ADVERTISEMENT

ಗುರುವಾರ, 21-6-1962

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 19:30 IST
Last Updated 20 ಜೂನ್ 2012, 19:30 IST

ಗುರುವಾರ, 21-6-1962
ಕಂಠಿ ಸಂಪುಟದ ರಾಜಿನಾಮೆ
ಬೆಂಗಳೂರು, ಜೂನ್ 20 - ನಾಳೆ ಬೆಳಿಗ್ಗೆ 8-30ಕ್ಕೆ ರೆಸಿಡೆನ್ಸಿಯಲ್ಲಿ ಸಮಾವೇಶಗೊಳ್ಳುವ ವಿಧಾನ ಮಂಡಲದ ಕಾಂಗ್ರೆಸ್ ಪಕ್ಷ ಎಂ.ಪಿ.ಸಿ.ಸಿ. ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಅವರನ್ನು ತನ್ನ ನಾಯಕರನ್ನಾಗಿ ಸರ್ವಾನುಮತದಿಂದ ಚುನಾಯಿಸಲಿದೆ.

ಶ್ರೀ ನಿಜಲಿಂಗಪ್ಪನವರು ಪಕ್ಷದ ನಾಯಕರಾಗಲೆಂಬ ಉದ್ದೇಶದಿಂದ ಪಕ್ಷದ ನಾಯಕತ್ವಕ್ಕೆ ರಾಜಿನಾಮೆ ಸಲ್ಲಿಸಿರುವ ಮುಖ್ಯಮಂತ್ರಿ ಶ್ರೀ ಎಸ್. ಆರ್. ಕಂಠಿ ಅವರು ಇಂದು ಸಂಜೆ ತಮ್ಮ ಮಂತ್ರಿಮಂಡಲದ ರಾಜಿನಾಮೆಯನ್ನು ರಾಜ್ಯಪಾಲರಿಗೆ ಒಪ್ಪಿಸಿದರು.

ಪ್ರಧಾನಿ ನೆಹರೂ ಜೊತೆಗಾಲ್‌ಬ್ರೇತ್ ಮಾತುಕತೆ

ನವದೆಹಲಿ, ಜೂನ್ 20 - ಭಾರತದಲ್ಲಿನ ಅಮೆರಿಕದ ರಾಯಭಾರಿ ಪ್ರೊ. ಜಿ. ಕೆ. ಗಾಲ್‌ಬ್ರೇತ್‌ರವರು ಇಂದು ಪ್ರಧಾನ ಮಂತ್ರಿ ನೆಹರೂರವರನ್ನು ಭೇಟಿ ಮಾಡಿ ಸುಮಾರು ಒಂದು ಗಂಟೆಯ ಕಾಲ ಅವರೊಡನೆ ಮಾತುಕತೆ ನಡೆಸಿದರು.
ಜೂನ್ 18 ರಂದು ವಾಷಿಂಗ್ಟನ್ನಿನಿಂದ ದೆಹಲಿಗೆ ವಾಪಸಾದ ನಂತರ ಪ್ರೊ. ಗಾಲ್‌ಬ್ರೇತ್‌ರವರು ನೆಹರೂರನ್ನು ಭೇಟಿ ಮಾಡಿದ್ದು ಇದೇ ಮೊದಲನೆಯ ಸಲ.

ರಾಜ್ಯದಲ್ಲಿ ಭದ್ರ, ಸಮರ್ಥ ಸರಕಾರ
ಬೆಂಗಳೂರು, ಜೂನ್ 20 - 102ದಿನಗಳ ಕಾಲ ಮುಖ್ಯಮಂತ್ರಿ ಅಧಿಕಾರವನ್ನು `ಪರಿಣಾಮಕಾರಿಯಾಗಿ ನಿರ್ವಹಿಸಿದ ಸಮಾಧಾನದಿಂದ ಇಂದು~ ಅಧಿಕಾರ ಸ್ಥಾನದಿಂದ ಕೆಳಗಿಳಿದ ಎಸ್.ಆರ್.ಕಂಠಿ`ಮೈಸೂರಿನಲ್ಲಿ ಇನ್ನು ಭದ್ರ ಹಾಗೂ ಸಮರ್ಥ ಸರಕಾರ ಏರ್ಪಡುವುದು~ ಎಂದು ಆಶಿಸಿದರು.

`ವಿಧಾನಸಭೆಗೆ ನಮ್ಮ ನಾಯಕ ಶ್ರೀ ಎಸ್. ನಿಜಲಿಂಗಪ್ಪನವರ ಆಗಮನವನ್ನು ನಿರೀಕ್ಷಿಸಿ~ ತಾವು ಮುಖ್ಯಮಂತ್ರಿಯ ಅಧಿಕಾರ ಸ್ವೀಕರಿಸಿರುವುದಾಗಿ ಸ್ಪಷ್ಟಪಡಿಸುತ್ತ ಬಂದಿರುವ ಶ್ರೀ ಕಂಠಿಯವರು ರಾಜ್ಯಪಾಲರಿಗೆ ಇಂದು ಸಂಜೆ ತಮ್ಮ ಮಂತ್ರಿಮಂಡಲದ ರಾಜಿನಾಮೆಯನ್ನು ಸಲ್ಲಿಸುವುದಾಗಿ ಪತ್ರಕರ್ತರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.