ADVERTISEMENT

ಸಂಚಾರ ನಿಯಮ ಮತ್ತು ಪ್ರಶ್ನಿಸುವ ಹಕ್ಕು

ಬದಲಾವಣೆಗೆ ಜನರನ್ನು ಅಣಿಗೊಳಿಸುವುದು ಪ್ರಜಾಪ್ರಭುತ್ವದ ಜೀವಾಳ

ಡಾ.ಜ್ಯೋತಿ
Published 11 ಸೆಪ್ಟೆಂಬರ್ 2019, 4:52 IST
Last Updated 11 ಸೆಪ್ಟೆಂಬರ್ 2019, 4:52 IST
   

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ತೆರಬೇಕಾದ ದಂಡದ ಪ್ರಮಾಣವು ಈ ಹೊಸ ಕಾಯ್ದೆ ಅನುಸಾರ ಹಲವು ಪಟ್ಟು ಹೆಚ್ಚಿದೆ. ಅಪಘಾತಗಳ ನಿಯಂತ್ರಣಕ್ಕೆ ಇಂತಹದ್ದೊಂದು ಕ್ರಮ ಅಗತ್ಯ ಎಂದು ಕೆಲವರು ಸಮರ್ಥಿಸುತ್ತಿದ್ದರೂ ಜನಸಾಮಾನ್ಯರ ವಲಯದಲ್ಲಿ ಇದು ತೀವ್ರ ಟೀಕೆಗೂ ಗುರಿಯಾಗಿದೆ.

ನಮ್ಮಲ್ಲಿ ಜನಸಂಖ್ಯೆ ಹೆಚ್ಚು. ಅದಕ್ಕೆ ತಕ್ಕಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ರೂಪುಗೊಂಡಿಲ್ಲ. ಪರಿಣಾಮವಾಗಿ ಖಾಸಗಿ ವಾಹನಗಳ ಸಂಖ್ಯೆಯು ರಸ್ತೆಗಳ ಸಾಮರ್ಥ್ಯಕ್ಕಿಂತ ಹಲವು ಪಟ್ಟು ಹೆಚ್ಚು. ಇಂತಹ ಸನ್ನಿವೇಶದಲ್ಲಿ ಜನರ ಮೇಲೆ ದೊಡ್ಡ ಪರಿಣಾಮ ಬೀರುವಂತಹ ಕಾಯ್ದೆ ಜಾರಿಗೊಳಿಸುವ ಮೊದಲು, ಜನರನ್ನು ಮಾನಸಿಕವಾಗಿ ಸಜ್ಜುಗೊಳಿಸಬೇಕಾದ ಅಗತ್ಯವೂ ಇದೆ. ದಂಡ ಹೆಚ್ಚಿಸಿರುವುದರ ಹಿಂದಿನ ಉದ್ದೇಶ ಒಳ್ಳೆಯದೇ ಆದರೂ ದಂಡ ಏರಿಕೆಯ ಪ್ರಮಾಣದಲ್ಲಿ ಈ ಪರಿಯ ಜಿಗಿತವು ನಮ್ಮ ಸಾಮಾಜಿಕ–ಆರ್ಥಿಕ ಸ್ಥಿತಿಯಲ್ಲಿ ಸಾಧುವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಸಂಚಾರ ನಿಯಮ ಪಾಲಿಸುವುದು ಅಗತ್ಯ. ಅದರಿಂದ ಶಿಸ್ತು ಮೂಡುತ್ತದೆ. ನಿಯಮ ಉಲ್ಲಂ ಘಿಸಿದರೆ ದಂಡ ತೆರಬೇಕು. ಆದರೆ, ನಮ್ಮ ರಸ್ತೆಗಳು, ರಸ್ತೆ ದೀಪಗಳು ಮತ್ತು ಸಿಗ್ನಲ್‌ ಲೈಟ್‌ಗಳ ಸ್ಥಿತಿ ಹಾಗೂ ಅವುಗಳ ನಿರ್ವಹಣೆ ಇವೆಲ್ಲವೂ ಉತ್ತಮವಾಗಿ ಇವೆಯೇ? ಇವುಗಳಿಗೆ ಸಂಬಂಧಿಸಿದ ಲೋಪದೋಷಗಳನ್ನು ಮೊದಲು ಸರಿಪಡಿಸಬೇಕಲ್ಲವೇ?

ADVERTISEMENT

ಯಾವ ರಸ್ತೆಗಳಲ್ಲಿ ಗಾಡಿ ಓಡಿಸಿ, ನಿಯಮ ಉಲ್ಲಂಘನೆ ಹೆಸರಲ್ಲಿ ದಂಡ ಕಟ್ಟುತ್ತೇವೋ, ಹೆಚ್ಚಿನ ಸಂದರ್ಭಗಳಲ್ಲಿ ಅವು ರಸ್ತೆಗಳೆಂದು ಕರೆಸಿಕೊಳ್ಳಲು ಯೋಗ್ಯವಾಗಿರುವುದಿಲ್ಲ. ಇಂತಹ ರಸ್ತೆಗಳಲ್ಲಿ ನಾಗರಿಕರು ತಮ್ಮ ಜೀವ ಒತ್ತೆಯಿಟ್ಟು ಗಾಡಿ ಚಲಾಯಿಸುತ್ತಾರೆ. ಹೀಗಿರುವಾಗ, ಅಲ್ಲಿ ಯಾರಿಗೆ ಮತ್ತು ಯಾವ ಕಾರಣಕ್ಕೆ ಮೊದಲು ದಂಡ ವಿಧಿಸಬೇಕು? ಈ ಬಗೆಯ ಪ್ರಶ್ನೆಗಳು ನಮ್ಮನ್ನು ಆಳುವವರಿಗೆ ಕ್ಷುಲ್ಲಕ ಎನಿಸಬಹುದು. ಹೆಲ್ಮೆಟ್ ಹಾಕದಿದ್ದಲ್ಲಿ, ಅದರ ಬೆಲೆಗಿಂತ ಹೆಚ್ಚಿನ ದಂಡ ತೆರಬೇಕಾದ ಸ್ಥಿತಿ ಈಗ ಇದೆ. ಹೀಗಿರುವಾಗ, ಹದಗೆಟ್ಟ ರಸ್ತೆಗಳಲ್ಲಿ ಹೆಲ್ಮೆಟ್ ಹಾಕಿಯೇ ಗಾಡಿ ಓಡಿಸಿ ಅಪಘಾತವಾದರೆ, ಸಾವು–ನೋವು ಸಂಭವಿಸಿದರೆ ಆಗ ಯಾರಿಗೆ ದಂಡ ವಿಧಿಸಬೇಕು?

ಜನಸಾಮಾನ್ಯರ ಸಮಯಕ್ಕೆ ಬೆಲೆ ಕೊಡದೆ, ದಿಢೀರೆಂದು ಪ್ರತ್ಯಕ್ಷವಾಗುವ (ಸದಾ ತುರ್ತಿನಲ್ಲಿರುವ) ನಮ್ಮ ಜನನಾಯಕರಿಗೆ, ತಕ್ಷಣ ಜೀರೊ ಟ್ರಾಫಿಕ್ ದಯಪಾಲಿಸಿ ಕೃತಾರ್ಥರಾಗುವುದು ಸರಿಯೇ? ನಮ್ಮನ್ನು ಅಡ್ಡಗಟ್ಟಿ ದಂಡ ವಿಧಿಸುವ ಸಂಚಾರ ಪೊಲೀಸರ ಬಳಿ ಇದಕ್ಕೆ ಉತ್ತರವಿಲ್ಲ. ಕೇಳಿದರೆ, ‘ಮೇಲಿನ ಆದೇಶ’ ಎಂದು ಹೇಳುತ್ತಾರೆ. ತೊಂದರೆಗೊಳಗಾದ ಸಾರ್ವಜನಿಕರು ಈ ಪ್ರಶ್ನೆಯನ್ನು ಯಾರಲ್ಲಿ ಕೇಳಬೇಕು?

ಈ ಹೊಸ ಕಾಯ್ದೆಯಿಂದ ರಸ್ತೆ ಸುರಕ್ಷತೆಯಲ್ಲಿ ಸಂಪೂರ್ಣ ಯಶಸ್ಸು ಸಾಧಿಸುತ್ತೇವೆ ಎಂದುಕೊಂಡರೆ ಆ ನಿರೀಕ್ಷೆ ಹುಸಿಯಾಗಬಹುದು. ಮುಖ್ಯವಾದ ಸಮಸ್ಯೆ ಇರುವುದು ಜನರ ಯೋಚನಾ ವಿಧಾನದಲ್ಲಿ. ನಮಗೆ ಚಾಲನಾ ಪರವಾನಗಿ ಹೇಗೆ ಬಹಳ ಸುಲಭವಾಗಿ ಸಿಗುತ್ತಿದೆ ಎನ್ನುವುದನ್ನು ಗಮನಿಸಬೇಕು. ಅಲ್ಲಿ, ಚಾಲಕನಿಗೆ ರಸ್ತೆ ನಿಯಮಗಳ ಬಗ್ಗೆ ಇರಬೇಕಾದ ಸ್ಪಷ್ಟವಾದ ಅರಿವು ಮತ್ತು ಅವನ ಚಾಲನೆಯ ಕೌಶಲದ ಪರೀಕ್ಷೆ ನಡೆಯುತ್ತಿದೆಯೇ? ನಮಗೆಲ್ಲ ಗೊತ್ತಿರುವಂತೆ, ಚಾಲನಾ ಪರವಾನಗಿ ಬಹಳ ಸುಲಭವಾಗಿ ಸಿಗುತ್ತದೆ. ಅದಕ್ಕಾಗಿ ಏಜೆಂಟರ ಪಡೆಯೇ ಸೃಷ್ಟಿಯಾಗಿದೆ. ಡ್ರೈವಿಂಗ್ ಸ್ಕೂಲ್‌ಗಳ ಮುಖಾಂತರ ಹೋದರಂತೂ ಇನ್ನೂ ನಿರಾಳವಾಗಿ ಸಿಗುತ್ತದೆ. ಸರಿಯಾಗಿ ವಾಹನ ಚಲಾಯಿಸಲು ಬಾರದ, ಸಂಚಾರ ನಿಯಮಗಳ ಅರಿವೇ ಇಲ್ಲದ, ಒಂದು ವೇಳೆ ನಿಯಮ ಮುರಿದರೂ ಎಲ್ಲವನ್ನೂ ದುಡ್ಡಿನ ಮೂಲಕವೇ ಇತ್ಯರ್ಥಗೊಳಿಸಿಕೊಳ್ಳುವ ಧೈರ್ಯ ಹೊಂದಿರುವ ಚಾಲಕರನ್ನು ನಾವು ರಸ್ತೆಗೆ ಬಿಟ್ಟಿರುವ ಇಂತಹ ವ್ಯವಸ್ಥೆಯಲ್ಲಿ, ಮಹತ್ತರ ಬದಲಾವಣೆ ತರುವುದು ರಸ್ತೆ ಸುರಕ್ಷತೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆ.

ಜಗತ್ತಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅಧ್ಯಯನ ಪ್ರವಾಸ ಮಾಡಿ ಬಂದು ಅಲ್ಲಿನ ಕಾಯ್ದೆಗಳನ್ನು ಇಲ್ಲಿ ಅಳವಡಿಸುವ ಮೊದಲು, ನಮ್ಮ ವ್ಯವಸ್ಥೆಯನ್ನು ಚೆನ್ನಾಗಿ ಅಧ್ಯಯನ ಮಾಡಿ, ಇಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ಜನರಲ್ಲಿ ಹೊಸ ಕಾಯ್ದೆಗಳ ಅಗತ್ಯ, ಮತ್ತದರ ಅರಿವು ಮೂಡಿಸಿ ಕಾರ್ಯಗತಗೊಳಿಸಬೇಕು. ಇದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣ. ಇಲ್ಲವಾದರೆ, ಕಾಯ್ದೆಗಳಿಗೆ ಸಿಗಬೇಕಾದಷ್ಟು ಮನ್ನಣೆ ಸಿಗುವುದಿಲ್ಲ. ಮಾತ್ರವಲ್ಲ, ಈಗಾಗಲೇ ಮಾಧ್ಯಮಗಳು ವರದಿ ಮಾಡಿದಂತೆ, ಅಸಹಾಯಕ ಜನರು, ತಾವು ಓಡಿಸುವ ವಾಹನದ ಬೆಲೆಗಿಂತ ಹೆಚ್ಚಿನ ದಂಡವನ್ನು ಕಟ್ಟಲಾಗದೆ, ಹತಾಶೆಯಿಂದ ರಸ್ತೆಯಲ್ಲೇ ವಾಹನ ಬಿಟ್ಟು ಹೋಗಬೇಕಾದೀತು. ವ್ಯವಸ್ಥೆಯಲ್ಲಿ ತರಬಯಸುವ ಬದಲಾವಣೆ ಬಗ್ಗೆ ಜನರಿಗೆ ಮನದಟ್ಟು ಮಾಡಿಸಿ, ಅರಿವು ಮೂಡಿಸಿ, ಅದರ ಅಗತ್ಯವನ್ನು ವಿವರಿಸುವ ಜವಾಬ್ದಾರಿಯು ನಮ್ಮನ್ನು ಆಳಿ ಎಂದು ನಾವೇ ಗೆಲ್ಲಿಸಿದ ಸರ್ಕಾರಕ್ಕಿದೆ. ಅದು ತಪ್ಪಿದಲ್ಲಿ, ಪ್ರಶ್ನಿಸುವ, ಪ್ರತಿಭಟಿಸುವ ಹಕ್ಕು ಜನರಿಗೆ ಇದೆ.

ಲೇಖಕಿ: ಸಹಾಯಕ ಪ್ರಾಧ್ಯಾಪಕಿ,ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜು, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.