ADVERTISEMENT

ಸೋಮವಾರ, 30–10–1967

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2017, 19:30 IST
Last Updated 29 ಅಕ್ಟೋಬರ್ 2017, 19:30 IST

ಕೋಮುವಾರು ‍ಪ್ರವೃತ್ತಿಗಳ ನಿರ್ದಾಕ್ಷಿಣ್ಯ ಮೂಲೋತ್ಪಾಟನ: ಸರಕಾರಕ್ಕೆ ಎ.ಐ.ಸಿ.ಸಿ. ಕರೆ
ಜಬ್ಬಲ್ಪುರ, ಅ. 29–
ಕೋಮು ಗಲಭೆ ಮತ್ತಿತರ ವಿಚ್ಛಿದ್ರಕಾರಕ ಪ್ರವೃತ್ತಿಗಳನ್ನು ನಿರ್ದಾಕ್ಷಿಣ್ಯದಿಂದ ಬಗ್ಗುಬಡಿಯಬೇಕೆಂದು ಅಖಿಲಭಾರತ ಕಾಂಗ್ರೆಸ್ ಸಮಿತಿ ಇಂದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಕರೆ ಕೊಟ್ಟಿದೆ.

ಕೋಮು ಸೌಹಾರ್ದ ನಿರ್ಣಯ ಕುರಿತು ಮೂರು ಗಂಟೆ ಹೊತ್ತು ನಡೆದ ಚರ್ಚೆಗೆ ಉತ್ತರಕೊಟ್ಟ ಶ್ರೀ ಎಸ್.ಕೆ. ಪಾಟಿಲರು ಮೊದಲ ನಿರ್ಣಯಕ್ಕೆ  ಈ ಮುಖ್ಯ ತಿದ್ದುಪಡಿ ಸೂಚಿಸಿದರು.

ಮಹಾಜನ್ ಆಯೋಗದ ವರದಿ ಬಹಿರಂಗವಾಗಿ ಸುಟ್ಟು ಬೂದಿ ಮಾಡಲು ಕರೆ
ಕೊಲ್ಹಾಪುರ, ಅ. 29–
ಮಹಾರಾಷ್ಟ್ರ– ಮೈಸೂರು ಗಡಿ ಪ್ರಶ್ನೆಯ ಸಂಬಂಧ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ರಾಜೀನಾಮೆ ನೀಡಿ, ಸಂಪೂರ್ಣ ಮಹಾರಾಷ್ಟ್ರ ಸಮಿತಿ ಹೂಡಲಿರುವ ಚಳವಳಿಯಲ್ಲಿ ಭಾಗವಹಿಸಬೇಕೆಂದು ಮಹಾರಾಷ್ಟ್ರ ಶಾಸನಸಭೆ ವಿರೋಧ ಪಕ್ಷದ ನಾಯಕ ಶ್ರೀ ದುಲಪ್‌ರವರು ಇಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡುತ್ತಾ ತಿಳಿಸಿದರು.

ADVERTISEMENT

ಮಹಾಜನ್ ವರದಿ ಪುಸ್ತಕದ ರೂಪದಲ್ಲಿ ಹೊರಬಿದ್ದೊಡನೆಯೇ ಅದನ್ನು ಬಹಿರಂಗವಾಗಿ ಸುಡಬೇಕೆಂದು ಅವರು ಜನತೆಗೆ ಕರೆ ನೀಡಿದರು.

ಮಹಾಜನ್ ಆಯೋಗ ಮಾಡಿರುವ ‘ಅನ್ಯಾಯ’ದ ವಿರುದ್ಧ ಮಹಾರಾಷ್ಟ್ರ ಶಾಸನ ಸಭೆಯ ನಾಗಪುರ ಅಧಿವೇಶನವನ್ನು ವಿರೋಧ ಪಕ್ಷಗಳು ಬಹಿಷ್ಕರಿಸಿಸುವುದಾಗಿಯೂ ಅವರು ತಿಳಿದರು.

ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಎರಡು‌ ವಾರ ಮುಂದಕ್ಕೆ
ಜಬ್ಬಲ್ಪುರ, ಅ. 29–
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಈ ಮೊದಲೇ ಗೊತ್ತುಪಡಿಸಿದ್ದಂತೆ ಡಿಸೆಂಬರ್ 1 ರಂದು ನಡೆಯದೆ ಡಿ. 15 ರಂದು ನಡೆಯುವುದು.

ಶ್ರೀ ಕಾಮರಾಜರ ಉತ್ತರಾಧಿಕಾರಿ ಆಯ್ಕೆ ಕುರಿತು ತಮ್ಮ ತಮ್ಮ ಪ್ರದೇಶ ಸಮಿತಿಗಳೊಡನೆ ಸಮಾಲೋಚಿಸಲು ಕೆಲವು ಸದಸ್ಯರು ಕೇಳಿದ ನಂತರ ಕಾರ್ಯಕಾರಿ ಸಮಿತಿ ಇಂದು ಬೆಳಿಗ್ಗೆ ಈ ತೀರ್ಮಾನಕ್ಕೆ ಬಂದಿತು.‌

ನಿಜಲಿಂಗಪ್ಪ ಭೇಟಿ: ಶ್ರೀ ನಿಜಲಿಂಗಪ್ಪನವರು ಶ್ರೀ ಕಾಮರಾಜರನ್ನು ಇಂದು ಬೆಳಿಗ್ಗೆ ಭೇಟಿ ಮಾಡಿದ್ದರು. ಸರ್ವಾನುಮತದಿಂದ ಆರಿಸಲ್ಪಡದಿದ್ದರೆ ತಾವು ಇನ್ನೊಂದು ಅವಧಿ ಅಧ್ಯಕ್ಷರಾಗಿ ಮುಂದುವರೆಯಲು ಅಪೇಕ್ಷಿಸುವುದಿಲ್ಲವೆಂದು ಶ್ರೀ ಕಾಮರಾಜರು ಅವರಿಗೆ ತಿಳಿಸಿದರೆಂದು ಗೊತ್ತಾಗಿದೆ.

ನಗರ ಬಸ್ ಸಂಚಾರಕ್ಕೆ ಸೈನಿಕ ಸಿಬ್ಬಂದಿ ನೆರವು
ಬೆಂಗಳೂರು, ಅ. 29–
ಲಾಕ್ ಔಟ್ ಘೋಷಿಸಿರುವ ನಗರ ಸಾರಿಗೆ ವ್ಯವಸ್ಥೆ, ಇತಿಹಾಸದಲ್ಲಿ ಪ್ರಥಮ ಬಾರಿಗೆ ಸೈನಿಕ ನೆರವಿನಿಂದ ಬಸ್ಸುಗಳನ್ನು ಓಡಿಸಿತು.

ಬಿ.ಟಿ.ಎಸ್. ಲಾಕ್ ಔಟ್‌ನ ಎರಡನೆ ದಿನ ನಗರದ ಪ್ರಮುಖ ಮಾರ್ಗಗಳಲ್ಲಿ ಮಿಲಿಟರಿ ಚಾಲಕರ ನೆರವಿನಿಂದ 93 ಬಸ್‌ಗಳು ಸಂಚರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.