ADVERTISEMENT

25 ವರ್ಷಗಳ ಹಿಂದೆ: ರಾಜ್ಯಕ್ಕೆ 93 ಕೋಟಿ ರೂ. ತಾತ್ಕಾಲಿಕ ನೆರವಿಗೆ ಕೋರಿಕೆ

1994

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 18:40 IST
Last Updated 21 ಜುಲೈ 2019, 18:40 IST

ರಾಜ್ಯಕ್ಕೆ 93 ಕೋಟಿ ರೂ. ತಾತ್ಕಾಲಿಕ ನೆರವಿಗೆ ಕೋರಿಕೆ

ಬೆಂಗಳೂರು, ಜುಲೈ 21– ರಾಜ್ಯದಲ್ಲಿ ನೆರೆ ಹಾವಳಿಯಿಂದ ಕೋಟ್ಯಂತರ ರೂಪಾಯಿಗಳ ನಷ್ಟ ಸಂಭವಿಸಿರುವ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗಾಗಿ ನೈಸರ್ಗಿಕ ವಿಕೋಪ ಸಂಬಂಧದ ನಿಗದಿತ ನೆರವಿನ ಜತೆಗೆ ಇತರ ಮೂಲಗಳಿಂದಲೂ ಅಧಿಕ ಆರ್ಥಿಕ ಸಹಾಯ ನೀಡುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸಲಿದೆ. ಈ ಮಧ್ಯೆ ರಾಜ್ಯ ಸರ್ಕಾರ 93.46 ಕೋಟಿ ರೂಪಾಯಿ ತಾತ್ಕಾಲಿಕ ನೆರವು ಕೋರಿ ಕೇಂದ್ರಕ್ಕೆ ಕೋರಿಕೆ ಸಲ್ಲಿಸಿದೆ.

ರಾಜ್ಯದಲ್ಲಿ ನೆರೆ ಹಾವಳಿಯಿಂದ ಸಾವು ನೋವು, ಆಸ್ತಿ ಹಾಗೂ ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿದ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಮಲ್ಲಿಕಾರ್ಜುನ್ ಅವರು ಇಂದು ಇಲ್ಲಿ, ಆರ್ಥಿಕ ನೆರವು ವಿಷಯ ಪರಿಶೀಲಿಸುವ ಭರವಸೆ ನೀಡಿದರು.

ADVERTISEMENT

ಐಷಾರಾಮಿ ಜೈಲು

ನವದೆಹಲಿ, ಜುಲೈ 21 (ಯುಎನ್‌ಐ)– ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರ ಪಾಲಿಗೆ ರಾಷ್ಟ್ರಪತಿ ಭವನದ ಜೀವನ ‘ವೈಭೋವೊಪೇತ ಐಷಾರಾಮಿ ಜೈಲಿನ’ ಜೀವನದಂತಿತ್ತು.

‘ಅಲ್ಲಿ ಎಲ್ಲ ಸೌಕರ್ಯ, ಅನುಕೂಲವಿದೆ. ಯೋಗಕ್ಷೇಮ ನೋಡಿಕೊಳ್ಳಲು ಜನರಿದ್ದಾರೆ. ಆದರೆ ಭದ್ರತಾ ವ್ಯವಸ್ಥೆ ಕಿರಿಕಿರಿ ಉಂಟು ಮಾಡುವಂಥದ್ದು.

ನಾನು ಸಂಜೆ ವಾಯು ಸೇವನೆಗೆ ಹೊರಟಾಗಲೂ ಸುತ್ತ ಡಜನ್ ಗಟ್ಟಲೆ ಭದ್ರತಾ ಸಿಬ್ಬಂದಿ ಇರುತ್ತಿದ್ದರು. ನಿರ್ಬಂಧಗಳಂತೂ ಬೇಸರ ಹುಟ್ಟಿಸುವಂತಿದ್ದವು’ ಎಂದು ಆರ್‌.ವಿ. ಅವರು ‘ನನ್ನ ರಾಷ್ಟ್ರಪತಿ ದಿನಗಳು’ ಎಂಬ ಆತ್ಮಕಥೆಯಲ್ಲಿ ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.