ADVERTISEMENT

25 ವರ್ಷಗಳ ಹಿಂದೆ| ಭಾನುವಾರ, 15–1–1995

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 20:00 IST
Last Updated 14 ಜನವರಿ 2020, 20:00 IST

ವಿಶ್ವ ಹಿಂದೂ ಪರಿಷತ್ ಮೇಲೆ ಮತ್ತೆ ನಿಷೇಧ

ನವದೆಹಲಿ, ಜ. 14 (ಯುಎನ್‌ಐ, ಪಿಟಿಐ)– ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅನ್ನು ಇನ್ನೂ ಎರಡು ವರ್ಷಗಳ ಕಾಲ ನಿಷೇಧಿಸಿ ಕೇಂದ್ರ ಸರ್ಕಾರವು ಇಂದು ಆಜ್ಞೆ ಹೊರಡಿಸಿತು. ನಿಷೇಧ ತಕ್ಷಣದಿಂದ ಜಾರಿಗೆ ಬಂದಿದೆ.

1967ರ ಕಾನೂನು ಬಾಹಿರ ಕಾಯ್ದೆ ಅನ್ವಯ ವಿಎಚ್‌ಪಿ ಮೇಲೆ ಈ ನಿಷೇಧ ಹೇರಲಾಗಿದೆ. 1992ರಲ್ಲಿ ಅಯೋಧ್ಯೆಯ ವಿವಾದಾತ್ಮಕ ಬಾಬರಿ ಮಸೀದಿ ನೆಲಸಮಗೊಂಡ ಹಿನ್ನೆಲೆಯಲ್ಲಿ ಕಾನೂನುಬಾಹಿರ ಸಂಘಟನೆ ಎಂದು ವಿಎಚ್‌ಪಿ ಮೇಲೆ ಹೇರಿದ್ದ ನಿಷೇಧದ ಅವಧಿ 1994ರ ಡಿ. 9ರಂದು ಮುಗಿದಿತ್ತು.

ADVERTISEMENT

ವಿಶ್ವ ಹಿಂದೂ ಪರಿಷತ್ತಿನ ಚಟುವಟಿಕೆಯನ್ನು ತಕ್ಷಣವೇ ಹತ್ತಿಕ್ಕದಿದ್ದರೆ ಕೋಮು ವಿದ್ವೇಷ ಹಾಗೂ ಉದ್ವಿಗ್ನತೆ ಉಂಟಾಗಬಹುದು ಎಂಬ ಕಾರಣಕ್ಕಾಗಿ ನಿಷೇಧವನ್ನು ಮತ್ತೆ ಹೇರಲಾಯಿತು ಎಂದು ಅಧಿಸೂಚನೆ ತಿಳಿಸಿದೆ.

ಅಕ್ರಮ ಕಟ್ಟಡಗಳ ಸಕ್ರಮ

ಬೆಂಗಳೂರು, ಜ. 14– ಬೆಂಗಳೂರಿನ ನಾಗರಿಕರಿಗೆ ಹೊಸ ವರ್ಷದ ಕೊಡುಗೆಯಾಗಿ ನಗರದ ಹತ್ತು ಅಧಿಸೂಚಿತ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೆವಿನ್ಯೂ ನಿವೇಶನ
ಗಳಲ್ಲಿ ಕಟ್ಟಿದ ಎಲ್ಲ ಅನಧಿಕೃತ ಕಟ್ಟಡ ಗಳನ್ನು ಬರುವ ಡಿಸೆಂಬರ್ ಒಳಗೆ ಸಕ್ರಮ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಇಂದು ಇಲ್ಲಿ ಪ್ರಕಟಿಸಿದರು.

ಆಡಳಿತಕ್ಕೆ ಚುರುಕು ನೀಡಿ, ಜನಪರಗೊಳಿಸುವ ತಮ್ಮ ವಾಗ್ದಾನದಂತೆ ಇಂದು ಬೆಳಿಗ್ಗೆ ಬೆಂಗಳೂರಿನ ಕೆಲವು ಪ್ರದೇಶಗಳಿಗೆ ಹಠಾತ್‌ ಭೇಟಿ ನೀಡಿ ಕುಡಿಯುವ ನೀರು, ನೈರ್ಮಲ್ಯ ಪಾಲನೆ ಸ್ಥಿತಿಯನ್ನು ಸ್ವತಃ ವೀಕ್ಷಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಕಾರ್ಯಪ್ಪ ಸ್ಮಾರಕ ಅಂಚೆ ಚೀಟಿ

ನವದೆಹಲಿ, ಜ. 14 (ಪಿಟಿಐ)– ಅಂಚೆ ಇಲಾಖೆಯು ಫೀಲ್ಡ್‌ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಸ್ಮರಣಾರ್ಥ ಎರಡು ರೂಪಾಯಿ ಮುಖಬೆಲೆಯ ವಿಶೇಷ ಅಂಚೆ ಚೀಟಿಯನ್ನು ನಾಳೆ ಬಿಡುಗಡೆ ಮಾಡುವುದು.

ಫೂಲನ್ ದೇವಿಯಿಂದ‘ಏಕಲವ್ಯ ಸೇನೆ’ ರಚನೆ

ನವದೆಹಲಿ, ಜ. 14 (ಪಿಟಿಐ)– ಮಾಜಿ ಡಕಾಯಿತ ರಾಣಿ ಫೂಲನ್‌ ದೇವಿ ಹಾಗೂ ಸಂಸತ್ತಿನ ಮಾಜಿ ಸದಸ್ಯರೊಬ್ಬರು ಜಂಟಿಯಾಗಿ ‘ಏಕಲವ್ಯ ಸೇನೆ’ ಎಂಬ ಸಂಘಟನೆಯನ್ನು ರಚಿಸಿದ್ದಾರೆ.

‘ಶೋಷಣೆಯ ವಿರುದ್ಧ ಹೋರಾಡಲು ಸೇನೆಯ ಸದಸ್ಯರಿಗೆ ಬಿಲ್ಲು–ಬಾಣ
ಪ್ರಯೋಗ ಕಲಿಸಲಾಗುವುದು. ಮಹಾಭಾರತದ ಬಿಲ್ಲು ಪ್ರವೀಣ ಏಕಲವ್ಯನ ಯಶೋಗಾಥೆಯೇ ನಮಗೆ ನೀತಿಪಾಠ’ ಎಂದು ಮಾಜಿ ಸಂಸದ ಗಂಗಾಚರಣ್ ರಜಪೂತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.