ADVERTISEMENT

ಚರ್ಚೆ | ಕೆಲಸದ ಅವಧಿ: ದಿಕ್ಕುತಪ್ಪಿದ ಆದ್ಯತೆ

ಎಚ್.ಕೆ.ಶರತ್
Published 1 ಡಿಸೆಂಬರ್ 2024, 23:30 IST
Last Updated 1 ಡಿಸೆಂಬರ್ 2024, 23:30 IST
   

‘ನಾವು ಚೀನಾಗಿಂತ ಕಡಿಮೆ ಅಂದ್ರೂ ಇಪ್ಪತ್ತು ವರ್ಷಗಳಷ್ಟು ಹಿಂದುಳಿದಿದ್ದೇವೆ’– ಈ ಮಾತು ಹೇಳಿದ್ದು ತಮಿಳುನಾಡಿನ ಹೊಸೂರು ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಕೈಗಾರಿಕೆಯೊಂದನ್ನು ನಡೆಸುತ್ತಿರುವ ಒಬ್ಬ ಯುವ ಉದ್ಯಮಿ. ತರಬೇತಿ ಕಾರ್ಯಾಗಾರವೊಂದರಲ್ಲಿ ಇತ್ತೀಚೆಗೆ ಪಾಲ್ಗೊಂಡಿದ್ದರಿಂದ, ಕೆಲ ಕೈಗಾರಿಕೆಗಳಿಗೆ ಭೇಟಿ ನೀಡುವ ಅವಕಾಶ ದೊರೆತಿತ್ತು.

ತಮ್ಮ ಕೈಗಾರಿಕೆ ವೀಕ್ಷಣೆಗೆ ಬಂದಿದ್ದ ತಂಡದೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದ ಯುವ ಉದ್ಯಮಿ, ತಾವು ಎದುರಿಸುತ್ತಿರುವ ಸವಾಲುಗಳ ಕುರಿತು ವಿವರಿಸುವಾಗ ಮೇಲಿನ ಮಾತು ಹೇಳಿದರು. ‘ಉತ್ಪಾದನಾ ಕ್ಷೇತ್ರದಲ್ಲಿ ಚೀನಾ ಬಳಸುತ್ತಿರುವ ತಂತ್ರಜ್ಞಾನಗಳು ಮತ್ತು ಅಲ್ಲಿನ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುವವರಲ್ಲಿನ ಕೌಶಲಗಳನ್ನು ಗಮನಿಸಿದರೆ, ನಾವು ಅವರಿಗೆ ಸರಿಸಮಾನವಾಗಿ ನಿಲ್ಲುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ’ ಎಂದು ವಿಷಾದಿಸಿದರು.

ನಮ್ಮ ತಂಡದ ಭಾಗವಾಗಿದ್ದ, ಬೆಳಗಾವಿಯಲ್ಲಿ ಸಣ್ಣ ಕೈಗಾರಿಕೆ ಹೊಂದಿರುವ ಉದ್ಯಮಿಯೊಬ್ಬರು ಇವರ ಮಾತಿಗೆ ಪ್ರತಿಕ್ರಿಯಿಸುತ್ತಾ, ‘ಚೀನಾಗಿಂತ ನಾವು 40 ವರ್ಷಗಳಷ್ಟು ಹಿಂದುಳಿದಿದ್ದೇವೆ ಎಂಬುದು ನನ್ನ ಅಭಿಪ್ರಾಯ’ ಎಂದರು. ಮುಂದುವರಿದು, ಸಣ್ಣ ಕೈಗಾರಿಕೆಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಯಾವ ರೀತಿಯ ಸವಾಲುಗಳನ್ನು ಎದುರಿಸುತ್ತಿವೆ ಎಂಬುದನ್ನು ವಿವರಿಸಿದರು.

ADVERTISEMENT

ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಬೇಕಾದ ಸವಾಲು ತಯಾರಿಕಾ ಕ್ಷೇತ್ರದ ಮೇಲಿದೆ. ಚೀನಾ ಇದರಲ್ಲಿ ಈಗಾಗಲೇ ದಾಪುಗಾಲಿರಿಸಿ, ತಯಾರಿಕಾ ಕ್ಷೇತ್ರದ ಶಕ್ತಿಕೇಂದ್ರವಾಗಿದೆ. ಒಂದು ಹಂತದಲ್ಲಿ, ಚೀನಾದೊಂದಿಗೆ ಸ್ಪರ್ಧಿಸುವ, ಅದಕ್ಕೆ ಪ್ರತಿಸ್ಪರ್ಧಿಯಾಗಿ ಎದ್ದುನಿಲ್ಲುವ ಮಾತನಾಡುತ್ತಿದ್ದ ಭಾರತದ ತಯಾರಿಕಾ ವಲಯದ ಪರಿಸ್ಥಿತಿ ಇಂದು ಹೇಗಿದೆ ಎಂಬ ಕುರಿತು ವಾಸ್ತವಿಕ ನೆಲಗಟ್ಟಿನಲ್ಲಿ ಚಿಂತಿಸುವ ಅಗತ್ಯ ಇದೆ. ‘ಭಾರತದಲ್ಲಿ ತಯಾರಿಸಿ’, ‘ಕೌಶಲ ಭಾರತ’ ಎಂಬ ಉಪಕ್ರಮಗಳು ಬರೀ ಘೋಷಣೆಗಳಾಗಿ ಉಳಿ
ದಿವೆಯೋ ಅಥವಾ ಬೇರು ಮಟ್ಟದಲ್ಲೂ ಬದಲಾವಣೆ ಸಂಭವಿಸುತ್ತಿದೆಯೋ ಎಂಬುದನ್ನು ಪರಿಶೀಲಿಸಬೇಕಿದೆ.

ಸಣ್ಣ ಮತ್ತು ಮಧ್ಯಮ ಹಂತದ ಕೈಗಾರಿಕೆಗಳನ್ನು ನಡೆಸುತ್ತಿರುವ ಉದ್ಯಮಿಗಳ ಮಾತು ಕೇಳಿದರೆ, ಪರಿಸ್ಥಿತಿಯಲ್ಲಿ ಹೆಚ್ಚಿನ ಸುಧಾರಣೆ ಆಗಿರುವ ಯಾವ ಸೂಚನೆಗಳೂ ಸಿಗಲಾರವು. ಶೈಕ್ಷಣಿಕ ವಲಯ ಮತ್ತು ಉದ್ಯಮ ವಲಯದ ನಡುವೆ ಎದ್ದು ನಿಂತಿರುವ ಗೋಡೆಗಳನ್ನು ಉರುಳಿಸುವ ಪ್ರಯತ್ನಗಳು ಕೂಡ ವಿಫಲ
ಗೊಳ್ಳುತ್ತಲೇ ಇವೆ. ಹೀಗಾಗಿ, ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿರುವ ಬಹುಪಾಲು ಸಂಶೋಧನೆಗಳು ಸಂಶೋಧನಾ ಪ್ರಬಂಧಗಳ ಸೃಷ್ಟಿಗೆ ಬೇಕಿರುವ ಅಂಕಿ-ಅಂಶ ರೂಪದ ಫಲಿತಾಂಶ ನೀಡಲು ಶಕ್ತವೇ ವಿನಾ ಪ್ರಾಯೋಗಿಕವಾಗಿ ಉಪಯೋಗಕ್ಕೆ ಬರುತ್ತಿಲ್ಲ.

ಇನ್ನು ಎಂಜಿನಿಯರಿಂಗ್‍ನಂತಹ ವೃತ್ತಿಶಿಕ್ಷಣದ ಭಾಗವಾಗಿ ಕಲಿಸುತ್ತಿರುವ ವಿಷಯಗಳು ಮತ್ತು ಮೈಗೂಡಿಸುತ್ತಿರುವ ಕೌಶಲಗಳ ಕುರಿತು ಕೂಡ ಉದ್ಯಮ ವಲಯದಲ್ಲಿ ದೊಡ್ಡ ಮಟ್ಟದ ಅಸಮಾಧಾನವಿದೆ. ಉದ್ಯಮ ವಲಯದಲ್ಲಿ ಕೆಲಸ ನಿರ್ವಹಿಸಲು ಬೇಕಿರುವ ಕೌಶಲಗಳು ಎಂಜಿನಿಯರಿಂಗ್ ಪದವೀಧರರಲ್ಲಿ ಇರು
ವುದೇ ಇಲ್ಲ, ಅರ್ಹ ಅಭ್ಯರ್ಥಿಗಳು ಸಿಗುವುದೇ ದುಸ್ತರವಾಗಿದೆ ಎನ್ನುವುದು ಉದ್ಯಮ ವಲಯದ ದೂರು.

ವೆಚ್ಚ ಕಡಿತ, ಉತ್ಪಾದಕತೆ ಮತ್ತು ಲಾಭ ಹೆಚ್ಚಳದ ಕಡೆಗೆ ಹೆಚ್ಚು ಚಿಂತಿಸುವ ಉದ್ಯಮ ವಲಯದಲ್ಲಿ ಕೆಲಸಗಾರರ ಧೋರಣೆ ಕುರಿತು ಸಹ ಅಸಮಾಧಾನವಿದೆ. ಈ ಅಸಮಾಧಾನ ಕೆಲವೊಮ್ಮೆ ಅಸಹನೆಯಾಗಿಯೂ ಹೊರಹೊಮ್ಮುವುದಿದೆ. ಚೀನಾ ಮತ್ತು ಜಪಾನ್ ದೇಶದ ಕೆಲಸಗಾರರಲ್ಲಿನ ಕೌಶಲ ಮತ್ತು ವೃತ್ತಿಪರತೆಯೊಂದಿಗೆ ಹೋಲಿಸಿ, ತಮಗೆ ಲಭ್ಯವಾಗುತ್ತಿರುವ ಮಾನವ ಸಂಪನ್ಮೂಲವನ್ನು ನಿರ್ವಹಿಸುತ್ತಾ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಸ್ತಿತ್ವ ಉಳಿಸಿ
ಕೊಳ್ಳುವುದೇ ಸವಾಲಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತದೆ. ಬಹುತೇಕ ಉದ್ಯಮಿಗಳು ಅನೌಪ
ಚಾರಿಕ ಮಾತುಕತೆ ವೇಳೆ ಆಡುವುದನ್ನೇ ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರು ಬಹಿರಂಗವಾಗಿ ಹೇಳುವ ಮೂಲಕ ಟೀಕೆ-ಟಿಪ್ಪಣಿಗಳಿಗೆ ಗುರಿಯಾಗುತ್ತಿದ್ದಾರೆ.

ಆದರೆ ಇಲ್ಲಿ ಗಮನಿಸಬೇಕಾದ ಬೇರೆ ಆಯಾಮವೂ ಇದೆ. ದೇಶದಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲವು ಕೌಶಲ ಮತ್ತು ವೃತ್ತಿಪರತೆ ಹೊಂದಿಲ್ಲದೇ ಹೋದರೆ ಅದಕ್ಕೆ ಯಾರನ್ನು ದೂರಬೇಕು? ಕೆಲಸಗಾರರನ್ನೋ ಅಥವಾ ನೀತಿ ನಿರೂಪಕರನ್ನೋ? ‘ಕೌಶಲ ಭಾರತ’
ದಂತಹ ಯೋಜನೆಗಳ ವೈಫಲ್ಯಕ್ಕೆ ಹೊಣೆ ಯಾರು? 

ದೇಶದ ತಯಾರಿಕಾ ವಲಯ ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ ವ್ಯವಸ್ಥೆಯ ಹಂತದಲ್ಲಿ ಪರಿಹಾರ ಕಂಡು
ಕೊಳ್ಳಬೇಕಿದೆ. ಪ್ರಾಯೋಗಿಕವಾಗಿ ಅನ್ವಯಿಸಬಹುದಾದ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿ, ವೃತ್ತಿಪರ ಶಿಕ್ಷಣವನ್ನು ನಿಜವಾದ ಅರ್ಥದಲ್ಲೂ ವೃತ್ತಿಪರವಾಗಿಸಲು ಕೈಗೊಳ್ಳಬೇಕಿರುವ ಕ್ರಮಗಳತ್ತ ಸರ್ಕಾರಗಳು ಗಮನಹರಿಸಬೇಕಿದೆ.

ಈ ದಿಸೆಯಲ್ಲಿ ಸರ್ಕಾರಗಳ ಗಮನ ಸೆಳೆಯುವ ಬದಲು, ಕೆಲಸಗಾರರ ಮೇಲೆ ದೂರು ಹೊರಿಸುತ್ತಾ, ಅವರನ್ನು ಯಂತ್ರಗಳಂತೆ ನೋಡುವ ಮನೋಭಾವವನ್ನೇ ಮೌಲ್ಯವಾಗಿ ಬಿಂಬಿಸುವ ಕಸರತ್ತು ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾರದು. ಕೆಲಸಗಾರರಲ್ಲಿ ಉತ್ಪಾದಕತೆ ಹೆಚ್ಚಿಸಲು ಹೊಸ ದಾರಿಗಳನ್ನು ಕಂಡುಕೊಳ್ಳಲು ಜಾಗತಿಕ ಉದ್ಯಮ ವಲಯ ತುಡಿಯುವಾಗ, ನಮ್ಮಲ್ಲಿ ಕೆಲಸದ ಅವಧಿಯ ಕುರಿತು ಮಾತ್ರ ಚರ್ಚೆ ನಡೆಯುವುದು ದಿಕ್ಕುತಪ್ಪಿದ ಆದ್ಯತೆಗೆ ಹಿಡಿದ ಕನ್ನಡಿಯಂತೆ ತೋರುವುದಿಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.