗೆ ಹೆಂಪ್ ಮತ್ತು ಹರ್ಬಲ್ ಉತ್ಪನ್ನಗಳಿಗೆ ತಂಬಾಕು ಉದ್ಯಮ ಪ್ರಚಾರ ಕೊಡುತ್ತದೆ. ಆದರೆ ಹಲವು ಬ್ರ್ಯಾಂಡ್‍ಗಳಲ್ಲಿ ತಂಬಾಕು ಅಥವಾ ಕ್ಯಾನಬಿಯನ್ನು ಬಳಸಲಾಗಿರುತ್ತದೆ. ಸಸ್ಯಜನ್ಯ ಉತ್ಪನ್ನಗಳಾದರೂ ಸಿಗರೇಟ್ ರೂಪದಲ್ಲಿ ಅವನ್ನು ಸುಟ್ಟು, ಹೊಗೆಯನ್ನು ಶ್ವಾಸಕೋಶಕ್ಕೆ ಎಳೆದುಕೊಳ್ಳುವುದರಿಂದ ಶ್ವಾಸನಾಳ ಮತ್ತು ಶ್ವಾಸಕೋಶಕ್ಕೆ ಹಾನಿಯುಂಟಾಗುತ್ತದೆ. ಹರ್ಬಲ್ ಸಿಗರೇಟನ್ನು ಸುಟ್ಟಾಗ ಕಾರ್ಬನ್ ಮೊನಾಕ್ಸೈಡ್ ಮತ್ತು ಕ್ಯಾನ್ಸರ್ ಉಂಟುಮಾಡುವ ಟಾರ್ ಉತ್ಪತ್ತಿಯಾಗುತ್ತವೆ.

ಈ ರೀತಿಯ ಪರ್ಯಾಯಗಳನ್ನು ಸೃಷ್ಟಿಸುವ ಕಂಪನಿಗಳಿಗೆ ಮಾರುಕಟ್ಟೆಯ ತಂತ್ರಗಾರಿಕೆ ಆಧಾರವಾಗಿ
ಇರುತ್ತದೆಯೇ ವಿನಾ ವೈಜ್ಞಾನಿಕ ಸಂಶೋಧನೆಗಳಲ್ಲ.ತಂಬಾಕು ಉತ್ಪನ್ನಗಳನ್ನು ಯುವಕರಿಗೆ ಮುಟ್ಟಿಸಲು ಅವರಿಗೆ ಇಷ್ಟವಾಗುವ ಪ್ರಸಿದ್ಧ ವ್ಯಕ್ತಿಗಳಿಗೆ ದುಡ್ಡು ಕೊಟ್ಟು ಜಾಹೀರಾತು ಕೊಡಿಸುತ್ತದೆ. ಇವು ಜಾಹೀರಾತಿನಂತಿರದೆ ಅವರ ಇನ್‌ಸ್ಟಾಗ್ರಾಮ್‌ ಪೋಸ್ಟ್ ಅಥವಾ ಅವರ ಹಾಡು, ಸಿನಿಮಾ ದೃಶ್ಯಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯ ಮೂಲಕ ಆಸಕ್ತಿ ಕೆರಳಿಸುತ್ತವೆ. ನೆಚ್ಚಿನ ಸೆಲೆಬ್ರಿಟಿ ಸಿಗರೇಟು ಸೇದುವ ದೃಶ್ಯದ ಹಿಂದೆ ಈ ಕಂಪನಿಗಳ ಕೈವಾಡ ಇರುವುದು ನಿಶ್ಚಿತ. ಆ ಸೆಲೆಬ್ರಿಟಿಯನ್ನು ಅನುಸರಿಸುವ ನಾವು, ಅರಿವಿಲ್ಲದೇ ಕಂಪನಿಗಳ ಈ ತೆರೆಮರೆಯ ಆಟಕ್ಕೆ ಬಲಿಯಾಗುತ್ತೇವೆ.

ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿವರ್ಷ ಮೇ 31ರಂದು ವಿಶ್ವ ತಂಬಾಕು ರಹಿತ ದಿನಾಚರಣೆಗೆ ಮುಂದಾಗಿದೆ. ‘ಆಕರ್ಷಕ ಉತ್ಪನ್ನಗಳು, ಕರಾಳ ಉದ್ದೇಶಗಳು: ಮುಖವಾಡವನ್ನು ಬಿಚ್ಚಿಡುವುದು’ ಎಂಬ ಘೋಷವಾಕ್ಯದಡಿ ತಂಬಾಕು ಉದ್ಯಮದ ತೆರೆಮರೆಯ ಆಟಗಳ ಬಗ್ಗೆ ಈ ವರ್ಷವಿಡೀ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸದಸ್ಯ ರಾಷ್ಟ್ರಗಳಿಗೆ ಕರೆ ಕೊಟ್ಟಿದೆ. ಅರಿವು ಮೂಡಿಸುವ ಕರ್ತವ್ಯವನ್ನಾದರೂ ಸರ್ಕಾರಗಳು ಮತ್ತು ಆರೋಗ್ಯ ವಿಶ್ವವಿದ್ಯಾಲಯಗಳು ನಿಭಾಯಿಸಬೇಕು. ಅರಿವಿನ ಬೆಳಕಿನಲ್ಲಿ ಆರೋಗ್ಯವಂತ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ.

ಲೇಖಕಿ: ಸಹಪ್ರಾಧ್ಯಾಪಕಿ, ವಿ.ಎಸ್. ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.