ADVERTISEMENT

ಬುಧವಾರ, 5–2–1969

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 19:45 IST
Last Updated 4 ಫೆಬ್ರುವರಿ 2019, 19:45 IST
   

ಸೇತುವೆ ತೊಲೆ ಬಡಿದು 28ಮಂದಿ ಸಾವು

ಚಿದಂಬರಂ, ಫೆ. 4– ಮದರಾಸಿಗೆ ಹೋಗುತ್ತಿದ್ದ ಜನತಾ ಎಕ್ಸ್‌ಪ್ರೆಸ್‌ನ ಚಾವಣಿ ಮೇಲೆ ಕುಳಿತಿದ್ದ ಪ್ರಯಾಣಿಕರಿಗೆ ಕೊಲೆರೂನ್ ಸೇತುವೆಯ ಉಕ್ಕಿನ ತೊಲೆಗಳು ಬಡಿದ ಕಾರಣ 28 ಮಂದಿ ಸ್ಥಳದಲ್ಲಿಯೇ ಸತ್ತು ಇತರ 47 ಮಂದಿ ತೀವ್ರವಾಗಿ ಗಾಯಗೊಂಡರು.

ಶ್ರೀ ಅಣ್ಣಾದೊರೆ ಅವರ ಶವ ಸಂಸ್ಕಾರದಲ್ಲಿ ಭಾಗವಹಿಸುವುದಕ್ಕಾಗಿ ಮದರಾಸಿಗೆ ಹೋಗಲು ಎಕ್ಸ್‌ಪ್ರೆಸ್‌ನಲ್ಲಿ ಜನ ಕಿಕ್ಕಿರಿದು ತುಂಬಿದ್ದರಿಂದ ಈ ಪ್ರಯಾಣಿಕರು ಟ್ರೈನಿನ ಚಾವಣಿ ಏರಿದ್ದರು.

ADVERTISEMENT

ಸಕಲಸೇನಾ ಗೌರವಗಳೊಡನೆ ಅಣ್ಣಾ ಸಮಾಧಿ: 30 ಲಕ್ಷ ಜನರ ಅಶ್ರುತರ್ಪಣ

ಮದ್ರಾಸ್, ಫೆ. 4– ತಮಿಳುನಾಡು ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೆ ಅವರ ಪಾರ್ಥಿವ ಶರೀರವನ್ನು ಮರೀನಾ ಬೀಚ್‌ನಲ್ಲಿ ಇಂದು ಬೆಳಿಗ್ಗೆ 11.30ಕ್ಕೆ ಸಕಲ ಮಿಲಿಟರಿ ಗೌರವಗಳೊಂದಿಗೆ ಸಮಾಧಿ ಮಾಡಲಾಯಿತು. ಅಣ್ಣಾದೊರೆ ಅಂತಿಮಯಾತ್ರೆಯಲ್ಲಿ ಸುಮಾರು 30 ಲಕ್ಷ ಶೋಕತಪ್ತ ಜನರು ಭಾಗವಹಿಸಿದ್ದರು.

ದಹನದ ಬದಲು ಸಮಾಧಿ ಏಕೆ?

ಮದ್ರಾಸ್, ಫೆ. 4– ತಮಿಳರ ಪುರಾತನ ಪದ್ಧತಿಯೊಂದನ್ನನುಸರಿಸಿ ಶ್ರೀ ಅಣ್ಣಾದೊರೆ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತೆಂದು ಪ್ರಸಿದ್ಧ ತಮಿಳು ವಿದ್ವಾಂಸರಾದ ಲೋಕೋಪಯೋಗಿ ಸಚಿವ ಶ್ರೀ ಎಂ. ಕರುಣಾನಿಧಿ ತಿಳಿಸಿದರು.

ಕುಟುಂಬವೊಂದರ ಗಣ್ಯವ್ಯಕ್ತಿ ನಿಧನ ಹೊಂದಿದಾಗ ದಹನದ ಬದಲು ಸಮಾಧಿ ಮಾಡುವುದೇ ಈಗಲೂ ತಮಿಳುನಾಡಿನಲ್ಲಿ ಪದ್ಧತಿಯೆಂದೂ ನುಡಿದರು.

ಕಚೇರಿ ಆವರಣದಲ್ಲಿ ಸಭೆ ಸೇರಲು ಹಕ್ಕಿಲ್ಲ: ಸುಪ್ರೀಂ ಕೋರ್ಟ್ ತೀರ್ಪು

ನವದೆಹಲಿ, ಫೆ. 4– ಸಂವಿಧಾನದ 19 (1)ರ ವಿಧಿ ಮೇರೆಗೆ ಶಾಂತಿಯುತವಾಗಿ ಸಭೆ ಸೇರುವುದಕ್ಕೆ ಹಾಗೂ ಸಂಘ ರಚನೆಗೆ ಹಕ್ಕಿದೆ. ಆದರೆ ಸರ್ಕಾರಿ ಕಚೇರಿಯ ಆವರಣದಲ್ಲಿ ಯಾರೇ ಆಗಲಿ ಸಭೆ ನಡೆಸುವುದಕ್ಕೆ ಹಕ್ಕಿಲ್ಲ ಎಂದು ಇಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.