ADVERTISEMENT

ಸಂಗತ | ಯಕ್ಷಗಾನ: ರಚನಾತ್ಮಕ ಬದಲಾವಣೆ ಅಗತ್ಯ

ಮನರಂಜನೆ ಹೆಸರಿನಲ್ಲಿ ಕರಾವಳಿಯ ಯಕ್ಷಗಾನ ಕಲೆಯ ಸಾಂಪ್ರದಾಯಿಕ ಹಾಗೂ ಕಲಾತ್ಮಕ ಸ್ವರೂಪಕ್ಕೆ ಧಕ್ಕೆ ತರುವ ಪ್ರಯತ್ನಗಳು ವ್ಯಾಪಕವಾಗಿವೆ.

ರವಿ ಮಡೋಡಿ
Published 7 ಡಿಸೆಂಬರ್ 2025, 22:40 IST
Last Updated 7 ಡಿಸೆಂಬರ್ 2025, 22:40 IST
ಸಂಗತ
ಸಂಗತ   

ಕರಾವಳಿ– ಮಲೆನಾಡಿನ ಸಂಸ್ಕೃತಿಯ ನುಡಿಹಬ್ಬವಾಗಿ, ನಾಡಿಮಿಡಿತವಾಗಿ ಬೆಳೆದಿರುವ ಯಕ್ಷಗಾನವು ಹಲವು ಶತಮಾನಗಳಿಂದ ತನ್ನದೇ ಆದ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಕಲಾತ್ಮಕ ಶಕ್ತಿಯಿಂದ ಬಾಳಿದೆ. ಕಾಲಕ್ರಮದಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಂಡಿದ್ದರೂ– ಪೌರಾಣಿಕ ಚೌಕಟ್ಟು, ನಡುಗನ್ನಡದ ಪದ್ಯಸಾಹಿತ್ಯ, ವಿಶೇಷ ಸಂಗೀತ, ಹೆಜ್ಜೆಗಾರಿಕೆಯ ಅಂತಃಸತ್ವ, ಆಹಾರ್ಯ, ವೇಷಭೂಷಣ ಮುಂತಾದ ವಿಷಯಗಳಲ್ಲಿ ಹೆಚ್ಚು ಬದಲಾವಣೆ ಕಂಡಿರಲಿಲ್ಲ. ಆದರೆ, ಕಳೆದ ಕೆಲವು ದಶಕಗಳಲ್ಲಿ ಯಕ್ಷಗಾನದ ರಂಗದಲ್ಲಿ ಗೋಚರಿಸುತ್ತಿರುವ ಅಪಸವ್ಯಗಳು ಕಲೆಯ ಭವಿಷ್ಯದ ಬಗ್ಗೆ ಗಂಭೀರ ಚಿಂತನೆಗೆ ಕಾರಣವಾಗಿವೆ.

ಇತ್ತೀಚೆಗೆ ಪೆರ್ಡೂರು, ಸಾಲಿಗ್ರಾಮ ಸೇರಿದಂತೆ ಕೆಲ ವೃತ್ತಿ ಮೇಳಗಳಲ್ಲಿ ಹಿಂದಿ, ಪಂಜಾಬಿ ಹಾಗೂ ಕನ್ನಡ ಚಿತ್ರಗೀತೆಗಳ ಧಾಟಿಗಳನ್ನು ನೇರವಾಗಿ ಯಕ್ಷಗಾನೀಕರಿಸಿ ರಂಗದಲ್ಲಿ ಪ್ರದರ್ಶಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಬೋಲೋತರಾ ಎಂಬ ಪಂಜಾಬಿ ಹಾಡು, ಶ್ರೀ ಆಂಜನೇಯ ಪ್ರಸನ್ನಾಂಜನೇಯ ಎಂಬ ಕನ್ನಡಗೀತೆ, ಭಾವ ಬಂದರು, ಮಾನಸ ವೀಣೆ, ವರಾಹರೂಪಂ ಮುಂತಾದ ಜನಪ್ರಿಯ ಸಿನಿಮಾ ಹಾಡುಗಳು ಈಗ ಯಕ್ಷಗಾನದ ವೇದಿಕೆಯ ಭಾಗವಾಗುತ್ತಿರುವುದು ನೈಜ ಕಲಾಭಿಮಾನಿಗಳಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ಯಕ್ಷಗಾನದ ಭಾವ–ಲಯ–ಮಟ್ಟು–ಸಾಹಿತ್ಯ–ರಚನೆಗಳೊಂದಿಗೆ ನೇರ ಸಂಬಂಧವಿಲ್ಲದ ಮತ್ತು ಹೊಂದಿಕೆಯಾಗದ ಇವುಗಳನ್ನು ರಂಗದಲ್ಲಿ ಬಳಸುತ್ತಿರುವುದು ಕಲೆಯ ಆಶಯದ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಹೆಜ್ಜೆಗಳೆಂದು ಭಾವಿಸಬಹುದು.

ಯಕ್ಷಗಾನದ ಸಂಗೀತವು ನಡುಗನ್ನಡದ ಕವಿತೆಯ ಲಯ, ತನ್ನದೇ ಆದ ಮಟ್ಟುಗಳು, ವಿಶಿಷ್ಟ ರಾಗಪದ್ಧತಿ ಮತ್ತು ಆಧ್ಯಾತ್ಮಿಕ ಭಾವಲಯಗಳ ಸಮನ್ವಯದಿಂದ ನಿರ್ಮಿತವಾಗಿದೆ. ಇದರೊಳಗೆ ಪಾಪ್, ಫಿಲ್ಮ್, ಪಂಜಾಬಿ ಅಥವಾ ಇತರ ಚಲನಚಿತ್ರಾಧಾರಿತ ಬೀಟ್‌ಗಳನ್ನು ಸೇರಿಸಿ ನಾಟಕೀಯ ಪರಿಣಾಮಕ್ಕಾಗಿ ಮಾಡುವ ಪ್ರಯತ್ನಗಳು ಯಕ್ಷಗಾನದ ಚೌಕಟ್ಟಿನಲ್ಲಿ ಹೊಂದಿಕೆಯಾಗುವುದಿಲ್ಲ; ಬದಲಾಗಿ ಅವು ಅಗ್ಗದ ಮನರಂಜನೆಯಂತೆ ಮಾತ್ರ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಹಲವು ಕಾರಣಗಳಿದ್ದರೂ, ಕೆಲ ಕಲಾವಿದರು ತಮ್ಮ ಸಾಮರ್ಥ್ಯದ ಕೊರತೆಯನ್ನು ಮುಚ್ಚಿಕೊಳ್ಳಲು ಇಂತಹ ಅಪಸವ್ಯದ ಕೀಳು ಅಭಿರುಚಿಗಳಿಗೆ ಮನಮಾಡುತ್ತಿರುವಂತೆ ಕಾಣುತ್ತಿದೆ. 90ರ ದಶಕದಲ್ಲಿ ಸಾಮಾಜಿಕ ಪ್ರಸಂಗಗಳ ಪ್ರಯೋಗವು ಯಕ್ಷಗಾನದ ವಿಸ್ತಾರಕ್ಕೆ ಹೊಸ ಬಾಗಿಲು ತೆರೆದಿದ್ದರೂ, ನಂತರದ ದಶಕಗಳಲ್ಲಿ ಪ್ರೇಕ್ಷಕರನ್ನು ಸೆಳೆಯುವ ಪ್ರಕಾರದಲ್ಲಿ ಅನವಶ್ಯಕ ಅಭಿರುಚಿಗಳನ್ನು ರಂಗಕ್ಕೆ ಬಲವಂತವಾಗಿ ತಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಈ ಪೈಕಿ ಕೀಳುಮಟ್ಟದ ಹಾಸ್ಯ, ದ್ವಂದ್ವಾರ್ಥಗಳು, ಚಿತ್ರಗೀತೆ ಮಾದರಿಯ ಪದ್ಯಗಳು, ಬೇರೆ ಕಲಾ ಮಾಧ್ಯಮಗಳಿಂದ ಎರವಲು ತಂದ ವೇಷಭೂಷಣಗಳು ಮುಂತಾದ ಅಂಶಗಳು ಕಲಾತ್ಮಕ ಮಿತಿಯನ್ನು ಮೀರಿದ ಭಾಗಗಳಾಗಿ ಪ್ರದರ್ಶನಗಳಲ್ಲಿ ನೋಡುತ್ತಿದ್ದೇವೆ. ವರ್ಷಕ್ಕೆ ಹತ್ತು ಸಾವಿರದಷ್ಟು ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿರುವುದರಲ್ಲಿ, ಇಂದಿನ ಪರಿಸ್ಥಿತಿಯಲ್ಲಿ ಶೇ 30–40ರಷ್ಟು ಪ್ರದರ್ಶನಗಳು ಅಪಸವ್ಯದ ಪ್ರಭಾವಕ್ಕೆ ಒಳಗಾಗಿವೆ ಎಂಬ ಅಂದಾಜಿದೆ.

ADVERTISEMENT

ಯಕ್ಷಗಾನದ ತತ್ತ್ವ, ಸಂಪ್ರದಾಯ ಮತ್ತು ಕಲಾತ್ಮಕ ಶ್ರೇಷ್ಠತೆಗೆ ಇದು ಗಂಭೀರ ಸವಾಲಾಗಿದ್ದು, ಇದರ ವಿರುದ್ಧ ಜಾಗೃತಿಯ ಅಗತ್ಯ ಹೆಚ್ಚಾಗಬೇಕಿದೆ.

ಅಗ್ಗದ ಮನರಂಜನೆ ಒಂದು ಹಂತದಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿದರೂ, ಅದು ಕಲೆಯ ಮೂಲತತ್ತ್ವಗಳಿಗೆ ಹಾನಿ ಮಾಡುತ್ತದೆ. ಯಕ್ಷಗಾನಕ್ಕೆ ಬದಲಾವಣೆಗಳು ಅವಶ್ಯವಾದರೂ, ಬದಲಾವಣೆ ಎಂದರೆ ಮೂಲ ಅಸ್ತಿತ್ವವನ್ನೇ ಕಳೆದುಕೊಳ್ಳುವುದಲ್ಲ ಎಂಬ ಅರಿವು ಅಗತ್ಯ. ಅಭಿರುಚಿಯನ್ನು ರೂಪಿಸುವ ಜವಾಬ್ದಾರಿ ಕಲೆಯ ಮೇಲ್ಪಟ್ಟದ್ದು; ‘ಪ್ರೇಕ್ಷಕರು ಬಯಸುತ್ತಾರೆ’ ಎಂಬ ನೆಪದಿಂದ ಕಲಾತ್ಮಕ ತಪ್ಪುಗಳನ್ನು ಸಮರ್ಥಿಸುವುದು ಔಚಿತ್ಯವಲ್ಲ. ಪ್ರೇಕ್ಷಕರು ಏನು ನೋಡಬೇಕು, ಯಾವುದು ಯೋಗ್ಯ, ಯಾವುದು ಯೋಗ್ಯವಲ್ಲ ಎಂಬ ಅರಿವು ಕಲೆಯ ಮೂಲಕವೇ ರೂಪುಗೊಳ್ಳಬೇಕು.

ಇಂದು ವೃತ್ತಿ ಮೇಳಗಳು, ಪ್ರಸಂಗಕರ್ತರು, ಪ್ರೇಕ್ಷಕರು ಮತ್ತು ಕಲಾವಿದರು ಸೇರಿ ಯಕ್ಷಗಾನವನ್ನು ಪೌರಾಣಿಕ ಚೌಕಟ್ಟಿನಿಂದ ಹೊರಕ್ಕೆ ಎಳೆಯುವ ಪ್ರವೃತ್ತಿ ಮುಂದುವರಿಸುತ್ತಿರುವ ಪರಿಣಾಮ, ಕಲೆಯ ಮೇಲೆ ಇರುವ ಸಂಸ್ಕೃತಿಪರ ಹೊಣೆಗಾರಿಕೆಗೆ ಹಿನ್ನಡೆಯಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ತೆಂಕಿನ ಕೆಲವು ಮೇಳಗಳು ಪ್ರತಿವರ್ಷ ಹೊಸ ಪೌರಾಣಿಕ ಪ್ರಸಂಗಗಳನ್ನು ರಚಿಸಿ, ಸಂಪ್ರದಾಯಬದ್ಧ ನಿರ್ದೇಶನದ ಮೂಲಕ ಉತ್ತಮ ಪ್ರದರ್ಶನಗಳನ್ನು ನೀಡುತ್ತಿವೆ. ‘ಧರ್ಮ ಸಿಂಹಾಸನ’, ‘ಸಾಕೇತ ಸಾಮ್ರಾಜ್ಞಿ’, ‘ಶ್ರೀ ತುಳಸಿ’ ಮುಂತಾದ ಪ್ರಸಂಗಗಳು ಸಂಪ್ರದಾಯದೊಳಗೆ ಹೊಸತನವನ್ನು ಸಾಹಿತ್ಯಬದ್ಧವಾಗಿ ತರುವ ಶ್ರೇಷ್ಠ ಉದಾಹರಣೆಗಳಾಗಿವೆ.

ಯಕ್ಷಗಾನದ ಸ್ವರೂಪ ಕೇವಲ ಮನರಂಜನೆಯಲ್ಲ; ಅದು ಬೌದ್ಧಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಿಕಸನದ ಶಕ್ತಿ ಹೊಂದಿರುವ ಸಮಗ್ರ ಕಲಾರೂಪ. ಇಂತಹ ಕಲೆಯೊಳಗೆ ಕೀಳುಮಟ್ಟದ ಹಾಡು–ಹಾಸ್ಯಗಳನ್ನು ತರುವುದು ಕಲೆಗೂ ಅದರ ಭವಿಷ್ಯಕ್ಕೂ ಸ್ಪಷ್ಟವಾದ ಹಾನಿ.

ಸಾಂಪ್ರದಾಯಿಕ ಕಲೆಯನ್ನು ಉಳಿಸುವ ಹೊಣೆಗಾರಿಕೆ ಮೇಳಗಳು, ಕಲಾವಿದರು, ಪ್ರಸಂಗಕರ್ತರು, ಮತ್ತು ಯಕ್ಷಗಾನ ಅಭಿಮಾನಿಗಳ ಮೇಲಿದೆ. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿ ಕಲೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿದಾಗ ಮಾತ್ರವೇ ಯಕ್ಷಗಾನ ತನ್ನ ನಿಜವಾದ ಹೊಳಪನ್ನು ತೋರಿಸಲು ಸಾಧ್ಯ.