ADVERTISEMENT

‘ತಾಯಿ–ಗಾಂಧಿ’ಯ ಮಡಿಲು!‌

ಸಂವಾದ ಶೂನ್ಯದಿಂದ ಕೂಡಿದ ಈ ಸಂಕಷ್ಟದ ಕಾಲ, ನಾವು ಮತ್ತೆ ಗಾಂಧಿಯ ಕಡೆ ನೋಡುವಂತೆ ಮಾಡುತ್ತಿದೆ

ಡಾ.ಕಿರಣ್ ಎಂ ಗಾಜನೂರು ಶಿವಮೊಗ್ಗ
Published 30 ಸೆಪ್ಟೆಂಬರ್ 2020, 20:30 IST
Last Updated 30 ಸೆಪ್ಟೆಂಬರ್ 2020, 20:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

‘2013ರಲ್ಲಿ ಒಮ್ಮೆ ನಾನು ನ್ಯೂಯಾರ್ಕಿನ ಹೋಟೆಲ್ ಒಂದರಲ್ಲಿ ತಂಗಿದ್ದಾಗ, ಕೋಣೆ ಸ್ವಚ್ಛಗೊಳಿಸುವ ವ್ಯಕ್ತಿ ನನ್ನ ಮೇಜಿನ ಮೇಲಿದ್ದ ‘ಗಾಂಧಿ ಆತ್ಮಕಥನ’ ಪುಸ್ತಕದ ಮುಖಪುಟದಲ್ಲಿನ ಚಿತ್ರ ನೋಡಿ, ‘ಈ ವಕೀಲರ ಚಿತ್ರ ಯುವಕ ಗಾಂಧಿಯವರದು ತಾನೇ? ನಮ್ಮ ದೇಶದಲ್ಲಿ ಇವರು ಹೆಚ್ಚು ಗೌರವಿಸಲ್ಪಡುವ ವ್ಯಕ್ತಿ’ ಎಂದ. ನಾನು ಆತನಿಗೆ ‘ನಿನ್ನ ದೇಶ ಯಾವುದು?’ ಎಂದು ಕೇಳಿದೆ. ಆತ ‘ಡೊಮಿನಿಕನ್‌ ರಿಪಬ್ಲಿಕ್‌’ ಎಂದ. ನಿಜವಾಗಿಯೂ ಆ ಕಾಲಕ್ಕೆ ಸ್ವತಃ ಗಾಂಧಿಗೂ ಆ ದೇಶದ ಬಗ್ಗೆ ಗೊತ್ತಿರಲು ಸಾಧ್ಯವಿರಲಿಲ್ಲವೇನೊ. ಆದರೆ ಇಂದು ಗಾಂಧಿ ಆ ದೇಶಕ್ಕೆ ಚಿರಪರಿಚಿತ’–

ಚರಿತ್ರಕಾರ ರಾಮಚಂದ್ರ ಗುಹ ಅವರು ತಮ್ಮ ಅನುಭವವನ್ನು ಬರಹವೊಂದರಲ್ಲಿ ಹಂಚಿಕೊಂಡ ಬಗೆ ಇದು. ಅಹಿಂಸೆ ಮತ್ತು ಆತ್ಮಗೌರವದಿಂದ ಕೂಡಿದ, ಸ್ವಾತಂತ್ರ್ಯ ಬಯಸುವ ಪ್ರತಿಯೊಂದು ಸಮಾಜವೂ ಗಾಂಧಿತತ್ವವನ್ನು ತನ್ನ ವಿಮೋಚನಾ ಹೋರಾಟದ ಭಾಗವಾಗಿಸಿಕೊಂಡಿದೆ ಎಂಬುದನ್ನು ಈ ಬರಹ ನಿರೂಪಿಸುತ್ತದೆ. ಈ ಕಾರಣಕ್ಕೆ, ಜಗತ್ತಿನ ಚರಿತ್ರೆಯಲ್ಲಿ ಗಾಂಧಿ ಎಂದಿಗೂ ಪ್ರಸ್ತುತವಾಗಿಯೇ ಉಳಿದಿರುತ್ತಾರೆ.

ಮತ್ತೊಬ್ಬ ಚರಿತ್ರಕಾರ ಯುವಲ್‌ ನೋಹಾ ಹರಾರಿ, ಇಂದು ಜಗತ್ತು ತನ್ನದೇ ಭವಿಷ್ಯದ ಕುರಿತು ಆಲೋಚಿಸುವ ಬೌದ್ಧಿಕ ವಿದ್ವತ್ತು, ಸೂಕ್ಷ್ಮತೆ ಕಳೆದುಕೊಂಡ ಸ್ಥಿತಿಯನ್ನು ತಲುಪಿದೆ ಅನ್ನಿಸುತ್ತಿದೆ. ಜಗತ್ತಿನ ಅತ್ಯಂತ ಬಲಶಾಲಿ ನಾಯಕ ಎನಿಸಿಕೊಂಡವರೂ ತಮ್ಮ ಸಮಾಜದ ಭವಿಷ್ಯದ ಯೋಜನೆಗಳ ಕುರಿತು ಚಕಾರ ಎತ್ತುತ್ತಿಲ್ಲ. ಬದಲಾಗಿ, ತಮ್ಮದೇ ದೇಶದ ಗತದ ವೈಭವವನ್ನು ಮರುಸ್ಥಾಪಿಸುವ ಅಬ್ಬರದ ಭಾಷಣಗಳ ಮೊರೆ ಹೋಗಿದ್ದಾರೆ ಎಂದಿದ್ದಾರೆ.

ADVERTISEMENT

ವಾಸ್ತವದಲ್ಲಿ ಭಾರತದ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ನಮ್ಮ ವರ್ತಮಾನವೂ ಭವ್ಯ ಗತವನ್ನು ನೆನೆಯುವ, ಅದನ್ನು ಮರುಸ್ಥಾಪಿಸುವ ಅಬ್ಬರದ ಮಾತನಾಡುವ ಸಂಕುಚಿತ ಸಂಕಥನಕ್ಕೆ ಬಂದಿಯಾಗಿದೆ.

ಭವಿಷ್ಯದ ಕುರಿತ ಈ ನಮ್ಮ ‘ಮಾತುಸೋತ’ ಸ್ಥಿತಿಗೆ ಮುಖ್ಯ ಕಾರಣ, ನಮ್ಮನ್ನು ಆಳುವ ವರ್ಗವು ಸಂವಾದದಿಂದ ಕೂಡಿದ ಈ ನೆಲದ ಸಂಕಥನವನ್ನೇ ಯುವತಲೆಮಾರಿನಿಂದ ಮುಚ್ಚಿಟ್ಟಿರುವುದು. ಇಂತಹ ಬೆಳವಣಿಗೆಗಳ ದೂರಗಾಮಿ ಪರಿಣಾಮವೆಂದರೆ, ‘ನಾವು ಗತದಲ್ಲಿ ಅತ್ಯಂತ ವೈಭವದಿಂದ ಕೂಡಿದ ಒಂದು ರಾಷ್ಟ್ರ’ ಎಂಬ ಅಬ್ಬರದಲ್ಲಿ ‘ವರ್ತಮಾನದಲ್ಲಿ ನಾವು ವೈವಿಧ್ಯದಿಂದ ಕೂಡಿದ ಜೀವಂತ ಸಮಾಜವೂ ಹೌದು’ ಎಂಬ ಮೂಲಭೂತ ಸಂಗತಿಯನ್ನೇ ನಮ್ಮ ಯುವ ತಲೆಮಾರು ಗುರುತಿಸಲಾರದ ಸ್ಥಿತಿಗೆ ತಳ್ಳಲ್ಪಡುವುದು. ಇದರ ಲಕ್ಷಣಗಳು ಈಗಾಗಲೇ ಅಲ್ಲಲ್ಲಿ ಗೋಚರಿಸಲು ಆರಂಭಿಸಿವೆ.

ಇಂದು ಜಗತ್ತಿನ, ಅದರಲ್ಲೂ ಮುಖ್ಯವಾಗಿ ಪಶ್ಚಿಮದ ದೇಶಗಳು ಗಾಂಧಿಯವರು ಯೋಚಿಸಿದ ಧಾರ್ಮಿಕ ಸಹಿಷ್ಣುತೆ, ಪರಿಸರದ ಸುಸ್ಥಿರತೆ ಮತ್ತು ಅಹಿಂಸೆಯ ತತ್ವಗಳನ್ನು ತಮ್ಮ ಆಲೋಚನೆಗಳ ಕೇಂದ್ರವಾಗಿಸಿಕೊಂಡು, ತಮ್ಮ ಸಮಾಜಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಿಕೊಳ್ಳುತ್ತಿವೆ. ಅಲ್ಲಿನ ವಿಶ್ವವಿದ್ಯಾಲಯಗಳು ಅಧ್ಯಯನ ಕೇಂದ್ರಗಳ ಮೂಲಕ ಆಧುನಿಕ ರಾಜಕೀಯ ಮತ್ತು ಸಾಮಾಜಿಕ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಲು ಹೊಸ ಸಂಕಥನವೊಂದನ್ನು, ಹೊಸ ರಾಜಕೀಯ ಸಿದ್ಧಾಂತವೊಂದನ್ನು ಗಾಂಧಿ ಚಿಂತನೆಗಳಿಂದ ಕಟ್ಟಿಕೊಳ್ಳುವ ನಿರಂತರ ಪ್ರಯತ್ನದಲ್ಲಿವೆ. ಆದರೆ ನಾವು ಇದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದೇವೆ.

ನಮ್ಮ ಬಹುತೇಕ ವಿಶ್ವವಿದ್ಯಾಲಯಗಳು, ಗಾಂಧಿಯ ಸುತ್ತ ಈಗಾಗಲೇ ಕಟ್ಟಲಾಗಿರುವ ಸೀಮಿತ ಚೌಕಟ್ಟುಗಳ ಹಿನ್ನೆಲೆಯಲ್ಲಿ ನಿರೂಪಿಸಿರುವ ಪರಿಚಯಾತ್ಮಕ ಟಿಪ್ಪಣಿಯನ್ನು ಯುವ ತಲೆಮಾರಿಗೆ ದಾಟಿಸುತ್ತಿವೆ. ಆದರೆ ರಾಷ್ಟ್ರವಾದದ ಹೆಸರಿನಲ್ಲಿ ಬಹುಸಂಖ್ಯಾತವಾದ, ದೇಶಭಕ್ತಿಯ ಹೆಸರಿನಲ್ಲಿ ವ್ಯವಸ್ಥೆಯ ಕಾರ್ಪೊರೇಟೀಕರಣ ನಡೆಯುತ್ತಿರುವ ಈ ಹೊತ್ತಿನಲ್ಲಿ, ಇಂದು ಹಿಂದೆಂದಿಗಿಂತಲೂ ಗಾಂಧಿ ಪ್ರಸ್ತುತವಾಗಿದ್ದಾರೆ ಅನ್ನಿಸುತ್ತದೆ.

ನಮ್ಮ ನೆಲದ ಪುರಾಣ, ಜನಪದ, ವಚನ, ದಾಸ-ಸಾಹಿತ್ಯ ಇತ್ಯಾದಿ ಯಾವ ಪ್ರಕಾರದ ಚಿಂತನೆಗಳನ್ನು ಗುರುತಿಸಿದರೂ ‘ಸಂವಾದ’ ಆ ಸಂಕಥನಗಳ ಕೇಂದ್ರಬಿಂದು. ಒಬ್ಬ ಸಾಮಾನ್ಯ ವಕೀಲರಾಗಿದ್ದ ಗಾಂಧಿ ಮುಂದೆ ಈ ದೇಶದ ಲಕ್ಷಾಂತರ ಜನರನ್ನು ಸ್ವಾತಂತ್ರ್ಯ ಚಳವಳಿಯ ಭಾಗವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಕ್ಕೆ ಅವರು ಸಂವಹನಕ್ಕೆ ಬಳಸಿದ ಭಾಷೆಯು ಸಂವಾದದ ಸ್ವರೂಪವನ್ನು ಹೊಂದಿದ್ದುದು ಕಾರಣ ಎನ್ನುವುದನ್ನು ಹಲವರು ಗುರುತಿಸಿದ್ದಾರೆ. ಇಂದು ವರ್ತಮಾನದ ಭಾರತ ಆ ಸಂವಾದದಿಂದಲೇ ವಿಮುಖವಾಗಿ ನಿಂತಿದೆ.

ಈ ಹಂತದಲ್ಲಿ ನಾವು ಮತ್ತೆ ಗಾಂಧೀಜಿ ಕಡೆಗೆ ನೋಡಬೇಕಿದೆ. ದೇಶದ ಪಾಲಿಗೆ ಬಾಪೂ, ಜಗತ್ತಿನ ಪಾಲಿಗೆ ಮಹಾತ್ಮ ಆಗಿದ್ದ ವ್ಯಕ್ತಿ ಒಬ್ಬ ಹೆಣ್ಣುಮಗಳ ಪಾಲಿಗೆ ತಾಯಿಯೂ ಆಗಿದ್ದರು ಎಂಬ ಸಂಗತಿಯನ್ನು ನಾವು ನೆನಪಿಡಬೇಕಿದೆ. ತನ್ನ 17ನೇ ವಯಸ್ಸಿನಲ್ಲಿಯೇ ಗಾಂಧಿಯವರ ಸಹಾಯಕಿಯಾಗಿ ಅವರ ಸಂಪರ್ಕಕ್ಕೆ ಬಂದ ಮಧುಬೆನ್, ಕೊನೆಯತನಕ ಅವರ ಜೊತೆಯಾಗಿ ನಿಂತವರು. ‘ಗಾಂಧಿ ನನ್ನ ತಾಯಿ’ ಎಂದು ಉದ್ಗರಿಸಿದ್ದ ಆಕೆ ಬರೆದ ಪುಸ್ತಕದ ಹೆಸರೂ ‘ಬಾಪೂ ಮೈ ಮದರ್’.

ಸಂವಾದ ಶೂನ್ಯದಿಂದ ಕೂಡಿದ ಈ ಸಂಕಷ್ಟದ ಕಾಲದಲ್ಲಿ ಗಾಂಧಿಯವರ ಕುರಿತ ಮಹಾತ್ಮ, ಸ್ವಾತಂತ್ರ್ಯ ಹೋರಾಟಗಾರ ಇತ್ಯಾದಿ ಪ್ರತಿಮೆಗಳ ಆಚೆಗೆ ಮಧುಬೆನ್ ಸೂಚಿಸಿದ ‘ತಾಯಿ-ಗಾಂಧಿ’ ನಮಗೆ ಹೆಚ್ಚು ನೆರವಾಗುತ್ತಾರೆ ಅನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.