ADVERTISEMENT

ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ದೃಢ ಕ್ರಮ– ರಾವ್

ವಾರ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2019, 17:34 IST
Last Updated 8 ಮಾರ್ಚ್ 2019, 17:34 IST

ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ದೃಢ ಕ್ರಮ– ರಾವ್

ನವದೆಹಲಿ, ಮಾ. 8 (ಪಿಟಿಐ)– ಜಮ್ಮು ಮತ್ತು ಕಾಶ್ಮೀರಕ್ಕೆ ‘ಭಯೋತ್ಪಾದನೆಯನ್ನು ರಫ್ತು ಮಾಡುವ’ ಪಾಕಿಸ್ತಾನದ ಪ್ರಯತ್ನಗಳನ್ನು ಹತ್ತಿಕ್ಕಲು ದೃಢ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಧಾನ ಮಂತ್ರಿ ಪಿ.ವಿ. ನರಸಿಂಹರಾವ್ ಅವರು ಇಂದು ಲೋಕಸಭೆಯಲ್ಲಿ ಘೋಷಿಸಿದರು.

ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಕುರಿತು ನಡೆದ ಚರ್ಚೆಗೆ ವಿವರವಾಗಿ ಉತ್ತರಿಸಿದ ಅವರು ಕಾಶ್ಮೀರ ವಿಷಯ ಕುರಿತು ಪ್ರಸ್ತಾಪಿಸಲು ‘ಅತಿಕ್ರಮಣಕಾರ’ನೆಂಬ ಹಣೆಪಟ್ಟಿಯೊಂದನ್ನು ಬಿಟ್ಟರೆ ಪಾಕಿಸ್ತಾನಕ್ಕೆ ಬೇರಾವುದೇ ಅರ್ಹತೆಗಳಿಲ್ಲ ಎಂದರು.

ADVERTISEMENT

ನಿಲ್ದಾಣದಲ್ಲಿ ವಿಮಾನಗಳ ಅಪಘಾತ: 10 ಬಲಿ

ನವದೆಹಲಿ, ಮಾ. 8 (ಪಿಟಿಐ, ಯುಎನ್‌ಐ)– ಇಲ್ಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಸಹಾರಾ ಏರ್‌ಲೈನ್ಸ್ ವಿಮಾನವೊಂದು ನಿಲ್ದಾಣದಲ್ಲಿ ನಿಂತಿದ್ದ ರಷ್ಯಾ ವಿಮಾನದ ಮೇಲೆ ಬಿದ್ದ ಪರಿಣಾಮ 10 ಮಂದಿ ಮೃತಪಟ್ಟರು ಹಾಗೂ ಇತರ ಏಳು ಜನರು ಗಾಯಗೊಂಡರು.

ತರಬೇತಿ ಹಾರಾಟ ನಡೆಸುತ್ತಿದ್ದ ಸಹಾರಾ ವಿಮಾನದಲ್ಲಿ ನಿಲ್ದಾಣ ಬಿಟ್ಟ ಕೆಲವೇ ಕ್ಷಣಗಳಲ್ಲಿ ಬೆಂಕಿ ಕಾಣಿಸಿಕೊಂಡಿತು. ಭೀಕರ ಸದ್ದಿನೊಂದಿಗೆ ನಿಲ್ದಾಣದಲ್ಲಿ ನಿಂತಿದ್ದ ರಷ್ಯಾ ವಿಮಾನದ ಮೇಲೆ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಷ್ಯಾ ವಿಮಾನ ಎರಡು ಹೋಳಾಗಿದ್ದು, ಅದಕ್ಕೂ ಬೆಂಕಿ ಹೊತ್ತಿಕೊಂಡಿತು.

ಭೂ ಒಡೆತನ ಖಾತೆಯಲ್ಲಿ ಗಂಡ–ಹೆಂಡತಿ ಹೆಸರು

ಬೆಂಗಳೂರು, ಮಾ. 8– ಭೂ ಒಡೆತನಕ್ಕೆ ಸಂಬಂಧಿಸಿದಂತೆ ಖಾತೆ ವಿತರಿಸುವಾಗ ಗಂಡ ಹಾಗೂ ಹೆಂಡತಿ ಇಬ್ಬರ ಹೆಸರನ್ನೂ ಕಡ್ಡಾಯವಾಗಿ ನಮೂದಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ ಎಂದು ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಇಂದು ಇಲ್ಲಿ ಪ್ರಕಟಿಸಿದರು.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಲ್ಲಿ ನಡೆದ ‘ವಿಶ್ವ ಮಹಿಳಾ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಮೊಯಿಲಿ ಅವರು, ಆಶ್ರಯ ಯೋಜನೆಯೂ ಇದರ ವ್ಯಾಪ್ತಿಗೊಳಪಡಲಿದೆ ಎಂದರು.

ಆಸ್ತಿಯಲ್ಲಿ ಮಹಿಳೆಯರಿಗೂ ಸಮಪಾಲು ನೀಡುವ ಮಸೂದೆಯನ್ನು ಸರ್ಕಾರ ಅಂಗೀಕರಿಸಿ ಅನುಮೋದನೆಗಾಗಿ ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿದೆ. ಅದಕ್ಕೆ ಒಪ್ಪಿಗೆ ಸಿಗುವ ವಿಶ್ವಾಸವಿದೆ. ಈ ಮಸೂದೆ ಅನುಷ್ಠಾನಗೊಂಡರೆ ರಾಜ್ಯದ ಮಹಿಳೆಯರು ಆಸ್ತಿಯಲ್ಲಿ ಸಮಪಾಲು ಪಡೆಯುವುದರಿಂದ ಆರ್ಥಿಕವಾಗಿ ಸ್ವಾವಲಂಬಿಗಳಾಗುವರು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.