ADVERTISEMENT

ಮಂಗಳವಾರ, 22–3–1994

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 20:15 IST
Last Updated 21 ಮಾರ್ಚ್ 2019, 20:15 IST
   

ಹೆಚ್ಚು ಹೊರೆ ಇಲ್ಲದ ಬಜೆಟ್; ರೂ. 237 ಕೋಟಿ ಕೊರತೆ

ಬೆಂಗಳೂರು, ಮಾ. 21–ಹಸಿರು ಪಡಿತರ ಚೀಟಿ ಇರುವವರಿಗೆ ಅಕ್ಕಿ, ಗೋಧಿ ಅಗ್ಗ. ರವೆ, ರಾಗಿ ಹಿಟ್ಟು, ಹಸಿ ಖರ್ಜೂರ, ಮಕ್ಕಳಿಗೆ ಹಾಲುಣಿಸುವ ಶೀಷೆ, ತೊಟ್ಟಿಲು, ಐದು ಸಾವಿರ ರೂಪಾಯಿಗಳವರೆಗಿನ ಬೆಲೆಯ ಮಂಗಳ ಸೂತ್ರ, ಸೀಮೆಸುಣ್ಣ, ಐವತ್ತು ರೂಪಾಯಿ ಬೆಲೆಯನ್ನು ಮೀರದ ಪಿ.ವಿ.ಸಿ. ಮತ್ತು ರಬ್ಬರ್‌ನಿಂದತಯಾರಿಸಿದ ಪಾದರಕ್ಷೆ, ಕಸಪೊರಕೆ, ರೇಷ್ಮೆ ಪೊರೆ ಹುಳು, ಡೀಸೆಲ್ ಕಾಪ್ಟಿವ್ ಜನರೇಟರ್ ಸೆಟ್ಟು ಇತರ ವಸ್ತುಗಳಿಗೆ ತೆರಿಗೆ ವಿನಾಯಿತಿ.

ಖಂಡಸಾರಿ ಸಕ್ಕರೆ, ಬೆಲ್ಲ, ಸೋಯಾ ಬೀನ್ಸ್, ಅರಿಶಿನ, ಸಣ್ಣ ಕೈಗಾರಿಕಾ ಘಟಕಗಳಲ್ಲಿ ತಯಾರಿಸಿದ ಹಲ್ಲಿನ ಪುಡಿ, ಧಾರಕಗಳಲ್ಲಿ ಮಾರುವ ಉಪ್ಪು ಹಾಕಿದ ಮತ್ತು ಖಾರದ ತಿಂಡಿ ತಿನಿಸುಗಳು, ಕೈಯಿಂದ ಮಾಡಿದ ಸಾಬೂನು, ಸಿಮೆಂಟ್, ಬೆಂಕಿ ಪೊಟ್ಟಣ, ಒಣ ದ್ರಾಕ್ಷಿ, ವನಸ್ಪತಿ, ಹುಣಿಸೆಹಣ್ಣು, ಡಿಷ್ ಆ್ಯಂಟೆನಾ, ವಾಷಿಂಗ್ ಮೆಷಿನ್ ಮತ್ತು ಡಿಷ್‌ವಾಷರ್, ನಯ ಮಾಡಿದ ಗ್ರಾನೈಟ್ ಕಲ್ಲು, ಫ್ಯಾಕ್ಸ್ ಮೆಷಿನ್, ತ್ರಿಚಕ್ರ ವಾಹನ, ಉಕ್ಕಿನ ಅಲ್ಮೇರಾ ಮತ್ತು ಪೀಠೋಪಕರಣ, ನೀರಿನ ಬಾವಿ ಕೊರೆಯುವ ರಿಗ್ ಮತ್ತಿತರ ವಸ್ತುಗಳ ಮೇಲಿನ ಮಾರಾಟ ತೆರಿಗೆಯ ಹೊರೆ ಇಳಿತ– ಇವು 1994–95ರ ಸಾಲಿನ ರಾಜ್ಯ ಬಜೆಟ್‌ನ ಮುಖ್ಯಾಂಶಗಳು.

ADVERTISEMENT

ಭರವಸೆ ಈಡೇರಿಕೆಗೆ ‘ಭಾರಿ’ ಬಜೆಟ್– ಮೊಯಿಲಿ

ಬೆಂಗಳೂರು, ಮಾ. 21– ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಜನತೆಗೆ ನೀಡಿದ ಭರವಸೆಗಳನ್ನು ಪೂರ್ಣ ಮಾಡುವ ಜವಾಬ್ದಾರಿಯನ್ನು ಗಮನದಲ್ಲಿಟ್ಟು ಈ ಬಾರಿಯ ಬಜೆಟ್‌ ಅನ್ನು ಮಂಡಿಸಿರುವುದಾಗಿ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಬಜೆಟ್ ಮಂಡನೆಯ ನಂತರ ಹೇಳಿದರು.

‘ಹಿಂದಿನ ಮುಖ್ಯಮಂತ್ರಿಗಳ ಅವಧಿಯಲ್ಲಿ ಹಲವು ಜನಹಿತ, ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಗೊಳ್ಳದೇ ಉಳಿದಿವೆ. ಆದರೆ ಹಿಂದಿನವರು ಕೆಲಸ ಮಾಡಲಿಲ್ಲ ಅಂಥ ನಾನು ಜವಾಬ್ದಾರಿಯಿಂದ ನುಣುಚಿಕೊಳ್ಳಲಾರೆ. ಬಜೆಟ್‌ನ ಗಾತ್ರ ದೊಡ್ಡದಾಗಲೂ ಅದೇ ಕಾರಣ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.