ADVERTISEMENT

ಗುರುವಾರ, 5–5–1994

ಗುರುವಾರ

​ಪ್ರಜಾವಾಣಿ ವಾರ್ತೆ
Published 4 ಮೇ 2019, 18:44 IST
Last Updated 4 ಮೇ 2019, 18:44 IST

ಲಘು ವಾಣಿಜ್ಯ ವಾಹನ ತೆರಿಗೆ ಇಳಿತ, ಸಣ್ಣ ಉದ್ಯಮಕ್ಕೆ ಹೆಚ್ಚು ರಿಯಾಯಿತಿ

ನವದೆಹಲಿ, ಮೇ 4 – ಹಣಕಾಸು ಸಚಿವ ಮನಮೋಹನ ಸಿಂಗ್ ಅವರು ಇಂದು ಸಣ್ಣ ಉದ್ಯಮ ರಂಗದ ಕೆಲವು ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಿದ್ದಲ್ಲದೆ ಸುಂಕವಿಲ್ಲದೆ ಆಮ
ದು ಮಾಡಿಕೊಳ್ಳಬಹುದಾದ ಜೀವರಕ್ಷಕ ವೈದ್ಯಕೀಯ ಉಪಕರಣಗಳ ಪಟ್ಟಿಯನ್ನು ವಿಸ್ತರಿಸಿದರು. ಟ್ರಕ್ ಮಾಲೀಕರ ಅಂದಾಜು ವರಮಾನ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರು.

ಕಂಪನಿ ಹಾಗೂ ವೈಯಕ್ತಿಕ, ಎರಡೂ ವರ್ಗಗಳ ವರಮಾನ ತೆರಿಗೆದಾರರು ಮಾಹಿತಿ ಸಲ್ಲಿಸಲು ಹೆಚ್ಚು ಕಾಲಾವಕಾಶ ನೀಡುವುದಾಗಿಯೂ ಸಿಂಗ್ ಅವರು ಸಂಸತ್ತಿನಲ್ಲಿ ಪ್ರಕಟಿಸಿದರು.

ADVERTISEMENT

ಎಕ್ಸೆಲೆನ್ಸ್ ಪ್ರಶಸ್ತಿ

ವಾಷಿಂಗ್‌ಟನ್, ಮೇ 4 – ತಮ್ಮ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದಕ್ಕಾಗಿ ಖ್ಯಾತ ಖಭೌತ ವಿಜ್ಞಾನಿ ಎಸ್. ಚಂದ್ರಶೇಖರ್ ಅವರಿಗೆ ನಿನ್ನೆ ‘ಎಕ್ಸ್‌ಲೆನ್ಸ್‌ 2000’ ಪ್ರಶಸ್ತಿ ನೀಡಲಾಯಿತು.

ಪ್ಯಾನ್ ಏಷ್ಯಾ–ಅಮೆರಿಕ ವಾಣಿಜ್ಯ ಮಂಡಳಿ ಏಷಿಯನ್ ಅಮೆರಿಕನ್ನರಿಗೆ ಈ ಪ್ರಶಸ್ತಿಗಳನ್ನು ನೀಡುತ್ತಿದ್ದರು. ಒಟ್ಟು ಏಳು ಜನರಿಗೆ ಪ್ರಶಸ್ತಿ ಲಭಿಸಿದೆ.

ಮೀಸಲಾತಿ: ಪಂಚಾಯ್ತಿಗಳ ನಡುವೆ ತಾರತಮ್ಯ

ಬೆಂಗಳೂರು, ಮೇ 4– ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ದೊರಕಿಸುವ ಸಲುವಾಗಿಯೇ ಪಂಚಾಯ್ತಿ ರಾಜ್ಯ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ಹೊರಡಿಸಬೇಕಾಯಿತು ಎಂದು ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಪ್ರತಿಪಾದಿಸಿದ್ದರೂ ಮೀಸಲು ಸೌಲಭ್ಯ ಕಲ್ಪಿಸುವಲ್ಲಿ ಆಗಿರುವ ತಾರತಮ್ಯ ಹೊಸ ಕಾನೂನು ತೊಡಕನ್ನು ಸೃಷ್ಟಿಸಿದೆ.

ಪಂಚಾಯ್ತಿ ಕಾಯ್ದೆಯ ಅವಿಭಾಜ್ಯ ಅಂಗವಾಗಿರುವ ಮೂರು ಹಂತಗಳಲ್ಲಿ ಒಂದು ಹಂತವಾದ ಗ್ರಾಮ ಪಂಚಾಯಿತಿಗಳಿಗೆ ಅಕ್ಟೋಬರ್ 1986ರ ಆದೇಶದನ್ವಯ ಮೀಸಲಾತಿ ನೀಡಿ, ಈಗ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ ಮೀಸಲು ಸೌಲಭ್ಯ ಕಲ್ಪಿಸಲು ಹೊರಟಿರುವುದು ಮೇಲುನೋಟಕ್ಕೇ ಪಕ್ಷಪಾತ ಮಾಡಿರುವುದು ಎದ್ದು ಕಾಣುತ್ತಿದ್ದು ಪ್ರಶ್ನಾರ್ಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.