
ಬಹಳ ಹಿಂದಿನ ಗಾದೇ ಮಾತು. ನೀವೂ ಕೇಳಿರಬಹುದು. ವೇಶ್ಯೆಯರಿರುವ ಬೀದಿಯಲ್ಲಿ ನಿಂತುಕೊಂಡು ನಾವು ನಮ್ಮ ಬ್ರಹ್ಮಚರ್ಯವನ್ನು ಸಾಬೀತುಪಡಿಸಿಕೊಳ್ಳಲಾದೀತೆ?
ಹೌದು, ನಾವು ಸಂಪನ್ನರೇ ಇರಬಹುದು. ನೈತಿಕವಾಗಿ ನಾವು ಸರಿಯಾಗಿಯೇ ಇದ್ದೇವೆಂದುಕೊಳ್ಳೋಣ. ನಮ್ಮಲ್ಲಿ ಅಂತರಂಗದ ಪರಿಶುದ್ಧಿಯೂ ಇರಬಹುದು. ಅವೆಲ್ಲವೂ ನಮಗೆ ಗೊತ್ತಿರುವ ಸತ್ಯ. ಹಾಗೆಂದು ‘ಅಷ್ಟು ಸಾಕು; ಯಾರು ಏನೆಂದುಕೊಂಡರೆ ನಮಗೇನು’ ಎಂದುಕೊಳ್ಳವಂತಿಲ್ಲ. ಅದನ್ನು ಸಾಬೀತುಪಡಿಸಿಕೊಳ್ಳಲೇಬೇಕು. ಜಗತ್ತು ಅದನ್ನು ಅಪೇಕ್ಷಿಸುತ್ತದೆ. ಇಲ್ಲೊಂದು ಪೂರ್ವ ಪ್ರೇರಿತ ನಿರ್ಧಾರವಿರುತ್ತದೆ. ಅದರಂತೆ ಸಮಾಜ ನಿರ್ಣಯಕ್ಕೆ ಬರುತ್ತದೆ. ಎಲ್ಲ ವಿಚಾರದಲ್ಲೂ ಹಾಗೇ ಆಗುವುದು. ಇದಕ್ಕೆ ಅಪವಾದಗಳೂ ಇಲ್ಲದಿಲ್ಲ. ಹಾಗಂತ ಸಾಮಾನ್ಯ ಸಂದರ್ಭಗಳಲ್ಲಿ ನಮ್ಮ ಸುತ್ತಲಿನ ಸಮಾಜದ ಯೋಚನೆಯೇ ಇಂಥ ನಂಬಿಕೆಗಳ ಮೇಲೆ ಇರುತ್ತದೆ.
ಏನದು ಸಾಮಾನ್ಯ ನಂಬಿಕೆ ಹಾಗಾದರೆ? ಸಾಮಾನ್ಯ ನಂಬಿಕೆಯ ಪ್ರಕಾರ ವೇಶ್ಯೆಯರ ಬೀದಿಗೆ ಹೋಗುವುದಕ್ಕೆ ಬೇರಿನ್ನೇನು ಕಾರಣವಿದ್ದಿತು? ಅಲ್ಲಿಗೆ ಹೋಗುವುದಕ್ಕೆ ಬೇರಿನ್ನೇನೋ ಕಾಣಗಳಿದ್ದರೂ, ನಮ್ಮನ್ನು ಅಲ್ಲಿ ನೋಡಿದ ಜನರಿಂದ ‘ನಾವೂ ಸಂಪನ್ನರಲ್ಲ’ ಎಂಬ ನಿಣರ್ಯ ಪ್ರಕಟವಾಗಿಯೇಬಿಡುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ ‘ಜಡ್ಜ್‌ಮೆಂಟಲ್‘ ಎನ್ನುತ್ತಾರೆ. ಯಾವುದು, ಏಕೆ, ಹೇಗೆ ಎಂಬುದನ್ನೆಲ್ಲ ಯೋಚಿಸದೇ ಇದು ಹೀಗೆಯೇ ಎಂಬ ತೀರ್ಪನ್ನು ಕೊಟ್ಟುಬಿಡುವುದು. ಆದ್ದರಿಂದ ನಾವು ಹೇಗಿದ್ದೇವೆ ಎಂಬುದು ಎಷ್ಟು ಮುಖ್ಯವೋ, ನಮ್ಮ ಸುತ್ತಲೂ ಹೇಗಿದೆ ಎಂಬುದೂ ಅಷ್ಟೇ ಮುಖ್ಯ.
ಇದನ್ನು ಹೀಗೆ ಹೇಳಿದರೆ ಬೇಗ ನಿಮಗೆ ಅರ್ಥವಾದೀತು. ಬೈನೇ ಮರ ಅಥವಾ ಈಚಲು ಮರ ನಮ್ಮಲ್ಲಿ ಕಳ್ಳು ಇಳಿಸಲು ಪ್ರಸಿದ್ಧಿ. ಗಡಂಗು ಸೇವಿಸಲು ಗ್ರಾಮೀಣ ಭಾಗದಲ್ಲಿ ಆ ಮರದ ಬಳಿ ಹವ್ಯಾಸಿಗಳು ಸೇರುತ್ತಾರೆ. ನೆತ್ತಿ ಸುಡುವ ಬಿಸಿಲಿನಲ್ಲಿ ಈಚಲು ಕೊನೆಗೆ ಕಟ್ಟಿಟ್ಟ ಮಡಕೆಯನ್ನು ಇಳಿಸಿ, ಹುಳಿ ಬಂದ ನೀರಾವನ್ನು ಅಲ್ಲಿಯೇ ಕುಡಿದು ಮತ್ತೇರಿಸಿಕೊಂಡು ಬರುತ್ತಾರೆ. ನಿಮಗೆ ಕಳ್ಳು ಕುಡಿಯುವ ಹವ್ಯಾಸ ಇಲ್ಲವೆಂದಾದ ಮೇಲೆ ನಿಮ್ಮ ಮನೆಯ ಮಜ್ಜಿಗೆಯನ್ನು ವೃಥಾ ಬೈನೇ ಮರದ ಕೆಳಗೇ ಕುಡಿಯುವ ಅನಿವಾರ್ಯವೇನು? ಇದೇ ಗಾದೆ ಮಾತಾಗಿ ಬಂದಿದೆ. ನಮ್ಮ ಮನೆಯ ಮಜ್ಜಿಗೆಯಾದರೂ ಬೈನೇಮರದ ಕೆಳಗೆ ಕುಳಿತು ಕುಡಿದರೆ ಹೆಂಡವೆಂತಲೇ ಕರೆಯುತ್ತಾರೆ. ಇಲ್ಲಿ ಕಳ್ಳು ಸಹ ಮಜ್ಜಿಗೆಯ ಬಣ್ನವನ್ನೇ ಹೊಂದಿರುವುದರಿಂದ ಬೈನೇಮರದ ಕೆಳಗೆ ಕುಡಿದ ನಿಮ್ಮ ಮಾತನ್ನು ಯಾರೂ ನಂಬುವುದಿಲ್ಲ.
ಇದಕ್ಕೆ ಇನ್ನೂ ಒಂದು ಉದಾಹರಣೆ ಕೊಡಬಹುದು. ಕನ್ನಡದ ಖ್ಯಾತ ಕವಿರತ್ನ ಕಾಳೀದಾಸ ತನ್ನ ಪತ್ನಿ ವಿದ್ಯಾಧರೆಯನ್ನು ಹುಡುಕಿಕೊಂಡು ಅಲೆಯುತ್ತ ವೇಶ್ಯೆಯ ಮನೆಗೆ ಹೋಗುತ್ತಾನೆ. ಆದರೆ ಕಾಳಿದಾಸ ಹೆಂಡತಿಗಾಗಿ ಹೋಗಿದ್ದ ಎಂಬುದು ಆಗುವುದೇ ಇಲ್ಲ. ಮಹಾಕವಿಗೂ ದೌರ್ಬಲ್ಯಗಳಿವೆ ಎಂದೇ ಜನ ಆಡಿಕೊಳ್ಳುತ್ತಾರೆ. ಇಡೀ ವ್ಯಕ್ತಿತ್ವಕ್ಕೆ ಒಂದು ಕ್ಷಣ ಕಳಂಕ ಅಂಟಿಕೊಳ್ಳುತ್ತದೆ. ಸಮಾಜ ಇವತ್ತಿಗೂ ಹೀಗೆಯೇ ಇದೆ. ಅದಕ್ಕೆ ಸತ್ಯಾಸತ್ಯತೆಯ ವಿವೇಚನೆ ಬೇಕಿಲ್ಲ ಎಂಬುದಕ್ಕಿಂತ ಅಂಥ ವಿವೇಚನೆಯ ವ್ಯವಧಾನ ಇಲ್ಲ. ಅದು ಬೇಕಿರುವುದು ನಮಗೆ. ನಾವು ಎಲ್ಲಿ ನಿಂತಿದ್ದೇವೆ ಎಂಬುದನ್ನು ಮೊದಲು ನಾವು ಮನಗಾಣಬೇಕು. ಅಲ್ಲಿ ಹಾಗೆ ನಿಲ್ಲುವುದರ ಔಚಿತ್ಯವನ್ನು ಜನ ಪ್ರಶ್ನಿಸುವ ಮೊದಲು ನಾವೇ ಪ್ರಶ್ನಿಸಿಕೊಳ್ಳಬೇಕು.
ನಾವೆಷ್ಟೇ ಪರಿಶುದ್ಧವಾಗಿರಬಹುದು, ಪ್ರಮಾಣಿಕರಾಗಿರಬಹುದು. ಆದರೆ ಅನಗತ್ಯವಾಗಿ ನಮಗೆ ಕಳಂಕವನ್ನು ಅಂಟಿಸಿಕೊಳ್ಳುವ ಬದಲು ಅಂಥ ಸನ್ನಿವೇಶದಿಂದ ದೂರ ಉಳಿಯಬೇಕು. ಒಂದೊಮ್ಮೆ ಯಾವುದೋ ಕಾರಣಕ್ಕೆ ಅಂಥ ವಾತಾವರಣದ ಒಳಕ್ಕೆ ಕಾಲಿಟ್ಟಲ್ಲಿ, ಆದಷ್ಟು ಬೇಗ ಅಲ್ಲಿಂದ ಹೊರಬರುವುದೇ ಬುದ್ಧಿವಂತಿಕೆ. ನಾವೆಷ್ಟೇ ಪರಿಶುದ್ಧರಾದರೂ ಅದನ್ನು ನಮ್ಮ ನಡೆ ನುಡಿಗಳು ವ್ಯಕ್ತಪಡಿಸುವಂತೆ ಇರಲೇಬೇಕು. ಇಲ್ಲದಿದ್ದರೆ ಯಾರೊಬ್ಬರೂ ನಿಮ್ಮ ಪ್ರಾಮಾಣಿಕತೆ, ಪರಿಶುದ್ಧತೆಯ ವಕಾಲತು ವಹಿಸಲು ಬರುವುದಿಲ್ಲ. ಒಂದೊಮ್ಮೆ ಸಣ್ಣದೊಂದು ಕಾರಣಕ್ಕೆ ನಿಮ್ಮ ವ್ಯಕ್ತಿತ್ವಕ್ಕೆ ಕುಂದು ಬರುತ್ತದೆ ಎಂದಾದರೂ ನೀವು ಆ ವಾತಾವರಣದಿಂದ ಎದ್ದು ಬರುವುದೇ ಔಚಿತ್ಯಪೂರ್ಣ. ನೀವಿರುವ ವಾತಾವರಣ ನಿಮಗೆ ಶೋಭೆ ತರುವುದಿಲ್ಲ ಎಂದು ಗೊತ್ತಾದ ಮೇಲೂ ಅಲ್ಲಿರುವುದರಲ್ಲಿ ಅರ್ಥವೇ ಇಲ್ಲ. ಅದೆಷ್ಟೇ ಸಕಾರಣವಿದ್ದರೂ, ಉಳಿದೆಲ್ಲ ಲಾಭ– ನಷ್ಟಗಳ ಲೆಕ್ಕಾಚಾರಕ್ಕಿಂತ ನಿಮಗೆ ನೀವೇ ಮುಖ್ಯವಾಗಲಿ. ಜೀವನದಲ್ಲಿ ಇಂಥ ಕೆಲವೊಂದು ವಿಚಾರದಲ್ಲಿ ಸ್ವಾರ್ಥಿಯಾಗುವುದೇ ಸೂಕ್ತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.