ADVERTISEMENT

ಗುರುವಾರ, 18–4–1968

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST

ಎರಡು– ಮೂರು ವಾರಗಳಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ
ಬೆಂಗಳೂರು, ಏ. 17–
ಎರಡು ಅಥವಾ ಮೂರು ವಾರಗಳೊಳಗೆ ರಾಜ್ಯದ ಹೊಸ ಮುಖ್ಯಮಂತ್ರಿಯ ಆಯ್ಕೆ ನಡೆಯುವುದು ಎಂಬ ಸ್ಪಷ್ಟ ಸೂಚನೆಯನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ತೆರಳಲಿರುವ ಶ್ರೀ ನಿಜಲಿಂಗಪ್ಪನವರು ಇಂದು ವಿಧಾನಸಭೆಯಲ್ಲಿ ನೀಡಿದರು.

‘ಮುಖ್ಯಮಂತ್ರಿಯಾಗಿ ಮುಂದುವರೆಯದಿರಲು ನಾನು ತೀರ್ಮಾನಿಸಿದ್ದೇನೆ. ಅಧಿವೇಶನ ಮುಗಿದ ಎರಡು ಅಥವಾ ಮೂರು ವಾರದೊಳಗೆ ಹೊಸ ನಾಯಕರ ಆಯ್ಕೆಗೆ ವ್ಯವಸ್ಥೆ ಮಾಡಿ ಹೋಗುತ್ತೇನೆ. ಇದು ಸ್ಪಷ್ಟ. ಯಾವುದೇ ಸಂದೇಹ ಬೇಡ’ ಎಂದು ಹೇಳಿದರು.

ಸಣ್ಣ ಕಾರು ಕಾರ್ಖಾನೆಗಾಗಿ ನಿವೇಶನ ಆಯ್ಕೆ
ಬೆಂಗಳೂರು, ಏ. 17–
ಸಣ್ಣ ಕಾರುಗಳ ತಯಾರಿಕೆಯ ಕಾರ್ಖಾನೆಯ ನಿವೇಶನವನ್ನು ಕೇಂದ್ರ ಸರ್ಕಾರ ಬೆಂಗಳೂರಿನಲ್ಲಿ ಅಥವಾ ರಾಜ್ಯದ ಬೇರೆ ಭಾಗದಲ್ಲಿ ಆಯ್ಕೆ ಮಾಡುವ ಸಂಭವವಿದೆಯೆಂದು ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ಇಂದು ವಿಧಾನಪರಿಷತ್ತಿನಲ್ಲಿ ತಿಳಿಸಿದರು.

ADVERTISEMENT

ಕೇಂದ್ರ ಸರ್ಕಾರ ಹೊಸ ಕೈಗಾರಿಕೆಗಳನ್ನು ಸ್ಥಾಪಿಸಲು ಇಚ್ಛಿಸಿದರೆ, ಆ ಕೈಗಾರಿಕೆಗಳನ್ನು ಸ್ಥಾಪಿಸಲು ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿ, ಕೈಗಾರಿಕೆಗಳನ್ನು ರಾಜ್ಯದಲ್ಲಿಯೇ ಸ್ಥಾಪಿಸಬೇಕೆಂದು ಒತ್ತಾಯಪಡಿಸಲಾಗುತ್ತಿದೆಯೆಂದೂ ಅರ್ಥ ಸಚಿವರು ಹೇಳಿದರು.

ಶಿಕ್ಷಕರ ಕ್ಷೇತ್ರ ರದ್ದಾಗಲೆಂದು ಶಿಫಾರಸು
ಬೆಂಗಳೂರು, ಏ. 17–
ಉಪಾಧ್ಯಾಯರನ್ನು ‘ರಾಜಕೀಯದಿಂದ ದೂರವಿಡಬೇಕೆಂಬ ಕಾರಣದಿಂದ’ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರವನ್ನು ರದ್ದುಗೊಳಿಸುವಂತೆ ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಶಿಫಾರಸು ಮಾಡಿದೆಯೆಂದು ಶಿಕ್ಷಣ ಮತ್ತು ಕೃಷಿ ಸಚಿವ ಶ್ರೀ ಕೆ.ವಿ. ಶಂಕರಗೌಡರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

‘ಶಿಕ್ಷಕರಿಗೆ ಕ್ಷೇತ್ರ ಒಂದನ್ನು ಮೀಸಲಿಡುವುದರಿಂದ ಪ್ರಯೋಜನವೇನೂ ಆದಂತೆ ಕಂಡುಬಂದಿಲ್ಲ’ ಎಂದು ಅಭಿಪ್ರಾಯಪಟ್ಟರು.

ಇ.ಎಂ.ಎಸ್.ರಿಗೆ ಎಸ್.ಎಂ. ಜೋಷಿ ಎಚ್ಚರಿಕೆ
ನವದೆಹಲಿ, ಏ. 17–
ಎಸ್ಸೆಸ್ಪಿ ಪಕ್ಷದಿಂದ ಹೊರ ಬಂದಿರುವ ಕೇರಳ ರಾಜ್ಯ ಘಟಕದ ಸಚಿವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಬಾರದೆಂದು ಎಸ್ಸೆಸ್ಪಿ ಅಧ್ಯಕ್ಷ ಶ್ರೀ ಎಸ್.ಎಂ. ಜೋಷಿ ಇಂದು ಮುಖ್ಯಮಂತ್ರಿ ಶ್ರೀ ನಂಬೂದಿರಿಪಾಡ್‌ ಅವರನ್ನು ಒತ್ತಾಯಪಡಿಸಿದ್ದಾರೆ.

ತಮ್ಮ ಸಲಹೆಯನ್ನು ಮಾನ್ಯ ಮಾಡದಿದ್ದರೆ, ತಮ್ಮ ಸಂಸ್ಥೆಯು ಪ್ರತಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದೆಂಬ ಎಚ್ಚರಿಕೆಯನ್ನೂ ಅವರು ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.