ADVERTISEMENT

ಗುರುವಾರ, 22–12–1994

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 20:01 IST
Last Updated 21 ಡಿಸೆಂಬರ್ 2019, 20:01 IST

ಅರ್ಜುನ್ ಸಿಂಗ್ ರಾಜೀನಾಮೆ?
ನವದೆಹಲಿ, ಡಿ. 21 (ಪಿಟಿಐ)– ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್ ಅವರು ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ರಾಜಧಾನಿಯಲ್ಲಿ ಇಂದು ದಟ್ಟವಾಗಿ ಹಬ್ಬಿದೆ. ಕಾಂಗೈ ವಲಯದಲ್ಲಿ ಈ ಬಗ್ಗೆ ಯಾರೂ ತುಟಿಪಿಟಕ್ ಎನ್ನುತ್ತಿಲ್ಲವಾದರೂ ತೆರೆಮರೆಯಲ್ಲಿ ತೀವ್ರ ಮತ್ತು ಕುತೂಹಲಕಾರಿ ರಾಜಕೀಯ ವಿದ್ಯಮಾನಗಳು ನಡೆಯುತ್ತಿದೆ.

ರಾವ್ ಸಂಪುಟದ ಹಿರಿಯ ಸಚಿವರಾದ ಅರ್ಜುನ್ ಸಿಂಗ್ ಅವರನ್ನು ಉತ್ತರ ಪ್ರದೇಶ ಪಿಪಿಸಿ ಅಧ್ಯಕ್ಷ ಎನ್.ಡಿ. ತಿವಾರಿ ಮತ್ತು ಮಹಾರಾಷ್ಟ್ರಮುಖ್ಯಮಂತ್ರಿ ಶರದ್ ಪವಾರ್ ಭೇಟಿ ಮಾಡಿದ್ದರು. ಬೆಂಬಲಿಗರಿಂದ ತುಂಬಿರುವ ಈ ಮೂವರ ಮನೆಗಳು ಈಗ ಬಿರುಸಿನ ಚಟುವಟಿಕೆಯ ಕೇಂದ್ರವಾಗಿವೆ. ಇವರೆಲ್ಲ ಪಕ್ಷದ ವಿದ್ಯಮಾನಗಳ ಬಗ್ಗೆ ತೀವ್ರ ಅಸಮಾಧಾನಗೊಂಡವರು ಎಂಬುದು ಗಮನಾರ್ಹ.

ಅರೆಪ್ರಜ್ಞಾವಸ್ಥೆಯಲ್ಲಿ ಪಂಡರೀಬಾಯಿ
ಬೆಂಗಳೂರು, ಡಿ. 21– ಭಾನುವಾರ ಬೆಳಗಿನ ಜಾವ ಸಂಭವಿಸಿದ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡ ಖ್ಯಾತ ನಟಿ ಪಂಡರೀಬಾಯಿ ಇನ್ನೂ ಅರೆಪ್ರಜ್ಞಾವಸ್ಥೆಯಲ್ಲೇ ಇದ್ದಾರೆ. ಅವರ ಎಡ ಮೊಣಕೈಯನ್ನು ಕತ್ತರಿಸಲಾಗಿದೆ. ಆದರೆ ಅವರು ಚಿಕಿತ್ಸೆಗೆ ಪ್ರತಿಕ್ರಿಯಿಸುತ್ತಿದ್ದಾರೆ.

ADVERTISEMENT

‘ಅನ್ಯಾಯ ನಿಲ್ಲದಿದ್ದರೆ ಪ್ರತ್ಯೇಕ ರಾಜ್ಯ ಚಳವಳಿ’
ಬೆಂಗಳೂರು, ಡಿ. 21– ಹೈದರಾಬಾದ್–ಕರ್ನಾಟಕ ಪ್ರದೇಶಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ‘ಪ್ರತ್ಯೇಕ ರಾಜ್ಯ ಬೇಡಿಕೆ’ ಚಳವಳಿಯನ್ನು ಹಮ್ಮಿಕೊಳ್ಳಬೇಕಾದೀತು ಎಂದು ಹೈದರಾಬಾದ್–ಕರ್ನಾಟಕ ಯುವ ಸಂಘರ್ಷ ಸಮಿತಿ ಮತ್ತು ವಿಜಾಪುರ ಜಿಲ್ಲಾ ಸಂಘರ್ಷ ಸಮಿತಿಗಳ ಸಮನ್ವಯ ಒಕ್ಕೂಟ ರಾಜ್ಯ ಸರ್ಕಾರಕ್ಕೆ ಬೆದರಿಕೆ ಹಾಕಿದೆ. ಕಳೆದ ಏಳೆಂಟು ವರ್ಷಗಳಿಂದ ಈ ಭಾಗದ ಐದು ಜಿಲ್ಲೆಗಳನ್ನು ಕಡೆಗಣಿಸಿ ಮಲತಾಯಿ ಧೋರಣೆ ಅನುಸರಿಸಿಕೊಂಡು ಬರಲಾಗುತ್ತಿದೆ ಎಂದು ಒಕ್ಕೂಟದ ಪ್ರಧಾನ ಸಂಚಾಲಕ ಲಕ್ಷ್ಮಣ ದಸ್ತಿ, ವಕ್ತಾರ ಡಿ.ವಿ. ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.