
ಚಿತ್ರ: ಗುರು ನಾವಳ್ಳಿ
ಅಯ್ಯೋ ಗ್ರಹಚಾರ ಬೆನ್ನು ಹತ್ತಿಬಿಟ್ಟಿದೆ; ಏನು ಮಾಡಿದರೂ ಕೈ ಹತ್ತುತ್ತಿಲ್ಲ. ಜಾತಕದಲ್ಲಿ ಗ್ರಹದೋಷವಿದೆಯಂತೆ. ನನ್ನ ಹಣೆ ಬರಹವೇ ಹೀಗೆ ಬಿಡು. ಏನಾಗಿದೆಯೋ ಏನೋ, ಒಂದಷ್ಟು ದಿನಗಳಿಂದ ನನ್ನ ಟೈಮೇ ಸರಿ ಇಲ್ಲ. ಯಾವ ಜನ್ಮದ ಕರ್ಮವೋ ಏನೋ, ಈಗ ಅನುಭವಿಸುತ್ತಿದ್ದೀನಿ...
ಇಂಥ ಮಾತುಗಳನ್ನೂ ಜೀವನದಲ್ಲಿ ಆಗಾಗ ಹೇಳಿಕೊಳ್ಳುತ್ತಲೇ ಇರುತ್ತೇವೆ. ನಿಮಗೆ ಗೊತ್ತಾ, ಮನೋವಿಜ್ಞಾನದ ಪ್ರಕಾರ ಇದೂ ಒಂದು ರೀತಿಯಲ್ಲಿ ಪಲಾಯನವಾದ. ಜೀವನದಲ್ಲಿ ನಾವು ಮಾಡಿಕೊಳ್ಳುವ ತಪ್ಪುಗಳನ್ನು ಜಾತಕ, ಹಣೆಬರಹ, ಕರ್ಮದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತೇವೆ. ಹಾಗೆಂದು ಇವೆಲ್ಲವೂ ಜೋತಿಷ್ಯಶಾಸ್ತ್ರವನ್ನಾಗಲೀ, ಗ್ರಹಗತಿಗಳ ಬಗೆಗಿನ ನಮ್ಮ ಪಾರಂಪರಿಕ ನಂಬಕೆಯನ್ನಾಗಲೀ ಸುಳ್ಳೆಂದು ವಾದಿಸುತ್ತಿಲ್ಲ. ಜ್ಯೋತಿಷ್ಯ ಮತ್ತು ಜಾತಕ ಫಲ ಎಂಬುದು ಅತ್ಯಂತ ವೈಜ್ಞಾನಿಕವಾಗಿ ರೂಪಿತಗೊಂಡ ಭಾರತೀಯ ಶಾಸ್ತ್ರಗಳು. ಇವು ಮನುಷ್ಯನ ಮನಸ್ಸನ್ನು ವ್ಯಾಖ್ಯಾನಿಸುತ್ತವೆ. ನಮ್ಮ ಜಾತಕವನ್ನು ಆಧರಿಸಿ ಆಯಾ ಸನ್ನಿವೇಶದಲ್ಲಿ ನಮ್ಮ ಮನಸ್ಸನ್ನು ನಾವು ಅರಿತುಕೊಳ್ಳಬೇಕೇ ವಿನಾ ಅದನ್ನೇ ಹಳಿಯುತ್ತ ಮತ್ತೆ ಮತ್ತೆ ತಪ್ಪೆಸಗುವುದು ಸಲ್ಲ. ಹಣೆಬರಹವನ್ನು ಯಾರೂ ತಪ್ಪಿಸಲಾಗದು ಎಂಬ ನಿರಾಶವಾದವನ್ನು ಬಿಟ್ಟು ನಮ್ಮ ಜಾತಕ, ಹಣೆಬರಹಗಳನ್ನು ನಾವೇ ಬರೆದುಕೊಳ್ಳೋಣ.
ಯಾವುದೇ ಕೆಲಸವನ್ನಾಗಲೂ ನಾವು ಸಂಪೂರ್ಣ ಶ್ರದ್ಧೆಯಿಂದ, ಪೂರ್ಣ ಪ್ರಯತ್ನದೊಂದಿಗೆ ಮಾಡಬೇಕು. ಆ ಬಳಿಕ ಸಿಕ್ಕುವ ಫಲ ಬೇರೆಯದೇ ಆಗಿರಬಹುದು. ಎಲ್ಲ ಪ್ರಯತ್ನಗಳೂ ನಾವಂದುಕೊಂಡ ಫಲವನ್ನೇ ಕೊಟ್ಟು ಬಿಡುತ್ತವೆ ಎನ್ನಲಿಕ್ಕಾಗದು. ಉದಾಹರಣೆಗೆ ನಾವು ಪೈಲೆಟ್ ಆಗಬೇಕೆಂದು ಬಯಸುತ್ತೇವೆ. ಆ ನಿಟ್ಟಿನಲ್ಲಿ ಓದಿಯೂ ಓದುತ್ತೇವೆ. ಇದನ್ನು ಕೋರ್ ಕಾಂಪಿಟೆನ್ಸಿ ಎಂದು ಕರೆಯುತ್ತೇವೆ. ಯಾವುದೇ ವ್ಯಕ್ತಿ ಒಂದು ನಿಗದಿತ ವಿಷಯ ಅಥವಾ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಯನ್ನು ಮಾಡುವುದನ್ನು ಹೀಗೆಂದು ಕರೆಯಲಾಗುತ್ತವೆ. ಎಷ್ಟೋ ವೇಳೆ ಪ್ರವೃತ್ತಿಯೇ ಕೋರ್ ಕಾಂಪಿಟೆನ್ಸಿ ಆಗಿರಬಹುದು. ಪೈಲೆಟ್‌ನ ಉದಾಹರಣೆ ತೆಗೆದುಕೊಂಡರೆ ಅದು ವೃತ್ತಿ ಆಗಿ ಪರಿಗಣಿತವಾಗುತ್ತದೆ. ಇದೇ ನಮ್ಮ ಕೋರ್ ಕಾಂಪಿಟೆನ್ಸಿ ಅಲ್ಲ. ವೈಯಕ್ತಿಕ ನಿಪುಣತೆ ನಮ್ಮೊಳಗೆ ಇನ್ನಾವುದೋ ವಿಚಾರದಲ್ಲಿ ಅಡಗಿರುತ್ತದೆ. ಅದನ್ನು ಗುರುತಿಸಿಕೊಳ್ಳುವುದು ನಮ್ಮದೇ ಹೊಣೆ.
ನಮ್ಮ ಆಸಕ್ತಿಗಳಿಗೆ ನಾವೇ ನೀರೆರೆದುಕೊಂಡು, ನಮ್ಮನ್ನು ನಾವೇ ಬೆಳೆಸಿಕೊಳ್ಳುತ್ತಾ ಅವಕಾಶಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಾ ಹೋಗಬೇಕು. ನಮಗಾಗಿ ಇನ್ನಾರೋ ಅವಕಾಶಗಳನ್ನು ಸೃಷ್ಟಿಸಿ ಕಾಯುತ್ತಾ ಕೂರುವುದಿಲ್ಲ. ಇದಕ್ಕಾಗಿ ವಿಶೇಷ ಪ್ರಯತ್ನ, ಶ್ರಮ, ಗಮನ ಕೇಂದ್ರೀಕರಿಸಿಕೊಳ್ಳಬೇಕು. ಯಾರು ಏನಾದರೂ ಹೇಳಿಕೊಳ್ಳಲಿ. ನಾವು ಏನಂದುಕೊಂಡಿರುತ್ತೀವೋ ಅದೇ ಸರಿ. ಬೇರೆಯವರ ಬಗ್ಗೆ ತಲೆ ನಾವೇಕೆ ಯೋಚಿಸೋಣ. ಇನ್ನೊಂದು ಪ್ರಮುಖ ಸಂಗತಿಯೆಂದರೆ ಈ ಜಗತ್ತಿನಲ್ಲಿ ಯಾವುದೇ ವಿಷಯ, ಸಂಗತಿಗಳು ಸಣ್ಣದಲ್ಲವೇ ಅಲ್ಲ. ಂದೊಮ್ಮೆ ಒಂದೊಮ್ಮೆ ಚಿಕ್ಕ ಸಂಗತಿ ಎಂಬುದು ಯಾವುದಾದರೂ ಇದ್ದರೆ, ನಾವು ಯಾವುದರಲ್ಲಿ ಆಸಕ್ತಿಯನ್ನು ಹೊಂದಿಲ್ಲವೋ, ಯಾವುದರಲ್ಲಿ ಕೆಲಸವನ್ನೇ ಮಾಡಿಲ್ಲವೋ ಅದು ನಮಗೆ ಚಿಕ್ಕದಾಗಿ ಕಾಣಿಸುತ್ತದೆ. ಅಥವಾ ಆ ಕ್ಷೇತ್ರದಲ್ಲಿ ಈವರೆಗೆ ಯಾರೂ ದೊಡ್ಡ ಸಾಧನೆ ಮಾಡಿಲ್ಲವೆಂದೇ ಅರ್ಥ. ಅಂಥ ಸಾಧಕರು ನಾವೇ ಯಾಕಾಗಬಾರದು? ಹಣೆಬರಹವನ್ನು ನಿಂದಿಸುತ್ತಾ ಕುಳಿತುಕೊಳ್ಳುವುದರಿಂದ ಅದಷ್ಟೇ ಸಾಧನೆಯಾಗುತ್ತದೆ.
ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯ ಇಲ್ಲ ಎಂಬುದು ಸರಿ, ಹಾಗೆಂದು ಏನು ಆಗಬೇಕೆಂದು ನಾವು ಬಯಸಬಹುದಲ್ಲಾ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.